• Home
  • About Us
  • ಕರ್ನಾಟಕ
Sunday, December 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಗಣತಂತ್ರದ ಆಶಯಗಳೂ ವರ್ತಮಾನದ ಆದ್ಯತೆಗಳೂ

ನಾ ದಿವಾಕರ by ನಾ ದಿವಾಕರ
January 25, 2023
in Top Story, ಅಂಕಣ
0
ಗಣತಂತ್ರದ ಆಶಯಗಳೂ ವರ್ತಮಾನದ ಆದ್ಯತೆಗಳೂ
Share on WhatsAppShare on FacebookShare on Telegram

ಸಂವಿಧಾನದ ಮೂಲ ಆಶಯಗಳನ್ನು ಸಂರಕ್ಷಿಸುವುದೇ ಪ್ರತಿಯೊಬ್ಬ ಪ್ರಜೆಯ ಆದ್ಯತೆಯಾಗಬೇಕಿದೆ.

ADVERTISEMENT

ಭಾರತ ತನ್ನ 74ನೆ ಗಣತಂತ್ರ ದಿನವನ್ನು ಆಚರಿಸುತ್ತಿದೆ.  ಅಂದರೆ ಸ್ವತಂತ್ರ ಭಾರತ ತನ್ನದೇ ಆದ ಒಂದು ಸಂವಿಧಾನವನ್ನು ತನಗೇ ಅರ್ಪಿಸಿಕೊಂಡು 73 ವರ್ಷಗಳನ್ನು ಕಳೆದಿದೆ. ʼ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ʼ ಎಂಬ ಘೋಷ ವಾಕ್ಯದ ಹಿಂದೆ ನಾವು ಎಂದರೆ ಯಾರು ? ಈ ದೇಶದ ಸಮಸ್ತ ಪ್ರಜೆಗಳು. ಜಾತಿ, ಮತ, ಧರ್ಮ, ಭಾಷೆ, ಪ್ರಾಂತ್ಯ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನು ದಾಟಿ ಅನ್ವಯಿಸುವ ಈ ಘೋಷ ವಾಕ್ಯದ ನೆರಳಿನಲ್ಲೇ ಭಾರತದ ಗಣತಂತ್ರ 73 ವರ್ಷಗಳನ್ನು ಪೂರೈಸಿದೆ. ಜನವರಿ 26ರ ಗಣತಂತ್ರ ದಿನದ ಸಂದರ್ಭಲ್ಲಿ ರಾಜಧಾನಿ ದೆಹಲಿಯಲ್ಲಿ ನಡೆಯುವ ಸಮಾರಂಭವು ಈ ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವವನ್ನು ಜಗತ್ತಿಗೆ ಸಾರಿ ಹೇಳುವ ಒಂದು ಸಂದೇಶವನ್ನು ರವಾನಿಸುತ್ತದೆ. ಕರ್ತವ್ಯಪಥದಲ್ಲಿ ನಡೆಯುವ  ಸಾಂಪ್ರದಾಯಿಕ ಮೆರವಣಿಗೆಯಲ್ಲಿ ದೇಶದ ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು, ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಮತ್ತು ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದೇಶವನ್ನು ಒಂದುಗೂಡಿಸಿರುವ ವೈವಿಧ್ಯತೆಯನ್ನು ಬಿಂಬಿಸುವುದೇ ಅಲ್ಲದೆ, ಸ್ವತಂತ್ರ ಭಾರತದ ಜೀವನಾಡಿ ಎಂದೇ ಭಾವಿಸಲಾಗುವ ಬಹುಸಾಂಸ್ಕೃತಿಕ ವೈವಿಧ್ಯತೆಯನ್ನೂ ಜಗತ್ತಿನ ಮುಂದೆ ತೆರೆದಿಡುತ್ತದೆ.

ನೇತಾಜಿ ಸುಭಾಷ್‌ ಚಂದ್ರಬೋಸ್‌ ಅವರ ಜನ್ಮದಿನವಾದ ಜನವರಿ 23ರಿಂದ ಆರಂಭವಾಗುವ ಗಣರಾಜ್ಯೋತ್ಸವದ ಸಂಭ್ರಮವು ಜನವರಿ 30ರ ಹುತಾತ್ಮ ದಿನದಂದು ಸಮಾರೋಪಗೊಳ್ಳುತ್ತದೆ. ಅಂದರೆ ಭಾರತದ ಸ್ವಾತಂತ್ರ್ಯ  ಸಂಗ್ರಾಮದಲ್ಲಿ ತಮ್ಮದೇ ಆದ ಸೈದ್ಧಾಂತಿಕ ಮಾರ್ಗವನ್ನು ಅನುಸರಿಸಿ, ದೇಶದ ಪ್ರಪ್ರಥಮ ಸೇನೆಯನ್ನು ಕಟ್ಟುವ ಮೂಲಕ ವಸಾಹತುಶಾಹಿ ಬ್ರಿಟೀಷರಲ್ಲಿ ಎದೆನಡುಕ ಹುಟ್ಟಿಸಿದ್ದ ಸುಭಾಷ್‌ ಬೋಸ್‌ ಅವನ್ನು ಸ್ಮರಿಸುತ್ತಲೇ ಆರಂಭವಾಗುವ ಸಂಭ್ರಮಾಚರಣೆಯು, ತಮ್ಮ ಅಹಿಂಸಾ ಮಾರ್ಗದ ಮೂಲಕವೇ ದೇಶದ ಸಮಸ್ತ ಜನತೆಯನ್ನು ಒಂದುಗೂಡಿಸಿ, ಎಲ್ಲ ಸಮುದಾಯಗಳನ್ನೊಳಗೊಂಡ ಸಮನ್ವಯದ ಸಂದೇಶವನ್ನು ಸಾರುವುದರೊಂದಿಗೇ, ಕೂಡಿಬಾಳುವ ಉದಾತ್ತ ಮಾರ್ಗದಲ್ಲಿ ನಡೆದು ಬ್ರಿಟೀಷರನ್ನು ಎದುರಿಸಿದ್ದ ಮಹಾತ್ಮಾಗಾಂಧಿ ಹತ್ಯೆಯಾದ ದಿನದಂದು ಸಮಾರೋಪಗೊಳ್ಳುತ್ತದೆ. ಈ ಇಬ್ಬರು ಮಹಾನ್‌ ವ್ಯಕ್ತಿಗಳೂ ಸಹ ಅಸಹಜ ಸಾವಿಗೆ ತುತ್ತಾದವರೇ. ಈ ಮಹಾನ್‌ ನಾಯಕರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ, ಭಾರತದ ಬಹುಸಂಸ್ಕೃತಿ ಮತ್ತು ವೈವಿಧ್ಯತೆಯ ಬಗ್ಗೆ, ಬಹುತ್ವದ ಬಗ್ಗೆ ಯಾವುದೇ ಅಂತರ ಇರಲಿಲ್ಲ ಎನ್ನುವುದು ಸರ್ವವೇದ್ಯ. ಈ ತತ್ವಗಳನ್ನು ಅಧರಿಸಿಯೇ ಡಾ ಬಿ ಆರ್‌ ಅಂಬೇಡ್ಕರ್‌ ಭಾರತದ ಸಂವಿಧಾನಕ್ಕೆ ಒಂದು ಸ್ಪಷ್ಟ ರೂಪವನ್ನು ನೀಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ.

ಗಣತಂತ್ರ ಭಾರತ ನಡೆದುಬಂದ ಹಾದಿಯನ್ನು ಅವಲೋಕನ ಮಾಡುವ ಪ್ರತಿಯೊಂದು ಸಂದರ್ಭದಲ್ಲೂ ನವಂಬರ್ 25 1949ರಂದು ಸಂವಿಧಾನ ರಚಕ ಮಂಡಲಿಯಲ್ಲಿ ಮಾಡಿದ ಭಾಷಣದ ಒಂದು ತುಣುಕನ್ನು ನೆನೆಯುವುದು ಅತ್ಯವಶ್ಯವಾಗಿದೆ. ಈ ಸಂದರ್ಭದಲ್ಲಿ ಡಾ ಅಂಬೇಡ್ಕರ್‌  “ ನಾವು ಪ್ರಜಾಪ್ರಭುತ್ವವನ್ನು ಕೇವಲ ಅದರ ಸ್ವರೂಪದಲ್ಲೇ ಉಳಿಸಿಕೊಳ್ಳದೆ ವಾಸ್ತವವಾಗಿ ನಿರ್ವಹಿಸಬೇಕಾದರೆ ಏನು ಮಾಡಬೇಕು ? ನನ್ನ ಅಭಿಪ್ರಾಯದಲ್ಲಿ  ನಾವು ಮಾಡಬೇಕಾದ ಮೊದಲ ಕೆಲಸ ಎಂದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಧ್ಯೇಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಂವಿಧಾನಿಕ ವಿಧಾನಗಳನ್ನು ಅನುಸರಿಸಲು ಬದ್ಧರಾಗಬೇಕು. ,,,,, ಸಾಂವಿಧಾನಿಕ ವಿಧಾನಗಳು ಮುಕ್ತವಾಗಿದ್ದರೆ ಅಲ್ಲಿ ಅಸಾಂವಿಧಾನಿಕ ವಿಧಾನಗಳಿಗೆ ಯಾವುದೇ ರೀತಿಯ ಸಮರ್ಥನೆ ಇರಲು ಸಾಧ್ಯವಿಲ್ಲ,,, ಈ ವಿಧಾನಗಳು ಅರಾಜಕತೆಯ ಸಂಕೇತಗಳಾಗಿದ್ದು, ಅವುಗಳನ್ನು ಎಷ್ಟು ಬೇಗನೆ ನಿವಾರಿಸುತ್ತೇವೆಯೋ ಅಷ್ಟು ಒಳಿತಾಗುತ್ತದೆ. ಎರಡನೆಯದಾಗಿ,  ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬರುವುದರಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರೂ ಸಹ ʼ ಪ್ರಜೆಗಳು ತಮ್ಮ ಸ್ವಾತಂತ್ರ್ಯವನ್ನು ಮಹಾನ್‌ ವ್ಯಕ್ತಿಯೊಬ್ಬರ ಪದತಳದಲ್ಲಿರಿಸುವುದಾಗಲೀ, ಆ ವ್ಯಕ್ತಿಗೆ ರಾಜಕೀಯ ಮಾರ್ಗದಲ್ಲಿ  ಪ್ರಜೆಗಳ ಸಾಂಸ್ಥಿಕ ನೆಲೆಗಳನ್ನು ಬುಡಮೇಲು ಮಾಡುವ ಅಧಿಕಾರವನ್ನು ಕಲ್ಪಿಸುವುದಾಗಲೀ ಮಾಡಕೂಡದುʼ  ಎಂಬ ಜಾನ್‌ ಸ್ಟುವರ್ಟ್‌ ಮಿಲ್‌ ಅವರ ಎಚ್ಚರಿಕೆಯ ಮಾತುಗಳನ್ನು ಗಮನಿಸಬೇಕಿದೆ. ಭಕ್ತಿ ಅಥವಾ ವ್ಯಕ್ತಿ ಆರಾಧನೆ ಅವನತಿಯ ಮಾರ್ಗವಾಗಿ ಪರಿಣಮಿಸುತ್ತದೆ ಅಂತಿಮವಾಗಿ ಸರ್ವಾಧಿಕಾರದಲ್ಲಿ ಪರ್ಯವಸಾನ ಹೊಂದುತ್ತದೆ.  ಮೂರನೆಯದಾಗಿ ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದಲೇ ಸಂತುಷ್ಟರಾಗಬಾರದು. ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿ ಪರಿವರ್ತಿಸಬೇಕು.  ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿ ಇಲ್ಲದೆ ಹೋದರೆ ರಾಜಕೀಯ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ನೆತ್ತರಿನ ಕೊನೆ ಹನಿ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಪಣತೊಡಬೇಕು ”

ಡಾ ಬಿ ಆರ್‌ ಅಂಬೇಡ್ಕರ್‌ ಅವರ ಈ ಅಮೂಲ್ಯ ಸಂದೇಶಾತ್ಮಕ ಮಾತುಗಳನ್ನು ನಾವು ಮತ್ತೆ ಮತ್ತೆ ಪುನರ್‌ಮನನ ಮಾಡಿಕೊಳ್ಳಬೇಕಾಗಿರುವುದೇ ಸ್ವತಂತ್ರ ಭಾರತದ ದುರಂತ ಎನಿಸುತ್ತದೆ. ಸಂವಿಧಾನದ ಮೂಲ ಸ್ವರೂಪ ಮತ್ತು ಮೂಲ ಆಶಯಗಳನ್ನು ಅಂಬೇಡ್ಕರ್‌ ಈ ಮಾತುಗಳಲ್ಲೇ ಅಡಗಿಸಿಟ್ಟಿದ್ದಾರಲ್ಲವೇ ? ಇಂದು ನಾವು ಅನುಸರಿಸಲು ಪಣತೊಡುತ್ತಿರುವ ಸುಭಾಷ್‌ ಬೋಸ್ ಅವರ ಮಾರ್ಗಕ್ಕೂ, ದ್ವೇಷಾಸೂಯೆಯ ಮನೋಧರ್ಮಕ್ಕೆ ಬಲಿಯಾಗಿ ಹುತಾತ್ಮರಾದ ಮಹಾತ್ಮ ಗಾಂಧಿ ಪ್ರತಿಪಾದಿಸಿದ ಹಾದಿಗೂ, ಡಾ ಬಿ ಆರ್‌ ಅಂಬೇಡ್ಕರ್‌ ಹಾಕಿಕೊಟ್ಟ ಸಾಂವಿಧಾನಿಕ ಮಾರ್ಗಕ್ಕೂ ಅಂತರವೇನಿದೆ ? ಈ ಮಾರ್ಗಗಳಲ್ಲಿ ಕಂಡುಬರುವ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಹೊರಗಿಟ್ಟು ನೋಡಿದಾಗ, ಭಾರತದ ಸಂವಿಧಾನ ಅಪೇಕ್ಷಿಸುವ ಪ್ರಜಾಪ್ರಭುತ್ವ, ಸಮಾನತೆ, ಸೋದರತೆ, ಸಾಮಾಜಿಕ ಸಾಮರಸ್ಯ ಮತ್ತು ಸಮನ್ವಯ ಹಾಗೂ ಸೌಹಾರ್ದತೆ ಈ ಎಲ್ಲ ಧ್ಯೇಯಗಳೂ ಸಹ ಈ ಮೂವರು ಮಹಾನ್‌ ನಾಯಕರ ಮಾರ್ಗಗಳ ಮೈಲಿಗಲ್ಲುಗಳಾಗಿ ಕಾಣುವುದಲ್ಲವೇ ?

ಸಂವಿಧಾನವನ್ನು ಎದೆಗವುಚಿಕೊಂಡು ಪ್ರಮಾಣೀಕರಿಸುವ ಮತ್ತು ಪ್ರತಿ ಹೆಜ್ಜೆಯಲ್ಲೂ ಸಂವಿಧಾನವನ್ನೇ ಉಸಿರಾಡುವ ಚುನಾಯಿತ ಪ್ರತಿನಿಧಿಗಳಾಗಳೀ, ತಮ್ಮ ಅತ್ಯಮೂಲ್ಯ ಮತದ ಮೂಲಕ ಇದೇ ಪ್ರತಿನಿಧಿಗಳನ್ನು ಚುನಾಯಿಸುವ ಪ್ರಜೆಗಳಾಗಲೀ ಮತ್ತು ಸಂವಿಧಾನದ ಮೂಲ ಸಂರಚನೆಗೆ ಚ್ಯುತಿ ಬಾರದಂತೆ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಿ ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಶಾಸಕಾಂಗ-ಕಾರ್ಯಾಂಗಗಳಾಗಲೀ ಅಥವಾ ತಮ್ಮ ಬೌದ್ಧಿಕ-ಭೌತಿಕ ಪರಿಶ್ರಮದ ಮೂಲಕ ದೇಶದ ಮುನ್ನಡೆಗೆ ಕಾರಣರಾಗುವ ಪ್ರಜೆಗಳಾಗಲೀ, ಗಣತಂತ್ರ ದಿನದಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಒಂದು ಸನ್ನಿವೇಶವನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಸಂವಿಧಾನದ ಪೀಠಿಕೆಯಲ್ಲಿ ಹೇಳಲಾಗಿರುವಂತೆ “ ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ, ಸಾರ್ವಭೌಮ ಗಣತಂತ್ರವಾಗಿ ರೂಪಿಸುವುದೇ ಅಲ್ಲದೆ, ಸಮಸ್ತ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯವನ್ನು ಕಲ್ಪಿಸಿ, ನಂಬಿಕೆ, ಶ್ರದ್ಧೆ, ಆರಾಧನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಲ್ಪಿಸುವ ಮೂಲಕ, ಪ್ರತಿಯೊಬ್ಬ ಪ್ರಜೆಯ ಘನತೆ, ಗೌರವವನ್ನು ಕಾಪಾಡುತ್ತಲೇ ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುತ್ತೇವೆ ”  ಎಂದು ಹೇಳುತ್ತಲೇ ಇರುತ್ತೇವೆ.

ಆದರೆ ವಾಸ್ತವ ಸನ್ನಿವೇಶವನ್ನು ಗಮನಿಸಿದಾಗ, ನಮ್ಮ ಈ ಪ್ರಮಾಣೀಕರಣ ಪ್ರಾಮಾಣಿಕವಾಗಿದೆಯೇ ಎಂಬ ಅನುಮಾನ ಮೂಡದಿರುವುದಿಲ್ಲ. ಗಣತಂತ್ರದ ಮತ್ತು ಗಣತಂತ್ರ ವ್ಯವಸ್ಥೆಯ ಬುನಾದಿಯಾದ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ಜವಾಬ್ದಾರಿ           ಯಾರದು ? ಈ ಪ್ರಶ್ನೆ ದಿನದಿಂದ ದಿನಕ್ಕೆ ಜಟಿಲವಾಗುತ್ತಲೇ ಇದೆ. ಆಳುವ ವರ್ಗವನ್ನು ಪ್ರತಿನಿಧಿಸುವ ಚುನಾಯಿತ ಸರ್ಕಾರಗಳು ಜಾರಿಗೊಳಿಸುವ ಕಾಯ್ದೆ ಕಾನೂನುಗಳು, ಶಾಸನಗಳು ಮತ್ತು ರೂಪಿಸುವ ನಿಯಮಾವಳಿಗಳು ಸಾಮಾನ್ಯವಾಗಿ ಆಡಳಿತಾರೂಢ ಪಕ್ಷದ ತಾತ್ವಿಕ ತಳಹದಿಯನ್ನೇ ಅವಲಂಬಿಸಿರುತ್ತವೆ. ಈ ತಾತ್ವಿಕ ತಳಹದಿಗೂ ಸಂವಿಧಾನದ ಮೂಲ ಆಶಯಗಳಿಗೂ ನಡುವೆ ಇರುವ ಅಂತರವನ್ನು ಮಾರುಕಟ್ಟೆ ನೀತಿಗಳಲ್ಲಿ, ಆರ್ಥಿಕ ನೀತಿಗಳಲ್ಲಿ ಮತ್ತು ಸಾಮಾಜಿಕ ನ್ಯಾಯದ ಕಾಯ್ದೆ ಕಾನೂನುಗಳಲ್ಲಿ ಗುರುತಿಸಬಹುದು. 1975ರಲ್ಲಿ ದೇಶ ಎದುರಿಸಿದಂತಹ ತುರ್ತುಪರಿಸ್ಥಿತಿ ಮತ್ತು ಇಂದು ಎದುರಿಸುತ್ತಿರುವ ರಾಜಕೀಯ ಸನ್ನಿವೇಶವನ್ನು ಗಮನಿಸಿದಾಗ, ರಾಜಕೀಯ ಪಕ್ಷಗಳು ತಮ್ಮ ತಾತ್ವಿಕ ನೆಲೆಗಳಿಗೆ ಅನುಗುಣವಾಗಿಯೇ ಸಾಂವಿಧಾನಿಕ ನಿಯಮಗಳನ್ನೂ ಸಮರ್ಪಕವಾಗಿ ಬಳಸಿಕೊಳ್ಳುವುದನ್ನು ಗಮನಿಸಬಹುದು. ಹಾಗಾಗಿಯೇ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಧಾರ್ಮಿಕ ಸ್ವಾತಂತ್ರ್ಯದ ನಿರಾಕರಣೆ, ಸಾಮಾಜಿಕ ನ್ಯಾಯದ ವಂಚನೆ ಮತ್ತು ಸಮಾನತೆಯನ್ನು ನಿರಾಕರಿಸುವ ಸಾಂಸ್ಕೃತಿಕ ವಾತಾವರಣ ಕಂಡುಬರುತ್ತದೆ.

ಗಣತಂತ್ರ ದಿನದ ಸಂದರ್ಭದಲ್ಲಿ ʼ ಭಾರತದ ಪ್ರಜೆಗಳಾದ ನಾವು ʼ ಮನಗಾಣಬೇಕಿರುವುದು ಏನನ್ನು ? ಸಂವಿಧಾನದ ರಕ್ಷಣೆ ಎಂದರೆ ಏನು ? ಯಾವುದೇ ಅಮೂಲಾಗ್ರ ತಿದ್ದುಪಡಿಗೊಳಗಾಗದೆ ಗ್ರಾಂಥಿಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವಂತೆ ಎಚ್ಚರ ವಹಿಸುವುದೇ ಅಥವಾ ಮೂಲ ಸ್ವರೂಪವು ಯಥಾಸ್ಥಿತಿಯಲ್ಲಿರುವಂತೆಯೇ ಸಾಂವಿಧಾನಿಕ ಆಶಯಗಳು ಶಿಥಿಲವಾಗದಂತೆ ಎಚ್ಚರವಹಿಸುವುದೇ ? ಈ ಜವಾಬ್ದಾರಿ ಯಾರ ಮೇಲಿದೆ ? ʼ ಭಾರತದ ಸಾರ್ವಭೌಮ ಪ್ರಜೆ ʼ ಗಳಾದ ನಮ್ಮ ಮೇಲಲ್ಲವೇ ? ಅಂದರೆ ಸಂವಿಧಾನವನ್ನು ಎದೆಗವುಚಿಕೊಳ್ಳುವ ಮುನ್ನ, ಅಂಬೇಡ್ಕರರನ್ನು ಆರಾಧಿಸುವ ಮುನ್ನ, ಸಂವಿಧಾನ ಪೀಠಿಕೆಯನ್ನು ಪ್ರಮಾಣೀಕರಿಸುವ ಮುನ್ನ ನಾವು ಯೋಚಿಸಬೇಕಿರುವುದೇನು ? ನಮ್ಮ ಸಂವಿಧಾನ ಬದ್ಧತೆಗೆ ಅನುಗುಣವಾಗಿ ನಾವು ಭ್ರಷ್ಟರನ್ನು, ಪಾತಕಿಗಳನ್ನು, ಅಪರಾಧಿಗಳನ್ನು, ಅತ್ಯಾಚಾರಿಗಳನ್ನು, ಅಪ್ರಮಾಣಿಕರನ್ನು, ಪ್ರಜಾತಂತ್ರ ವಿರೋಧಿಗಳನ್ನು, ಪಿತೃಪ್ರಧಾನ ಧೋರಣೆ ಪೋಷಿಸುವವರನ್ನು, ಜಾತಿ ತಾರತಮ್ಯದ ರಕ್ಷಕರನ್ನು, ಮತದ್ವೇಷ ಮತ್ತು ಜಾತಿದ್ವೇಷದ ಪ್ರತಿಪಾದಕರನ್ನು ಅಧಿಕಾರ ಕೇಂದ್ರಗಳಿಂದ ದೂರ ಇಡಲು ಪ್ರಯತ್ನಿಸಿದ್ದೇವೆಯೇ ? ಸರ್ಕಾರ ಅಥವಾ ಪ್ರಭುತ್ವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂಬ ಕೂಗು ಕೇಳಿಬರುತ್ತಿದೆಯಾದರೂ, ಮಾನವ ಹಕ್ಕುಗಳ, ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತು ಮಹಿಳಾ ಘನತೆ ಮತ್ತು ಸಮಾನತೆಯ ಆಶಯಗಳಿಗೆ ಚ್ಯುತಿ ಬಂದಾಗ ನಮ್ಮ ಗಟ್ಟಿ ದನಿ ಕೇಳಿಬರುತ್ತಿದೆಯೇ ?

ಇತ್ತೀಚೆಗೆ ಬಿಡುಗಡೆಯಾಗಿರುವ ಆಕ್ಸ್‌ಫಾಮ್‌ ವರದಿಯನ್ನು ಗಮನಿಸಿದಾಗ ನಾವಿನ್ನೂ ಸಮಾನತೆಯ ಮೂಲಾರ್ಥವನ್ನೇ ಗ್ರಹಿಸಿಲ್ಲ ಎನ್ನುವುದು ಸ್ಪಷ್ಟವಾಗುವುದಿಲ್ಲವೇ ? ನವ ಉದಾರವಾದದ ಮಾರುಕಟ್ಟೆ ನೀತಿಗಳು ಸೃಷ್ಟಿಸುತ್ತಿರುವ ಬಡವ ಶ್ರೀಮಂತರ ನಡುವಿನ ಅಗಾಧ ಅಂತರವು ಮತ್ತು ಅದರಿಂದ ಸಮಾಜದಲ್ಲಿ ಉಂಟಾಗಬಹುದಾದ ಪ್ರಕ್ಷುಬ್ಧತೆ ಮತ್ತು ಮಾನಸಿಕ ಕ್ಷೋಭೆಯನ್ನು ಅರಿತಿದ್ದೂ, ಎಷ್ಟು ಮಂದಿ ಸಂವಿಧಾನದ ಆರಾಧಕರು , ಈ ಆರ್ಥಿಕ ನೀತಿಗಳ ವಿರುದ್ಧ ದನಿ ಎತ್ತಿದ್ದಾರೆ ? ಆರ್ಥಿಕ ಅಸಮಾನತೆಯು ಸಾಮಾಜಿಕವಾಗಿಯೂ ಜನತೆಯ ನಡುವೆ ಕಂದಕಗಳನ್ನು ಸೃಷ್ಟಿಸುತ್ತದೆ ಎಂಬ ವಾಸ್ತವವನ್ನು ಬಿಡಿಸಿ ಹೇಳಬೇಕಿಲ್ಲ. ಡಾ ಬಿ ಆರ್‌ ಅಂಬೇಡ್ಕರ್‌ ಅದನ್ನೂ ನಮಗೆ ಹೇಳಿಹೋಗಿದ್ದಾರಲ್ಲವೇ ? ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವವನ್ನು ಸಾಧಿಸದೆ ರಾಜಕೀಯ ಪ್ರಜಾಪ್ರಭುತ್ವ ವಿಫಲವಾಗುತ್ತದೆ ಎಂಬ ಅಂಬೇಡ್ಕರ್‌ ವಾಣಿಯನ್ನು , ಅವರ ಆರಾಧಕರಲ್ಲೇ ಎಷ್ಟು ಜನ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ ?

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪಾತಕೀಕರಣ ದೇಶದ ಯುವ ಸಮೂಹದಲ್ಲಿ ಉಂಟುಮಾಡುತ್ತಿರುವ ಮಾನಸಿಕ ಕ್ಷೋಭೆ ಮತ್ತು ಇದರಿಂದ ಉಗಮಿಸುವ ಸಾಮಾಜಿಕ-ಸಾಂಸ್ಕೃತಿಕ ತಲ್ಲಣಗಳು ದೇಶವನ್ನು ಎತ್ತ ಕೊಂಡೊಯ್ಯಲು ಸಾಧ್ಯ ? ಈ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ? ಮಹಿಳೆಯರ ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವಂತೆಯೇ, ಯುವ ಪೀಳಿಗೆಯಲ್ಲಿ ಆತ್ಮಹತ್ಯೆಯ ಮನಸ್ಥಿತಿಯೂ ಹೆಚ್ಚಾಗುತ್ತಿರುವುದು, ಮತ್ತೊಂದೆಡೆ ಇದೇ ಯುವ ಸಮೂಹದಲ್ಲಿ ಹಿಂಸಾತ್ಮಕ ಧೋರಣೆ, ಯಜಮಾನ ಸಂಸ್ಕೃತಿ ಮತ್ತು ಪಿತೃಪ್ರಧಾನ ಮನಸ್ಥಿತಿ ಆಳವಾಗಿ ಬೇರುತ್ತಿರುವುದನ್ನು ಈಗಲಾದರೂ ಪ್ರಜ್ಞಾವಂತರಾದ ನಾವು, ಅಂದರೆ ʼ ಭಾರತದ ಪ್ರಜೆಗಳಾದ ನಾವು ʼ ಗಂಭೀರವಾಗಿ ಪರಾಮರ್ಶಿಸಬೇಕಲ್ಲವೇ ? ಅನ್ಯಾಯದ ವಿರುದ್ಧ, ಅಸಮಾನತೆ,  ಅಸ್ಪೃಶ್ಯತೆಯಂತಹ ಹೀನಾಚರಣೆ,  ಮಹಿಳಾ ದೌರ್ಜನ್ಯ ಮತ್ತು ದ್ವೇಷಾಸೂಯೆಗಳ ವಿರುದ್ಧ ದನಿಎತ್ತುವುದು ಸಾಂಘಿಕ ಜವಾಬ್ದಾರಿಯೋ ವ್ಯಕ್ತಿಗತ ಜವಾಬ್ದಾರಿಯೋ ಎನ್ನುವುದನ್ನು ನಿಷ್ಕರ್ಷೆ ಮಾಡಬೇಕಿದೆ. ಏಕೆಂದರೆ ಈ ನಿಟ್ಟಿನಲ್ಲಿ ಕಾಣುವ ಪ್ರತಿರೋಧದ ದನಿಗಳೆಲ್ಲವೂ ಸಾಂಘಿಕವಾಗಿವೆ. ವ್ಯಕ್ತಿಗತ ನೆಲೆಯಲ್ಲಿ ಸಮಾಜ ಬೌದ್ಧಿಕ ನಿಷ್ಕ್ರಿಯತೆಯಿಂದ ಜಡಗಟ್ಟುತ್ತಿದೆ. 

ಈ ವ್ಯಕ್ತಿಗತ ನೆಲೆಗಟ್ಟಿನ ಜವಾಬ್ದಾರಿಯನ್ನು ಪ್ರತಿಯೊಬ್ಬ ಪ್ರಜೆಗಳೂ ಮನದಟ್ಟು ಮಾಡಬೇಕಾದ ನೈತಿಕ ಹೊಣೆಯನ್ನು ಈ ದೇಶದ ಸಾಂಸ್ಕೃತಿಕ, ಸಾಹಿತ್ಯಕ, ಬೌದ್ಧಿಕ ಹಾಗೂ ಕಲಾಭಿವ್ಯಕ್ತಿಯ ನೆಲೆಗಳಲ್ಲಿ ನಾವು ಗುರುತಿಸಿಕೊಳ್ಳಬೇಕಿದೆ. ಗಣತಂತ್ರದ ಮತ್ತು ಸಂವಿಧಾನದ ಆಶಯಗಳು ಸಾಕಾರಗೊಂಡಿವೆಯೋ ಇಲ್ಲವೋ ಎನ್ನುವುದು ಹಾಳೆಗಳ ಮೇಲಿನ ಸೂಚ್ಯಂಕಗಳಲ್ಲಿ ವ್ಯಕ್ತವಾಗುವುದಿಲ್ಲ. ತಳಮಟ್ಟದ ಜನಸಮುದಾಯಗಳ ನಿತ್ಯ ಜೀವನದಲ್ಲಿ ಢಾಳಾಗಿ ಕಾಣಿಸುತ್ತದೆ. ಹಸಿವು ಬಡತನ ದಾರಿದ್ರ್ಯ ಮತ್ತು ದೌರ್ಜನ್ಯ, ಇವುಗಳಿಂದ ಸೃಷ್ಟಿಯಾಗುವ ಅಸಮಾನತೆಯ ನೆಲೆಗಳು ಡಾ ಬಿ ಆರ್‌ ಅಂಬೇಡ್ಕರ್‌ ಆಶಿಸಿದ ಸಾಂವಿಧಾನಿಕ ಆಶಯ ಮತ್ತು ಮೌಲ್ಯಗಳಿಗೆ ವ್ಯತಿರಿಕ್ತವಾಗಿದೆಯೋ ಇಲ್ಲವೋ ಎಂದು ತಿಳಿಯಬೇಕಾದರೆ ನಾವು, ಎತ್ತರದ ವೇದಿಕೆಗಳಿಂದ ಜಿಗಿದು, ನೈತಿಕ ಪಾತಾಳಕ್ಕೆ ಕುಸಿಯದೆ, ತಳಮಟ್ಟದ ಜನಸಾಮಾನ್ಯರ ನಡುವೆ , ನೆಲದ ಮೇಲೆ ನಿಂತು ಸುತ್ತ ಕಣ್ಣಾಡಿಸಬೇಕಿದೆ.  ಆಗ ನಮಗೆ ಗಣತಂತ್ರ ದಿನವನ್ನು ಆಚರಿಸುವ ಮತ್ತು ಸಂವಿಧಾನವನ್ನು ಎದೆಗವುಚಿಕೊಳ್ಳುವ ನೈತಿಕ ಹಕ್ಕು ಸಹ ಲಭಿಸುತ್ತದೆ. ʼ ಭಾರತದ ಪ್ರಜೆಗಳಾದ ನಾವು ʼ ಈ ಆದ್ಯತೆಯೊಂದಿಗೆ ಮುನ್ನಡೆಯುವುದೇ ಆದರೆ ಜನವರಿ 26ರ ಗಣತಂತ್ರ ದಿನದ ಆಚರಣೆಯೂ ಸಾರ್ಥಕವಾದೀತು.

Previous Post

| CONGRESS | ಬಿಜೆಪಿ ಸರ್ಕಾರ ಬಡತನ, ನಿರುದ್ಯೋಗ ವಿಚಾರವಾಗಿ ಮಾತನಾಡಲು ತಯಾರಿಲ್ಲ| BJP |

Next Post

ನಮ್ಮ ಕೆಲಸಗಳೇ ನಮ್ಮ ಕೊಡುಗೆಗೆ ಸಾಕ್ಷಿ ಹೇಳುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Related Posts

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ
Top Story

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

by ಪ್ರತಿಧ್ವನಿ
December 14, 2025
0

ಬೆಂಗಳೂರು: ವಿಮಾನದಲ್ಲಿ ಅಸ್ವಸ್ಥಗೊಂಡ ವಿದೇಶಿ ಯುವತಿಯನ್ನು ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್(Anjali Nimbalkar) ತಕ್ಷಣ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಡಾ. ಅಂಜಲಿ ನಿಂಬಾಳ್ಕರ್...

Read moreDetails
ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

December 13, 2025
Next Post
ನಮ್ಮ ಕೆಲಸಗಳೇ ನಮ್ಮ ಕೊಡುಗೆಗೆ ಸಾಕ್ಷಿ ಹೇಳುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ನಮ್ಮ ಕೆಲಸಗಳೇ ನಮ್ಮ ಕೊಡುಗೆಗೆ ಸಾಕ್ಷಿ ಹೇಳುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Please login to join discussion

Recent News

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ
Top Story

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

by ಪ್ರತಿಧ್ವನಿ
December 14, 2025
ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ
Top Story

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

by ಪ್ರತಿಧ್ವನಿ
December 14, 2025
Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!
Top Story

Daily Horoscope: ಇಂದು ಸುಖ-ಸಂಪತ್ತು ಹೆಚ್ಚಾಗುವ ರಾಶಿಗಳಿವು..!

by ಪ್ರತಿಧ್ವನಿ
December 14, 2025
“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”
Top Story

“ಯಾವ ಇಕ್ಬಾಲ್ ಹುಸೇನ್ ಮಾತನ್ನು ನಂಬಬೇಡಿ, ಆತ ಚಟಕ್ಕೆ ಮಾತನಾಡುತ್ತಾನೆ”

by ಪ್ರತಿಧ್ವನಿ
December 13, 2025
ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato
Top Story

ಸಂಗೀತಗಾರ ರಿಕಿ ಕೇಜ್ ಮನೆಯಲ್ಲಿ ಕಳ್ಳತನ: ತಕ್ಷಣವೇ ಪ್ರತಿಕ್ರಿಯಿಸಿದ Zomato

by ಪ್ರತಿಧ್ವನಿ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

ವಿಮಾನದಲ್ಲಿ ವಿದೇಶಿ ಯುವತಿಯ ಜೀವ ಕಾಪಾಡಿದ ಅಂಜಲಿ ನಿಂಬಾಳ್ಕರ್‌ಗೆ ಸಿಎಂ ಮೆಚ್ಚುಗೆ

December 14, 2025
ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

ದರ್ಶನ್‌ ಫ್ಯಾನ್ಸ್‌ಗೆ ಮಹಿಳೆಯರ ಗೌರವದ ಬಗ್ಗೆ ಹೇಳಿಕೊಡಬೇಕಾಗಿಲ್ಲ-ವಿಜಯಲಕ್ಷ್ಮಿ

December 14, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada