ಬೆಂಗಳೂರು : ಆಶಾ ಕಾರ್ಯಕರ್ತೆಯರಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಈ ಹಿಂದೆ ನೀಡಿರುವ ವಾಗ್ದಾನಗಳು
ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಜೆಟ್ ಪೂರ್ವಭಾವಿಯಾಗಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಯನ್ನು ನಡೆಸಿ ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಆಶಾ ಕಾರ್ಯಕರ್ತೆಯರು ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.

ಈ ಹಿಂದೆ 2025ರ ಜನವರಿ 7 ರಿಂದ 10 ರವರೆಗೆ ನಡೆದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟದ ಸಂದರ್ಭದಲ್ಲಿ ನಾಲ್ಕನೇ ದಿನ ಆಶಾ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿಗಳು, ಸಂಘವು ಮುಂದಿಟ್ಟ ಬೇಡಿಕೆಗಳನ್ನು ಕೇಳಿಸಿಕೊಂಡು, ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ ಕನಿಷ್ಟ ರೂ.10,000 ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು ಈಗ ಸರ್ಕಾರ ಮರೆತಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾ.ಡಿ. ನಾಗಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ರಾಜ್ಯದ ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡುವಂತೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ರೂ.1000 ಹೆಚ್ಚಳ ಮಾಡುವುದಾಗಿ ತಿಳಿಸಿದ ಮೇಲೆ ಹೋರಾಟ ಕೈಬಿಡಲಾಗಿತ್ತು. 2025 ಮಾರ್ಚ್ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಹೆಚ್ಚಳ ಮಾಡಿರುವುದಿಲ್ಲ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಈಗಿರುವ ರೂ 5000 ಗೌರವಧನವನ್ನು ರೂ. 8000 ಮಾಡುವುದಾಗಿ ಭರವಸೆ ನೀಡಲಾಗಿತ್ತು. ಇಲ್ಲಿಗೆ 14 ತಿಂಗಳಾದರೂ ಸಹ ಭರವಸೆಕೊಟ್ಟಂತೆ ಹೆಚ್ಚಳದ ಆದೇಶ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆರೋಗ್ಯ ಸಚಿವರು, ಆಧಿಕಾರಿಗಳು ಹಲವಾರು ಸಭೆಗಳು ನಡೆಸಿದರೂ ಫಲಿತಾಂಶ ಏನೂ ಇಲ್ಲದಿರುವದರಿಂದ ಮತ್ತು ಹಲವಾರು ಏಕಪಕ್ಷೀಯ ಆದೇಶಗಳನ್ನು ಮಾಡುತ್ತಿರುವುದರಿಂದ ಆಶಾ ಕಾರ್ಯಕರ್ತೆಯರು ಮತ್ತೊಮ್ಮೆ ರಾಜ್ಯ ಮಟ್ಟದ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಹೋದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸುದೀರ್ಘ ಕಾಲದಿಂದ ಆಶಾ ಕಾರ್ಯಕರ್ತೆಯರ ಪೋತ್ಸಾಹ ಧನ ಹೆಚ್ಚಿಲ್ಲ. ಕೇಂದ್ರ ಸರ್ಕಾರ 1500 ರೂ ಹೆಚ್ಚಿಸುತ್ತೇವೆ ಎಂದು ಹೇಳಿ ಅದನ್ನೂ ಕೇಂದ್ರ ಬಜೆಟ್ ಸಂದರ್ಭದಲ್ಲಿ ಪ್ರಸ್ತಾಪ ಮಾಡಿಲ್ಲ. ಮುಖ್ಯಮಂತ್ರಿಗಳು ತಾವು ಮಾತು ತಪ್ಪಲ್ಲ ಎಂದು ಹೇಳಿ ಮಾತು ಮರೆತಿದ್ದಾರೆ. ಇಲ್ಲಿ ದಾರಿ ತಪ್ಪಿರುವುದು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತಿದೆ ಎಂದು ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕಾ.ಕೆ ಸೋಮಶೇಖರ್ ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರ ಜಾಸ್ತಿ ಮಾಡಿರುವ ಪ್ರೋತ್ಸಾಹ ಧನ ಅದನ್ನು ಸೇರಿಸಿ ಕೊಡ್ತೀವಿ ಅಂತ ಹೇಳಿದ್ದ ರಾಜ್ಯಸರ್ಕಾರ ನಂತರ ಏನು ಮಾಡಿಲ್ಲ. ಕಳೆದ ಅನೇಕ ವರ್ಷಗಳಿಂದ ಆಶಾ ಕಾರ್ಯಕರ್ತೆಯರಿಗೆ ಅನ್ಯಾಯವಾಗುತ್ತಿದೆ . ಆರ್ ಸಿ ಎಚ್ ಪೋರ್ಟಲ್ ನಿಂದ ಆಗುತ್ತಿರುವ ಅನ್ಯಾಯ ತಪ್ಪಿಸಿ, ಇಡೀ ದೇಶದಲ್ಲಿ ಇಲ್ಲದ ಆರ್‌ಸಿಎಚ್ ಪೋರ್ಟಲ್ ಬೇಕಾಗಿಲ್ಲ, ಭರವಸೆ ಮೇಲೆ ಭರವಸೆ ಕೊಟ್ಟು ವಂಚಿಸುತ್ತಿರುವ ವಂಚಿಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನೀತಿಗಳ ಕುರಿತು ಸೋಮಶೇಖರ್ ಟೀಕಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಕತ್ತರಿ ಹಾಕುವ ಇಲಾಖೆಯ ಕ್ರಮವನ್ನು ಖಂಡಿಸಿದರು, “ರಾಜ್ಯದಲ್ಲಿ ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೈಬಿಡುವುದಾಗಿ ಹೊರಡಿಸಿರುವ ಆದೇಶ, ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಉಲ್ಲಂಘನೆ ಆಗಿರುತ್ತದೆ. ಇಡೀ ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಇಲ್ಲದಿರುವುದು ನಮ್ಮ ರಾಜ್ಯದ ಆರೋಗ್ಯ ಇಲಾಖೆ ಮಾಡಿದೆ. ನಿಯಮಬಾಹಿರವಾಗಿ ಜನಸಂಖ್ಯೆಯನ್ನು ತರ್ಕಬದ್ದಗೊಳಿಸುವ ಈ ಹುನ್ನಾರ ಆಶಾಗಳ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕಾ. ಕೆ ಸೋಮಶೇಖರ್ ಯಾದಗಿರಿ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ವೇದಿಕೆಯಲ್ಲಿ ಸಂಘದ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ್ ಯಾದಗಿರಿ, ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ ಡಿ, ಉಮಾದೇವಿ ಎಂ, ರಮಾ ಟಿಸಿ, ಹನುಮೇಶ್, ಶ್ರೀಕಾಂತ್, ಮಂಜುಳಾ, ನಾಗಲಕ್ಷ್ಮಿ, ಫರಾನಾ, ಲಕ್ಷ್ಮಿ ದೇವಮ್ಮ, ವೀಣಾ, ಶಾರದಾ ಶಶಿಕಲಾ, ಶಾಂತಮ್ಮ, ಸರಸ್ವತಿ, ರೇಖಾ, ನಿರ್ಮಲಾ, ವಸಂತಾ, ರೇಷ್ಮಾ, ವಾಣಿ, ಇತರರು ಸೇರಿದಂತೆ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಮುಖಂಡರು ವೇದಿಕೆಯಲ್ಲಿ ಇದ್ದರು.
ಬಜೆಟ್-ಪೂರ್ವ ಹಕ್ಕೊತ್ತಾಯಗಳು :
ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರ್ಕಾರದ ಗೌರವಧನ ಒಟ್ಟಿಗೆ ಸೇರಿಸಿ ಮಾಸಿಕ ರೂ.15000 ಗೌರವಧನ ನೀಡಬೇಕು.
ಅಲ್ಲಿಯವರೆಗೆ, ರಾಜ್ಯ ಸರ್ಕಾರದಿಂದ ಈ ಮಾರ್ಚ್ 2026 ರ ಬಜೆಟ್‌ನಲ್ಲಿ – ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ – ಆಶಾ ಕಾರ್ಯಕರ್ತೆಯರ ಗೌರವಧನವನ್ನು ರೂ. 5000 ದಿಂದ ರೂ. 8000 ಕ್ಕೆ ಹೆಚ್ಚಿಸಬೇಕು.
ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿಇಡಿಗಂಟು ನೀಡಬೇಕು.
ಆಶಾ ಕಾರ್ಯಕರ್ತೆಯರಿಗೆ ತೀವ್ರತರ ರೋಗಿಗಳಿಗೆ ಚಿಕಿತ್ಸೆ ವೆಚ್ಚ ಕಾರ್ಪಸ್ ಫಂಡ್ ಮಾಡಿ, ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡಿ.
ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಚೇತರಿಕೆ ಅವಧಿಯಲ್ಲಿ (3 ತಿಂಗಳು) ಮಾಸಿಕ ನಿಶ್ಚಿತ ಗೌರವಧನವನ್ನು ಪಾವತಿ ಮಾಡಿ.

ಆಡಳಿತಾತ್ಮಕ ಹಕ್ಕೊತ್ತಾಯಗಳು:
- ಕೇಂದ್ರದ ಮಾರ್ಗಸೂಚಿಯನ್ನೇ ಉಲ್ಲಂಘಿಸಿ, ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರನ್ನು ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆ ನಿಲ್ಲಿಸಿ.
- 2) ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು.
- 3) ಆಶಾ ಸುಗಮಕಾರರಿಗೆ 2024-2025 ರಲ್ಲಿ ಹೆಚ್ಚಳ ಆದ ಗೌರವಧನ (6000ದಿಂದ 7500 ), ಒಂದು ವರ್ಷದ ಬಾಕಿ ಮಾಸಿಕ ರೂ.1500 ರಂತೆ ಎಲ್ಲಾ ಸುಗಮಕಾರರಿಗೆ ನೀಡಿ.(ಆರ್‌ಒಪಿ: 2024-2028, 2025-2026)
ರಾಜ್ಯದಾದ್ಯಂತ ಕೇಂದ್ರದ ಪ್ರೋತ್ಸಾಹಧನ ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಬರುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ. ಆಶಾಗಳಿಗೆ ಕೂಡಲೇ ಬಾಕಿ ಇರುವ ಪ್ರೋತ್ಸಾಹಧನ ನೀಡಿ.
4) ಹಲವಾರು ವರ್ಷಗಳಿಂದ ಬಾಕಿ ಇರುವ ವಿವಿಧ ಕಂಪೋನೆಂಟ್‌ಗಳ ಹಣ ಬಿಡುಗಡೆ ಮಾಡಿ. (ಟಿಬಿ, ಟಿಬಿಐ,ಇತ್ಯಾದಿ) - 5) ರಾಜ್ಯ ಸರ್ಕಾರದ ಗ್ಯಾರಂಟಿ’ ಸರ್ವೆ ಮಾಡಿದ್ದಕ್ಕೆ ನಿಗದಿಯಾಗಿದ್ದ ರೂ 1000 ಬಿಡುಗಡೆ ಮಾಡಿ.






