ಅಣ್ಣಾವ್ರ ಹುಟ್ಟು ಹಬ್ಬದಂದೇ ಅಶ್ವಿನಿ ಪುನೀತ್ ರಾಜಕುಮಾರ್ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.

ನಿರ್ಮಾಪಕಿ ಅಶ್ವಿನಿ ರಾಜಕುಮಾರ್ ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ. ಅಪ್ಪಾಜಿ ಹುಟ್ಟು ಹಬ್ಬದ ಸವಿನೆನಪಿನಲ್ಲಿ ಎಂದು ಅಶ್ವಿನಿ ಸ್ಮರಿಸಿದ್ದಾರೆ. ಇಂದು ಅಪ್ಪಾಜಿಯವರ 95ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಗಂಧದಗುಡಿ ಚಿತ್ರದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅಪ್ಪು ಅವರ ‘ಗಂಧದಗುಡಿ ಅಗರಬತ್ತಿ’ಯ (Gandhadagudi Agarbathie) ಶುಭಾರಂಭದೊಂದಿಗೆ ಸ್ಮರಿಸೋಣ ಎಂದು ಅಶ್ವಿನಿ ಪುನೀತ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಡಾ. ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರು ಅದ್ದೂರಿಯಾಗಿ ಆಚರಿಸಿದ್ದಾರೆ. ಚುನಾವಣೆ ನಡುವೆಯೂ ಕರ್ನಾಟಕ ಸರಕಾರ ಮತ್ತು ಡಾ.ರಾಜ್ ಕುಮಾರ್ ಸ್ಮಾರಕ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ. ಕಂಠೀರವ ಸ್ಟುಡಿಯೋಕ್ಕೆ ಆಗಮಿಸಿದ ಅಭಿಮಾನಿಗಳು ಅವರ ಸ್ಮಾರಕ ದರ್ಶನ ಮಾಡಿದ್ದಾರೆ.

ಅಲ್ಲದೇ, ಅಭಿಮಾನಿಗಳು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಅನ್ನ ಸಂತರ್ಪನೆ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಲಿವೆ. ಬೆಳಗ್ಗೆ ಡಾ.ರಾಜ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕಕ್ಕೆ ಆಗಮಿಸಿ, ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪುನೀತ್ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್‌ಕುಮಾರ್ ಮತ್ತು ಡಾ.ರಾಜ್‌ಕುಮಾರ್ ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಸ್ಥರು ಭಾಗಿಯಾಗಿದ್ದರು.