ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದರು. ಈ ಉಪಚುನಾವಣೆ ರಾಜ್ಯದಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದರೆ ಮುಂಬರುವ ಚುನಾವಣೆಗಳ ಸೆಮಿಫೈನಲ್ ಎಂದೇ ಕರೆಯಲಾಗುತ್ತಿದ್ದೆ.
ಇದೀಗ ಎರಡು ಕ್ಷೇತ್ರಗಳ ಬಹಿರಂಗ ಪ್ರಚಾರ ಬುಧವಾರ ಅಂತ್ಯವಾಗಿದ್ದು ಉಪಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಉಪಚುನಾವಣೆಯಲ್ಲಿ ಜಯ ನಮ್ಮದೇ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿವೆ.
ರಾಜಕೀಯ ವಿಶ್ಲೇಷಕರ ಪ್ರಕಾರ ಹಾನಗಲ್ ಮತ್ತು ಸಿಂಧಗಿಯಲ್ಲಿ ಬಿಜೆಪಿಯ ಬಹುತೇಕ ಶಾಸಕರು, ಸಚಿವರು ಮತ್ತು ಮುಖಂಡರು ಪ್ರಚಾರ ನಡೆಸಿದ್ದಾರೆ. ಅದರಂತೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಕೂಡ ಅಂತಿಮ ಸುತ್ತಿನ ಪ್ರಚಾರದಲ್ಲಿ ಭಾಗಿಯಾಗಿ ಮತದಾರರ ಮನ ಓಲೈಸುವಲ್ಲಿ ಮಗ್ನರಾಗಿದ್ದರು.
ಸಿಂಧಗಿ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಟ್ರೆಂಡ್ ಗಮನಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಕಿತ್ತಾಟದಿಂದ ಆಗುವ ಮತ ವಿಭಜನೆಯಿಂದಾಗಿ ಬಿಜೆಪಿಗೆ ಹೆಚ್ಚು ಲಾಭವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್ ನಾಯಕರು ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದು ಜೆಡಿಎಸ್ ಪಕ್ಷವನ್ನು ಪರಿಗಣಣೆಗೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿಯು ಮುಂದಿನ ವಿಧಾನಸಭೆ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ನೇತೃತ್ವದಲ್ಲಿ ಪಕ್ಷವು ಚುನಾವಣೆಯನ್ನು ಎದುರಿಸಲಿದೆ ಎಂದು ಈಗಾಗಲೇ ಘೋಷಿಸಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಬಿಜೆಪಿ ಹೈಕಮಾಂಡ್ ಮೂಲೆಗುಂಪು ಮಾಡಲು ಹೊರಟಿರುವ ಕಾರಣ ಲಿಂಗಾಯತ ಸಮುದಾಯದ ಮತಗಳು ವಿಭಜನೆಯಾಗುವ ಸಂಭವಗಳು ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ನಿರಂತರ ಬೆಲೆ ಏರಿಕೆ, ರೈತರ ಪ್ರತಿಭಟನೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕರೋನ ಎರಡನೇ ಅಲೆ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಕಾಂಗ್ರೆಸ್ ಪ್ರಮುಖ ಅಸ್ತ್ರವನ್ನಾಗಿ ಬಳಸಿದ್ದು ರಾಜ್ಯ ಸರ್ಕಾರದ ವಿರುದ್ದ ಉಪಚುನಾವಣೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದೆ. ಸಿಂಧಗಿ ಮತ್ತು ಹಾನಗಲ್ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಕನಿಷ್ಠ 15 ಸಾವಿರ ಮತಗಳ ಅಂತರದಲ್ಲಿ ಜಯ ಸಧಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಭವಿಷ್ಯವನ್ನ ನುಡಿದಿದ್ದಾರೆ.
ಸಿಂಧಗಿಯಲ್ಲಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಾಲಿನ ಮತಗಳು ವಿಭಜನೆಯಾಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯದಿಂದ ದೇಶದ ಜನರು ಬಿಕ್ಕಟ್ಟಿಗೆ ಸಿಲುಕಿದ್ದಾರೆ ಆದ್ದರಿಂದ ಎರಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಪ್ರಬಲ ಲಿಂಗಾಯತ ಸಮುದಾಯ, ಹಿಂದುಳಿದ ಸಮುದಾಯ ಮತ್ತು ಎಲ್ಲಾ ವರ್ಗದ ಜನರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿರುವ ಕಾರಣ ಸಿಂಧಗಿಯಲ್ಲಿ ನಮ್ಮ ಅಭ್ಯರ್ಥಿ ಅಶೋಕ್ ಮನಗೊಳಿರವರು ಜಯ ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರದ ವೈಫಲ್ಯದಿಂದಾಗಿ ಜನರು ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ ಎಂ.ಬಿ.ಪಾಟೀಲ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಲಿಂಗಾಯತರ ಪಾಲಿನ ಧೀಮಂತ ನಾಯಕ ಎಂದು ಬಣ್ಣಿಸಿದ್ದಾರೆ.
ಒಂದೇ ಕ್ಷೇತ್ರದಲ್ಲಿ ಬಿಜೆಪಿಯ 10-12 ಸಚಿವರು ಬೀಡು ಬಿಟ್ಟಿದ್ದು ಮತದಾರರಿಗೆ ದುಡ್ಡು ಹಂಚುವ ದಂಧೆಯಲ್ಲಿ ಬಿಜೆಪಿಯವರು ತೊಡಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾನಗಲ್ ಮತ್ತು ಸಿಂಧಗಿ ಎರಡು ಕ್ಷೇತ್ರಗಳ ಉಪಚುನಾವಣೇಯಲ್ಲು ಕಾಂಗ್ರೆಸ್ ಪಕ್ಷ ಜಯ ಸಾಧಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಾನಗಲ್ ಮತ್ತು ಸಿಂಧಗಿಯಲ್ಲಿ ಬಿಜೆಪಿಯ ನಾಯಕರು ದೌಡಾಯಿಸಿದ್ದು ಪಕ್ಷದ ಎಲ್ಲಾ ಹಿರಿಯ ಮತ್ತು ಕಿರಿಯ ಮುಖಂಡರು ಪ್ರಚಾರದಲ್ಲಿ ಮಗ್ನರಾಗಿದ್ದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ ಮಂತ್ರಿ ಮಂಡಲದ ಸಚಿವರು,ಶಾಸಕರು ಎಲ್ಲರು ಹಾನಗಲ್ ಮತ್ತು ಸಿಂಧಗಿಯಲ್ಲಿ ಬೀಡು ಬಿಟ್ಟು ಪ್ರಚಾರ ನಡೆಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ರಾಜ್ಯದಲ್ಲಿ ಬಿಜೆಪಿ ಪರ ಸುನಾಮಿ ಎದಿದ್ದು ಯಾರಿಂದಲು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎರಡು ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುವ ಮುನ್ಸೂಚನೆ ನೀಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಬೇಸತ್ತಿರುವ ಕಾರಣ ಬಿಜೆಪಿ ಸೋಲಲಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೇಳಿದ್ದಾರೆ. ಬಿಜೆಪಿಯು ತನ್ನ ಪಕ್ಷದ ಅಭ್ಯರ್ಥಿಗಳಿಗೆ ಸ್ಪಷ್ಟ ಗೆಲುವು ದೊರೆಯಲಿದೆ ಎಂದು ಭವಿಷ್ಯವನ್ನ ನುಡಿದಿದೆ. ಉಪಚುನಾವಣೆ ಪಲಿತಾಂಶವು ನವೆಂಬರ್ 2ರಂದು ಹೊರಬೀಳಲಿದೆ ಅದೃಷ್ಟ ಯಾರ ಪಾಲಾಗಲಿದೆ ಎಂಬುದನ್ನು ಇನ್ನಷ್ಟೆ ಕಾದು ನೋಡಬೇಕಿದೆ.
ಮತದಾರರ ಓಲೈಕೆಗೆ ಹಣದ ಹಂಚಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ತಡೆಯಲು ರಾಜ್ಯ ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಿದೆ.
“ಆಯಾ ಜಿಲ್ಲಾ ಚುನಾವಣಾ ಅಧಿಕಾರಿಗಳು, ವೀಡಿಯೊಗ್ರಾಫರ್ಗಳು ಸೇರಿದಂತೆ ಹೆಚ್ಚಿನ ಸಿಬ್ಬಂದಿಯನ್ನು ಎರಡು ಕ್ಷೇತ್ರಗಳಲ್ಲಿ ನಿಯೋಜಿಸಲಿದ್ದು, ಚೆಕ್ಪೋಸ್ಟ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದರು.
ಬುಧವಾರದವರೆಗೆ 4 ಲಕ್ಷ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದು, ಬಿಟ್ಟರೆ ಹಣ ಹಂಚಿಕೆಯಾಗಿರುವ ಘಟನೆ ವರದಿಯಾಗಿಲ್ಲ ಎಂದರು.
ಉಪಚುನಾವಣೆ ವೇಳೆ ಹಣದ ಹೊಳೆ ಹರಿಯಲಿದೆ ಎಂಬ ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಘಟನೆಗಳ ಕುರಿತು ಬರವಣಿಗೆ ಮೂಲಕ ದೂರುಗಳು ದಾಖಲಾಗಿದ್ದೇ ಆದರೆ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.