ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಎಂದು ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿ ಹಾಕಲು ಸಕಲ ತಯಾರಿ ಮಾಡಿಕೊಳ್ಳಲಾಗ್ತಿದೆ. ಈಗಾಗಲೇ ಬಿಹಾರದ ಪಾಟ್ನಾದಲ್ಲಿ ಸಭೆ ಮಾಡಿದ್ದ ರಾಷ್ಟ್ರ ಮಟ್ಟದ ಬಿಜೆಪಿ ವಿರೋಧಿ ಬಣ, ನಿನ್ನೆ ಹಾಗು ಇಂದು ಬೆಂಗಳೂರಿನಲ್ಲಿ ಸಭೆ ನಡೆಸುತ್ತಿದೆ. ಆದರೆ ಈ ಸಭೆ ಖಾಸಗಿ ಸಭೆಯಾಗಿದ್ದು, IAS ಅಧಿಕಾರಿಗಳನ್ನು ಸ್ವಾಗತ ಸೇರಿದಂತೆ ನಾಯಕರ ಯೋಗಕ್ಷೇಮ ವಿಚಾರಿಸಿಕೊಳ್ಳಲು ನೇಮಕ ಮಾಡಿರುವುದು ಅಕ್ರಮ ಎಂದು ವಿರೋಧ ಪಕ್ಷಗಳಾದ ಜೆಡಿಎಸ್ ಹಾಗು ಬಿಜೆಪಿ ನಾಯಕರು ಕೆಂಡ ಕಾರಿದ್ದಾರೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ದಾಖಲೆ ಬಿಡುಗಡೆ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರ, ತನ್ನ ಹಿತಿಮಿತಿ ಮೀರಿ ನಡೆಯುತ್ತಿದೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
40 ವರ್ಷದಲ್ಲಿ ಈ ರೀತಿ IAS ಅಧಿಕಾರಿಗಳ ನಿಯೋಜನೆ ಆಗಿಲ್ಲ..!
ಘಟಬಂಧನ್ ಸಭೆಗೆ ಅಧಿಕಾರಿಗಳನ್ನು ನಿಯೋಜನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಛಾಟಿ ಬೀಸಿರುವ ಕುಮಾರಸ್ವಾಮಿ, 40 ವರ್ಷದ ರಾಜಕೀಯ ಇತಿಹಾಸದಲ್ಲಿ ಈ ರೀತಿ ಎಂದೂ ನಡೆದಿರಲಿಲ್ಲ. ದೇಶದಲ್ಲಿ ರಾಜಕೀಯ ಸಭೆ ಹಲವಾರು ಕಡೆ ನಡೆದಿದೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಹಲವರು ನಾಯಕರ ಸಭೆ ನಡೆಸಿದ್ರು. ಕೊಲ್ಕತ್ತಾ ಸಭೆಗೆ ನಮಗೂ ಆಹ್ವಾನ ಕೊಟ್ಟಿದ್ದರು. ನಾವು ಸಭೆಗೆ ಹೋಗಿದ್ದಾಗ ಶಾಸಕರು, ಸಂಸದರನ್ನ ಕಳುಹಿಸಿ ಸ್ವಾಗತ ಮಾಡಿಸಿದ್ರು. ಆದ್ರೆ ಕಾಂಗ್ರೆಸ್ ಸರ್ಕಾರ ಸ್ವೇಚ್ಚಾಚಾರ ಮಾಡಿ ಐಎಎಸ್ ಅಧಿಕಾರಿಗಳ ನಿಯಮವನ್ನು ಗಾಳಿಗೆ ತೂರಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಆದೇಶ ಮಾಡಿರೋದು ಅಪಾಯಕಾರಿ ಎಂದಿದ್ದಾರೆ. ಸಿಎಂ ಹಾಗು ದೊಡ್ಡ ಮಟ್ಟದ ನಾಯಕರಿಗೆ ನೇಮಕ ಮಾಡಿರುವುದು ಸರಿಯಾಗಿದೆ. ಉಳಿದವರಿಗೂ ದ್ವಾರಪಾಲಕರ ರೀತಿ ಕೆಲಸ ಮಾಡೋದಕ್ಕೆ ಅಧಿಕಾರಿಗಳನ್ನ ಯಾವ ಮಟ್ಟಕ್ಕೆ ಇಳಿಸಿದ್ದಾರೆ. ಶಾಸಕರು, ಮಂತ್ರಿ, ಸಿಎಂ ಹೋದ್ರೆ ಪರವಾಗಿಲ್ಲ. ಪಕ್ಷದ ಖಾಸಗಿ ಕಾರ್ಯಕ್ರಮಕ್ಕೆ IAS ಅಧಿಕಾರಿಗಳನ್ನು ನಿಯೋಜನೆ ಮಾಡುವುದು ನಾಚಿಕೆಗೇಡಿನ ಕೆಲಸ ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಮಾತಿಗೆ HDK ತಿರುಗೇಟು..!!
ಅಧಿಕಾರಿಳ ದುರ್ಬಳಕೆ ವಿಚಾರದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ನಾನು HDK ಆರೋಪಕ್ಕೆ ಉತ್ತರ ಕೊಡಲು ತಯಾರಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಸರ್ಕಾರ ಇರ್ತದೆ ಹೋಗ್ತದೆ, ಆದರೆ ಪ್ರೋಟೋಕಾಲ್ನಲ್ಲಿ ಸ್ಟೇಟ್ ಗೆಸ್ಟ್ ಎಂದು ನೇಮಕ ಮಾಡಿದಾಗ, ಅಲ್ಲಿ ಯಾರು ಇರಬೇಕೋ ಇರ್ತಾರೆ. ಸ್ವೀಕರಿಸೋದಕ್ಕೆ ಕಳಿಸೋದಕ್ಕೆ ನಾನು ಸೇರಿ ಹಲವು ಮಂತ್ರಿಗಳು ಹೋಗಿ ಕೆಲವು ಸಿಎಂಗಳನ್ನ ರಿಸೀವ್ ಮಾಡಿದ್ದೀನಿ. ಬೇರೆ ಮಂತ್ರಿಗಳು, ಹಾಗೇ ಅಧಿಕಾರಿಗಳನ್ನ ಹಿರಿಯ ನಾಯಕರಿಗೆ ಪ್ರೋಟೋಕಾಲ್ ಪ್ರಕಾರ ನೇಮಿಸಲಾಗಿದೆ. ಇದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ದತಿ. ಕುಮಾರಣ್ಣ ಮಾತಾಡ್ತಾರೆ. ಅವರಿಗೂ ನ್ಯೂಸ್ ಬೇಕಲ್ವಾ..? ಎಂದಿದ್ದಾರೆ. ಡಿ.ಕೆ ಶಿವಕುಮಾರ್ ಮಾತಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಈ ಹಿಂದೆ ಯಾವ ಸರ್ಕಾರದಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು..? ರಾಮಕೃಷ್ಣ ಹೆಗ್ಗಡೆ ಅವರ ಸರ್ಕಾರ ಇದ್ದಾಗಲೂ ಸಭೆ ನಡೆಸಲಾಗಿತ್ತಲ್ಲವೇ..? ಗಾಜಿನ ಭವನದಲ್ಲಿ ಅಂದು ಕಾಂಗ್ರೆಸ್ ಸಭೆ ಆಯೋಜಿಸಲಾಗಿತ್ತು. ಯಾವತ್ತೂ ಈ ರೀತಿ ಆಗಿರಲಿಲ್ಲ. ಅಧಿಕಾರಿಗಳನ್ನು ಗನ್ ಮ್ಯಾನ್ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಲ್ಲ ಎಂದಿದ್ದ ಡಿಕೆ ಶಿವಕುಮಾರ್ಗೆ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಗುದ್ದು ಕೊಟ್ಟಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಬೆನ್ನಲ್ಲೇ ಬಿಜೆಪಿ ವಾಗ್ಬಾಣ..!
ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ತಿರುಗಿ ಬಿದ್ದಿರುವ ರಾಜ್ಯ ಬಿಜೆಪಿ ನಾಯಕರು, ಸರ್ಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಬೇರೆ ರಾಜ್ಯಗಳ ಮಾಜಿ ಸಿಎಂಗಳಿಗೆ ಎಸ್ಕಾರ್ಟ್ ಮಾಡಲಾಗ್ತಿದೆ, ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಇನ್ನೂ ಘಟಬಂಧನ್ ಸಭೆಗೆ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ, ಸರ್ಕಾರ ಐಎಎಸ್ ಅಧಿಕಾರಿಗಳನ್ನ ಪಿಆರ್ಓ ಕೆಲಸಕ್ಕೆ ನೇಮಕ ಮಾಡಿರೋದು ನಾಚಿಕೆಗೇಡಿನ ಕೆಲಸ ಎಂದಿದ್ದಾರೆ. ಶಾಸಕ ವಿಜಯೇಂದ್ರ ಮಾತನಾಡಿ, ನಿನ್ನೆ ಮತ್ತು ಇಂದು ದೇಶದ ವಿರೋಧ ಪಕ್ಷದವರ ಸಭೆ ಇದೆ. ಎಲ್ಲಾ ಹಿರಿಯ ಅಧಿಕಾರಿಗಳನ್ನು ಸ್ವಾಗತ ಕೋರಲು ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಆರ್ಭಟ ನೋಡಿದ್ರೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶವನ್ನೇ ಗೆದ್ದಂತೆ ಆಡ್ತಿದ್ದಾರೆ. ಮುಂದಿನ ದಿನದಲ್ಲಿ ಬಿಜೆಪಿ ಇದಕ್ಕೆ ತಕ್ಕ ಉತ್ತರ ಕೊಡ್ತೀವಿ. ಸಭೆಗೆ ಹಿರಿಯ ಐಎಎಸ್ ಅಧಿಕಾರಿಗಳ ಬಳಕೆ ಸರಿಯಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳು ಮಾತ್ರವಲ್ಲ ಜನರೂ ಕೂಡ ಅಸಹಾಯಕರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
IAS ನೇಮಕಕ್ಕೆ ಕಾಂಗ್ರೆಸ್ ಶಾಸಕರ ವಿರೋಧ..!
ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗೆ ಐಎಎಸ್ ಅಧಿಕಾರಿಗಳ ಬಳಕೆ ಬೇಕಿರಲಿಲ್ಲ ಎಂದು ಟಿ.ಬಿ ಜಯಚಂದ್ರ ಹೇಳಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಜಿ ಸಚಿವ ಟಿ.ಬಿ ಜಯಚಂದ್ರ, ಐಎಎಸ್ ಅಧಿಕಾರಿಗಳ ಬಳಕೆ ಮಾಡಿ ರಕ್ಷಣೆ ಕೊಡೋದು ಕರ್ನಾಟಕ ಸರ್ಕಾರಕ್ಕೆ ಅವಶ್ಯಕತೆ ಇಲ್ಲ. ಅಲ್ಲಿ ಡಿ.ಕೆ ಶಿವಕುಮಾರ್ ಹೋಗಿದ್ದಾರೆ, ಸಿಎಂ ಕೂಡ ಹೋಗಿರಬಹುದು. ಡಿ.ಕೆ ಶಿವಕುಮಾರ್ ಅವರ ಸ್ಟಾಫ್ ಬಿಟ್ಟು, ಉಳಿದ ಅಧಿಕಾರಿಗಳು ಹೋಗುವ ಅವಶ್ಯಕತೆ ಇಲ್ಲ. ನಾವ್ಯಾರು ಹೋಗಿರಲಿಲ್ಲ ಅಂದ ಮೇಲೆ ಅಧಿಕಾರಿಗಳೂ ಹೋಗುವ ಅವಶ್ಯಕತೆ ಇರಲಿಲ್ಲ. ಯಾವುದೋ ಕಾರಣಕ್ಕೆ ಹೋಗಿರಬಹುದು. ಇದನ್ನ ಸಾರ್ವಜನಿಕವಾಗಿ ಆರೋಪ ಮಾಡೋದು ಸರಿಯಲ್ಲ. ಬೆಂಗಳೂರಿನಲ್ಲಿ ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಭೆ ಯಶಸ್ವಿ ಆಗುತ್ತಿದೆ. ಕಾಂಗ್ರೆಸ್ ಇಬ್ಭಾಗ ಆದಾಗಲೂ ಬೆಂಗಳೂರಿನಲ್ಲಿ ಸಭೆ ಮಾಡಿ ಒಂದುಗೂಡಿಸಲಾಗಿತ್ತು ಎಂದಿದ್ದಾರೆ. ಒಟ್ಟಾರೆ, ಪ್ರೋಟೋ ಕಾಲ್ ಪ್ರಕಾರ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಪ್ರಮುಖರು ಬಂದಾಗ ಸರ್ಕಾರ ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡುವುದು ಸಹಜ. ಆದರೆ ಕಾಂಗ್ರೆಸ್ ನಿಯಮ ಉಲ್ಲಂಘನೆ ಮಾಡಿದೆ ಎನ್ನುವುದು ವಿಪಕ್ಷಗಳ ಆರೋಪ. ಇಲ್ಲ ಪ್ರೋಟೋಕಾಲ್ ಪಾಲಿಸಿದ್ದೇವೆ ಎನ್ನುವುದು ಸರ್ಕಾರದ ನಿಲುವು.
ಕೃಷ್ಣಮಣಿ