ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ(Bigg Boss Kannada Season 12) ತೆರೆ ಬಿದ್ದಿದ್ದರೂ, ಟ್ರೋಫಿ ಗೆದ್ದ ಗಿಲ್ಲಿ ಹೆಸರಿನ ಚರ್ಚೆ ಮಾತ್ರ ಇನ್ನೂ ಮುಗಿದಿಲ್ಲ. ಗೆಲುವಿನ ಸಂಭ್ರಮದ ನಡುವೆ, ಸಹಸ್ಪರ್ಧಿ ಅಶ್ವಿನಿ ಗೌಡ(Ashwini Gowda) ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಗಿಲ್ಲಿ ಗೆಲುವಿನ ಕುರಿತಂತೆ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ನೀಡಿರುವ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: BBK12: ಬಿಗ್ ಬಾಸ್ ಮನೆಯೊಳಗೆ ಪೈಪೋಟಿ, ಹೊರಗೆ ಒಂದೇ ಕೈ: ಇದು ಗಿಲ್ಲಿ–ಅಶ್ವಿನಿ ಪಿಆರ್ ಕಥೆ
ಬಿಗ್ ಬಾಸ್ ಮುಗಿದ ಬಳಿಕ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಅಶ್ವಿನಿ ಗೌಡ ʼಬಡವರ ಮಕ್ಕಳು ಬೆಳೆಯಬೇಕು ಅನ್ನೋದು ನಿಜ. ಆದರೆ ಗಿಲ್ಲಿ ಬಡವ ಅಲ್ಲ. ಬಡವರಂತೆ ಗೆಟಪ್ ಹಾಕಿಕೊಂಡವʼ ಎಂದು ಹೇಳಿರುವು ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ನಡುವೆ ಬಿಗ್ ಬಾಸ್ ಮನೆಯಲ್ಲೇ ಗಿಲ್ಲಿಗೆ ಆತ್ಮೀಯರಾಗಿದ್ದ ನಟಿ ಕಾವ್ಯ ಶೈವ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗುತ್ತಿದೆ. ಗಿಲ್ಲಿ ಗೆಲುವಿನ ಫೋಟೊಗಳನ್ನು ಹಂಚಿಕೊಂಡಿರುವ ಕಾವ್ಯ, ʼಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ. ಹೇ ಗಿಲ್ಲಿ, ಕಂಗ್ರಾಟ್ಸ್ ಕಣೋ. ನೀನು ಇದಕ್ಕೆ ಅರ್ಹ. ಜೀರೋದಿಂದ ಹೀರೋ ಆಗಿದ್ದೀಯ. ಇನ್ನೂ ಸಾಕಷ್ಟು ಸಾಧಿಸಬೇಕು. ಆದಷ್ಟು ಬೇಗ ಆಕ್ಷನ್ ಕಟ್ ಹೇಳುವಂತಾಗಲಿʼ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ಅಶ್ವಿನಿ ಗೌಡಗೆ ಕಾವ್ಯ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ.

ಈ ಬಡವ, ಬಡವರ ಮಕ್ಕಳು ಬೆಳೆಯಬೇಕು, ಬಡವನ ಗೆಟಪ್ ಎನ್ನುವ ವಿಚಾರಗಳು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದು, ಇದೊಂದು ಹುರುಳಿಲ್ಲದ ಚರ್ಚೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ. ಮೊದಲನೆಯದಾಗಿ ಸ್ಪಷ್ಟಪಡಿಸಬೇಕು ಎಂದರೆ ಬಿಗ್ ಬಾಸ್ ಮನೆಯೊಳಗಾಗಲಿ ಹೊರಗಾಗಲಿ ಗಿಲ್ಲಿ ನಟ ಎಂದೂ ತಾವು ಬಡವ ಎಂದು ಹೇಳಿಕೊಂಡಿಲ್ಲ. ಬೆಂಗಳೂರಿಗೆ ಬಂದ ಹೊಸತರಲ್ಲಿ ಎದುರಾದ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿರುವ ಗಿಲ್ಲಿ ಎಲ್ಲಿಯೂ ತಾನು ಬಡವ ನಮ್ಮ ಮನೆಯಲ್ಲಿ ಬಡತನ ಎಂದು ಹೇಳಿಕೊಂಡಿಲ್ಲ. ಈಗಲೂ ತಮ್ಮ ಮಾತಿಗೆ ಬದ್ಧರಾಗಿರುವ ಗಿಲ್ಲಿ ನಾವು ಮಧ್ಯಮ ವರ್ಗದ ಜನ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ಗಿಲ್ಲಿ ಬಡವ, ಬಡವರ ಮಕ್ಕಳು ಬೆಳೆಯಬೇಕು ಎನ್ನುವ ಮಾತು ಎಲ್ಲಿ ಹುಟ್ಟಿಕೊಂಡಿತು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಕೆಲ ಅಭಿಮಾನಿಗಳು, ಸೆಲೆಬ್ರೆಟಿಗಳು ಗಿಲ್ಲಿ ಪರ ಮತ ಕೇಳುವ ಬರದಲ್ಲಿ ಆಡಿದ ಮಾತು ಈಗ ಹುರುಳಿಲ್ಲದ ಚರ್ಚೆ ನಡೆಯಲು ಕಾರಣವಾಗಿದೆ.












