ಬೆಂಗಳೂರು:ಏ.೦೧: ಹಾಸನ ಜಿಲ್ಲೆಯ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಭೂಕಬಳಿಗೆ, ಭ್ರಷ್ಟಾಚಾರದ ವಿರುದ್ಧ ಸದನದಲ್ಲಿ ಗಟ್ಟಿ ಧ್ವನಿ ಎತ್ತುತ್ತಿದ್ದ ಎ.ಟಿ ರಾಮಸ್ವಾಮಿ, ದಳಪತಿಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆ ಜೆಡಿಎಸ್‌ಗೆ ರಾಜೀನಾಮೆ ನೀಡಿ ಇದೀಗ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂದು ದೆಹಲಿಯಲ್ಲಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಎ.ಟಿ.ರಾಮಸ್ವಾಮಿ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ಮೂಲಕ ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ಗೆ ದೊಡ್ಡ ಹೊಡೆತ ಬೀಳುವ ಜೊತೆಗೆ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ..

ಹೆಚ್.ಡಿ.ರೇವಣ್ಣ ವಿರುದ್ಧ ಬಹಿರಂಗ ಅಸಮಾಧಾನ
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಮಾಜಿ ಸಚಿವ ಎಚ್‌ಡಿ ರೇವಣ್ಣ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಜೆಡಿಎಸ್ ಪಕ್ಷದ ಕೆಲವು ವಿದ್ಯಮಾನಗಳಿಂದ ನೋವಾಗಿದೆ ಎಂದು ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು. ಹಾಸನ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಕ್ಷೀಣಿಸುತ್ತಿದೆ ಎಂದೂ ಹೇಳಿಕೊಂಡಿದ್ದರು. ಪಕ್ಷದ ಕೆಲವು ಸ್ಥಳೀಯ ನಿರ್ಧಾರಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.


ಸಿಎಂ ಜತೆ ಮಾತುಕತೆ ನಡೆಸಿ ಬಿಜೆಪಿ ಸೇರ್ಪಡೆ
ಈ ನಡುವೆ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸ್ವತಃ ಎ.ಟಿ ರಾಮಸ್ವಾಮಿ ಜೊತೆಗೆ ಮಾತುಕತೆ ನಡೆಸಿದ್ದರು. ಇದೀಗ ಅವರು ಅಧಿಕೃತವಾಗಿ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾರೆ.