‘ಸಾವು ಸಹಜ’, ‘ಹುಟ್ಟಿದವರು ಸಾಯಲೇ ಬೇಕು’, ‘ವಿಧಿಯ ಆಟ’..ಈ ಎಲ್ಲ ಸಾಂತ್ವನಗಳಾಚೆಯೂ ಕೆಲವು ಸಾವುಗಳು ನಮ್ಮ ಮನಸ್ಸನ್ನು ತೀವ್ರವಾಗಿ ತಟ್ಟುತ್ತವೆ, ಮುಖ್ಯವಾಗಿ ಯುವ ಜನರ ಸಾವು. ತಮ್ಮ ಕ್ಷೇತ್ರಗಳಲ್ಲಿ ಇನ್ನಷ್ಟು ಎತ್ತರ,ಆಳ ಅಗಲಕ್ಕೆ ಬೆಳೆಯಲು ಸಾಧ್ಯವಿದ್ದ ಯುವಜನರ ಸಾವು ನಾವಿದ್ದಷ್ಟು ಕಾಲ ನಮ್ಮನ್ನು ಕಾಡುತ್ತವೆ.
ರಾಜ್ ಕುಮಾರ್ ನಮ್ಮ ಜೊತೆ ಇನ್ನಷ್ಟು ಕಾಲ ಇರಬೇಕಾಗಿತ್ತು ನಿಜ, ಆದರೆ ಅವರು ನಟನೆಯಲ್ಲಿ ತಮ್ಮ ಅತ್ಯುತ್ತಮವನ್ನು ಆಗಲೇ ಕೊಟ್ಟುಬಿಟ್ಟಿದ್ದರು. ಅವರಿಗೂ ಶೂಜಿತ್ ಸರ್ಕಾರ್ ಅವರಂತಹ ನಿರ್ದೇಶಕರು ಸಿಕ್ಕಿದ್ದರೆ ಅಮಿತಾಬ್ ಬಚ್ಚನ್ ರೀತಿ ಉತ್ತರಾರ್ಧದಲ್ಲಿ ನಾಯಕನ ಇಮೇಜ್ ನಿಂದ ಹೊರಬಂದು ನಟಿಸಿದ್ದ ಪೀಕೂ, ಪಿಂಕ್, ಗುಲಾಬೋನಂತಹ ಚಿತ್ರಗಳನ್ನು ಕೊಡುತ್ತಿದ್ದರೇನೋ?
ಪುನೀತ್ ರಾಜಕುಮಾರ್ ಅವರಿಗೆ ಇನ್ನೂ ವಯಸ್ಸಿತ್ತು, ಅನುಭವದಿಂದ ನಟನೆ ಪಕ್ವವಾಗುತ್ತಿದ್ದ ಕಾಲದಲ್ಲಿ ಅವರಿದ್ದರು. ಅವರು ಜನಪ್ರಿಯತೆಯ ತುದಿಗೇರಿದ್ದರೂ ಅವರ ನಟನೆಯನ್ನು ನೋಡಿದ ಎಲ್ಲರಿಗೂ ಆತ ತನ್ನ ಅತ್ಯುತ್ತಮವನ್ನು ಇನ್ನಷ್ಟೇ ಕೊಡಬೇಕಾಗಿದೆ ಎಂದು ಅನಿಸುತ್ತಿತ್ತು. ಇದು ಅವರಿಗೂ ಗೊತ್ತಿತ್ತು. ಇತ್ತೀಚಿನ ಅವರ ಸಂದರ್ಶನಗಳಲ್ಲಿ ಅವರು ಇದನ್ನು ಆಗಾಗ ಹೇಳಿದ್ದರು ಕೂಡಾ. ಮಿಲನ, ಮೈತ್ರಿ, ಪೃಥ್ವಿ, ಪರಮಾತ್ಮ ಮೊದಲಾದ ಚಿತ್ರಗಳಲ್ಲಿ ಅವರ ಅತ್ಯುತ್ತಮ ಅಭಿನಯದ ತುಣುಕುಗಳು ಕಾಣಸಿಕ್ಕರೂ ಆ ಪಾತ್ರಗಳು ಕೂಡಾ ಸವಾಲಿನದ್ದಾಗಿರಲಿಲ್ಲ.
ಇತ್ತೀಚೆಗೆ ಕೋವಿಡ್ ಕಾಲದಲ್ಲಿ ಸಮಯ ಕಳೆಯಲು ಅನಿವಾರ್ಯವಾಗಿ ಮೊರೆಹೋದ ನೆಟ್ ಫ್ಲಿಕ್ಸ್ ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ತಮಿಳು, ಮಲೆಯಾಳಿ ಸಿನೆಮಾಗಳನ್ನು ನೋಡುತ್ತಿದ್ದಾಗ, ಕನ್ನಡದಲ್ಲಿ ಇಂತಹ ಚಿತ್ರಗಳನ್ನು ಯಾರು ಮಾಡಬಹುದು ಎಂದು ಯೋಚನೆ ಬರುತ್ತಿತ್ತು. ಆ ಕ್ಷಣದಲ್ಲೆಲ್ಲ ನೆನಪಿಗೆ ಬರುತ್ತಿದ್ದ ಹೆಸರು ಪುನೀತ್ ರಾಜ್ ಕುಮಾರ್. ತಥಾಕಥಿತ ಜನಪ್ರಿಯ ಚಿತ್ರಗಳನ್ನು ಬಿಟ್ಟು ಹೊಸತನದ ಚಿತ್ರಗಳತ್ತ ಪ್ರೇಕ್ಷಕರನ್ನು ಸೆಳೆಯಲು ಜನಪ್ರಿಯ ನಟರೇ ಕಣಕ್ಕಿಳಿದರೆ ರಿಸ್ಕ್ ಕಡಿಮೆ ಇರುತ್ತದೆ ಎನ್ನುವುದೂ ಇದಕ್ಕೆ ಕಾರಣ.
ಅಸುರನ್ ಚಿತ್ರದ ಧನುಷ್, ಕಮ್ಮಟ್ಟಿಪಾಡಂ ಚಿತ್ರದ ದುಲ್ಕರ್ ಪಾತ್ರಗಳನ್ನು ಕನ್ನಡದಲ್ಲಿ ಯಾರಾದರೂ ಮಾಡಲು ಸಾಧ್ಯವಿದ್ದರೆ ಅದು ಪುನೀತ್ ಅವರಿಗೆ ಎಂದು ಯಾರಿಗಾದರೂ ಅನಿಸದೆ ಇರದು. ಆದರೆ ಕನ್ನಡದಲ್ಲಿನ ನಿರ್ಮಾಪಕರು, ನಿರ್ದೇಶಕರು ಮಾತ್ರ ಪುನೀತ್ ಅವರಿಗೆ ನಾಲ್ಕು ಡಾನ್ಸ್, ಆರು ಫೈಟ್ ಗಳನ್ನು ಕಡ್ಡಾಯಮಾಡಿಯೇ ಚಿತ್ರ ಮಾಡುತ್ತಿದ್ದರು. ಅನಿವಾರ್ಯವಾಗಿ ಪುನೀತ್ ಅವರು ಕೂಡಾ ಆ ಚಿತ್ರಗಳಿಗೆ ತಕ್ಕಂತೆ ತಮ್ಮ ದೇಹವನ್ನು ಹುರಿಗೊಳಿಸುತ್ತಾ ಹೋದರು.
ಪರಿಚಯ ಇಲ್ಲದವರಿಗೆ ಧನುಷ್ ಒಬ್ಬ ಹೀರೋ ಮೆಟಿರಿಯಲ್ ಇರುವ ನಟನಂತೆಯೇ ಕಾಣಿಸುವುದಿಲ್ಲ. ಮಲೆಯಾಳಿ ಚಿತ್ರರಂಗದಲ್ಲಿ ದಶಕಗಳಿಂದ ಮೆರೆಯುತ್ತಿರುವ ಮುಮ್ಮುಟ್ಟಿ,ಮೋಹನ್ ಲಾಲ್ ಯಾವ ಬಾಡಿ ಬಿಲ್ಡಿಂಗ್ ಮಾಡಿದ್ದಾರೆ? ಕಣ್ಣಲ್ಲೇ ಅಭಿನಯಿಸುವ ಫಾಹದ್ ಫಾಸಿಲ್ ಬಳಿ ಯಾವ ಸಿಕ್ಸ್ ಪ್ಯಾಕ್ ಇದೆ?
ಕನ್ನಡ ಚಿತ್ರರಂಗದ ಸಮಸ್ಯೆಯೆಂದರೆ ಇಲ್ಲಿಯವರು ಹಿಂದಿ ಮತ್ತು ತೆಲುಗು ಚಿತ್ರಗಳನ್ನೇ ರೋಲ್ ಮಾಡೆಲ್ ಆಗಿ ಸ್ವೀಕರಿಸಿರುವುದು. ಈ ಎರಡೂ ಭಾಷೆಗಳ ಚಿತ್ರಗಳ ಆಚೆಗೆ ತಮಿಳು,ಮಲೆಯಾಳಿ, ಮರಾಠಿ ಚಿತ್ರಗಳು ಇವರಿಗೆ ಕಾಣುತ್ತಿಲ್ಲ.
ಪುನೀತ್ ರಾಜ್ ಕುಮಾರ್ ಕೂಡಾ ತಮ್ಮ ಮುಂದಿನ ಯಾವುದೋ ಚಿತ್ರಕ್ಕೆ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದರೆಂಬ ಸುದ್ದಿ ಇದೆ. ಈ ಪೈಪೋಟಿಗೆ ಬೀಳದೆ ಅವರೇ ಆಗಾಗ ನಿಟ್ಟುಸಿರು ಬಿಡುವಂತೆ ಹೇಳುತ್ತಿದ್ದ ‘ಡಿಪರೆಂಟ್ ಫಿಲ್ಮ್’ ಗಳನ್ನು ಮಾಡಲು ಹೊರಟಿದ್ದರೆ ನಾವು ಅವರನ್ನು ಕಳೆದುಕೊಳ್ಳುತ್ತಿರಲಿಲ್ಲವೇನೋ?
ಪ್ರಾಣವನ್ನೇ ಪಣಕ್ಕಿಟ್ಟು ಈ ರೀತಿ ಬಾಡಿ ಬಿಲ್ಡ್ ಮಾಡಿದರೂ ಅದರಿಂದ ‘ಸರಪಟ್ಟಂ ಪರಂಪರೈ’ ನಂತಹ ಇಲ್ಲವೇ ‘ದಂಗಲ್’ ನಂತಹ ಚಿತ್ರವಾದರೂ ಪ್ರೇಕ್ಷಕರಿಗೆ ಸಿಗಬೇಕು. ಈ ಪೊಟ್ಟು ವಿಲನ್ ಗಳ ಜೊತೆ ಗುದ್ದಾಡಲು ಅಷ್ಟೆಲ್ಲ ಯಾಕೆ ಶ್ರಮ ಪಡಬೇಕು.
ಒಂದು ಅಮೂಲ್ಯ ಜೀವವನ್ನು ಕಳೆದುಕೊಂಡ ನಂತರವಾದರೂ ಕನ್ನಡದ ನಿರ್ಮಾಪಕರು ನಿರ್ದೇಶಕರು ಏನಾದರೂ ಬದಲಾಗಬಹುದೇ? ಈ ಪ್ರಶ್ನೆಗೆ ಉತ್ತರ ನಾನೇ ಹೇಳುತ್ತೇನೆ- ಇವರು ಬದಲಾಗುವುದಿಲ್ಲ.