ಭಾರತದಲ್ಲಿ ಇತ್ತೀಚೆಗೆ ನಡೆದ ಎರಡು ಬಂಧನಗಳು ದೇಶದ ಕಾನೂನು ವ್ಯವಸ್ಥೆಯ ಹಾಸ್ಯಾಸ್ಪದ ಸ್ಥಿತಿಗೆ ಕನ್ನಡಿ ಹಿಡಿದಿವೆ. ಇಬ್ಬರು ಪ್ರಭಾವಿ ವ್ಯಕ್ತಿಗಳ ಮಕ್ಕಳು ಕಂಬಿ ಎಣಿಸುತ್ತಿದ್ದಾರೆ. ಆದರೆ, ಸದ್ಯದ ಕಾನೂನು ವ್ಯವಸ್ಥೆಯಲ್ಲಿ ಯಾರಿಗೆ ನ್ಯಾಯ ಸಿಗುವುದು ಅಥವಾ ಯಾರು ಅಮಾನವೀಯ ದಬ್ಬಾಳಿಕೆಗೆ ಈಡಾಗುವುದು ಎಂಬುದು ರಾಜಕೀಯ ಆಶ್ರಯದ ಮೇಲೆ ನಿರ್ಧಾರವಾಗುತ್ತದೆ ವಿನಃ, ಎಸಗಿರುವ ಅಪರಾಧದ ಮೇಲಲ್ಲ ಎಂಬುದನ್ನು ಈ ಎರಡೂ ಬಂಧನ ಪ್ರಕರಣಗಳು ಜಗಜ್ಜಾಹೀರು ಮಾಡಿವೆ.
ದೇಶದ ಗಮನ ಸೆಳೆದ ಅಂತಹ ಎರಡು ಬಂಧನಗಳಲ್ಲಿ ಒಂದು; ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದ ವಿವಾದಿತ ಮತ್ತು ಅಷ್ಟೇ ಪ್ರಭಾವಿ ಸದಸ್ಯರಾಗಿರುವ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾನದ್ದು. ಮತ್ತೊಂದು, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನನದ್ದು.
ಆಶೀಶ್ ಮಿಶ್ರಾ, ಅಕ್ಟೋಬರ್ 3ರಂದು ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಎಸ್ ಯುವಿ ಹಾಯಿಸಿದ ಘಟನೆಯಲ್ಲಿ ನಾಲ್ವರು ರೈತರು ಕೊಲೆಯಾದರು. ಆ ಘಟನೆಗೆ ಕೆಲವೇ ದಿನಗಳ ಹಿಂದೆ ಆಶೀಶ್ ತಂದೆ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ, ಆ ಪ್ರದೇಶದಲ್ಲಿ ನಡೆಯುತ್ತಿದ್ದ ರೈತ ಹೋರಾಟದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು. ಆ ಭಾಷಣದ ವೀಡಿಯೋ ಪ್ರಕಾರ, ಪ್ರತಿಭಟನಾನಿರತ ರೈತರಿಗೆ ‘ಬುದ್ಧಿ ಕಲಿಸಲು ಕೇವಲ ಎರಡು ನಿಮಿಷ ಸಾಕು’ ಎಂದು ಮಿಶ್ರಾ ಹೇಳಿದ್ದರು. ಈ ಸಚಿವರು ರಾಜಕಾರಣದಲ್ಲಿ ಮೇಲೆ ಬಂದಿದ್ದೇ ತನ್ನ ತೋಳ್ಬಲದ ಮೇಲೆ. ಅಲ್ಲದೆ 2003ರಲ್ಲಿ ಅವರು ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದರು ಮತ್ತು ಆ ಪ್ರಕರಣದ ವಿಚಾರಣೆ ವೇಲೆ ಕೋರ್ಟಿನ ಆವರಣದಲ್ಲೇ ಹತ್ಯೆ ಯತ್ನ ನಡೆದಿತ್ತು. ರೈತ ಹೋರಾಟದ ವಿರುದ್ಧ ಈ ಸಚಿವರು ಪ್ರಚೋದನಕಾರಿ ಹೇಳಿಕೆ ನೀಡುವ ಕೆಲವೇ ದಿನ ಮುನ್ನ ಆಡಳಿತಾರೂಢ ಬಿಜೆಪಿಯ ಮತ್ತೊಬ್ಬ ಸಚಿವರು, ‘ರೈತರನ್ನು ಬಡಿಗೆಯಲ್ಲಿ ಬಡಿದು ಅಟ್ಟಿ’ ಎಂದು ಕರೆ ಕೊಟ್ಟಿದ್ದರು.
ಆ ಪ್ರಚೋದನೆಯ ಬೆನ್ನಲ್ಲೇ ಅವರ ಪುತ್ರ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಏಕಾಏಕಿ ವಾಹನ ಚಲಾಯಿಸಿ ನಾಲ್ವರನ್ನು ಬಲಿತೆಗೆದುಕೊಂಡಿದ್ದ. ಆದರೆ, ರೈತರ ಮೇಲಿನ ಆ ಅಮಾನವೀಯ ಭೀಕರ ದಾಳಿಯನ್ನು ಸರ್ಕಾರಿ ಅಧಿಕಾರಿಗಳು ಕೂಡ ಸಮರ್ಥಿಸಿಕೊಂಡಿದ್ದರು. ಸಚಿವರಂತೂ, ತಮ್ಮ ಪುತ್ರನ ವಾಹನದ ಮೇಲೆ ಮೊದಲು ದಾಳಿ ನಡೆಯಿತು ಎಂದಿದ್ದರು. ಆತನ ಪರವಾಗಿ ದೇಶದ ಪ್ರಭಾವಿಗಳು ಕೂಡ ವಕಾಲತು ವಹಿಸಿದ್ದರು. ಆದರೆ, ಘಟನೆಯ ವೀಡಿಯೋಗಳು ವಾಸ್ತವವನ್ನು ಜಗದೆದುರು ತೆರೆದಿಟ್ಟಿವೆ. ಶಾಂತಿಯುತವಾಗಿ ಘೋಷಣೆ ಕೂಗುತ್ತಾ ನಡೆದುಕೊಂಡು ಹೊರಟಿದ್ದ ರೈತರ ಮೇಲೆ ಆಶೀಶ್ ನ ಎಸ್ ಯುವಿ ಮತ್ತು ಬೆಂಗಾವಲುಪಡೆ ವಾಹನಗಳು ಹಿಂದಿನಿಂದ ಬಂದು ಹಾಯ್ದಿವೆ. ಈ ವೀಡಿಯೋಗಳು ವೈರಲ್ ಆಗಿ, ದೇಶಾದ್ಯಂತ ಆರೋಪಿ ಆಶೀಶ್ ಬಂಧನಕ್ಕೆ ಆಗ್ರಹಿಸಿ ಆಕ್ರೋಶ ಭುಗಿಲೆದ್ದ ಮೇಲೆ ಘಟನೆ ನಡೆದ ಹಲವು ದಿನಗಳ ಬಳಿಕ ಆತನನ್ನು ಬಂಧಿಸಲಾಗಿದೆ.
ಹೀಗೆ ರೈತರ ಮೇಲೆ ಎಸ್ ಯುವಿ ಹರಿಯುವ ಕೆಲವೇ ದಿನಗಳ ಮುನ್ನ ಆರ್ಯನ್ ಖಾನ್ ಬಂಧನವಾಗಿತ್ತು. ಮುಂಬೈ ಬೀಚ್ ನಲ್ಲಿ ಐಷಾರಾಮಿ ಹಡಗೊಂದರ ಮೇಲೆ ದಾಳಿ ನಡೆಸಿದ ಮಾದಕ ವಸ್ತು ನಿಗ್ರಹ ಪಡೆಯು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರನಾದ 23 ವರ್ಷದ ಆರ್ಯನ್ನನ್ನುಬಂಧಿಸಿತ್ತು. ಸುದ್ದಿವಾಹಿನಿಗಳ ಕ್ಯಾಮರಾಗಳ ಎದುರಲ್ಲೇ ಆತನ ಬಂಧನ ನಡೆದಿತ್ತು ಮತ್ತು ಆ ದಾಳಿಯಲ್ಲಿ ಆಡಳಿತರೂಢ ಭಾರತೀಯ ಜನತಾ ಪಕ್ಷದ ಪದಾಧಿಕಾರಿ ಹಾಗೂ ಸ್ವಯಂಘೋಷಿತ ಖಾಸಗಿ ಪತ್ತೆದಾರಿಯೊಬ್ಬರು ಕೂಡ ಪಾಲ್ಗೊಂಡಿದ್ದು ಹಲವು ಸಂಶಯಗಳಿಗೆ ಕಾರಣವಾಗಿತ್ತು. ದಾಳಿ ವೇಳೆ ಆರ್ಯನ್ ಸ್ವತಃ ಮಾದಕವಸ್ತು ಸೇವಿಸಿದ ಬಗ್ಗೆಯಾಗಲೀ, ಅಥವಾ ಆತನ ಬಳಿ ಮಾದಕವಸ್ತು ಇರುವ ಬಗ್ಗೆಯಾಗಲೀ ಯಾವುದೇ ಸಾಕ್ಷ್ಯಗಳೂ ಇಲ್ಲ. ಆದಾಗ್ಯೂ ಭಾರತೀಯ ಮಾಧ್ಯಮಗಳು ಆರ್ಯನ್ ಪ್ರಕರಣವನ್ನೇ ಮುಂದಿಟ್ಟುಕೊಂಡು ಇಡೀ ಸಿನಿಮಾ ಉದ್ಯಮಕ್ಕೆ ಮಸಿ ಬಳಿಯುವ ಕಾರ್ಯಕ್ಕೆ ಇಳಿದುಬಿಟ್ಟವು, ವಿನಃ ಉತ್ತರಪ್ರದೇಶದಲ್ಲಿ ನಡೆದ ಭೀಕರ ರೈತರ ಹತ್ಯಾಕಾಂಡದ ಬಗ್ಗೆ ಚಕಾರವೆತ್ತಲಿಲ್ಲ!
ಇದೆಲ್ಲಾ ಯಾಕೆ ಹೀಗೆ ಅನ್ನೋದನ್ನು ಅರ್ಥಮಾಡಿಕೊಳ್ಳೋದು ಬಹಳ ಸರಳ: ಶಾರುಖ್ ಖಾನ್ ಕೇವಲ ಒಬ್ಬ ಜನಪ್ರಿಯ ನಟ ಮಾತ್ರ ಅಲ್ಲ; ಭಾರತದ ಧಾರ್ಮಿಕ ತಾರತಮ್ಯ ಮತ್ತು ಮತೀಯ ಅಸಹನೆಯ ವಿರುದ್ಧ ದನಿ ಎತ್ತಿದ ಮುಸ್ಲಿಮರ ಜಾಗತಿಕ ಐಕಾನ್. 2010ರಲ್ಲಿ ಆತ 9/11 ದಾಳಿಯ ಬಳಿಕ ಜಾಗತಿಕವಾಗಿ ಮುಸ್ಲಿಮರನ್ನು ಶಂಕೆಯಿಂದ ನೋಡುವ ಮತ್ತು ವಿಚಾರಣೆಗೊಳಪಡಿಸುವ ವಿದ್ಯಮಾನದ ಕುರಿತ ‘ಮೈ ನೇಮ್ ಈಸ್ ಖಾನ್’ ಎಂಬ ಸಿನಿಮಾದಲ್ಲಿ ನಟಿಸಿದ್ದ. ಮುಸ್ಲಿಮರನ್ನು ಬಹುಸಂಖ್ಯಾತರ ಕುಹಕ ಮತ್ತು ಪೂರ್ವಗ್ರಹಪೀಡಿತ ದೃಷ್ಟಿಕೋನದಿಂದಲೇ ಬಿಂಬಿಸುವ ಭಾರತೀಯ ಸಿನಿಮಾ ರಂಗದಲ್ಲಿ ಖಾನ್, ತನ್ನ ನಗರವಾಸಿ ಮುಸ್ಲಿಂ ಕಥಾ ನಾಯಕರ ಪಾತ್ರಗಳ ಮೂಲಕ ಹೊಸ ಭರವಸೆಯಾಗಿ, ರೂಢಿಗತ ವರಸೆಗೆ ಭಿನ್ನವಾಗಿ ಕಂಡಿದ್ದರು. ಪ್ರಶಸ್ತಿ ಪುರಸ್ಕೃತ ‘ಚಕ್ ದೇ ಇಂಡಿಯಾ’ ಸಿನಿಮಾದಲ್ಲಿ ಆತ ಮುಸ್ಲಿಂ ಹಾಕಿ ಕೋಚ್ ಆಗಿ ನಟಿಸಿದ್ದರು. ತನ್ನ ದೇಶದ ಬಹುಸಂಖ್ಯಾತ ಸಮುದಾಯ ತನ್ನನ್ನು ‘ಪಾಕಿಸ್ತಾನಕ್ಕೆ ಮಾರಿಕೊಂಡಿದ್ದಾನೆ’ ಎಂದು ನಿಂದಿಸುತ್ತಿರುವಾಗ, ತನ್ನ ದೇಶಪ್ರೇಮವನ್ನು ಸಾಬೀತುಪಡಿಸಬೇಕಾದ ಸಂದಿಗ್ಧತೆಯನ್ನು ಎದುರಿಸುವ ಪಾತ್ರ ಅದಾಗಿತ್ತು. ಒಂದು ದಶಕದ ಹಿಂದೆಯೇ ತೆರೆಕಂಡಿದ್ದ ಆ ಸಿನಿಮಾದಲ್ಲಿ ಮೋದಿಯವರ ಆಡಳಿತದಲ್ಲಿ ಇಂದು ಭಾರತ ಸಾಕ್ಷಿಯಾಗಿರುವ ಹಲವು ವಿಷಯಗಳನ್ನು ಅಂದೇ ಕಾಣಿಸಲಾಗಿತ್ತು. ಮುಸ್ಲಿಮರನ್ನು ಸದಾ ಶಂಕೆಯಿಂದ ನೋಡುವ, ದುಷ್ಟರೆಂದು ಬಿಂಬಿಸುವ, ಪರರು ಎಂದು ಹೊರಗಿಡುವ ಮತ್ತು ಆ ಕಾರಣಗಳಿಗಾಗಿ ಅವರ ದೇಶಪ್ರೇಮವನ್ನು, ಬದ್ಧತೆಯನ್ನು ಸಾಬೀತುಪಡಿಸುವಂತೆ ಒತ್ತಡ ಹಾಕುವ ಭಾರತದ ಸದ್ಯದ ಸ್ಥಿತಿಯನ್ನು ಆ ಸಿನಿಮಾ ದಶಕದ ಹಿಂದೆಯೇ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿತ್ತು.
2015ರಲ್ಲಿ ಶಾರುಖ್ ಖಾನ್, ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಮಾತನಾಡಿದಾಗಲಂತೂ ಆತನನ್ನು ಭಯೋತ್ಪಾದಕ ಎಂದೇ ನಿಂದಿಸಲಾಗಿತ್ತು. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿರುವ ಕಟ್ಟರ್ ವಾದಿ ಹಿಂದೂ ರಾಷ್ಟ್ರೀಯವಾದಿ ಯೋಗಿ ಆದಿತ್ಯನಾಥ್ , ಆತನನ್ನು ಪಾಕಿಸ್ತಾನಿ ಭಯೋತ್ಪಾದಕರಿಗೆ ಹೋಲಿಸಿದ್ದರು. ದೇಶದ ಬಲಪಂಥೀಯ ಸಂಘಟನೆಗಳ ನಾಯಕರು ಹಾಗೂ ಸಾಮಾಜಿಕ ಜಾಲತಾಣದ ಟ್ರೋಲ್ ಪಡೆಗಳಂತೂ ಶಾರುಖ್ ಖಾನ್ ಗೆ ಪಾಕಿಸ್ತಾನಕ್ಕೆ ಹೋಗುವಂತೆ ಹೇಳುತ್ತಲೇ ಇವೆ.
ಇದೀಗ ತನ್ನ ಮಗ ಆರ್ಯನ್ ಜೈಲಿನಲ್ಲಿರುವಾಗ, ಶಾರುಖ್ ‘ಚಕ್ ದೇ ಇಂಡಿಯಾ’ ಸಿನಿಮಾವನ್ನು ನಿಜ ಜೀವನದಲ್ಲೇ ಮತ್ತೊಮ್ಮೆ ಅಭಿನಯಿಸುತ್ತಿದ್ದಾನೆ. ಮೋದಿ ಸರ್ಕಾರದ ಸಚಿವರು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆತನಿಗೆ ‘ದೇಶದ್ರೋಹಿ’ ಪಟ್ಟ ಕಟ್ಟಿದ್ದಾರೆ. ಪ್ರಮುಖ ಶೈಕ್ಷಣಿಕ ಸಂಸ್ಥೆಯೊಂದು ಶಾರುಖ್ ಜೊತೆಗಿನ ತನ್ನ ಪ್ರಚಾರ ಅಭಿಯಾನ ಒಪ್ಪಂದವನ್ನು ರದ್ದುಗೊಳಿಸಿದೆ. ರಾಜಕೀಯ ಹಿತಾಸಕ್ತಿ ಮತ್ತು ಮತಾಂಧ ಶಕ್ತಿಗಳಿಗೆ ಅಡಿಯಾಳಾಗಿರುವ ಸಿನಿಮಾ ರಂಗದಲ್ಲಿ ಆತನನ್ನು ಮೂಲೆಗುಂಪು ಮಾಡುವ ಎಲ್ಲಾ ಯತ್ನಗಳು ಬಿರುಸುಗೊಂಡಿವೆ.
ಕಾಕತಾಳೀಯವೆಂದರೆ; ಅಕ್ಟೋಬರ್ 2ರ ಗಾಂಧಿ ಜಯಂತಿಯಂದೇ ಬಾಲಿವುಡ್ ಪ್ರಮುಖ ನಿರ್ದೇಶಕ ಮಹೇಶ್ ಮಾಂಜ್ರೆಕರ್, ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಜೀವನ ಆಧರಿಸಿ ಹೊಸ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಶಾರುಖ್ ಖಾನ್ ಅವರನ್ನು ದೇಶದ್ರೋಹಿ ಎಂದು ನಿಂದಿಸಿ, ಬಾಲಿವುಡ್ ನಿಂದ ಆತನನ್ನು ಮತ್ತು ಆತನ ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂದು ಕರೆಕೊಡುತ್ತಿರುವ ಟ್ವಿಟರ್ ಖಾತೆಗಳಲ್ಲೇ, ಮಾಂಜ್ರೇಕರ್ ಸಿನಿಮಾ ಮತ್ತು ನಾಥೂರಾಂ ಗೋಡ್ಸೆಯ ಗುಣಗಾನ ನಡೆದಿದೆ. ಅಂದರೆ, ಇಂದು ಮೋದಿಯ ನವ ಭಾರತದಲ್ಲಿ ಬದುಕುಳಿಯಬೇಕು ಎಂದರೆ ನೀವು, ನಿಮ್ಮನ್ನು ಆವರಿಸಿರುವ ಈ ದ್ವೇಷ ಮತ್ತು ಅಸಹನೆಯನ್ನು ಬೆಂಬಲಿಸಬೇಕು ಮತ್ತು ಅಂತಹದ್ದರ ಪರ ಜೈಕಾರ ಹಾಕಬೇಕು.
ಈ ಇಬ್ಬರು ಪ್ರಸಿದ್ಧರ ಪುತ್ರರ ಪ್ರಕರಣಗಳನ್ನು ಗಮನಿಸುತ್ತಿರುವ ಯಾರಿಗಾದರೂ, ಅವು ನೀಡುತ್ತಿರುವ ಸಂದೇಶ ಸ್ಪಷ್ಟವಿದೆ. ಅದು ಆಡಳಿತದ ಮೂಗಿನ ನೇರಕ್ಕೆ ಇರಿ ಎಂಬುದು ಅಷ್ಟೇ. ಹಾಗೆ ಶರಣಾಗದ ಕಾರಣಕ್ಕೆ ಅಪ್ಪನಿಗೆ ಬುದ್ದಿಕಲಿಸಲು ಒಬ್ಬ ಮಗನನ್ನು ಹಣಿಯಲಾಗುತ್ತಿದ್ದರೆ, ಮತ್ತೊಬ್ಬ ಪ್ರಭಾವಿಯ ಪುತ್ರ ಸಾಮೂಹಿಕ ಹತ್ಯೆ ನಡೆಸಿಯೂ ಆತನ ರಕ್ಷಣೆಗೆ ಇಡೀ ವ್ಯವಸ್ಥೆ ಟೊಂಕಕಟ್ಟಿ ನಿಂತಿದೆ. ಇದು ಕೇವಲ ಶಾರುಖ್ ಖಾನ್ ವಿಷಯ ಮಾತ್ರವಲ್ಲ; ಮೋದಿ ಮತ್ತು ಅವರ ರಾಷ್ಟ್ರೀಯವಾದಿ ದೃಷ್ಟಿಕೋನಕ್ಕೆ ಮಣಿಯದ, ತಲೆಬಾಗದ ಎಲ್ಲರನ್ನೂ ಈ ಸರ್ಕಾರ ಮತ್ತು ವ್ಯವಸ್ಥೆ ಹೀಗೆಯೇ ಹಣಿಯುತ್ತಿದೆ, ಹಣಿಯಲಿದೆ. ಹಾಗಾಗಿ ಭಾರತದ ಚರಿತ್ರೆಯಲ್ಲಿ ಈ ಕಾಲಘಟ್ಟ ಮರೆಯಲಾಗದ್ದು. ಅದರಲ್ಲೂ ಸಾರ್ವಜನಿಕ ಬದುಕಿನಲ್ಲಿ ಗಟ್ಟಿ ಧ್ವನಿ ಹೊಂದಿರುವ ಮತ್ತು ಪ್ರಭಾವಿಗಳಾಗಿರುವವರ ಪಾಲಿಗಂತೂ ಆ ಮಾತು ನೂರಕ್ಕೆ ನೂರು ನಿಜ. ಹಾಗಾಗಿ ಒಗ್ಗಟ್ಟಾಗಿ ಹೋರಾಡಿ ಇಲ್ಲವೇ ಭಯ ಮತ್ತು ಭೀತಿಯಲ್ಲಿ ಹೂತುಹೋಗಿ ಎಂದಷ್ಟೇ ಈಗ ಹೇಳಲು ಸಾಧ್ಯ.
- ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾಗಿರುವ ಪತ್ರಕರ್ತೆ ರಾಣಾ ಆಯೂಬ್ ಲೇಖನದ ಸಂಗ್ರಹಾನುವಾದ