ಕರೋನಾ ಎರಡನೇ ಅಲೆ, ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಮೊದಲಾದ ಆರೋಗ್ಯ ಕ್ಷೇತ್ರದ ಬಿಕ್ಕಟ್ಟುಗಳು ರಾಜ್ಯದ ಸಮಾಧಾನ ಕೆಡಿಸಿದ್ದರೂ, ಬಿಜೆಪಿ ನಾಯಕರು ಮಾತ್ರ ತಮ್ಮ ಅಧಿಕಾರದ ಲಾಲಸೆಯ ಹಿಂದೆ ಬಿದ್ದಿದ್ದಾರೆ. ನಾಯಕತ್ವ ಬದಲಾವಣೆ ವಿಚಾರ ಇನ್ನೂ ತೆರೆಮರೆಯಲ್ಲಿ ನಡೆಯುತ್ತಲೇ ಬಂದಿದೆ.
ಇದುವರೆಗೂ ಮುಖ್ಯಮಂತ್ರಿ ರೇಸ್‌ನಲ್ಲಿ ಅಷ್ಟಾಗಿ ಕೇಳಿ ಬರದಿದ್ದ ಹೆಸರು ಈಗ ಪ್ರಬಲವಾಗಿ ಕೇಳಿಬರುತ್ತಿದೆ. ರಾಜ್ಯ ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪರನ್ನು ಇಳಿಸಿ ಅಲ್ಲಿಗೆ ಬಿ ಎಲ್ ಸಂತೋಷ್ ಅವರನ್ನು ಕೂರಿಸುವುದು ಸಂಘದ ಅಜೆಂಡಾ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆಯೇ, ಮುಖ್ಯಮಂತ್ರಿ ಸ್ಥಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯ ಹೆಸರೂ ಕೇಳಿ ಬಂದಿತ್ತು. ಇವರಿಬ್ಬರೂ ಬ್ರಾಹ್ಮಣ ಸಮುದಾಯದ ನಾಯಕರುಗಳಾದ್ದರಿಂದ, ಸಂಘ ಪರಿವಾರ ಬ್ರಾಹ್ಮಣರಿಗೆ ನಾಯಕತ್ವ ನೀಡಲು ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿದ್ದವು.
ಆದರೆ, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬೇರೆ ಸಮುದಾಯದ ನಾಯಕರನ್ನು ಆ ಸ್ಥಾನದಲ್ಲಿ ಕೂರಿಸುವುದರಿಂದ ಬಿಜೆಪಿಯ ಮುಖ್ಯ ಮತಬ್ಯಾಂಕ್ ಆಗಿರುವ ಲಿಂಗಾಯತರ ಮತವನ್ನು ಕಳೆದುಕೊಳ್ಳಬೇಕಾಗುತ್ತದೆಯೆಂಬ ಆತಂಕವೂ ಆರ್‌ಎಸ್‌ಎಸ್ ವಲಯದಲ್ಲಿದೆ. ಹಾಗಾಗಿ, ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನೊಬ್ಬ ಲಿಂಗಾಯತ ನಾಯಕರಾದ ಲಕ್ಷ್ಮಣ ಸವದಿ ಅವರನ್ನು ಆಯ್ಕೆ ಮಾಡಲಾಗುತ್ತದೆಯೆಂಬ ಊಹಾಪೋಹಗಳೂ ಕೇಳಿ ಬಂದಿದ್ದವು. ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದ ಹಿರಿಯ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಗಾದಿಯಲ್ಲಿ ಕಣ್ಣು ಇದ್ದರೂ ಬಿಜೆಪಿ ಹೈಕಮಾಂಡನ್ನು ಒಪ್ಪಿಸುವಷ್ಟು ಛಾತಿ ಈ ನಾಯಕರಲ್ಲಿಲ್ಲ.
ಅದೇನೇ ಇದ್ದರೂ, ಮುಖ್ಯಮಂತ್ರಿ ರೇಸ್‌ನಲ್ಲಿ ಈವರೆಗೂ ಪ್ರಬಲವಾಗಿ ಕೇಳಿ ಬರದಿದ್ದ ಅರವಿಂದ್ ಬೆಲ್ಲದ ಅವರ ಹೆಸರು ಈಗ ಕೇಳಿ ಬರತೊಡಗಿದೆ. ಹೇಳಿ ಕೇಳಿ ಅರವಿಂದ್ ಬೆಲ್ಲದ ಲಿಂಗಾಯತ ಸಮುದಾಯದವರು. ಯಡಿಯೂರಪ್ಪರನ್ನು ಕೆಳಗಿಳಿಸಿದರೆ ಉಂಟಾಗುವ ಆಕ್ರೋಶವನ್ನು ಬೆಲ್ಲದ ಅವರ ಮೂಲಕ ನಿಭಾಯಿಸಬಹುದೆಂಬ ಆಲೋಚನೆಯೂ ಇದೆ ಎನ್ನಲಾಗಿದೆ.
ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಜೊತೆಗೆ ಸೋಮವಾರ ಸಂಜೆ ದೆಹಲಿಗೆ ಹೋಗಿರುವ ಅರವಿಂದ ಬೆಲ್ಲದ ಕರ್ನಾಟಕ ಭವನದಲ್ಲಿ ತಂಗದೆ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದಾರೆ. ಬಿಜೆಪಿಯ ಉನ್ನತ ಮೂಲಗಳು ತಿಳಿಸಿರುವಂತೆ ಈಗಾಗಲೇ ಬೆಲ್ಲದ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ.
ಅರವಿಂದ ಬೆಲ್ಲದ್ ಅವರ ತಂದೆ ಚಂದ್ರಕಾಂತ ಬೆಲ್ಲದ್ 5 ಬಾರಿ ಶಾಸಕರಾಗಿದ್ದವರು. ಉತ್ತರ ಕರ್ನಾಟಕದಾದ್ಯಂತ ವೀರಶೈವ ಮಹಾಸಭಾದ ವೇದಿಕೆಯಡಿ ಲಿಂಗಾಯತರನ್ನು ಸಂಘಟಿಸಿದವರು. ಇದು ಅರವಿಂದ ಬೆಲ್ಲದ್ ಅವರ ರಾಜಕೀಯ ಭವಿಷ್ಯಕ್ಕೂ ಸಾಕಷ್ಟು ಸಹಾಯ ಮಾಡಬಲ್ಲದು ಎಂದು ಅಂದಾಜಿಸಲಾಗಿದೆ. ಮೀಸಲಾತಿ ವಿಚಾರದಲ್ಲಿ ಒಟ್ಟಾಗಿರುವ ಲಿಂಗಾಯತ ಸಮುದಾಯ ಮುಖ್ಯಮಂತ್ರಿ ಹುದ್ದೆಯನ್ನು ಅಷ್ಟು ಸುಲಭದಲ್ಲಿ ಬೇರೆ ಸಮುದಾಯಕ್ಕೆ ಬಿಟ್ಟು ಕೊಡದೆ ಇರುವುದರಿಂದ ಅರವಿಂದ್ ಬೆಲ್ಲದ್ ಮೊದಲಾದ ಲಿಂಗಾಯತ ನಾಯಕರಲ್ಲಿ ಹುಮ್ಮಸ್ಸು ನೀಡಿದೆ.
ಈ ನಡುವೆ ಶನಿವಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ಶಾಸಕರಾದ ರಮೇಶ್ ಜಾರಕಿಹೊಳಿ, ಸಚಿವರಾದ ಭೈರತಿ ಬಸವರಾಜ್ ಮತ್ತು ಸುಧಾಕರ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮೊದಲಿಗೆ ತುಮಕೂರಿಗೆ ಭೇಟಿ ನೀಡಿದ್ದ ಸುಧಾಕರ್ ನಂತರ ಚಿತ್ರದುರ್ಗಕ್ಕೆ ತೆರಳಿದ್ದು, ಅವರ ಜೊತೆ ಭೈರತಿ ಬಸವರಾಜ್ ಜೊತೆಯಾಗಿದ್ದಾರೆ. ಇಬ್ಬರು ಸೇರಿ ಶಿಗ್ಗಾವ್ ನಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಬಳಿಕ ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಅವರನ್ನು ಭೇಟಿಯಾಗಿದ್ದಾರೆ. ಅಂದು ರಾತ್ರಿಯ ಭೋಜನ ನಾಲ್ವರು ಒಟ್ಟಿಗೆ ಮಾಡಿದ್ದಾರೆ. ಅದಾದ ಮರುದಿನ ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿರುವುದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ನಾಯಕತ್ವ ವಿಚಾರದಲ್ಲಿ ಬಿಜೆಪಿ ಹೈ ಕಮಾಂಡ್ ಜೊತೆ ಚರ್ಚಿಸಲು ತೆರಳಿದ್ದ ವಿಜಯೇಂದ್ರ ಮತ್ತು ಬಸವರಾಜ ಬೊಮ್ಮಾಯಿ ಯಡಿಯೂರಪ್ಪರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸುವ ಕುರಿತು ಚರ್ಚಿಸಿಯೂ ಬಂದಿದ್ದರು. ಈ ವೇಳೆ ವಿಜಯೇಂದ್ರರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೇಳಿರುವುದಾಗಿಯೂ ವದಂತಿಗಳು ಕೇಳಿ ಬಂದಿತ್ತು. ಆದರೆ ಯಾವುದೂ ಧೃಡೀಕರಣಗೊಂಡಿಲ್ಲ.
ಈ ನಡುವೆ ಶಾಸಕರ ಬೇಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಶಾಸಕರ ಸಭೆ ಕರೆಯಲು ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ. ಬಿಜೆಪಿ ಶಾಸಕರ ಸಭೆ ನಡೆಸುವಂತೆ ಸಿಎಂ ಯಡಿಯೂರಪ್ಪಗೆ ಪಕ್ಷದ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ಮಾಡಿರುವ ಕುರಿತು ಚರ್ಚೆಯಾಗಲು ಎಂದು ಬಿ ಎಸ್ ವೈ ವಿರೋಧೀ ಬಣದ ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ.
ಬಿಎಸ್‌ವೈ ಮುಖ್ಯಮಂತ್ರಿ ಗಾದಿಗೆ ಕುತ್ತು ತರುತ್ತಾ ಜಿಂದಾಲ್ ಭೂಮಿ ಪರಭಾರೆ?
ಹಿಂದಿನ ಸರ್ಕಾರದ ವೇಳೆ ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ಮಾಡುವ ಕುರಿತು ಸ್ಪಷ್ಟ ವಿರೋಧ ವ್ಯಕ್ತ ಪಡಿಸಿದ್ದ ಅಂದಿನ ವಿರೋಧ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ. ತಮ್ಮ ಅಧಿಕಾರಾವಧಿಯಲ್ಲಿ ಸ್ವತಃ ತಾವೇ ಭೂಮಿ ಪರಭಾರೆ ಮಾಡಿ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಜಿಂದಾಲ್ ಕಂಪೆನಿಗೆ ಪರಭಾರೆ ಮಾಡಿರುವುದು ಬಿಜೆಪಿಯ ಶಾಸಕರಿಗೇ ಇರಿಸು-ಮುರಿಸು ತಂದಿದೆ. ಜಿಂದಾಲ್ ಭೂಮಿ ಹಂಚಿಕೆ ವಿಚಾರದಲ್ಲಿ ತಮ್ಮ ಸರ್ಕಾರದ ಕ್ರಮಕ್ಕೂ ತಮ್ಮ ಪಕ್ಷದ ನಿಲುವಿಗೂ ಸಂಬಂಧವಿಲ್ಲವೆಂದೇ ಬಿಜೆಪಿಯ ಹಲವು ಶಾಸಕರು ನಂಬಿದ್ದಾರೆ.
ಈ ಸಂಬಂಧ ಚರ್ಚೆ ನಡೆಸಲು ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಶಾಸಕರು ಒತ್ತಡ ಹೇರಲು ಆರಂಭಿಸಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂಬ ವಿಷಯದಲ್ಲಿ ಕೂಡ ಶಾಸಕರು ಒಗ್ಗೂಡುತ್ತಿರುವುದಾಗಿಯೂ ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ಲಾಕ್‌ಡೌನ್ ಮುಗಿದ ಬಳಿಕ, ಅಂದರೆ ಜೂನ್ ತಿಂಗಳಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಕೋವಿಡ್ ನಿರ್ವಹಣೆ, ವಿಜಯೇಂದ್ರ ಹಸ್ತಕ್ಷೇಪ, ಮುಖ್ಯವಾಗಿ ಜಿಂದಾಲ್ ಕಂಪೆನಿಗೆ ಭೂಮಿ ಪರಭಾರೆ ವಿಷಯಗಳು ಚರ್ಚೆಯಾಗಲಿದ್ದು, ಈ ಮೂಲಕ ನಿಮ್ಮ ಎಲ್ಲ ನಿರ್ಧಾರಗಳು ಸರಿಯಿಲ್ಲ, ಅದಕ್ಕೆ ಪಕ್ಷದ ಬೆಂಬಲ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಯಡಿಯೂರಪ್ಪ ಅವರಿಗೆ ನೀಡಲು ವರಿಷ್ಠರು ಬಯಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.