ಬೆಂಗಳೂರು : ನಿನ್ನೆಯಷ್ಟೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ ನೀಡಿದ ಬೆನ್ನಲ್ಲೇ ಜೆಡಿಎಸ್ ಯುವಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚುನಾವಣೆಯಲ್ಲಿ ಸತತ ಸೋಲು ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡರಿಗೆ ನಿಖಿಲ್ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ನನಗೆ ಅತೀವ ಬೇಸರ ತಂದಿದೆ . ಪಕ್ಷ ಸಂಘಟನೆಗೆ ನಾನು ಕೈಲಾದ ಮಟ್ಟಿಗೆ ಶ್ರಮಿಸಿದ್ದೇನೆ. ಆದರೆ ಇದೀಗ ಪಕ್ಷವನ್ನು ಮರುಸಂಘಟನೆ ಮಾಡಬೇಕಾದ ಅನೇಕ ಸಾಧ್ಯತೆಗಳು ತೆರೆದುಕೊಂಡಿವೆ. ಸೋಲು ಅಂತಿಮವಲ್ಲ. ಆದರೆ ಪಕ್ಷದ ಹಿತದೃಷ್ಟಿಯಿಂದ ಹೊಸ ನಾಯಕನ ಅವಶ್ಯಕತೆಯಿದೆ ಎಂದು ನನಗೆ ಎನಿಸುತ್ತಿದೆ. ಹೀಗಾಗಿ ನಾನು ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜೀನಾಮೆ ಬಳಿಕವೂ ಪಕ್ಷಕ್ಕಾಗಿ ನಾನು ದುಡಿಯುತ್ತೇವೆ. ಹೊಸ ಯುವ ನಾಯಕನ ಜೊತೆ ಸೇರಿ ಪಕ್ಷ ಸಂಘಟನೆ ಮಾಡಲು ನಾನೆಂದಿಗೂ ಸಿದ್ಧ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ .