ಇತ್ತೀಚೆಗೆ ನಡೆದ ಉತ್ತರ ಪ್ರದೇಶ, ಉತ್ತರಖಂಡಾ, ಪಂಜಾಬ್, ಮಣಿಪುರ ಹಾಗೂ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ನಂತರ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಯಾಗಿದೆ. ಸೋಲನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಎರಡು ಪ್ರಮುಖ ಉದಾಹರಣೆಗಳಿವೆ. ಒಂದು, ಫಲಿತಾಂಶ ಬಂದ ಮೂರೇ ದಿನಕ್ಕೆ ಆತ್ಮಾವಲೋಕನ ಮಾಡಿಕೊಳ್ಳಲು ಪಕ್ಷದ ನೀತಿ ನಿಲುವುಗಳನ್ನು ನಿರ್ಧರಿಸುವ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆ ನಡೆಸಲಾಯಿತು. ಎರಡು, ಆ ಐದು ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರಿಂದ ರಾಜೀನಾಮೆ ಪಡೆಯಲಾಗಿದೆ.
ಇದಲ್ಲದೆ ತಾನು ಕೂಡ ಸೋಲಿನ ನೈತಿಕ ಹೊಣೆ ಹೊರಬೇಕೆಂದು ಎಐಸಿಸಿಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರೇ ಖುದ್ದಾಗಿ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿದ್ದರು. ಅವರಷ್ಟೇಯಲ್ಲ, ಸಮಸ್ಯೆ ಬಗೆಹರಿಯುತ್ತದೆ ಎನ್ನುವುದಾದರೆ, ಬೇರೆ ಬಹಳ ಒಳ್ಳೆಯ ಪರ್ಯಾಯ ಆಯ್ಕೆಗಳಿವೆ ಎನ್ನುವುದಾದರೆ ತಮ್ಮ ಇಡೀ ಕುಟುಂಬ, ಅಂದರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಎಂತಹುದೇ ತ್ಯಾಗಕ್ಕೆ ಸಿದ್ದ ಇರುವುದಾಗಿ ತಿಳಿಸಿದ್ದಾರೆ. ಈ ಐದು ರಾಜ್ಯಗಳ ಚುನಾವಣೆಯ ಸೋಲಿನಿಂದ ಪಾಠ ಕಲಿತು ಮುಂಬರುವ ಚುನಾವಣೆಗಳಲ್ಲಿ ಯಶಸ್ಸು ಸಾಧಿಸಲು ಚಿಂತನ ಶಿಬರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಒಂದು ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಇದಕ್ಕಿಂತಲೂ ಕ್ರಾಂತಿ ಆಗಲು ಸಾಧ್ಯವಿಲ್ಲ. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ. ಆದರೆ ಇದು ಕಾಂಗ್ರೆಸ್ ಪಕ್ಷದೊಳಗೇ ಇರುವ ಹಿತಶತ್ರುಗಳಿಗೆ ಅಂದರೆ ‘ಜಿ-23 ನಾಯಕರಿಗೆ’ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ 23 ನಾಯಕರು ಇದ್ದೇವೆ ಎಂಬ ಅರ್ಥದಲ್ಲಿ ‘ಜಿ-23’ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಗುಲಾಮ್ ನಭಿ ಆಜಾದ್, ಕಪಿಲ್ ಸಿಬಲ್, ಆನಂದಶರ್ಮಾ, ಶಶಿ ತರೂರ್, ಮನೀಷ್ ತಿವಾರಿ, ಸಂದೀಪ್ ಧೀಕ್ಷಿತ್ ಮಾತ್ರ ಇದ್ದಾರೆ. ಅಂದರೆ ಇದು ಜಿ-23 ಅಲ್ಲ, ಜಿ-6. ಆದರೂ ಈ ನಾಯಕರು ಖ್ಯಾತೆ ತೆಗೆಯುವುದನ್ನು ಬಿಟ್ಟಿಲ್ಲ. ಮಾರ್ಚ್ 10ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಮರುದಿನವೇ ಕಾಂಗ್ರೆಸ್ ಸೋಲನ್ನೇ ಕಾಯುತ್ತಿದ್ದವರಂತೆ ದಿಢೀರನೆ ಸಭೆ ಸೇರಿ ಮಸಲತ್ತು ನಡೆಸಿದ್ದರು. ಈಗ ಕಾಂಗ್ರೆಸ್ ಆತ್ಮಾವಲೋಕನ ಸಭೆಯ ಬಳಿಕ ಮತ್ತೆ ಇವರದೇಯಾದ ಸಭೆ ನಡೆಸಲು ಮುಂದಾಗಿದ್ದಾರೆ.
ಮಾರ್ಚ್ 11ರಂದು ಗುಲಾಮ್ ನಭಿ ಆಜಾದ್ ಮನೆಯಲ್ಲಿ ಸೇರಿದ್ದ ಜಿ-6 ನಾಯಕರು ಇಂದು (ಮಾರ್ಚ್ 16) ದೆಹಲಿಯ ಕಪಿಲ್ ಸಿಬಲ್ ಮನೆಯಲ್ಲಿ ಸಭೆ ನಡೆಸುತ್ತಿದ್ದಾರೆ. ವಿಶೇಷ ಎಂದರೆ ಮೊನ್ನೆ (ಮಾರ್ಚ್ 13ರಂದು) ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಇದೇ ಜಿ-6 ಸದಸ್ಯರ ತಂಡದ ನಾಯಕರಂತಿರುವ ಗುಲಾಮ್ ನಭಿ ಆಜಾದ್ ಅವರು ‘ಸೋನಿಯಾ ಗಾಂಧಿ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರೆಯಲಿ’ ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಪಕ್ಷಕ್ಕೆ ಸಕ್ರೀಯ ಅಧ್ಯಕ್ಷರ ಆಯ್ಕೆಯಾಗಬೇಕೆಂಬ ಧೋರಣೆಯೊಂದಿಗೆ (ಮೇಲುನೋಟಕ್ಕೆ ಇವರು ಹೇಳುವುದು ಹಾಗೆ) ಪರ್ಯಾಯ ಸಭೆ ನಡೆಸುತ್ತಿದ್ದಾರೆ. ಇವರ ದ್ವಂದ್ವ ನಿಲುವಿಗೆ, ಪಕ್ಷ ವಿರೋಧಿ ನಿಲುವಿಗೆ, ಚಿಲ್ಲರೆ ರಾಜಕಾರಣಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದು ಇರಲಾರದು.
ಈ ನಡುವೆ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ಧೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಕೂಡ ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಂಪೂರ್ಣ ನಿಷ್ಕ್ರಿಯವಾಗಿದೆ. ಪಕ್ಷದಲ್ಲಿ ಯಾವುದೇ ನಿರ್ಧಾರಗಳು ಆಗುತ್ತಿಲ್ಲ. ನಾಯಕತ್ವವು ಅಹಂಕಾರವನ್ನು ಮೈಗೂಡಿಸಿಕೊಂಡಿದೆ. ಒಂದರ ಹಿಂದೆ ಒಂದರಂತೆ ಚುನಾವಣೆಯಲ್ಲಿ ಸೋತರೂ ಅವರ ಕಾರ್ಯಶೈಲಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬರೂ ತಮ್ಮ ಕುರ್ಚಿಯ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ನನ್ನ ತಾತ, ತಾಯಿ ಕೂಡ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ಧೀಕ್ಷಿತ್ ಅವರ ಮಗನಾಗಿ ಕಾಂಗ್ರೆಸ್ ಪಕ್ಷ ನಡೆಸುವ ಕಾರ್ಯಕಾರಣಿ ಸಮಿತಿ ಸಭೆ ಹಾಗೂ ಚಿಂತನ್ ಶಿಬಿರಗಳಿಂದ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ. ಹಿಂದೆ ಕಾಂಗ್ರೆಸ್ ಪಕ್ಷದ ಹೆಸರಿಗೆ ಮತಗಳು ಬರುತ್ತಿದ್ದ ಕಾಲವೊಂದಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಇದರ ಹೊಣೆಯನ್ನು ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಪಕ್ಷದಲ್ಲಿ ಚರ್ಚೆಯೂ ಇಲ್ಲ, ಸಂವಾದವೂ ಇಲ್ಲ ಎಂದು ಬಡಬಡಿಸಿದ್ದಾರೆ.
ಇನ್ನೊಂದೆಡೆ ‘ಇಂಡಿಯನ್ ಎಕ್ಸ್‌ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಕಪಿಲ್ ಸಿಬಲ್ ಅವರು ‘ಸಬ್ ಕಾ ಕಾಂಗ್ರೆಸ್ ಆಗಬೇಕು, ಗರ್ ಕಾ ಕಾಂಗ್ರೆಸ್ ಅಲ್ಲ’ ಎಂದು ಮೂದಲಿಸಿದ್ದಾರೆ. ಈ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಅವರು ‘ಕಪಿಲ್ ಸಿಬಲ್ ಕಾಂಗ್ರೆಸ್ ಸಂಸ್ಕೃತಿಯ ವ್ಯಕ್ತಿಯಲ್ಲ. ಅವರು ಕಾಂಗ್ರೆಸ್ ಪ್ರವೇಶಿಸಿದ ವಕೀಲರು. ಕಪಿಲ್ ಸಿಬಲ್ ಅವರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಎಬಿಸಿ ಗೊತ್ತಿಲ್ಲದ ವ್ಯಕ್ತಿಯಿಂದ ಇಂತಹ ಹೇಳಿಕೆಗಳು ಬಂದಿವೆ’ ಎಂದು ಕಿಡಿಕಾರಿದ್ದಾರೆ.
ಜಿ-6 ನಾಯಕರ ನಿಜ ಉದ್ದೇಶ ಏನು? ಮೊದಲೇ ಸೋತು ಹೈರಾಣವಾಗಿರುವ ಪಕ್ಷದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವುದು ಏಕೆ? ತಮ್ಮಂತಹ ಅವಕಾಶವಾದಿಗಳನ್ನು ದೂರ ಇಟ್ಟಿದ್ದಾರೆ ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಅವರ ಮೇಲಿನ ಸಿಟ್ಟಿಗೆ ಹೀಗೆ ಮಾಡುತ್ತಿದ್ದಾರಾ? ಎಂಬ ಅನುಮಾನಗಳು ಕೇಳಿಬರುತ್ತಿವೆ. ಏನೇ ಆದರೂ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಉಣಬಡಿಸಿದ ಮೃಷ್ಠಾನ್ನ ಉಂಡು ಈಗ ಅದೇ ಪಕ್ಷಕ್ಕೆ ದ್ರೋಹ ಬಗೆಯುತ್ತಿರುವುದು ಮಾತ್ರ ವಿಪರ್ಯಾಸ.