ಬೆಂಗಳೂರು: ನಗರದಲ್ಲಿ ನಡೆದಿದ್ದ 7 ಕೋಟಿ ರೂ. ದರೋಡೆ ಪ್ರಕರಕಣ ಸಂಬಂಧ ಇಂದು ಮತ್ತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇದರಿಂದ ದರೋಡೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ದರೋಡೆ ಬಳಿಕ ನಾಪತ್ತೆಯಾಗಿದ್ದ ದಿನೇಶ್ ಮತ್ತು ಜಿನೇಶ್ ಎಂಬ ಇಬ್ಬರನ್ನ ಕಳೆದ ರಾತ್ರಿ ಬೆಂಗಳೂರು ಮತ್ತು ಚೆನ್ಮೈನಲ್ಲಿ ಬಂಧಿಸಲಾಗಿದೆ. ಎಟಿಎಂ ಹಣ ದರೋಡೆ ಗ್ಯಾಂಗ್ ನಲ್ಲಿದ್ದ ಜಿನೇಶ್ ಘಟನೆ ಬಳಿಕ ಚಿತ್ತೂರು, ವೇಲೂರು ಮಾರ್ಗವಾಗಿ ಚೆನ್ನೈ ಸೇರಿದ್ದರು. ಪೊಲೀಸರು ಕೂಡ ವೇಲೂರು, ಚಿತ್ತೂರು ವ್ಯಾಪ್ತಿಯಲ್ಲಿ ತೀವ್ರ ಶೋಧ ಕೂಡ ನಡೆಸಿ ಬಂಧಿಸಿದ್ದಾರೆ.
ಇನ್ನು ಬಂಧಿತ ಈ ಇಬ್ಬರ ಬಳಿ ಹಣ ಪತ್ತೆಯಾಗಿಲ್ಲ. ಪೊಲೀಸರ ವಿಚಾರಣೆ ವೇಳೆ ಹಣ ನಮ್ಮ ಬಳಿ ಇಲ್ಲ, ಬೇರೆಯವರು ಸುಳ್ಳು ಹೇಳಿದ್ದಾರೆ ಎನ್ನಲಾಗಿದೆ. ಆದ್ದರಿಂದ ಬಂಧಿತ ಎಲ್ಲಾ ಆರೋಪಿಗಳನ್ನ ಒಟ್ಟಿಗೆ ಸೇರಿಸಿ ವಿಚಾರಣೆ ನಡೆಸಲು ತನಿಖಾ ತಂಡ ಮುಂದಾಗಿದೆ.
ಇನ್ನು ಪ್ರಕರಣದಲ್ಲಿ ಈವರೆಗೆ 6.55 ಕೋಟಿ ಜಪ್ತಿಯಾಗಿದೆ. ಆದ್ರೆ ಉಳಿದ 56 ಲಕ್ಷ ಹಣದ ಬಗ್ಗೆ ಇನ್ನೂ ನಿಖರ ಸುಳಿವು ಪತ್ತೆಯಿಲ್ಲ. ಬಾಕಿ ಹಣದಲ್ಲಿ ಆರೋಪಿಗಳು 40 ಲಕ್ಷ ಪರಿಚಯಸ್ಥರಿಗೆ ಕೊಟ್ಟಿರೋ ಬಗ್ಗೆ ಮಾಹಿತಿ ಸಿಕ್ಕಿದ್ದು, ಒಂದಷ್ಟು ಹಣ ಖರ್ಚು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.












