ಶಿವಮೊಗ್ಗ: ಮಾ.೩೦: ಶಿಕಾರಿಪುರದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸುವ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ ವಿರುದ್ಧ ತಿರುಗಿಬಿದ್ದಿದೆ. ಹೌದು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರಾಗಿರುವ ಶಾಸಕ ಅಶೋಕ್ ನಾಯ್ಕ ಅವರಿಗೆ ಪ್ರತಿಭಟನೆ ನಡೆಯುವ ಬಗ್ಗೆ ಮಾಹಿತಿ ಇರಲಿಲ್ಲವೇ ಎಂದು ಲಿಂಗಾಯತ ಸಮಾಜದ ಮುಖಂಡರುಗಳು ಪ್ರಶ್ನಿಸಲಾರಂಭಿಸಿದ್ದಾರೆ.
ಒಂದು ಸಂಘದ ಜಿಲ್ಲಾಧ್ಯಕ್ಷರಾದ ಮೇಲೆ ಆ ಸಂಘದ ತಾಲೂಕು ಘಟಕಗಳಿಂದ ನಡೆಯುವ ಯಾವುದೇ ಕಾರ್ಯಕ್ರಮಗಳಿರಲಿ ಅಥವಾ ಹೋರಾಟಗಳಿರಲಿ ಅದು ಜಿಲ್ಲಾಧ್ಯಕ್ಷರಿಗೆ ತಿಳಿದೇ ತಿಳಿದಿರುತ್ತದೆ. ಹೀಗೆ ಹೋರಾಟದ ಬಗ್ಗೆ ಮಾಹಿತಿಯಿದ್ದರೂ ಶಾಸಕ ಅಶೋಕ್ ನಾಯ್ಕ ಅವರು ಸುಮ್ಮನಾದರೇ ಎಂದು ಪ್ರಶ್ನಿಸಲಾರಂಭಿಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಭಾಗದ ಸೋಷಿಯಲ್ ಮೀಡಿಯಾಗಳಲ್ಲಿ ಸಂದೇಶಗಳು ಹರಿದಾಡಲಾರಂಭಿಸಿವೆ.

ಕಳೆದ ಬಾರಿ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ನಾಮಬಲದಿಂದಲೇ ರಾಜಕೀಯವಾಗಿ ಏನೂ ಅಲ್ಲದ ಅಶೋಕ್ ನಾಯ್ಕ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾದ ಬಳಿಕ ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಂಡಿರುವ ಅಶೋಕ್ ನಾಯ್ಕ ಅವರು ಇದೀಗ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಎಸೆಯುವುದನ್ನು ತಪ್ಪಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಸಂದೇಶಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬಂಜಾರ ಸಮುದಾಯದವರು ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿತ್ತು. ಅವರು ನಡೆಸುವ ಪ್ರತಿಭಟನೆಗೆ ಯಾರದ್ದೂ ವಿರೋಧವಿಲ್ಲ. ಆದರೆ ಅಶೋಕ್ ನಾಯ್ಕ ಅವರು ಮೊದಲೇ ಬಂಜಾರ ಸಮುದಾಯದ ಮುಖಂಡರ ಜೊತೆಗೆ ಮಾತನಾಡಿದ್ದರೆ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಎಸೆಯುವುದನ್ನು ತಪ್ಪಿಸಬಹುದಿತ್ತು ಎಂಬ ಆಕ್ರೋಶಗಳು ವ್ಯಕ್ತವಾಗಲಾರಂಭಿಸಿವೆ. ಯಡಿಯೂರಪ್ಪ ಮೇಲೆ ಅನುಕಂಪ ಆರಂಭವಾಗಿದ್ದು ಘಟನೆಯನ್ನ ಒಕ್ಕೋರಲಿನಿಂದ ಖಂಡಿಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಶಿವಮೊಗ್ಗ ಗ್ರಾಮಾಂತರ ಭಾಗದ ಲಿಂಗಾಯತ ಮುಖಂಡ ಚಂದ್ರಶೇಖರ್, ಅಶೋಕ್ ನಾಯ್ಕ್ ಬಿಜೆಪಿಯಿಂದಲೇ ಆಯ್ಕೆಯಾಗಿರುವ ಜಿಲ್ಲೆಯ ಏಕೈಕ ಬಂಜಾರ ಸಮುದಾಯದ ಶಾಸಕ. ಅದಕ್ಕಿಂತ ಮುಖ್ಯವಾಗಿ ಅಶೋಕ್ ನಾಯ್ಕ್ ಗೆಲುವಿಗೆ ಮುಖ್ಯ ಕಾರಣ ಯಡಿಯೂರಪ್ಪನವರು. ಆದರೆ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲುತೂರಾಟ ನಡೆಯುವಾಗ ಅಶೋಕ್ ನಾಯ್ಕ್ ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಮನೆ ಮೇಲೆ ದಾಳಿ ಮಾಡಿದ್ದು ನಿಜಕ್ಕೂ ದುರದಷ್ಟಕರ ಘಟನೆ. ಇದನ್ನ ನಾವೆಲ್ಲರೂ ಖಂಡಿಸುತ್ತೇವೆ. ಯಡಿಯೂರಪ್ಪನವರು ಸಮಪಾಲು ಸಮಬಾಳು ಎಂಬ ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಬಂದವರು. ಎಲ್ಲಾ ಜಾತಿಯನ್ನು ನಿಗಮಗಳ ಮೂಲಕ ಸಾಕಷ್ಟು ಅನುದಾನಗಳನ್ನ ಕೊಟ್ಟರು. ಹಣಕಾಸಿನ ನೆರವು ನೀಡುತ್ತಾ ಬಂದವರು. ಯಾವುದೇ ಜನ ಸಮುದಾಯ ಅಂತ ಪ್ರತ್ಯೇಕವಾಗಿ ನೋಡದೇ ಎಲ್ಲರಿಗೂ ಸಾಂವಿಧಾನಿಕವಾಗಿ ಹಕ್ಕುಗಳನ್ನು ನೀಡಿದವರು. ಈ ಸಂಬಂಧ ಗಲಾಟೆ ಮಾಡಲಾಗಿದೆ ಬಂಜಾರ ಸಮುದಾಯದವರು ಮಾಡಿರುವ ಘಟನೆ ನಿಜವಾಗಲೂ ನೋವು ತರಿಸಿದೆ. ನಮ್ಮ ಜಿಲ್ಲೆಯಲ್ಲಿ ಏಕೈಕ ಬಂಜಾರ ಸಮುದಾಯದ ಶಾಸಕ ಕೆಬಿ ಅಶೋಕ್ ನಾಯ್ಕ್ ಶಿವಮೊಗ್ಗ ಗ್ರಾಮಾಂತರ ವಿಭಾಗದಿಂದ ಆಯ್ಕೆಯಾಗಿದ್ದಾರೆ. ಬಂಜಾರ ಸಮುದಾಯದ ಬಿಜೆಪಿ ಮುಖಂಡರು ಅವರೇ.! ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಈ ಘಟನೆ ನಡೆಯದ ರೀತಿಯಲ್ಲಿ ತಡೆಯುವ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಇಂತಹ ಘಟನೆ ಮುಂದೆ ಆಗಬಾರದು. ಯಡಿಯೂರಪ್ಪನವರು ಈಗಾಗಲೇ ಬಂಜಾರ ಸಮುದಾಯದ ಜೊತೆ ಮಾತನಾಡಿದ್ದಾರೆ. ಇಂತಹ ತಪ್ಪು ತಿಳುವಳಿಕೆಗಳಿಂದ ಘಟನೆಗಳು ಮರುಕಳಿಸಬಾರದು. ಎಂಬುದನ್ನು ಮನದಟ್ಟು ಮಾಡಿದ್ದಾರೆ. ಈ ಅಸಮಾಧಾನವನ್ನು ಸರಿಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಬಿಎಸ್ ಯಡಿಯೂರಪ್ಪನವರ ಆಶೀರ್ವಾದದಿಂದ ಆಯ್ಕೆಯಾಗಿ ಬಂದಿರುವಂತಹ ಅಶೋಕ್ ನಾಯ್ಕ್ ಇಂದು ಬಂಜಾರ ಸಮುದಾಯವನ್ನು ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ಯಡಿಯೂರಪ್ಪನವರನ್ನು ಸಿಎಂ ಮಾಡಬೇಕೆಂದು ಬಂಜಾರ ಸಮುದಾಯ ತೋರಿದ ಆಸಕ್ತಿ ಮೇರಿಗೆ ಅಶೋಕ್ ನಾಯ್ಕ್ ಗೆದ್ದು ಬಂದಿದ್ದಾರೆ. ಅಶೋಕ್ ನಾಯ್ಕ್ ಪ್ರಯತ್ನಿಸಿದ್ರೆ ಪ್ರತಿಭಟನೆಯನ್ನು ಶಮನ ಮಾಡಬಹುದಿತ್ತು. ಈ ಘಟನೆ ನಡೆದ ನಂತರವೂ ಕೂಡ ಅವರು ಎಲ್ಲೂ ಕೂಡ ಈ ಬಗ್ಗೆ ಮಾತನಾಡಿಲ್ಲ ಎಂದು ಎಂಎಸ್ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.












