ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಅನ್ನು ಹಂಚಿಕೊಳ್ಳುವ ಸಾಮಾಜಿಕ ಮಾಧ್ಯಮ ಲಿಂಕ್‌ಗಳನ್ನು ತೆಗೆದುಹಾಕುವ ತನ್ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಕುರಿತು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಆರ್‌ಎಸ್‌ಎಸ್ ಪ್ರಾಯೋಜಿತ ನಿಯತಕಾಲಿಕೆ ಪಾಂಚಜನ್ಯ ಟೀಕಿಸಿದೆ. ಭಾರತವನ್ನು ವಿರೋಧಿಗಳು ಸುಪ್ರೀಂ ಕೋರ್ಟ್ ಅನ್ನು ಉಪಕರಣದಂತೆ ಬಳಸುತ್ತಿದ್ದಾರೆ ಎಂದು ಅದು ಆರೋಪಿಸಿದೆ.
ಆದಾಯ ತೆರಿಗೆ ಇಲಾಖೆಯು ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ದಾಳಿ ನಡೆಸುವ ಒಂದು ದಿನದ ಮೊದಲು ಪಾಂಚಜನ್ಯದಲ್ಲಿ ಸುಪ್ರೀಂ ಕೋರ್ಟ್ ಅನ್ನು ಟೀಕಿಸಿದ ಈ ಸಂಪಾದಕೀಯವನ್ನು ಪ್ರಕಟಿಸಲಾಗಿದೆ.
ರಾಷ್ಟ್ರದ ಹಿತಾಸಕ್ತಿ ಕಾಪಾಡಲು ಸುಪ್ರೀಂ ಕೋರ್ಟ್ ಅನ್ನು ರಚಿಸಲಾಗಿದೆ ಸಂಪಾದಕೀಯ ಹೇಳಿದೆ. BBC ಸಾಕ್ಷ್ಯಚಿತ್ರವು “ಅಸತ್ಯ ಮತ್ತು ಕಲ್ಪನೆ” ಆಧಾರಿತವಾಗಿದೆ ಮತ್ತು “ಭಾರತವನ್ನು ಅವಮಾನಿಸುವ” ಪ್ರಯತ್ನವಾಗಿದೆ ಎಂದು ಅದು ಆರೋಪಿಸಿದೆ.

ಫೆಬ್ರವರಿ 3 ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ನೋಟಿಸ್ ಅನ್ನು ಉಲ್ಲೇಖಿಸಿದ ಸಂಪಾದಕೀಯವು, “ಸುಪ್ರೀಂ ಕೋರ್ಟ್ ಭಾರತಕ್ಕೆ ಸೇರಿದ್ದು, ಇದು ಭಾರತೀಯರು ಪಾವತಿಸುವ ತೆರಿಗೆಯಿಂದ ನಡೆಸಲ್ಪಡುತ್ತದೆ; ಭಾರತಕ್ಕಾಗಿ ಮಾಡಿದ ಶಾಸನಗಳು ಮತ್ತು ಕಾನೂನುಗಳ ಪ್ರಕಾರ ಕಾರ್ಯನಿರ್ವಹಿಸುವುದು ಅದರ ಕೆಲಸವಾಗಿದೆ. ನಾವು ಸುಪ್ರೀಂ ಕೋರ್ಟ್ ಎಂಬ ಸೌಲಭ್ಯವನ್ನು ರಚಿಸಿದ್ದೇವೆ, ಅದನ್ನು ನಿರ್ವಹಿಸಿದ್ದೇವೆ. ಆದರೆ ಭಾರತವನ್ನು ವಿರೋಧಿಸುವವರು ತಮ್ಮ ದಾರಿಯನ್ನು ಸುಗಮಗೊಳಿಸುವ ಪ್ರಯತ್ನಗಳಲ್ಲಿ ಇದನ್ನು ಒಂದು ಸಾಧನವಾಗಿ ಬಳಸಲಾಗುತ್ತಿದೆ ಎಂದು ಸಂಪಾದಕೀಯವು ಹೇಳಿದೆ.
ಮಾನವ ಹಕ್ಕುಗಳ ಹೆಸರಿನಲ್ಲಿ ಭಯೋತ್ಪಾದಕರ ರಕ್ಷಣೆ ಮತ್ತು ಪರಿಸರದ ಹೆಸರಿನಲ್ಲಿ ಭಾರತದ ಪ್ರಗತಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ಉದಾಹರಣೆಗಳನ್ನು ಉಲ್ಲೇಖಿಸಿದ ಸಂಪಾದಕೀಯವು, “ದೇಶ ವಿರೋಧಿ ಶಕ್ತಿಗಳು ಭಾರತದ ಪ್ರಜಾಪ್ರಭುತ್ವ, ಉದಾರವಾದ ಮತ್ತು ನಾಗರಿಕತೆಯ ಮಾನದಂಡಗಳನ್ನು ತಮ್ಮ ಸೇವೆಗಾಗಿ ಬಳಸುತ್ತಿರುವುದನ್ನು ನೀವು ಕಾಣಬಹುದು. ಅವರ ಅಜೆಂಡಾದ ಮುಂದಿನ ಹಂತವೆಂದರೆ ದೇಶವಿರೋಧಿ ಅಂಶಗಳು ದೇಶದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಹಕ್ಕನ್ನು ಹೊಂದಿರಬೇಕು ಎಂದು ಖಚಿತಪಡಿಸಿಕೊಳ್ಳುವುದು; ಮತಾಂತರದ ಮೂಲಕ ದೇಶವನ್ನು ದುರ್ಬಲಗೊಳಿಸುವ ಹಕ್ಕು ಇರಬೇಕು. ಮತ್ತು ಅಷ್ಟೇ ಅಲ್ಲ. ಈ ಹಕ್ಕುಗಳನ್ನು ಚಲಾಯಿಸಲು, ಅವರು ಭಾರತೀಯ ಕಾನೂನುಗಳ ರಕ್ಷಣೆಯನ್ನು ಪಡೆಯುವುದು ಅವರ ಅಜೆಂಡಾದ ಭಾಗವಾಗಿದೆ ಎಂದು ಸಂಪಾದಕೀಯವು ಹೇಳಿದೆ.