ದೇಶಾದ್ಯಂತ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್ಬಿಐ ನಿರ್ಧರಿಸಿದ್ದು ಈಗಾಗಲೇ 2000 ರೂಪಾಯಿ ನೋಟುಗಳನ್ನು ನೀಡಿ ಬದಲಿ ನಗದು ಹಣ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಯಾವುದೇ ಗುರುತಿನ ಚೀಟಿಯನ್ನು ತೋರಿಸದೇ, ಯಾವುದೇ ಶುಲ್ಕ ಪಾವತಿ ಮಾಡದೇ ನೀವು ಹಣ ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ .

ಮಂಗಳವಾರದಿಂದ ಆರಂಭಗೊಂಡಿರುವ ನೋಟು ವಿನಿಮಯ ಕಾರ್ಯಕ್ಕೆ ಮೊದಲೇ ಅರ್ಜಿ ಸಲ್ಲಿಸಬೇಕು ಅಥವಾ ಶುಲ್ಕ ಪಾವತಿ ಮಾಡಬೇಕು ಸೇರಿದಂತೆ ಸಾಕಷ್ಟು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಚಾರವಾಗಿ ಎಸ್ಬಿಐ ತನ್ನ ಗ್ರಾಹಕರಿಗೆ ಬಹುಮುಖ್ಯ ಮಾಹಿತಿ ನೀಡಿದೆ.
ಸೆಪ್ಟೆಂಬರ್ 30ರವರೆಗೂ ಪಿಂಕ್ ನೋಟ್ ಬದಲಾವಣೆಗೆ ಅವಕಾಶವಿದ್ದು ಇದ್ದಕ್ಕಾಗಿ ಯಾವುದೇ ಅರ್ಜಿ ತುಂಬುವ ಅಥವಾ ಹೆಚ್ಚುವರಿ ಶುಲ್ಕ ಪಾವತಿ ಮಾಡುವ ನಿಯಮವಿಲ್ಲ. ಹಣ ವಿನಿಮಯ ಮಾಡಲು ನೀವು ಆ ಬ್ಯಾಂಕ್ನ ಗ್ರಾಹಕರೇ ಆಗಿರಬೇಕು ಎಂದೇನಿಲ್ಲ. ಯಾವುದೇ ಬ್ಯಾಂಕ್ನ ಶಾಖೆಯಲ್ಲಿ ಹಣ ಎಕ್ಸ್ಚೇಂಜ್ ಮಾಡಬಹುದು. ಒಮ್ಮೆಗೆ 20 ಸಾವಿರ ರೂಪಾಯಿಗಳ 2000 ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಬಹುದು. 2000 ಮುಖಬೆಲೆಯ ನೋಟುಗಳ ಒಟ್ಟು ಬದಲಾವಣೆಗೆ ಇನ್ನೂ ಆರ್ಬಿಐ ಯಾವುದೇ ಮಿತಿಯನ್ನು ಹೇರಿಲ್ಲ. ಇದು ಕೇವಲ ಎಸ್ಬಿಐ ಮಾತ್ರವಲ್ಲದೇ ಎಲ್ಲಾ ಬ್ಯಾಂಕುಗಳಿಗೆ ಒಂದೇ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದೆ.






