ಭಾರತದಲ್ಲಿ AC ಸ್ಲೀಪರ್ ಬಸ್‌ಗಳು(AC sleeper buses) ಮಧ್ಯಮ ವರ್ಗದ ಜನರಿಗೆ ಆರಾಮದಾಯಕ ಹಾಗೂ ಸಮಯ ಉಳಿಸುವ ಪ್ರಯಾಣದ ಆಯ್ಕೆಯಾಗಿ ಬೆಳೆದಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ 2024–2025ರಲ್ಲಿ ಇಂತಹ ಬಸ್‌ಗಳಲ್ಲಿ ಸಂಭವಿಸಿದ ಬೆಂಕಿ ಅನಾಹುತಗಳು, ಈ ಆರಾಮದ ಪ್ರಯಾಣವು ಕೆಲವೊಮ್ಮೆ ಮರಣಶಯ್ಯೆಯಾಗಿ ಮಾರ್ಪಡುತ್ತಿರುವ ಕಠಿಣ ಸತ್ಯವನ್ನು ಬಯಲಿಗೆಳೆದಿವೆ. ಕೇವಲ 2025ರಲ್ಲಿ 45ಕ್ಕೂ ಹೆಚ್ಚು ಘಟನೆಗಳಲ್ಲಿ 64ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇದು ಅಪರೂಪದ ಅಪಘಾತಗಳಲ್ಲ, ಸಿಸ್ಟಮ್ಯಾಟಿಕ್ ನಿರ್ಲಕ್ಷ್ಯ, ತಾಂತ್ರಿಕ ವೈಫಲ್ಯ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಗಳ ಫಲಿತಾಂಶವಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ನಡೆದ ಭೀಕರ ದುರಂತಗಳು — ಉದಾಹರಣೆಗೆ ಡಿಸೆಂಬರ್ 25, 2025ರ ಕರ್ನಾಟಕದ ಚಿತ್ರದುರ್ಗದಲ್ಲಿ ನಡೆದ ಬಸ್-ಟ್ರಕ್ ಡಿಕ್ಕಿಯಲ್ಲಿ 17 ಸಾವುಗಳು, ಅಕ್ಟೋಬರ್ 24, 2025ರ ಹೈದರಾಬಾದ್-ಬೆಂಗಳೂರು ಮಾರ್ಗದಲ್ಲಿ ದುರಂತದಲ್ಲಿ ಸಂಭವಿಸಿದ 20 ಸಾವುಗಳು, ಅಕ್ಟೋಬರ್ 14, 2025ರ ಜೈಸಲ್ಮೇರ್-ಜೋಧ್‌ಪುರ್ ಬಸ್ ದುರಂತದಲ್ಲಿ ಸಂಭವಿಸಿದ 20 ಸಾವುಗಳ. ಈ ದುರಂತಗಳು ನಮ್ಮ ಸಾರಿಗೆ ವ್ಯವಸ್ಥೆಯಲ್ಲಿನ ಆಳವಾದ ನೀತಿ ವೈಫಲ್ಯಗಳನ್ನು ಬೆಳಕಿಗೆ ತರುತ್ತಿವೆ, ಅಲ್ಲಿ ಲಾಭಕ್ಕಾಗಿ ಸುರಕ್ಷತೆಯನ್ನು ಬಲಿಕೊಡಲಾಗುತ್ತಿದೆ.

ಬೆಂಕಿ ತ್ವರಿತವಾಗಿ ಹೇಗೆ ಹೊಟ್ಟಿಕೊಳ್ಳುತ್ತದೆ?
AC ಸ್ಲೀಪರ್ ಬಸ್‌ಗಳಲ್ಲಿ ಬೆಂಕಿ ಹೊತ್ತಿಕೊಂಡಾಗ, ಅದು ನಿಮಿಷಗಳೊಳಗೆ ನಿಯಂತ್ರಣ ತಪ್ಪುತ್ತದೆ. ಕಾರಣಗಳು ಸ್ಪಷ್ಟ: ಫೋಮ್ ಮ್ಯಾಟ್ರೆಸ್‌ಗಳು, ಕರ್ಟನ್‌ಗಳು ಮತ್ತು ಪ್ಲೈವುಡ್ ಪ್ಯಾನಲ್‌ಗಳಂತಹ ಅತ್ಯಂತ ಸುಲಭವಾಗಿ ಸುಡುವ ವಸ್ತುಗಳು ಬಳಸಲಾಗುತ್ತದೆ. ಓವರ್‌ಲೋಡ್ ವೈರಿಂಗ್, AC ಕಂಪ್ರೆಸರ್ ಓವರ್‌ಹೀಟಿಂಗ್ ಅಥವಾ ಶಾರ್ಟ್ ಸರ್ಕ್ಯೂಟ್‌ಗಳು ಬೆಂಕಿಯನ್ನು ಪ್ರಚೋದಿಸುತ್ತವೆ. ಅಪಘಾತದಲ್ಲಿ ಡೀಸೆಲ್ ಟ್ಯಾಂಕ್ ಲೀಕ್ ಆದರೆ, ಬಸ್ ಒಳಭಾಗ ಚಿಮ್ನಿಯಂತೆ ವರ್ತಿಸಿ ಹೊಗೆ ಮತ್ತು ಬೆಂಕಿಯನ್ನು ವೇಗವಾಗಿ ಹರಡುತ್ತದೆ. ಇತ್ತೀಚಿನ ಘಟನೆಗಳಲ್ಲಿ, ಡಿಕ್ಕಿಯ ನಂತರ ಬೆಂಕಿ ಹೊತ್ತಿಕೊಂಡು ನಿಯಂತ್ರಣ ತಪ್ಪಿದ್ದು ಸಾಮಾನ್ಯವಾಗಿದೆ, ಇದು ತಾಂತ್ರಿಕ ವಿನ್ಯಾಸದಲ್ಲಿನ ಮೂಲಭೂತ ದೋಷಗಳನ್ನು ಸೂಚಿಸುತ್ತದೆ.

ಈ ಹಂತದಲ್ಲಿ ಪ್ರಯಾಣಿಕರು ಪಾರಾಗಲು ಸಾಧ್ಯವಾಗದಿರುವುದು ಇನ್ನೊಂದು ಭೀಕರ ಸಮಸ್ಯೆ. ಸ್ಲೀಪರ್ ಬಸ್‌ಗಳ ವಿನ್ಯಾಸದ ವೈಫಲ್ಯಗಳು, ಕಿರಿದಾದ ಐಸಲ್‌ಗಳು, ಬರ್ಥ್‌ಗಳು ಮತ್ತು ಕಡಿಮೆ ಹೆಡ್‌ರೂಮ್ — ತುರ್ತು ಪರಿಸ್ಥಿತಿಯಲ್ಲಿ ಚಲನೆಗೆ ದೊಡ್ಡ ಅಡ್ಡಿಯಾಗುತ್ತವೆ. ಎಮರ್ಜೆನ್ಸಿ ಎಕ್ಸಿಟ್‌ಗಳ ನಿರ್ಲಕ್ಷ್ಯವೂ ಮಾರಕ: ಹಲವು ಬಸ್‌ಗಳಲ್ಲಿ ಎಕ್ಸಿಟ್‌ಗಳನ್ನು ಬ್ಲಾಕ್ ಮಾಡಲಾಗಿದೆ, ಹ್ಯಾಮರ್‌ಗಳು ಕಳವು ಆಗಿರುತ್ತವೆ ಅಥವಾ ಅಳವಡಿಸಿಲ್ಲ ಮತ್ತು ರೂಫ್ ಹ್ಯಾಚ್‌ಗಳು ಸೀಲ್ ಮಾಡಿರುವುದು ಸಾಮಾನ್ಯ. ಬಹುಮುಖ್ಯವಾಗಿ ಈ ಸಂದರ್ಭದಲ್ಲಿ ಹೊಗೆಯು ಸೈಲೆಂಟ್ ಕಿಲ್ಲರ್ ಆಗಿ ಕಾರ್ಯನಿರ್ವಹಿಸುತ್ತದೆ.

ಬಹುತೇಕ ಸಾವುಗಳು ಕಾರ್ಬನ್ ಮಾನಾಕ್ಸೈಡ್ ಉಸಿರಾಟದಿಂದ (ಆಸ್ಫಿಕ್ಸಿಯೇಷನ್) ಸಂಭವಿಸುತ್ತವೆ, ಜನರು ಬೆಂಕಿಗೆ ಆಹುತಿಯಾಗುವ ಮುನ್ನವೇ ಪ್ರಾಣ ಕಳೆದುಕೊಳ್ಳುತ್ತಾರೆ. ಕೆಲವರು ಸಂಪೂರ್ಣವಾಗಿ ಸುಟ್ಟುಹಾಕಲ್ಪಡುತ್ತಾರೆ (ಚಾರ್ಡ್ ಟು ಡೆತ್), ಮಲಗಿದ್ದ ಪ್ರಯಾಣಿಕರು ಎದ್ದು ಹೊರಬರಲು ಸಾಧ್ಯವಾಗದೆ; ಹೊಗೆ ಉಸಿರುಗಟ್ಟಿಸಿ ಸಾವು ಸಂಭವಿಸುತ್ತದೆ, ಇದು ಬೆಂಕಿಗಿಂತ ಹೆಚ್ಚು ಸಾವುಗಳಿಗೆ ಕಾರಣ; ಬರ್ಥ್‌ಗಳಲ್ಲಿ ಟ್ರ್ಯಾಪ್ ಆಗಿ ಅಥವಾ ಜಾಮ್ ಆದ ಕಿಟಕಿಗಳು ಮತ್ತು ಲಾಕ್ ಆದ ಡೋರ್‌ಗಳಿಂದ ಸಾವು; ಮತ್ತು ಡಿಕ್ಕಿ ಸಂಯೋಜಿತ ಬೆಂಕಿಯಲ್ಲಿ ಮೊದಲು ಗಾಯಗೊಂಡು ಬದುಕಲು ಅವಕಾಶವೇ ಇಲ್ಲದಂತೆ ಸಾವಿಗೀಡಾಗುತ್ತಾರೆ. ಈ ದುರಂತಗಳು ಕೇವಲ ಅಪಘಾತಗಳಲ್ಲದೆ, ಮಾನವ ನಿರ್ಮಿತ ವೈಫಲ್ಯಗಳಿಂದಲೇ ಘಟಿಸುತ್ತದೆ.

ಭಾರತ ಸರ್ಕಾರದ AIS-052 ಮತ್ತು AIS-119 (ಸ್ಲೀಪರ್ ಕೋಚ್ ಸೇಫ್ಟಿ) ನಿಯಮಗಳು ಕಠಿಣವಾಗಿವೆ: ಕನಿಷ್ಠ 4–5 ಎಮರ್ಜೆನ್ಸಿ ಎಕ್ಸಿಟ್‌ಗಳು, 2 ರೂಫ್ ಹ್ಯಾಚ್‌ಗಳು, ಪ್ರತಿ ಬರ್ಥ್ ಬಳಿ ಗ್ಲಾಸ್ ಬ್ರೇಕಿಂಗ್ ಹ್ಯಾಮರ್, ಫೈರ್ ಎಕ್ಸ್‌ಟಿಂಗ್ವಿಶರ್, ಫೈರ್ ಅಲಾರ್ಮ್ ಮತ್ತು ಫೈರ್-ರಿಟಾರ್ಡೆಂಟ್ ವಸ್ತುಗಳು ಕಡ್ಡಾಯ. ಆದರೆ ವಾಸ್ತವದಲ್ಲಿ, ಅನೇಕ ಖಾಸಗಿ ಬಸ್‌ಗಳಲ್ಲಿ ಇವು ಕಾಗದದಲ್ಲೇ ಉಳಿದಿವೆ. ನೀತಿ ವೈಫಲ್ಯಗಳು ಇಲ್ಲಿ ಸ್ಪಷ್ಟ: ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಭವನೀಯ ಭ್ರಷ್ಟಾಚಾರದಿಂದ ತಪಾಸಣೆಗಳು ಅಪೂರ್ಣವಾಗಿವೆ, ಆಪರೇಟರ್‌ಗಳು ಲಾಭಕ್ಕಾಗಿ ನಿಯಮಗಳನ್ನು ಉಲ್ಲಂಘಿಸುತ್ತಾರೆ.
ವಿಶೇಷವಾಗಿ 2025ರ ಘಟನೆಗಳು, ಸರ್ಕಾರದ ಮಟ್ಟದಲ್ಲಿ ಕಠಿಣ ಜಾರಿ ಮತ್ತು ದಂಡ ವಿಧಾನಗಳ ಕೊರತೆಯು ಪುನರಾವರ್ತಿತ ದುರಂತಗಳಿಗೆ ಕಾರಣವಾಗಿದೆ. ನವೆಂಬರ್ 2023ರ ಜೈಪುರ್-ಡೆಲ್ಲಿ ಘಟನೆಯಿಂದಲೂ ಯಾವುದೇ ಸುಧಾರಣೆ ಕಂಡಿಲ್ಲ, ಇದು ನೀತಿ ನಿರ್ಮಾಣದಲ್ಲಿನ ದೂರದೃಷ್ಟಿಯ ಕೊರತೆಯನ್ನು ಬಯಲುಮಾಡುತ್ತದೆ.

ವ್ಯವಸ್ಥೆ ಹೀಗಿರುವಾಗ; ಇದು ಸರಿಯಾಗಲು ಪ್ರಯಾಣಿಕರ ಜವಾಬ್ದಾರಿಯನ್ನು ಮುಂದಿಟ್ಟು ನಾವು ಪರಿಹಾರದ ಸೂತ್ರ ಕಂಡುಕೊಳ್ಳಬೇಕಾಗುತ್ತದೆ.
ಬಸ್ ಆಯ್ಕೆಮಾಡುವಾಗ OEM ಫ್ಯಾಕ್ಟರಿ-ಬಿಲ್ಟ್ ಬಸ್‌ಗಳಾದ ವೋಲ್ವೋ ಅಥವಾ ಭಾರತ್‌ಬೆಂಜ್ ಗೆ ಆದ್ಯತೆ ನೀಡಿ, ( ಹಲವು ಬಾರಿ ಇಂಜಿನ್, ಪ್ಲಾಟ್ಫಾರ್ಮ್ ಕಂಪನಿಯದ್ದಾಗಿರುತ್ತದೆ. ಕಡಿಮೆ ಬೆಲೆಗೆ ಬಾಡಿ ಅವೈಜ್ಞಾನಿಕವಾಗಿ ಸ್ಥಳೀಯವಾಗಿ ಮಾರ್ಪಡಿಸಲಾಗಿರುತ್ತದೆ ) ಸ್ಥಳೀಯವಾಗಿ ಮಾರ್ಪಡಿಸಿದ ರೆಟ್ರೋಫಿಟ್ ಬಸ್‌ಗಳನ್ನು ತಪ್ಪಿಸಿ. ಬೋರ್ಡಿಂಗ್ ಸಮಯದಲ್ಲಿ ಎಮರ್ಜೆನ್ಸಿ ಎಕ್ಸಿಟ್‌ಗಳು, ಹ್ಯಾಮರ್ ಮತ್ತು ಫೈರ್ ಎಕ್ಸ್‌ಟಿಂಗ್ವಿಶರ್‌ಗಳನ್ನು ಪರಿಶೀಲಿಸಿ; ಇಲ್ಲದಿದ್ದರೆ ಬಸ್ ಬದಲಾಯಿಸುವ ಧೈರ್ಯ ಇರಲಿ. ಎಮರ್ಜೆನ್ಸಿಯಲ್ಲಿ ಪ್ಯಾನಿಕ್ ಆಗಬೇಡಿ: ಹತ್ತಿರದ ಎಕ್ಸಿಟ್ ಬಳಸಿ, ಹೊಗೆ ಇದ್ದರೆ ನೆಲದ ಬಳಿ ತಗ್ಗಿ ಚಲಿಸಿ, ಮಕ್ಕಳು ಮತ್ತು ಹಿರಿಯರಿಗೆ ಮೊದಲು ಸಹಾಯ ಮಾಡಿ, ಹ್ಯಾಮರ್‌ನಿಂದ ಗಾಜು ಒಡೆದು ಹೊರಬನ್ನಿ.

ಸ್ಪಷ್ಟ ಸಲಹೆಗಳು: ಸರ್ಕಾರಕ್ಕೆ ಕಠಿಣ ಆಡಿಟ್ ಮತ್ತು ರಿಯಲ್ ಟೈಮ್ ಮಾನಿಟರಿಂಗ್ ಸಿಸ್ಟಮ್‌ಗಳನ್ನು ಜಾರಿಗೊಳಿಸಿ, ಫೈರ್-ರೆಸಿಸ್ಟೆಂಟ್ ಮೆಟೀರಿಯಲ್‌ಗಳನ್ನು ಕಡ್ಡಾಯಗೊಳಿಸಿ ಮತ್ತು ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ. ಆಪರೇಟರ್‌ಗಳಿಗೆ ಸುರಕ್ಷತಾ ತರಬೇತಿ ಮತ್ತು ನಿಯಮಿತ ಮೇಂಟನೆನ್ಸ್ ಅನ್ನು ಆದ್ಯತೆ ಮಾಡಿ. ಪ್ರಯಾಣಿಕರಿಗೆ ಜಾಗೃತಿ ಅಭಿಯಾನಗಳ ಮೂಲಕ ಸ್ವರಕ್ಷಣೆಯನ್ನು ಕಲಿಸಿರಿ!

ಅಂತಿಮವಾಗ, ಒಂದು AC ಸ್ಲೀಪರ್ ಟಿಕೆಟ್‌ಗೆ ಸಾವಿರಾರು ರೂಪಾಯಿ ಕೊಡುತ್ತೇವೆ, ಆದರೆ ಸುರಕ್ಷತೆಗಾಗಿ ಪ್ರಶ್ನೆ ಕೇಳಲು ಹಿಂಜರಿಯುತ್ತೇವೆ. ಆಪರೇಟರ್‌ಗಳು ಲಾಭಕ್ಕಾಗಿ ನಿಯಮ ಉಲ್ಲಂಘಿಸುತ್ತಿದ್ದಾರೆ, ಅಧಿಕಾರಿಗಳು ತಪಾಸಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಮತ್ತು ಪ್ರಯಾಣಿಕರು “ಏನಾದರೂ ಆಗಲ್ಲ” ಎಂಬ ಭ್ರಮೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಮೂರೂ ಸೇರಿ ಪ್ರತಿ ದುರಂತಕ್ಕೂ ಕಾರಣವಾಗುತ್ತಿವೆ. ಇದನ್ನು ಬದಲಾಯಿಸದಿದ್ದರೆ, ಮತ್ತಷ್ಟು ಜೀವಗಳು ಬಲಿಯಾಗುವುದು ನಿಶ್ಚಿತ. ಸುರಕ್ಷತೆಯು ಆಯ್ಕೆಯಲ್ಲ, ಅಗತ್ಯವಾಗಿರಲಿ.
ವಿಶೇಷ ವರದಿ- ರಾ ಚಿಂತನ್












