ಬೆಂಗಳೂರು:ಏ.೦೪: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 1.30ಕ್ಕೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. ಮಧ್ಯಾಹ್ನ 1.30ಕ್ಕೆ ನಟ ಸುದೀಪ್ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗ್ತಿದೆ. ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಿರುವ ಸಾಕಷ್ಟು ಅಭಿಮಾನಿಗಳಿಗೆ ಸಂತಸ ಮೂಡಿಸಿದ್ರೆ ಇನ್ನಷ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದಂತಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಉತ್ತಮ ಒಡನಾಟ ಹೊಂದಿರುವ ನಟ ಕಿಚ್ಚ ಸುದೀಪ್, ತಮ್ಮ ಅಭಿಮಾನಿಗಳ ಜೊತೆಗೆ ಬಿಜೆಪಿ ಸೇರಲಿದ್ದಾರೆ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ. ಈ ಮೂಲಕ ಬಿಜೆಪಿ ವಾಲ್ಮೀಕಿ ಸಮುದಾಯವ ಮತಗಳನ್ನು ಸೆಳೆಯಲು ತಂತ್ರಗಾರಿಕೆ ಮಾಡಿದೆ ಎನ್ನಲಾಗ್ತಿದೆ. ಕ್ಯಾಪಿಟಲ್ ಹೋಟೆಲ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ನಟ ಸುದೀಪ್ ಬಿಜೆಪಿ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ.

ಬಿಜೆಪಿ ಸೇರುತ್ತಿರೋ ಉದ್ದೇಶ ಆದ್ರು ಏನು..?
ನಟ ಸುದೀಪ್ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ..? ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ. ನಟ ಸುದೀಪ್ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕಾಗಿಯೇ ಸಚಿವ ಶ್ರೀರಾಮುಲು ಕ್ಷೇತ್ರ ಬಿಟ್ಟು ಕೊಟ್ಟರಾ..? ಎನ್ನುವ ಅನುಮಾನಗಳ ಸೃಷ್ಟಿ ಆಗಿವೆ. ನಟ ಸುದೀಪ್ ಸಹೋದರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾಹಿತಿಗಳು ಹೊರಬಿದ್ದಿದ್ದವು. ಆದರೆ ಕಾಂಗ್ರೆಸ್ ಬಿಜೆಪಿ ಶಾಸಕರಾಗಿದ್ದ ವೈ.ಎನ್ ಗೋಪಾಲಕೃಷ್ಣ ಅವರಿಗೆ ಟಿಕೆಟ್ ಘೋಷಣೆ ನೀಡುವ ನಿರ್ಧಾರ ಮಾಡಿದೆ. ಇದೇ ಕಾರಣಕ್ಕೆ ವೈಎನ್ ಗೋಪಾಲಕೃಷ್ಣ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಇದೀಗ ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿ ಸೇರ್ಪಡೆ ಆಗಿ ಸ್ವತಃ ತಾವೇ ಅಖಾಡಕ್ಕೆ ಧುಮುಕುತ್ತಾರಾ..? ಅಥವಾ ಸಹೋದರಿಯನ್ನು ಕಣಕ್ಕಳಿಸಿ ಬಿಜೆಪಿಗೆ ಸ್ಟಾರ್ ಪ್ರಚಾರಕರ ರೀತಿಯಲ್ಲಿ ಕೆಲಸ ಮಾಡ್ತಾರಾ..? ಅನ್ನೋ ಗೊಂದಲ ಸೃಷ್ಟಿಯಾಗಿದೆ.
ಬೆಂಗಳೂರಿನ ಚಿಕ್ಕಪೇಟೆ ಮೇಲೂ ಕಿಚ್ಚನ ಕಣ್ಣು..!

ಮೊಳಕಾಲ್ಮೂರು ಕ್ಷೇತ್ರದ ಜೊತೆಗೆ ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಆಪ್ತ ನಿರ್ಮಾಪಕ ಜಾಕ್ ಮಂಜುಗೆ ಟಿಕೆಟ್ ಕೇಳಿದ್ದಾರೆ ಎನ್ನಲಾಗ್ತಿದೆ. ಬಿಜೆಪಿಯಲ್ಲಿ ಗುರ್ತಿಸಿಕೊಳ್ಳಲು ಮುಂದಾಗಿರುವ ನಟ ಕಿಚ್ಚ ಸುದೀಪ್ ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ ಅನ್ನೋ ಮಾಹಿತಿ ಇದೆ. ಇಂದಿನ ಸಭೆಯಲ್ಲಿ ಕೇವಲ ಬೆಂಬಲ ಘೋಷಣೆ ಮಾಡಿ ಟಿಕೆಟ್ ಘೋಷಣೆ ಆಗುವ ತನಕ ಸುಮ್ಮನಿರ್ತಾರಾ..? ಅಥವಾ ನೇರವಾಗಿಯೇ ಬಿಜೆಪಿ ಸೇರ್ಪಡೆ ಆಗ್ತಾರ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಹೋಟೆಲ್ನಲ್ಲಿ ಸಿಎಂ ಕರೆದಿರುವ ಸುದ್ದಿಗೋಷ್ಠಿಯಲ್ಲಿ ನಟ ಸುದೀಪ್ ಉಪಸ್ಥಿತರಿರುತ್ತಾರೆ. ಇದಕ್ಕೂ ಮೊದಲು ಜೆಪಿ ನಗರದ ನಿವಾಸದಲ್ಲಿ ತಂದೆ ತಾಯಿ ಹಾಗು ಹಿತೈಷಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ ಅನ್ನೋ ಮಾಹಿತಿಯೂ ಇದೆ.
ಇತ್ತೀಚಿಗಷ್ಟೇ ನಟ ಸುದೀಪ್ ಮೇಲೆ ಐಟಿ ರೇಡ್..!
ಸಿನಿಮಾ ನಟ, ನಟಿಯರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಅಂದರೆ ಹಣ ಪಡೆಯದೆ ಸುಖಾಸುಮ್ಮನೆ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ. ಹಣ ಕೊಟ್ಟರೆ ಪ್ರಚಾರ ಅನ್ನೋದು ಅವರ ಲೆಕ್ಕಾಚಾರ. ಆದರೆ ಕೆಲವೊಮ್ಮೆ ಸ್ನೇಹಕ್ಕೆ ಕಟ್ಟುಬಿದ್ದು ಪ್ರಚಾರ ಮಾಡುವುದು ಬೆರಳೆಣಿಕೆಯಷ್ಟು ಮಾತ್ರ. ಇನ್ನು ಕೆಲವು ಸಮಯದಲ್ಲಿ ಕಾನೂನು ಸಮಸ್ಯೆಗೆ ಸಿಲುಕುವ ಭೀತಿಯಿಂದಲೂ ಪ್ರಭಾವಿ ಪಕ್ಷವನ್ನು ಬೆಂಬಲಿಸುವ ಅನಿವಾರ್ಯತೆ ಎದುರಾಗುತ್ತದೆ. ಕೆಲವೊಂದು ಕೇಸ್ಗಳಿಂದ ಅವರಿಗೆ ಮುಕ್ತಿ ಸಿಗಬೇಕಾದ ಅನಿವಾರ್ಯತೆಯೂ ಇರುತ್ತದೆ. ಇದರ ಭಾಗವಾಗಿ ನೆನಪಿಸಿಕೊಳ್ಳಬೇಕು ಅಂದರೆ ನಟ ಸುದೀಪ್ ನಿವಾಸದ ಮೇಲೆ ಇತ್ತೀಚಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಆ ಕೇಸ್ನಿಂದ ಹೊರ ಬರುವ ಉದ್ದೇಶಕ್ಕೆ ಬಿಜೆಪಿ ಬೆಂಬಲಿಸುವ ನಿರ್ಧಾರ ಮಾಡಿದ್ದಾರೆ ಅನ್ನೋದನ್ನು ಹೇಳದಿದ್ದರೂ ಕೆಲವೊಮ್ಮೆ ಈ ರೀತಿ ಆಗುತ್ತದೆ ಅನ್ನೋದು ನಮ್ಮ ಅನಿಸಿಕೆ.
ಕೃಷ್ಣಮಣಿ


