ಖಾಸಗಿ ಆಸ್ಪತ್ರೆಯ ಲಸಿಕೆ ಅಭಿಯಾನಕ್ಕೆ ತೇಜಸ್ವಿ ಸೂರ್ಯ ಸಹಯೋಗ – ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡ್ರಾ ಸಂಸದರು!

ಯುವ ಸಂಸದ ತೇಜಸ್ವಿ ಸೂರ್ಯ ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದು, ಬೆಡ್‌ ಬ್ಲಾಕಿಂಗ್ ಹಗರಣದ ನಂತರ ಇದೀಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜನ ಉಚಿತ ಕರೋನಾ ಲಸಿಕೆಗೆ ಬೇಡಿಕೆ ಇಡುತ್ತಿದ್ದರೆ, ಸಂಸದ ತೇಜಸ್ವಿ ಸೂರ್ಯ “ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳಿ” ಎಂದು ಖಾಸಗಿ ಆಸ್ಪತ್ರೆಯ ಪರ ಬಹಿರಂಗ ಪ್ರಚಾರ ಮಾಡುವ ಮೂಲಕ ಮತ್ತೆ ಟೀಕೆಗೆ ಗುರಿಯಾಗಿದ್ದಾರೆ. ಸಂಸದರು ಉಚಿತವಾಗಿ ಲಸಿಕೆ ಕೊಡಿಸುವ ಬದಲು ಲಸಿಕೆ ಮಾರಾಟಕ್ಕೆ ಮಾರುಕಟ್ಟೆ ಒದಗಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ದೇಶದಲ್ಲಿ ಲಸಿಕೆ ಕೊರತೆ ಎದುರಾಗಿದ್ದು, ಮೇ ತಿಂಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನೂ ಕೂಡ ಲಸಿಕೆ ಲಭ್ಯವಾಗಿಲ್ಲ, ಇದರಿಂದ ಜನಸಾಮಾನ್ಯರು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿರುವ ಬೆನ್ನಲೆ, ಸಂಸದ ತೇಜಸ್ವಿ ಸೂರ್ಯ ಅವರು ವಾಸವಿ ಆಸ್ಪತ್ರೆಯ ಸಹಯೋಗದೊಂದಿಗೆ , ಬೆಂಗಳೂರಿನ ಜಯನಗರದ 5 ನೇ ಬ್ಲಾಕ್‌ನ ಶಾಲಿನಿ ಮೈದಾನದಲ್ಲಿ ಜುಲೈವರೆಗೆ ಲಸಿಕೆ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆಂಬ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈ ಅಭಿಯಾನದ ನೋಂದಣಿ ಆರಂಭವಾಗಿದ್ದು, 18 ವರ್ಷ ಮೇಲ್ಪಟ್ಟವರಿಗೆ 15 ಸಾವಿರ ಲಸಿಕೆ ಲಭ್ಯವಿದೆ ಎಂದು ಆಸ್ಪತ್ರೆ ಹೇಳಿದೆ. ‘ತೇಜಸ್ವಿ ಸೂರ್ಯ ಕಚೇರಿಯಿಂದ ಬೆಂಬಲಿತವಾಗಿದೆ’ ಎಂಬ ವಾಸವಿ ಆಸ್ಪತ್ರೆಯ ಲಸಿಕೆ ಅಭಿಯಾನದ ಪೋಸ್ಟರ್ ಜಯನಗರದ ಬಿಬಿಎಂಪಿ ಕೇಂದ್ರದ ಪಕ್ಕದಲ್ಲಿ ಕಾಣಿಸಿಕೊಂಡಿವೆ. 900 ರೂಗೆ ಲಸಿಕೆ ನೀಡಲಾಗುತ್ತದೆ ಎಂದು ಬ್ಯಾನರ್‌ನಲ್ಲಿ ತಿಳಿಸಿದ್ದು, ಈ ಬ್ಯಾನರ್‌ಗಳಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿತ ಎಂಬ ಬರಹ ಮತ್ತು ಅವರ ಫೋಟೋ ಹಾಕಲಾಗಿದೆ.

ಸಂಸದರ ಈ ನಡೆ ಸಂವಿಧಾನ ವಿರೋಧಿ. ಖಾಸಗಿ ಕ್ಷೇತ್ರದಲ್ಲಿ ಈ ರೀತಿ ಲಸಿಕೆ ನೀಡುವುದು ಸಂವಿಧಾನ ಅನುಚ್ಚೇದ 14 ರ ಸ್ಪಷ್ಟ ಉಲ್ಲಂಘನೆಯಾದಂತೆ ಎಂದು ವಕೀಲ ವಿನಯ್‌ ಶ್ರೀನಿವಾಸ್‌ ಹೇಳಿದ್ದಾರೆ. ಜೊತೆ ಸಂಸದರು ಬೆಂಗಳೂರು ದಕ್ಷಿಣ ಕ್ಷೇತ್ರದ ಜನರಿಗೆ ಉಚಿತ ಲಸಿಕೆ ನೀಡಲು ಆದ್ಯತೆ ನೀಡಬೇಕಿತ್ತು. ಅದರ ಬದಲು, ಹೆಚ್ಚಿನ ದರದಲ್ಲಿ ಶ್ರೀಮಂತರಿಗೆ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. ಲಸಿಕೆ ಕೊರತೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಇದುವರೆಗೂ ಸಂಸದರು ಪತ್ರ ಬರೆದಿಲ್ಲ, ಇದು ದುರಂತ ಸಂಗತಿ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುವುದರ ಜೊತೆಗೆ ಜನರ ಜೀವ ಉಳಿಸಲು ಉಚಿತ ಲಸಿಕೆ ನೀಡಬೇಕೆಂದು ಹೈಕೋರ್ಟ್‌ ಕೂಡ ಆದೇಶ ನೀಡಿದೆ. ಆದರೆ ತೇಜಸ್ವಿ ಸೂರ್ಯ ಖಾಸಗಿ ಆಸ್ಪತ್ರೆಯ ಜೊತೆ ಗೂಡಿ ಜನರ ಹತ್ತಿರ ಸುಲಿಗೆ ಮಾಡಲು ಅವಕಾಶ ಕಲ್ಪಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್‌ ಸಾಕಷ್ಟು ಹಂಚಿಕೆಯಾಗಿದ್ದು, ಲಸಿಕೆ ಕೊರತೆಯಿಂದ ಜನ ಆತಂಕದಲ್ಲಿರುವಾಗ ನೀವು ಖಾಸಗಿ ಆಸ್ಪತ್ರೆಯ ಲಸಿಕೆ ಅಭಿಯಾನವನ್ನು ಹೇಗೆ ಬೆಂಬಲಿಸುತ್ತೀರಿ ಎಂದು ಪ್ರಶ್ನಿಸಿದ ನೆಟ್ಟಿಗರು ಮೊದಲಿಗೆ ಲಸಿಕೆ ರಾಜಕರಣವನ್ನು ಬಿಡಿ ಎಂದಿದ್ದಾರೆ.

ಕಾಂಗ್ರೆಸ್ ಯುವ ನಾಯಕ ಶ್ರೀವತ್ಸಾ ಟ್ವಿಟರ್‌ ನಲ್ಲಿ ಪೋಸ್ಟರ್‌ ಹಂಚಿಕೊಂಡು, ತೇಜಸ್ವಿ ಸೂರ್ಯ ನಂತಹ ಬಿಜೆಪಿ ಸಂಸದರು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಡೋಸ್‌ಗೆ ₹ 900 ಶುಲ್ಕ ವಿಧಿಸಬಹುದು ಆದರೆ ಕಾಂಗ್ರೆಸ್ ಸಂಸದರು, ಶಾಸಕರು, ಎಂಎಲ್‌, ಎಡಿಎಸ್ ಮತ್ತು ಪಾರ್ಟಿ ಫಂಡ್‌ಗಳನ್ನು ಬಳಸಿಕೊಂಡು ಲಸಿಕೆ ಖರೀದಿಸಲು 100 ಕೋಟಿ ರೂ ಪೂರೈಸುವುದಾಗಿ ಹೇಳಿದೆ ಆದರೆ ಸರ್ಕಾರ ಇದಕ್ಕೆ ಏಕೆ ಅವಕಾಶ ನೀಡುತ್ತಿಲ್ಲ? ಈ ಪಕ್ಷಪಾತ ಏಕೆ? ಎಂದು ಪ್ರಶ್ನಿಸಿದ್ದಾರೆ.

https://twitter.com/srivatsayb/status/1397121474314444801

ಭೂಷಣ್‌ ಎಂಬುವವರು ಟ್ವಿಟರ್‌ ಮೂಲಕ ತೇಜಸ್ವಿ ಸೂರ್ಯ ನಡೆಯನ್ನು ಟೀಕಿಸಿದ್ದಾರೆ. ಜಯನಗರದ ಶಾಲಿನಿ ಮೈದಾನದಲ್ಲಿ ವಾಸವಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ 900 ರೂಪಾಯಿ ತೆಗೆದುಕೊಳ್ಳುವ ಮೂಲಕ ಲಸಿಕೆ ಹಾಕುತ್ತಾರೆ. ಸಂಪೂರ್ಣ ಕಾರ್ಯಕ್ರಮದ ಕ್ರೆಡಿಟ್ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೆಗೆದುಕೊಳ್ಳುತ್ತಾರೆ. ಬಿಬಿಎಂಪಿಯಲ್ಲೇ ಲಸಿಕೆ ಇಲ್ಲದಿರುವಾಗ ಖಾಸಗಿ ಆಸ್ಪತ್ರೆಯನ್ನು ಸಂಸದರು ಹೇಗೆ ಉತ್ತೇಜಿಸಬಹುದು..? ಈ ಕಾರ್ಯಕ್ಕೆ ಅವರು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆ..? ವಾಸವಿ ಆಸ್ಪತ್ರೆ ಲಸಿಕೆ ಖರೀದಿ ಸರಕುಪಟ್ಟಿ ತೋರಿಸಬೇಕು” ಎಂದು ಒತ್ತಾಯಿಸಿದ್ದಾರೆ.‌

https://twitter.com/bhushannag/status/1396809185086427139

ಈ ರೀತಿಯ ವ್ಯವಹಾರವನ್ನು ನಿಲ್ಲಿಸಿ, ಕಾಂಗ್ರೆಸ್‌ ಲಸಿಕೆ ಪೂರೈಕೆಗೆ 100 ಕೋಟಿ ನೀಡಲು ಸಿದ್ಧ. ಅದನ್ನು ಬಳಸಿ ಭಾರತೀಯರನ್ನು ಉಳಿಸಿ ಎಂದು ಕ್ಷೇತ್ರದ ಜಿಲ್ಲಾ ಕಾಂಗ್ರೆಸ್‌ ಕಮಿಟಿ( ಬೆಂಗಳೂರು ದಕ್ಷಿಣ ಜಿಲ್ಲೆ) ಟ್ವೀಟ್‌ ಮಾಡಿದೆ. https://twitter.com/INCBangaloreSo1/status/1397110832639533058

ಒಟ್ಟಿನಲ್ಲಿ ಬಿಬಿಎಂಪಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿಯೇ ಲಸಿಕೆ ಇಲ್ಲದಿರುವಾಗ ಖಾಸಗಿ ಆಸ್ಪತ್ರೆಯ ಅಭಿಯಾನಕ್ಕೆ ಸಂಸದರು ಹೇಗೆ ಉತ್ತೇಜಿಸಬಹುದು ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ..? ಕೆಲವೆಡೆ ಸರ್ಕಾರದಿಂದ ಸೂಕ್ತ ವೈದ್ಯಕೀಯ ಸೌಲಭ್ಯ ಲಭ್ಯವಾಗದೆ ಅದೆಷ್ಟೋ ಕರೋನಾ ಸೋಂಕಿತರು ಪ್ರಾಣಬಿಟ್ಟಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಲಸಿಕೆ ಸಮಸ್ಯೆ ಉದ್ಭವವಾಗಿದ್ದು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಗಳು ಜನರ ಜೀವ ಉಳಿಸುವ ಬದಲು ಅಲ್ಪ ಸ್ವಲ್ಪ ಸಹಾಯ ಮಾಡಿ, ಪಕ್ಷದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆಂಬುವುದು ಪ್ರಜ್ಞಾವಂತ ಸಮುದಾಯದ ಆರೋಪವಾಗಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...