ಪರೀಕ್ಷೆಯಲ್ಲಿ ( Exam ) ನಕಲು ( copy ) ಮಾಡಿದ್ದಾನೆ ಅನ್ನೋ ಆರೋಪಕ್ಕೆ ನೊಂದು, ಪಿಇಎಸ್ ಕಾಲೇಜು ( PES college ) ವಿದ್ಯಾರ್ಥಿ ( Student ) ಬದುಕು ಅಂತ್ಯಗೊಳಿಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ, 19ರ ಹರೆಯದ ವಿದ್ಯಾರ್ಥಿ ಸಾವಿಗೆ ನ್ಯಾಯ ( justice ) ಒದಗಿಸಲು ತಾಯಿ ಹೋರಾಟವನ್ನ ಆರಂಭಿಸಿದ್ದಾರೆ. ಹೋರಾಟ ಆರಂಭಿಸಿರುವ ತಾಯಿ ಕಾಲೇಜು ಆಡಳಿತ ಮಂಡಳಿ ಹೇಳುತ್ತಿರುವ ಘಟನೆಗೂ, ಮತ್ತು ನಿಜವಾಗಿಯೂ ನಡೆದಿರುವ ಘಟನೆಗು ಸಾಕಷ್ಟು ವ್ಯತ್ಯಾಸ ಇದೆ ಎಂದಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಹೋರಾಟ ಆರಂಭಿಸಿದ್ದಾರೆ.
ಗಿರಿನಗರದ ( Girinagara ) ಹೆಸರಾಂತ ಕಾಲೇಜು ಪಿಇಎಸ್ ಯುನಿವರ್ಸಿಟಿಯಲ್ಲಿ ಬಿಟೆಕ್ ವಿದ್ಯಾರ್ಥಿಯಾಗಿದ್ದ ಆದಿತ್ಯಪ್ರಭು ( Adithya Prabhu ) ಇದೇ ಜುಲೈ 17 ರಂದು ಕಾಲೇಜಿನ 8ನೇ ಮಹಡಿಯಿಂದ ಹಾರಿ ಮೃತ ಪಟ್ಟಿದ್ದ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಕಳೆದೊಂದು ವಾರದಿಂದ ಆದಿತ್ಯ ಪ್ರಭು ಪೋಷಕರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ( Social Media ) ಜಸ್ಟೀಸ್ ಫಾರ್ ಆದಿತ್ಯಪ್ರಭು ( Justice For Adithya Prabhu ) ಅನ್ನೋ ಖಾತೆ ತೆರೆದು ಹೋರಾಟ ತೀವ್ರಗೊಳಿಸಿರುವ ಆದಿತ್ಯಪ್ರಭು ತಾಯಿ, ಸಾಮಾಜಿಕ ಜಾಲತಾಣದಲ್ಲಿ ಆದಿತ್ಯ ಪ್ರಭು ಮೃತಪಟ್ಟ ದಿನದ ಘಟನೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಗನ ಸಾವಿನಲ್ಲಿ ಪಿಇಎಸ್ ಕಾಲೇಜು ನಡೆದುಕೊಂಡ ರೀತಿ ಹಾಗೂ ವಿದ್ಯಾರ್ಥಿ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ನೇರ ಕಾರಣ ಪಿಇಎಸ್ ಕಾಲೇಜು ಯನಿವರ್ಸಿಟಿ ಎಂದು, ಮೃತ ವಿದ್ಯಾರ್ಥಿ ತಾಯಿ ಸಾಮಾಜಿ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಆದಿತ್ಯಪ್ರಭು ತಾಯಿ ಹೇಳಿಕೆ ಈಗ ಈ ಘಟನೆ ಎಂತಹ ಪೋಷಕರನ್ನು ಪ್ರತಿಷ್ಠಿತ ಕಾಲೇಜಿಗೆ ಕಳುಹಿಸುವ ಮುನ್ನ ಎರಡೆರಡು ಬಾರಿ ಯೋಚನೆ ಮಾಡುವಂತೆ ಮಾಡಿದೆ. ಈ ಕುರಿತು ಇಂಚಿಂಚು ಮಾಹಿತಿ ನೀಡಿರುವ ಆದಿತ್ಯ ಪ್ರಭು ತಾಯಿ
“ಜುಲೈ 17ರಂದು ಬೆಳಗ್ಗೆ 11.45ಕ್ಕೆ ಮಗನಿಂದ ನನಗೆ ಕರೆ ಬಂದಿತ್ತು, ಆತ ಪಿಇಎಸ್ ಕಾಲೇಜಿನವರು ನನಗೆ ಹಿಂಸೆ ನೀಡಿದ್ದಾರೆ. ನಕಲು ಮಾಡಿದ್ದೇನೆ ಎಂದು ಆರೋಪಿಸಿ ಹಿಂಸಿಸುತ್ತಿದ್ದಾರೆ. ತದ ನಂತರ ಆತ ಪರೀಕ್ಷೆ ಕೊಠಡಿಗೆ ತೆರಳುವಾಗ ಫೋನ್ ಬ್ಯಾಗ್‌ನಲ್ಲಿಟ್ಟು ಒಳ ಪ್ರವೇಶಿಸಿದೆ ಎಂದಿದ್ದ. ಪರೀಕ್ಷೆಯ ನಡುವೆ ತನ್ನ ಪ್ಯಾಂಟ್ ಜೇಬ್‌ನಲ್ಲಿ ಫೋನ್ ಇದೆ ಅನ್ನೋದು ನನ್ನ ಅರಿವಿಗೆ ಬಂದಿದ್ದು, ಹೀಗಾಗಿ ಖುದ್ದು ತಾನೇ ಫೋನ್ ತೆಗೆದು ಬೆಂಚ್ ಬದಿಯಲ್ಲಿ ಇಟ್ಟಿದ್ದೆ. ಫೋನ್ ಏರ್‌ಪ್ಲೇನ್ ಮೂಡ್‌ನಲ್ಲಿತ್ತು ಆದರೆ ಇನ್ನೇನು ಪರೀಕ್ಷೆ ಮುಗಿಯುವ ಹೊತ್ತಿಗೆ, ಪರೀಕ್ಷಾ ಕೊಠಡಿಯಲ್ಲಿದ್ದ ಇನ್‌ವಿಜಿಲೇಟರ್, ಫೋನ್ ನೋಡಿ ನಕಲು ಮಾಡಿದ್ದಾನೆ ಎಂದು ಆರೋಪಿಸಿ ಹಿಡಿದಿದ್ದಾರೆ” ಎಂದು ಫೋನ್‌ನಲ್ಲಿ ನನಗೆ ಹೇಳಿದ್ದಾನೆ ಅಂತ ಅದಿತ್ಯ ಪ್ರಭು ತಾಯಿ ಸಾಮಾಜಿಕ ಜಾಲತಾಣದಲ್ಲಿಆದಿತ್ಯ ಪ್ರಭು ಸಾವಿಗೂ ಮುನ್ನ ನಡೆದ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ಆದಿತ್ಯ ಸಾವಿನ ಬಳಿಕ ನಡೆದ ಘಟನೆಯನ್ನ ಕೂಡ ಎಳೆಎಳೆಯಾಗಿ ವಿವರಿಸಿದ, ತಾಯಿ “ಕಾಲೇಜಿನ ಮಾರ್ಗದರ್ಶಕರೊಬ್ಬರು ನನಗೆ ಕರೆ ಮಾಡಿ ಕಾಲೇಜಿಗೆ ಆಗಮಿಸುವಂತೆ ಸೂಚಿಸಿದ್ರು. ನಾನು ಕಾಲೇಜಿಗೆ ಹೋದಾಗ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಸೇರಿದ ಹಾಗೆ ಮುಖ್ಯಸ್ಥರು ಯಾರೂ ಇರಲಿಲ್ಲ. ಸ್ಪಲ್ಪ ಹೊತ್ತು ಕಾಯಲು ಹೇಳಿದ್ರು, 1 ಗಂಟೆ ಕಾಯುತ್ತ ಕುಳಿತಿದ್ದೆ, ಬಳಿಕ ಕಾಲೇಜಿನ ಮೆಂಟರ್ ಹಾಗೂ ಸಿಒಇ ಆಗಮಿಸಿದ್ರು, ಬಳಿಕ ಸ್ಟಾಫ್ ರೂಂಗೆ ಕರೆಸಿದ್ದಾರೆ. ಆದರೆ ಅಲ್ಲಿ ಅದಿತ್ಯ ಪ್ರಭು ಇರಲಿಲ್ಲ. ಸಿಬ್ಬಂದಿಗಳು, ಮೆಂಟರ್ ಆದಿತ್ಯ ಪ್ರಭು ಇಲ್ಲೇ ಇದ್ದಾನೆ, ವಿದ್ಯಾರ್ಥಿಗಳ ಜೊತೆ ಸುತ್ತಾಡಲು ಹೊರಗಡೆ ತೆರಳಿದ್ದಾನೆ ಅಂತ ಹೇಳಿದ್ದಾರೆ”
“ ಆದರೆ ಆದಿತ್ಯ ಪ್ರಭು ಸುತ್ತಾಡಲು ಯಾವತ್ತೂ ತೆರಳಲ್ಲ ಎಂದು ಹೇಳಿದ್ದೆ, ನಾನು ಗಾಬರಿಗೊಂಡು, ಸಿಸಿಟಿವಿ ಪರಿಶೀಲಿಸಿ ನೋಡಿ ಎಂದು ಮನವಿ ಮಾಡಿಕೊಂಡಿದ್ದೆ, ಆದರೆ ಕಾಲೇಜು ಆಡಳಿತ ಮಂಡಳಿ, ಗೆಳೆಯರ ಜೊತೆಗಿದ್ದಾನೆ. ಇನ್ನೇನು ಬರುತ್ತಾನೆ ಎಂದು ಹೇಳಿದ್ದರು, ಆದರೆ ಕೆಲ ಹೊತ್ತಿನ ಬಳಿಕ ಮೆಂಟರ್ ಹಾಗೂ ಸಿಒಇಗೆ ಕರೆ ಬಂದಿದೆ. ಅವರು ಹೊರಗೆ ಓಡಿದ್ದಾರೆ. ಇತ್ತ ಸಿಬ್ಬಂದಿಗಳು ಓಡಿದ್ದಾರೆ. ಅವರ ಹಿಂದೆ ನಾನೂ ಕೂಡ ಓಡಿದ್ದೆ. ಈ ವೇಳೆ ಮತ್ತೊಂದು ಬದಿಯ ಕ್ಯಾಂಪಸ್‌ಗೆ ತೆರಳಿದಾಗ, ಆ್ಯಂಬುಲೆನ್ಸ್, ಪೊಲೀಸರು ಸ್ಥಳದಲ್ಲಿರೋದು ಕಾಣಿಸುತ್ತೆ, ನಾನು ಅಳುತ್ತಾ ನನ್ನ ಮಗನಿಗೆ ಏನಾಯ್ತು ಅಂತ ಕೂಗಾಡಿದ್ದೆ’’
“ಇದೇ ವೇಳೆ ನಿಮ್ಮ ಕಾಲೇಜಿನವರು ನಿಮ್ಮ ಮಗ ಜೀವಂತವಿಲ್ಲ ಎಂದು ಹೇಳಿದ್ರು. ಈ ಘಟನೆ ನಡೆದು ಕೆಲ ಹೊತ್ತಾಗಿದೆ. ಮಗನನ್ನು ಆಸ್ಪತ್ರೆ ದಾಖಲಿಸುವಂತೆ ನಾನು ಹಲವು ಬಾರಿ ಬೇಡಿಕೊಂಡಿದ್ದೆ. ಮೊದಲು ಪೇಪರ್‌ನಲ್ಲಿ ಸಹಿ ಮಾಡಿ, ಬಳಿಕ ನಿಮ್ಮ ಮಗನೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ ಎಂದು ಕಾಲೇಜಿನವರು ನನಗೆ ಸೂಚನೆ ನೀಡಿದ್ದರು. ನನ್ನನ್ನು ಇಬ್ಬರು ಹಿಡಿದುಕೊಂಡು ಮಗನ ದೇಹದ ಬಳಿ ಕರೆದುಕೊಂಡು ಹೋಗಿದ್ದರು. ಇದು ಯಾವ ರೀತಿಯ ಕಾನೂನು, ನನ್ನ ಮಗನೇ ನೆಲದಲ್ಲಿ ಬಿದ್ದಿದ್ದಾನೆ. ಇದು ನನ್ನ ಮಗನೇ ಎಂದು ಹೇಳಿದೆ ನಾನು ಖಾತ್ರಿ ಪಡಿಸಿದೆ. ಆಗಲೇ ಸಹಿ ಹಾಕಲು ಎರಡು ಪೇಪರ್ ಕೂಡ ನೀಡಿದರು. ನಾನು ಸಹಿ ಮಾಡಿದ ಬಳಿಕ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ʼʼ
“ಸಾಕಷ್ಟು ಹೊತ್ತು ನನ್ನ ಮಗ ನೆಲದಲ್ಲೇ ಬಿದಿದ್ದ. ಆ್ಯಂಬುಲೆನ್ಸ್ ಸ್ಥಳದಲ್ಲಿಯೇ ಇತ್ತು. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದರು. ಪೇಪರ್‌ನಲ್ಲಿ ಸಹಿ ಕೂಡ ಮಾಡಿದೆ. ಆದರೆ ತಕ್ಷಣಕ್ಕೆ ಆಸ್ಪತ್ರೆ ದಾಖಲಿಸಿಲ್ಲ ಬಳಿಕ ನನ್ನ ಕುಟುಂಬಸ್ಥರು ಆಗಮಿಸಿದ ಬಳಿಕ ತನಿಖೆಗೆ ಒತ್ತಾಯ ಮಾಡಿದ್ರು, ಈ ಪ್ರತಿಭಟನೆ ಬಳಿಕ ಫೋರೆನ್ಸಿಕ್ ತಂಡ ಆಗಮಿಸಿತು. ಪೊಲೀಸರು ಆಗಮಿಸಿ ವಿಚಾರಣೆ ಆರಂಭಿಸಿದರು. ಸಂಜೆ 7.30ರ ವರೆಗೆ ನಡೆಯಿತು. ಅಲ್ಲಿಯವರೆಗೂ ಕೂಡ ಕಾಲೇಜಿನ ಆಡಳಿತ ಮಂಡಳಿ ಅಥವಾ ಸಂಬಂಧ ಪಟ್ಟವರಾಗಲಿ ಬಂದಿರಲಿಲ್ಲ ತದ ನಂತರ ಕಾಲೇಜು ಆಡಳಿತ ಮಂಡಲಿ ಸದಸ್ಯರು ಸ್ಥಳಕ್ಕೆ ಆಗಮಿಸಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ”
“ ಪರೀಕ್ಷಾ ಕೊಠಡಿಯಲ್ಲಿದ್ದ ಇತರ ವಿದ್ಯಾರ್ಥಿಗಳು ನೀಡಿರುವ ಮಾಹಿತಿಯ ಪ್ರಕಾರ ಪರೀಕ್ಷೆ ಮುಗಿಯುವ 5 ನಿಮಿಷಕ್ಕೆ ಮೊಬೈಲ್ ಇರುವುದನ್ನ ಗಮನಿಸಿದ್ದಾರೆ. ಪರೀಕ್ಷೆ ಆರಂಭಗೊಂಡ 2 ಗಂಟೆ 56 ನಿಮಿಷಗಳ ನಂತರ ಇಬ್ಬರು ಇನ್‌ವಿಜಿಲೇಟರ್ ಏನು ಮಾಡುತ್ತಿದ್ದರು. ಒಂದು ವೇಳೆ ನಕಲು ಮಾಡುತ್ತಿದ್ದರೆ ಸಂಪೂರ್ಣ ಪರೀಕ್ಷೆ ಬರೆಯಲು ಅನುವು ಮಾಡುತ್ತಿದ್ದರೆ? ನನ್ನ ಮಗ ತಪ್ಪು ಮಾಡಿದ್ದರೆ, ಅದನ್ನು ಸರಿಯಾದ ರೀತಿಯಲ್ಲಿ ಪರಿಹರಿಸಲು, ಸಾಧ್ಯತೆಗಳು ಇದ್ದವು, ಅದರ ಬದಲು ಮಾನಸಿಕವಾಗಿ ಹಿಂಸೆ ನೀಡಿದ್ದು ಯಾಕೆ? ನಕಲಿನಂತಹ ಗಂಭೀರ ಆರೋಪ ಹೊರಿಸಿದ ಬಳಿಕ 19 ವರ್ಷದ ವಿದ್ಯಾರ್ಥಿಯನ್ನು ಶಿಕ್ಷಕರ ಕೊಠಡಿಯಲ್ಲಿ ಇರಿಸಬೇಕಿತ್ತು. ಮಹಡಿಯಿಂದ ಹಾರಿದ ಬಳಿಕ ಯಾಕೆ ಆಸ್ಪತ್ರೆ ಸೇರಿಸಲು ವಿಳಂಬ ಮಾಡಿದ್ದೀರಿ “ ಎಂಬ ಪ್ರಶ್ನೆಗಳನ್ನ ತಮ್ಮ ಖಾತೆಯಲ್ಲಿ ಕೇಳಿದ್ದಾರೆ.
ಸದ್ಯದ ಮಟ್ಟಿಗೆ ಈ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಈ ಘಟನೆಯ ಕುರಿತು ನಮ್ಮ ಪ್ರತಿಧ್ವನಿ ತಂಡ ಗಿರಿನಗರ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನ ಪಡೆದುಕೊಂಡಿದ್ದು, ಮೃತ ವಿದ್ಯಾರ್ಥಿಯ ತಾಯಿ ನೀಡಿದ ದೂರಿನ ಪ್ರಕಾರ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡಿದ್ದೇವೆ ಎಂದು ಮಾಹಿತಿಯನ್ನ ನೀಡಿದ್ದಾರೆ.