• Home
  • About Us
  • ಕರ್ನಾಟಕ
Thursday, October 30, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನವ ಉದಾರವಾದ ಕಾರ್ಪೋರೇಟೀಕರಣದ ಮತ್ತೊಂದು ಕಡತ

ನಾ ದಿವಾಕರ by ನಾ ದಿವಾಕರ
February 3, 2025
in ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ಸರ್ಕಾರಿ ಗೆಜೆಟ್
0
ನವ ಉದಾರವಾದ ಕಾರ್ಪೋರೇಟೀಕರಣದ ಮತ್ತೊಂದು ಕಡತ
Share on WhatsAppShare on FacebookShare on Telegram



ADVERTISEMENT

ಬಜೆಟ್ , ಅಸಮಾನತೆ ತಾರತಮ್ಯವನ್ನು ಕಾಪಾಡುವ ಮತ್ತೊಂದು ಪ್ರಯತ್ನವಾಗಿ ಕಾಣುತ್ತದೆ

ಸಾಮಾನ್ಯವಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಮಂಡಿಸುವ ವಾರ್ಷಿಕ ಬಜೆಟ್ಗಳು ಕಳೆದ ಒಂದು ವರ್ಷದ ಆರ್ಥಿಕ ಏರುಪೇರುಗಳನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ವರ್ಷಕ್ಕೆ ವಿಶಾಲ ಸಮಾಜದ ಸಾಮಾಜಿಕ-ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವ ಒಂದು ಹಣಕಾಸು ವಿನಿಯೋಗದ ಕಡತವನ್ನಾಗಿ ನೋಡಲಾಗುತ್ತದೆ. ಕಳೆದ ಮೂರೂವರೆ ದಶಕಗಳಲ್ಲಿ ಸರ್ಕಾರಗಳು ಅನುಸರಿಸುತ್ತಿರುವ ಈ ಕಸರತ್ತಿನ ದಿಕ್ಕು ದೆಸೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅಲ್ಲಿ ಆಡಳಿತಾರೂಢ ಪಕ್ಷದ ರಾಜಕೀಯ ಹಿತಾಸಕ್ತಿ, ಸಮೀಪಿಸುತ್ತಿರಬಹುದಾದ ಸಂಭಾವ್ಯ ಚುನಾವಣೆಗಳು, ಅಧಿಕಾರ ಪೀಠದ ಸುಸ್ಥಿರತೆ (ಆರ್ಥಿಕ ಸುಸ್ಥಿರತೆ ಅನುಷಂಗಿಕ ಆಯ್ಕೆ ), ಕಾರ್ಪೋರೇಟ್ ಮಾರುಕಟ್ಟೆಯ ಸಂತೃಪ್ತಿ ಹಾಗೂ ಈ ಎಲ್ಲ ವಿದ್ಯಮಾನಗಳ ಫಲಾನುಭವಿಯಾಗಿರುವ ಮೇಲ್ಪದರ ಸಮಾಜದ ಹಿತರಕ್ಷಣೆ, ಈ ಅಂಶಗಳೇ ಪ್ರಧಾನವಾಗಿ ಕಾಣುತ್ತವೆ. ಇದು ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯ ಸಾಮಾಜಿಕ ಆಯಾಮ.

2025ರ ಬಜೆಟ್ ಈ ಸಿದ್ಧಮಾದರಿಯಿಂದ ಕಿಂಚಿತ್ತೂ ಅತ್ತಿತ್ತ ಸರಿಯದೆ ಭಾರತದ ಜನರ ಮುಂದಿದೆ. ಸಾಮಾನ್ಯವಾಗಿ ವಾರ್ಷಿಕ ಬಜೆಟ್ ಮೂರು ನೆಲೆಗಳಲ್ಲಿ ಕುತೂಹಲ-ಆತಂಕ ಮತ್ತು ನಿರೀಕ್ಷೆಗಳನ್ನು ಸೃಷ್ಟಿಸಿರುತ್ತದೆ. ಮೊದಲನೆಯದು ಕಾರ್ಪೋರೇಟ್ ಔದ್ಯಮಿಕ ಮಾರುಕಟ್ಟೆ, ಎರಡನೆಯದು ಸರ್ಕಾರಗಳ ಚಾಲಕ ಶಕ್ತಿಯಾಗಿರುವ ಮೇಲ್ಪದರ ಸಮಾಜ ಮತ್ತು ಮಧ್ಯಮವರ್ಗಗಳು, ಮೂರನೆಯದು ತಳಸಮಾಜದಲ್ಲಿ ನಾಳೆಗಳತ್ತ ನೋಡುತ್ತಲೇ ವರ್ತಮಾನವನ್ನು ಕಳೆಯುವ ದುಡಿಯುವ ಬಡಜನತೆ. ಈ ಮೂರೂ ಕ್ಷೇತ್ರಗಳಿಗೆ ಸಮಾಧಾನಕರವಾಗಿರುಂತೆ ಸಮತೋಲನ ಸಾಧಿಸುವುದು, ತನ್ಮೂಲಕ ತೃಪ್ತಿಪಡಿಸುವುದು ಕೇಂದ್ರ-ರಾಜ್ಯ ವಿತ್ತ ಸಚಿವರ ಪ್ರಥಮ ಆದ್ಯತೆಯಾಗಿಬಿಡುತ್ತದೆ. ಈ ಮೂಲ ಗುರಿಯಿಂದಾಚೆಗೆ ಕಾಣುವುದೆಲ್ಲವೂ ಸಂಭಾವ್ಯ ಫಲಿತಾಂಶಗಳಷ್ಟೇ.

CP Yogeshwara​ ಜೊತೆ ವಾಟರ್​ ಬೈಕ್ ರೈಡ್​ ಮಾಡಿದ DK Suresh​..  #pratidhvani

ವರ್ಗ ಹಿತಾಸಕ್ತಿಯ ನೆಲೆಯಲ್ಲಿ

ಈ ಮೂರರಲ್ಲಿ ಮೊದಲನೆ ವರ್ಗ ಮಾರುಕಟ್ಟೆ ಬಜೆಟ್ ಮಂಡನೆಯಾದ ಕೂಡಲೇ ತೀಕ್ಷ್ಣ ಪ್ರತಿಕ್ರಿಯೆ ನೀಡುವುದು ಒಂದು ಪರಂಪರೆ. ಷೇರು ಮಾರುಕಟ್ಟೆಯ ವ್ಯತ್ಯಯಗಳು, ಬಂಡವಾಳದ ಹಠಾತ್ ಹೊರಹರಿವು ಅಥವಾ ಏರಿಳಿತದ ಪ್ರಮಾಣ, ಉದ್ಯಮಿಗಳಿಂದ ಪರ-ವಿರೋಧದ ಚರ್ಚೆಗಳು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ʼ ಇನ್ನೂ ಬರಬೇಕಿತ್ತುʼ ಎಂಬ ಲಾಭಕೋರ ಹಂಬಲದ ಆಗ್ರಹ. ಕುತೂಹಲಕಾರಿ ಅಂಶವೆಂದರೆ 2025ರ ಬಜೆಟ್ನಂತರ ಭಾರತದ ಇಡೀ ಮಾರುಕಟ್ಟೆ ಅಂಗಳ ಸದ್ದು ಮಾಡದೆ ಮೌನವಾಗಿದೆ. ಮಧ್ಯಮವರ್ಗದ ಉದ್ಯೋಗಿಗಳಿಗೆ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿರುವುದರಿಂದ ಗ್ರಾಹಕ ಸರಕುಗಳ ಹಾಗು ಶೀಘ್ರ ಚಾಲನೆ ಪಡೆಯುವ ವಸ್ತುಗಳ ಉತ್ಪಾದಕರು ಕೊಂಚ ಮಟ್ಟಿಗೆ ಖುಷಿಯಾಗಿದ್ದರೂ, ಉಳಿದಂತೆ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಉತ್ಕರ್ಷ ಅಥವಾ ಉನ್ಮಾದ ಕಾಣುತ್ತಿಲ್ಲ. ಅಂದರೆ ಮಾರುಕಟ್ಟೆಗೆ ನಷ್ಟವಂತೂ ಆಗಿಲ್ಲ ಎನ್ನುವುದು ಖಚಿತ. ಲಾಭ ನಿಶ್ಚಿತ ಎಂಬ ಭರವಸೆಯನ್ನು ಬಜೆಟ್ ನೀಡುತ್ತದೆ.

ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯುತ್ತಿರುವುದನ್ನು ಬಹಳ ಸರಳ ಮಾತುಗಳಲ್ಲಿ “ ಡಾಲರ್ ಬಲಗೊಳ್ಳುತ್ತಿದೆ ಹಾಗಾಗಿ ರೂಪಾಯಿ ಕುಸಿಯುತ್ತಿದೆ, ಉಳಿದ ಕರೆನ್ಸಿಗಳ ಎದುರು ಸ್ಥಿರವಾಗಿದೆ ” ಎಂದು ಹೇಳುವ ವಿತ್ತಸಚಿವರು ಮಂಡಿಸಿರುವ ಈ ಬಜೆಟ್ ಕಳೆದ ಹತ್ತು ವರ್ಷಗಳಿಂದ ಭಾರತವನ್ನು ಗಂಭೀರವಾಗಿ ಕಾಡುತ್ತಿರುವ ನಿರುದ್ಯೋಗ, ಆದಾಯ ತಾರತಮ್ಯ, ಆರ್ಥಿಕ ಅಸಮಾನತೆ ಮತ್ತು ಉದ್ಯೋಗಾವಕಾಶಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಯಾವುದೇ ಭರವಸೆಯನ್ನು ಮೂಡಿಸುವುದಿಲ್ಲ. ರೂಪಾಯಿ ಮೌಲ್ಯ ಕುಸಿತದ ಮೂಲ ಕಾರಣ ಇರುವುದು ಸರ್ಕಾರ ಅನುಸರಿಸುತ್ತಿರುವ ಪೂರೈಕೆ ಬದಿಯ ಆರ್ಥಿಕತೆ (Supply side Economics) ಹಾಗೂ ಅದಕ್ಕೆ ಕಾರಣವಾದ ತಯಾರಿಕಾ ಕೈಗಾರಿಕೆ ವಲಯದ (Manufacturing Sector) ಹಿನ್ನಡೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಳೆದ ವರ್ಷದ ಬಜೆಟ್ನಲ್ಲೇ ಐದು ವರ್ಷಗಳ ಅವಧಿಯ ಐದು ಯೋಜನೆಗಳನ್ನು ಘೋಷಿಸಲಾಗಿತ್ತು.

ಐದು ವರ್ಷಗಳಲ್ಲಿ ಇಂಟರ್ನ್ಷಿಪ್ ಮೂಲಕ 4.1 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯ ಯೋಜನೆಗಾಗಿ 2 ಲಕ್ಷ ಕೋಟಿ ರೂಗಳ ಪೂರ್ಣಾವಧಿ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಕಳೆದ ಒಂದು ವರ್ಷದಲ್ಲಿ ಈ ಯೋಜನೆ ಎಷ್ಟು ಫಲಪ್ರದವಾಗಿದೆ ಅಥವಾ ಈ ಹಣಕಾಸು ವರ್ಷದಲ್ಲಿನ ನಿರೀಕ್ಷೆಗಳೇನು ? ಈ ಪ್ರಶ್ನೆಗೆ 2025ರ ಬಜೆಟ್ ಉತ್ತರಿಸಬೇಕಿತ್ತು. ಅದರೆ ಇಡೀ ಬಜೆಟ್ ಭಾಷಣದಲ್ಲಿ ಈ ಯೋಜನೆಯ ಪ್ರಸ್ತಾಪವೇ ಇಲ್ಲದಿರುವುದು ಅಚ್ಚರಿ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಉದ್ಯೋಗ ಆಧಾರಿತ ಉತ್ತೇಜಕ ಯೋಜನೆಯನ್ನು ಕೇಂದ್ರ ಕಾರ್ಮಿಕ ಸಚಿವಾಲಯ ಭಾರತೀಯ ಕೈಗಾರಿಕೆಗಳ ಮಹಾಒಕ್ಕೂಟ (CII) ಒಡನೆ ಸಮಾಲೋಚನೆ ನಡೆಸುತ್ತಿದ್ದು ಹಲವು ಸಭೆಗಳ ನಂತರವೂ ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ವೆಚ್ಚದ (Capital Expenditure) ನಡುವಿನ ಸೂಕ್ಷ್ಮ ಸಂಬಂಧಗಳ ಬಗ್ಗೆ ನಿಖರವಾದ ನಿಲುವು ತಳೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಅರ್ಥಾತ್ ಈ ಮಹತ್ವಾಕಾಂಕ್ಷೆಯ ಯೋಜನೆ ಸದ್ಯಕ್ಕೆ ಕುಂಟುತ್ತಿದೆ ಎಂದರ್ಥ.

ಕಾರ್ಮಿಕ ಹಿತಾಸಕ್ತಿಯ ನೆಲೆಯಲ್ಲಿ

2024ರ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಹೇಳಿರುವಂತೆ 2023-24ರಲ್ಲಿ 15-29 ವಯೋಮಾನದ ಯುವಸಮೂಹದ ನಿರುದ್ಯೋಗ ಪ್ರಮಾಣ ಶೇಕಡಾ 10.2ರಷ್ಟಿತ್ತು. ಪದವೀಧರರ ಪೈಕಿ ಇದು ಶೇಕಡಾ 13ರಷ್ಟಿತ್ತು. ಕೋವಿದ್ ನಂತರದ ಅವಧಿಯಲ್ಲಿ ವೇತನಾಧಾರಿತ ಉದ್ಯೋಗಿಗಳ ಪ್ರಮಾಣ ಸತತವಾಗಿ ಕುಸಿಯುತ್ತಿದ್ದು ಕೃಷಿ ಮತ್ತು ಅನೌಪಚಾರಿಕ ವಲಯದ ಉದ್ಯೋಗಿಗಳು ಹೆಚ್ಚಾಗಿರುವುದನ್ನು ಈ ಸಮೀಕ್ಷೆ ಬಿಂಬಿಸುತ್ತದೆ. ಇತ್ತೀಚೆಗೆ ವಿತ್ತಸಚಿವಾಲಯ ಬಿಡುಗಡೆ ಮಾಡಿದ ಆರ್ಥಿಕ ಸಮೀಕ್ಷೆಯ ಅನುಸಾರ, ಭಾರತದಲ್ಲಿ ಸ್ವಯಂ ಉದ್ಯೋಗಿ ಪುರುಷರ ಆದಾಯ 2017-18ರಲ್ಲಿ 9,454 ರೂಗಳಿದ್ದುದು 2023-24ರ ವೇಳೆಗೆ 8,591 ರೂಗಳಿಗೆ ಕುಸಿದಿದೆ. ಮಾಸಿಕ/ನಿಯತಕಾಲಿಕ ವೇತನ ಪಡೆಯುವ ಪುರುಷರ ವರಮಾನ ಇದೇ ಅವಧಿಯಲ್ಲಿ ಸರಾಸರಿ 12,665 ರೂಗಳಿಂದ 11,858 ರೂಗಳಿಗೆ ಕುಸಿದಿದೆ.

ತತ್ಪರಿಣಾಮವಾಗಿ ಉದ್ಯೋಗ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಪ್ರವೇಶಿಸುತ್ತಿದ್ದು ತೀವ್ರ ಹಣದುಬ್ಬರದ ಕಾರಣ ಕಾರ್ಮಿಕರ ನೈಜ ವೇತನ ಕ್ಷೀಣಿಸುತ್ತಿದೆ. ಅಷ್ಟೇ ಅಲ್ಲದೆ ಬಹುಸಂಖ್ಯೆಯ ಕಾರ್ಮಿಕರ ಜೀವನೋಪಾಯವೂ ದುಸ್ಥಿತಿ ತಲುಪಿದೆ. ಈ ಸಂಕೀರ್ಣ ಪರಿಸ್ಥಿತಿಯನ್ನು ಸುಧಾರಿಸುವ ಯಾವುದೇ ಲಕ್ಷಣಗಳನ್ನು ಪ್ರಸಕ್ತ ಬಜೆಟ್ನಲ್ಲಿ ಗುರುತಿಸಲಾಗುವುದಿಲ್ಲ. ತಳಸಮಾಜದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ, ಜೀವನೋಪಾಯವನ್ನು ಸುಗಮಗೊಳಿಸಲು ನೆರವಾಗುವ ಕೃಷಿ ಮತ್ತು ನಗರಾಭಿವೃದ್ಧಿ, ಆಹಾರ ಸಬ್ಸಿಡಿ, ಪ್ರಾಥಮಿಕ ಶಿಕ್ಷಣ, ಕೃಷಿ, ಸಾರಿಗೆ, ಇಂಧನ ಮತ್ತು ಆರೊಗ್ಯ ಕ್ಷೇತ್ರಗಳಲ್ಲಿ ಅನುದಾನವನ್ನು ಕಡಿಮೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ಯೋಗ ಖಾತರಿ ಯೋಜನೆಯ (MNREGA) ಅನುದಾನವನ್ನು ಹೆಚ್ಚಿಸದೆ, ಯಥಾಸ್ಥಿತಿಯಲ್ಲಿರಿಸಲಾಗಿದೆ. ಇದು ಈಗಾಗಲೇ ದುರ್ಭರ ಬದುಕು ಸಾಗಿಸುತ್ತಿರುವವರನ್ನು ಮತ್ತಷ್ಟು ವಂಚಿಸುವ ಮಾದರಿ.

ಬಜೆಟ್ ಬಗ್ಗೆ ಅಪಾರ ಕುತೂಹಲ ಇರುವ ಮತ್ತೊಂದು ವರ್ಗ ಮೇಲ್ಪದರ (ಗಣ್ಯ) ಸಮಾಜ ಮತ್ತು ಮಧ್ಯಮ ವರ್ಗಗಳು. ವಿಶೇಷವಾಗಿ ಹೆಚ್ಚಿನ ಆದಾಯ ಇರುವ ನೌಕರರು ಮತ್ತು ವೃತ್ತಿಪರರು. ಈ ವರ್ಗದ ಮನತಣಿಸುವುದು ಯಾವುದೇ ಸರ್ಕಾರದ ಪ್ರಥಮ ಆದ್ಯತೆಯಾಗಿರುತ್ತದೆ. ಏಕೆಂದರೆ ಈ ಸುಶಿಕ್ಷಿತ-ಹಿತವಲಯದ-ವೈಟ್ ಕಾಲರ್ ವರ್ಗವೇ ಸಾರ್ವಜನಿಕ ಅಭಿಪ್ರಾಯಗಳನ್ನು ಉತ್ಪಾದಿಸುತ್ತವೆ, ತನ್ಮೂಲಕ ಸಂವಹನ ಮಾಧ್ಯಮಗಳನ್ನು ಆಕ್ರಮಿಸುತ್ತವೆ. ಕಳೆದ ಚುನಾವಣೆಗಳಲ್ಲಿ ಬಿಜೆಪಿಯ ಹಿನ್ನಡೆಗೆ ಕಾರಣ ಈ ವರ್ಗಗಳಲ್ಲಿದ್ದ ಅಸಮಾಧಾನವೂ ಆಗಿತ್ತು. ಈಗ ಎಚ್ಚೆತ್ತಿರುವ ವಿತ್ತಸಚಿವರು ಆದಾಯ ತೆರಿಗೆ ಮಿತಿಯನ್ನು 7 ಲಕ್ಷ ರೂಗಳಿಂದ 12 ಲಕ್ಷ ರೂಗಳಿಗೆ ಏರಿಸಿದ್ದಾರೆ. ಕಳೆದ ವರ್ಷದ ತೆರಿಗೆ ಇಲಾಖೆಯ ವರದಿಯನುಸಾರ 7.54 ಕೋಟಿ ತೆರಿಗೆ ರಿಟರ್ನ್ಸ್ ಸಲ್ಲಿಸಿದವರ ಪೈಕಿ 2.8 ಕೋಟಿ ಉದ್ಯೋಗಿಗಳು ಸಕಾರಾತ್ಮಕ ಆದಾಯ ತೆರಿಗೆ ಪಾವತಿ ಮಾಡಿದ್ದಾರೆ. ಈಗ ನೀಡಿರುವ ಸೌಲಭ್ಯ ಈ ವರ್ಗವನ್ನು ತಲುಪುತ್ತದೆಯಷ್ಟೆ.

ಉಳಿದಂತೆ ಈಗಾಗಲೇ ತಮ್ಮ ಆದಾಯದಲ್ಲಿ ಕುಸಿತ ಎದುರಿಸುತ್ತಿರುವ ಅಪಾರ ಜನಸ್ತೋಮಕ್ಕೆ ಬಜೆಟ್ನಿಂದ ಯಾವುದೇ ಉಪಯೋಗವಾಗಿಲ್ಲ. ಈ ವಿನಾಯಿತಿಯಿಂದ ಸರ್ಕಾರದ ಬೊಕ್ಕಸಕ್ಕೆ ಒಂದುಲಕ್ಷ ಕೋಟಿ ರೂ ಹೊರೆ ಬೀಳುತ್ತದೆ. ಈ ಬೃಹತ್ ಕಡಿತವನ್ನು ಸಾಮೂಹಿಕ ಬಳಕೆಯ ವಸ್ತುಗಳ ಮೇಲಿನ ಜಿಎಸ್ಟಿಯಲ್ಲಿ ಅಥವಾ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಅನ್ವಯಿಸಿದ್ದರೆ ಬಹುಶಃ ಇಡೀ ದುಡಿಯುವ ವರ್ಗಗಳಿಗೆ ಉಪಯುಕ್ತವಾಗುತ್ತಿತ್ತು. ಉದ್ಯೋಗ ಖಾತರಿ ಯೋಜನೆಯಡಿ (MNREGA) ಸರಾಸರಿ ದಿನಗೂಲಿ ಪ್ರಮಾಣವು 2019-20ರಲ್ಲಿ 200.71ರಷ್ಟಿದ್ದುದು 2024-25ರಲ್ಲಿ 252.31 ರೂಗಳಿಗೆ ಹೆಚ್ಚಳವಾಗಿದೆ. ಈ ದೃಷ್ಟಿಯಿಂದ ನರೇಗಾ ಯೋಜನೆಯ ಅನುದಾನವನ್ನು ಹೆಚ್ಚಿಸಿದ್ದರೆ, ಗ್ರಾಮೀಣ ಮಟ್ಟದಲ್ಲಿ ಗ್ರಾಹಕ ಬೇಡಿಕೆಯನ್ನು ಹೆಚ್ಚಿಸಬಹುದಾಗಿತ್ತು. ಆದರೆ ಈ ಮಹತ್ತರ ಯೋಜನೆಯ ಬಗ್ಗೆ ವಿತ್ತ ಸಚಿವರು ಲಕ್ಷ್ಯವನ್ನೇ ನೀಡಿಲ್ಲ.

ನಿರ್ಲಕ್ಷಿತ ವಲಯಗಳ ಕಡೆಗಣನೆ

ಭಾರತದ ಆರ್ಥಿಕ ದುಸ್ಥಿತಿಯ ಮೂಲ ಕಾರಣವನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯದಲ್ಲಿ ಕಾಣಲಾಗುತ್ತದೆ. ಆದರೆ ಈ ಸಲವೂ ಎರಡೂ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ. ಜಿಡಿಪಿಯಲ್ಲಿ ಶೇಕಡಾ 6ರಷ್ಟು ಶಿಕ್ಷಣಕ್ಕಾಗಿ ಮೀಸಲಿಡುವ ಕೊಠಾರಿ ಆಯೋಗದ ಶಿಫಾರಸುಗಳು ಅರಣ್ಯರೋದನದಂತೆ ಕಾಣತೊಡಗಿದೆ. 2025ರ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಜಿಡಿಪಿಯ ಶೇಕಡಾ 0.5, ಬಜೆಟ್ನ ಶೇಕಡಾ 2.53ರಷ್ಟು ಮೀಸಲಿಡಲಾಗಿದೆ. ಇದು ಸಮಗ್ರ ಉತ್ತಮ ಗುಣಮಟ್ಟದ ಶಿಕ್ಷಣದ ಅಭಿವೃದ್ಧಿಗೆ ಬಹುದೊಡ್ಡ ತಡೆಯಾಗಲಿದೆ. ಪೋಷಣ್ ಯೋಜನೆಗೆ ( ಮಧ್ಯಾಹ್ನದ ಬಿಸಿಯೂಟ) ಕೇವಲ 33.31 ಕೋಟಿ ರೂ (ಶೇಕಡಾ 0.2) ಹೆಚ್ಚು ಮಾಡಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ಗಾದೆಯನ್ನು ನೆನಪಿಸುತ್ತದೆ. ಶಾಲಾ ಶಿಕ್ಷಣಕ್ಕೆ 5,564 ಕೋಟಿ ರೂ ಹೆಚ್ಚಿನ ಅನುದಾನ ನೀಡಿರುವುದು ಸ್ವಾಗತಾರ್ಹ.

ಮೂಲತಃ ಭಾರತದ ಆರ್ಥಿಕತೆಯನ್ನು ಕಾಡುತ್ತಿರುವ ವಲಸೆ ಕಾರ್ಮಿಕರ ದುರ್ಭರ ಬದುಕು ಬಜೆಟ್ನಲ್ಲಿ ಒಂದು ಸಾಂತ್ವನದ ನೆರಳನ್ನಾದರೂ ಕಾಣಬೇಕಿತ್ತು. 2025-26ರ ಆರ್ಥಿಕ ಸಮೀಕ್ಷೆಯಲ್ಲಿ ಕಾರ್ಮಿಕ ಪಡೆಯ ಭಾಗವಹಿಸುವಿಕೆಯ ಅನುಪಾತ (LFPR) ಮತ್ತು ದುಡಿಮೆಗಾರರ ಜನಸಂಖ್ಯೆಯ ಅನುಪಾತ (WPR) ಹೆಚ್ಚಾಗಿರುವುದರಿಂದ ನಿರುದ್ಯೋಗ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ. ಆದರೆ ಅಂಕಿಅಂಶಗಳು ಬೇರೆಯದೇ ಕತೆ ಹೇಳುತ್ತವೆ. 2017-18ರಲ್ಲಿ ಅತಿಹೆಚ್ಚು ನಿರುದ್ಯೋಗವನ್ನು ದಾಖಲಿಸಿದ ಭಾರತದ ಅರ್ಥಿಕತೆಯಲ್ಲಿ ಆರ್ಥಿಕ ಹಿಂಜರಿತದ ಕಾರಣ 2017-20ರ ನಡುವೆ 8 ಕೋಟಿ ಶ್ರಮಿಕರು ಕೃಷಿಗೆ ಮರಳಿದ್ದರು. (ಇದಕ್ಕೆ ವಿರುದ್ಧವಾಗಿ 2004 ರಿಂದ 2019ರ ಅವಧಿಯಲ್ಲಿ ಕೃಷಿಯನ್ನು ತೊರೆದು ಬಂದವರ ಸಂಖ್ಯೆ ಇಷ್ಟೇ ಪ್ರಮಾಣದಲ್ಲಿ ಹೆಚ್ಚಾಗಿದ್ದುದನ್ನು ಸ್ಮರಿಸಬಹುದು.) ಹಾಗಾಗಿ LFPR ಮತ್ತು WPR ಅನುಪಾತದಲ್ಲಿ ಹೆಚ್ಚಳವಾಗಿರಲು ಕಾರಣ, ಕೃಷಿಗೆ ಮರಳಿದ ನಾಲ್ಕು ಕೋಟಿ ಮಹಿಳಾ ಶ್ರಮಿಕರು. ಈ ಮಹಿಳೆಯರ ವೇತನರಹಿತ ಕೌಟುಂಬಿಕ ದುಡಿಮೆಯನ್ನೂ ಉದ್ಯೋಗ ಎಂದೇ ಸರ್ಕಾರ ಪರಿಗಣಿಸುತ್ತದೆ.

ಈ ಸಮಸ್ಯೆಯನ್ನು ನೀಗಿಸಲು ಕೇಂದ್ರ ಬಜೆಟ್ನಲ್ಲಿ ಮೂರು ಯೋಜನೆಗಳಿಗೆ ಒತ್ತು ನೀಡಲಾಗಿದೆ. ಎಮ್ಎಸ್ಎಮ್ಇ (MSME) ಉದ್ದಿಮೆಗಳಿಗೆ, ವಿಶೇ಼ಷವಾಗಿ ನವೋದ್ಯಮಗಳಿಗೆ (Startups) ಸಾಲ ಸೌಲಭ್ಯದ ಹೆಚ್ಚಳ ಮತ್ತು ಗ್ಯಾರಂಟಿ ಸೌಲಭ್ಯವನ್ನು ವಿಸ್ತರಿಸುವು̧ದು ಎರಡನೆಯದು ಪಾದರಕ್ಷೆ ಮತ್ತು ಚರ್ಮೋದ್ಯಮಗಳಲ್ಲಿ ಔದ್ಯಮಿಕ ಅವಕಾಶಗಳನ್ನು ಹೆಚ್ಚಿಸುವುದು, ಮೂರನೆಯದು ಉದ್ಯೋಗಾಧಾರಿತ ಬೆಳವಣಿಗೆಗೆ ಪೂರಕವಾದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು. ಪ್ರತಿವರ್ಷ 60 ರಿಂದ 70 ಲಕ್ಷ ಹೊಸ ಉದ್ಯೋಗಾಕಾಂಕ್ಷಿ ಶ್ರಮಿಕರ ಹೆಚ್ಚಳವನ್ನು ಕಾಣುವ, ಶೇಕಡಾ 46ರಷ್ಟು ಶ್ರಮಿಕರು ಕೃಷಿಯನ್ನೇ ಅವಲಂಬಿಸಿರುವ, ಶಿಕ್ಷಣ-ಉದ್ಯೋಗ-ತರಬೇತಿ ವಲಯದಿಂದ ಹೊರಗೆ ಹತ್ತು ಕೋಟಿ ಯುವ ಸಮೂಹ ಇರುವ ಭಾರತದಲ್ಲಿ ಸರ್ಕಾರದ ಈ ಮೂರು ಯೋಜನೆಗಳು ಯಾವುದೇ ರೀತಿಯಲ್ಲೂ ಪ್ರೋತ್ಸಾಹದಾಯಕವಾಗಿ ಕಾಣುವುದಿಲ್ಲ.

ವಿಕಸಿತ ಭಾರತದ ಉನ್ನತ ಧ್ಯೇಯದೊಂದಿಗೆ ಮಂಡಿಸಲಾಗಿರುವ ವಾರ್ಷಿಕ ಬಜೆಟ್ ಶೂನ್ಯ ಬಡತನ, ಸಮಗ್ರ ಆರೋಗ್ಯ ಕಾಳಜಿ, ಉಪಯುಕ್ತ ಉದ್ಯೋಗ, ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಮತ್ತು ರೈತ ಸಮುದಾಯದ ಯೋಗಕ್ಷೇಮ ಈ ಆದರ್ಶಗಳನ್ನು ಹೊತ್ತು ಬಂದಿದೆ. ಆದರೆ ಈ ಆಶಯಗಳಿಗೆ ಪೂರಕವಾಗಿ ಬಜೆಟ್ನಲ್ಲಿ ಸಮರ್ಪಕವಾಗಿ ಹಣಕಾಸು ಅನುದಾನವನ್ನು ಒದಗಿಸದೆ ಇರುವುದು ಇವೆಲ್ಲವನ್ನೂ ಘೋಷಣೆಗಳನ್ನಾಗಿ ಉಳಿಸಿಬಿಡುತ್ತದೆ. ಪ್ರಧಾನಮಂತ್ರಿ ಇಂಟರ್ನ್ಷಿಪ್ ಯೋಜನೆಗೆ ಹೆಚ್ಚಿನ ನಿಧಿ ಮೀಸಲಿಡಲಾಗಿದ್ದು 18 ಲಕ್ಷ ಉದ್ಯೋಗಿಗಳನ್ನು ಸರಿದೂಗಿಸಬಹುದಾಗಿದೆ. ಈವರೆಗೂ 1.25 ಲಕ್ಷ ಜನರು ನೋಂದಾಯಿಸಿದ್ದಾರೆ. ಈ ಗುರಿಯನ್ನು ತಲುಪಿದರೂ, ಬಜೆಟ್ ಅನುದಾನದ ಮೊತ್ತದಲ್ಲಿ ಪ್ರತಿ ಉದ್ಯೋಗಿಗೆ ತಲಾ ಮಾಸಿಕ 5000 ರೂ ಮಾತ್ರ ಲಭಿಸುತ್ತದೆ.

ಕೃಷಿ ಸಂಬಂಧಿತ ಚಟುವಟಿಕೆಗಳು ಮತ್ತು ವ್ಯವಸಾಯ, ಆಹಾರ ಸಬ್ಸಿಡಿ ಮತ್ತು ಗ್ರಾಮೀಣಾಭಿವೃದ್ಧಿಗೆ ಬಜೆಟ್ನಲ್ಲಿ ಮೀಸಲಿಟ್ಟಿರುವ ನಿಧಿಯ ಪ್ರಮಾಣವನ್ನು ತಗ್ಗಿಸಲಾಗಿದೆ. ಕೃಷಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ 2024-25ರ ವರ್ಷದಲ್ಲಿ ಕೇವಲ 21 ಕೋಟಿ ರೂಗಳನ್ನು ವ್ಯಯ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಅವೈಜ್ಞಾನಿಕ ನೈಸರ್ಗಿಕ ಕೃಷಿಗೆ 2023-24ರಲ್ಲಿ 30 ಕೋಟಿ ರೂ ಖರ್ಚು ಮಾಡಲಾಗಿತ್ತು. ಈ ಬಜೆಟ್ನಲ್ಲಿ ಇದರ ಮೊತ್ತವನ್ನು 616 ಕೋಟಿ ರೂಗಳಿಗೆ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅನುದಾನವನ್ನು 3,622 ಕೋಟಿ ರೂಗಳಷ್ಟು ಕಡಿಮೆ ಮಾಡಲಾಗಿದೆ. ರೈತರ ಬಹುಕಾಲದ ಬೇಡಿಕೆಯಾಗಿರುವ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಬಜೆಟ್ನಲ್ಲಿ ಏನೂ ಹೇಳಲಾಗಿಲ್ಲ.

ಕಾರ್ಪೋರೇಟಿಕರಣದ ಹಾದಿಯಲ್ಲಿ

ಕಳೆದ ಹತ್ತು ವರ್ಷಗಳ ಬಿಜೆಪಿ ಆಳ್ವಿಕೆಯ ಮೂಲ ಮಂತ್ರವೇ ಆಗಿರುವ ಔದ್ಯಮಿಕ ಕಾರ್ಪೋರೇಟೀಕರಣಕ್ಕೆ ಮುಂದಿನ ಐದು ವರ್ಷಗಳಲ್ಲಿ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದು ವಿತ್ತ ಸಚಿವರು ಖಚಿತಪಡಿಸಿದ್ದಾರೆ. ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಶೇಕಡಾ 74 ರಿಂದ ಶೇಕಡಾ 100ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಈ ಬಜೆಟ್ನಲ್ಲಿ ಮಾಡಲಾಗಿದೆ. ಇದು ಬಹುಮಟ್ಟಿಗೆ ವಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಕಾರ್ಪೋರೇಟ್ ಮಾರುಕಟ್ಟೆಗೆ ಒಪ್ಪಿಸುವ ಮೊದಲ ಹೆಜ್ಜೆ ಎಂದು ಹೇಳಬಹುದು. ಇದಲ್ಲದೆ ಮುಂದಿನ ಐದು ವರ್ಷಗಳಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್ಗಳಿಗೆ ಹರಾಜು/ಮಾರಾಟ ಮಾಡುವ ಮೂಲಕ 10 ಲಕ್ಷ ಕೋಟಿ ರೂ ಆದಾಯ ಗಳಿಸುವ ಆಶಯವನ್ನೂ ವಿತ್ತ ಸಚಿವರು ವ್ಯಕ್ತಪಡಿಸಿದ್ದಾರೆ. ಈ ಹರಾಜು ಪ್ರಕ್ರಿಯೆಯನ್ನು ಆಂಗ್ಲ ಭಾಷೆಯಲ್ಲಿ ಸುಂದರವಾಗಿ Monetisation ಎನ್ನಲಾಗುತ್ತದೆ, ಅಂದರೆ ನಗದೀಕರಣ ಅಷ್ಟೆ.

ಒಟ್ಟಾರೆಯಾಗಿ ಹೇಳಬೇಕಾದರೆ ಮೋದಿ 3.0 ಆಳ್ವಿಕೆಯಲ್ಲಿ ಭಾರತ ಸಂಪೂರ್ಣ ಮಾರುಕಟ್ಟೆ ಆರ್ಥಿಕತೆಯಲ್ಲಿ ವಿಲೀನವಾಗಲಿದೆ. ರೈಲ್ವೆ ಇಲಾಖೆಯ ಬೆಳವಣಿಗೆ, ಸುಧಾರಣೆ ಮತ್ತು ಅಭಿವೃದ್ಧಿಗೆ ಬಜೆಟ್ನಲ್ಲಿ ಪ್ರಸ್ತಾಪವೇ ಇಲ್ಲದಿರುವುದು ಇದರ ಒಂದು ಸೂಚನೆಯಾಗಿ ಕಾಣುತ್ತದೆ. ಬಜೆಟ್ನಲ್ಲಿ ಕಾಣಲಾಗುವ ಕೆಲವು ಆಶಾದಾಯಕ ಅಂಶಗಳು ಮಾರುಕಟ್ಟೆ ಮತ್ತು ಬಂಡವಾಳಿಗರನ್ನು ತೃಪ್ತಿಪಡಿಸುತ್ತವೆ. ಮೇಲ್ಪದರದ ಸಮಾಜಕ್ಕೆ ಸಮಾಧಾನ ತರುತ್ತದೆ. ಆದರೆ ತಳಸಮಾಜದ ಬಹುಸಂಖ್ಯಾತರಿಗೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಈ ಸಮಾಜದ ಕಾಳಜಿ ಮತ್ತು ಅವಶ್ಯಕತೆಗಳನ್ನು ಉದ್ದೇಶಿಸುವಂತಹ ಯಾವುದೇ ಪ್ರಸ್ತಾವನೆಯನ್ನು 2025-26ರ ಬಜೆಟ್ ಮುಂದಿಡುವುದಿಲ್ಲ. ದೇಶದ ರೈತರು, ಕಾರ್ಮಿಕರು, ಅವಕಾಶವಂಚಿತರು, ಮಹಿಳೆಯರು ಹಾಗೂ ಬಡಜನತೆ ಮತ್ತದೇ ನಿರೀಕ್ಷೆಯಲ್ಲಿ ಕಾಲದೂಡಬೇಕಿದೆ.

ಇದು ಕೇವಲ ಮೋದಿ 3.0 ಅಥವಾ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಗುರಿ ಅಲ್ಲ. ಬದಲಾಗುತ್ತಿರುವ ಭಾರತ ವಿಕಸಿತ ಭಾರತವಾಗುವತ್ತ ಸಾಗುತ್ತಿರುವ ಹಾದಿಯಲ್ಲಿ ಇದು ನಿಶ್ಚಿತ ಪ್ರಕ್ರಿಯೆಯಾಗಿದೆ. ಮುಖ್ಯವಾಹಿನಿಯ ಎಲ್ಲ ಬೂರ್ಷ್ವಾ ಪಕ್ಷಗಳೂ ಇದೇ ನೀತಿಯನ್ನು ಅನುಮೋದಿಸುತ್ತವೆ. ಇದರಿಂದ ಉಂಟಾಗುವ ಅಸಮಾನತೆ ಮತ್ತು ತಾರತಮ್ಯಗಳನ್ನು ನಿವಾರಿಸಲು ʼ ಗ್ಯಾರಂಟಿ ಯೋಜನೆಗಳು ʼ ಎಂಬ ಶಮನಕಾರಿ ಉಪಕ್ರಮಗಳನ್ನು ತಳಸಮಾಜಕ್ಕೆ ತಲುಪಿಸುತ್ತಿರುತ್ತವೆ. ಇದನ್ನೇ ʼಸಮಾಜವಾದʼ ಎಂದೂ ಬಿಂಬಿಸುವ ವಿದ್ವತ್ ವಲಯವನ್ನೂ ಸೃಷ್ಟಿಸಲಾಗಿದೆ. 2025-26ರ ಬಜೆಟ್ ಈ ಕಾರ್ಪೋರೇಟ್ ಮಾರುಕಟ್ಟೆ ಪ್ರೇರಿತ ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕತೆಯನ್ನೇ ಪುಷ್ಟಿಕರಿಸುವ ಒಂದು ದಸ್ತಾವೇಜು ಮಾತ್ರ. ಉಳಿದಂತೆ ವಿದ್ವತ್ ವಲಯದ ಸಮೀಕ್ಷೆಗಳೆಲ್ಲವೂ ತಳಸಮಾಜದ ಅಸಮಾಧಾನಗಳನ್ನು ನಿಗ್ರಹಿಸಲು ನೆರವಾಗುವ ಸಾಧನಗಳು.

ಈ ಬೆಳವಣಿಗೆಗಳ ಬಗ್ಗೆ ಜನಸಾಮಾನ್ಯರನ್ನು, ಶ್ರಮಜೀವಿಗಳನ್ನು ಜಾಗೃತಗೊಳಿಸುವ ಜವಾಬ್ದಾರಿ ಎಡಪಕ್ಷಗಳು ಮತ್ತಿತರ ಪ್ರಗತಿಪರ ಸಂಘಟನೆಗಳ ಮೇಲಿದೆ.
-೦-೦-೦-೦-

Tags: 2025 budget2025 national budgetbudget 2025budget 2025 datebudget 2025 expectationsbudget 2025 income taxbudget 2025 indiabudget 2025 livebudget 2025 newsbudget 2025 stocksbudget expectations 2025budget session 2025income tax budget 2025india budget 2025modi budget speech 2025union budget 2025union budget 2025 dateunion budget 2025 income taxunion budget 2025 liveunion budget 2025 news
Previous Post

ಮಹಾನಟಿ ವಿನ್ನರ್ ಪ್ರಿಯಾಂಕಾ ಆಚಾರ್ ರಾಣಾಗೆ ಜೋಡಿ..!!

Next Post

ಬೆಂಗಳೂರಿಗೆ ಮತ್ತೊಂದು ಏರ್ಪೋರ್ಟ್ ಗೆ ಅನುಮತಿ ನೀಡಿ ..! ರಾಜ್ಯಸಭೆಯಲ್ಲಿ ಹೆಚ್.ಡಿ ದೇವೇಗೌಡರ ಆಗ್ರಹ !  

Related Posts

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
0

"ಟನಲ್ ರಸ್ತೆ, ಮೇಲ್ಸೇತುವೆ ಯೋಜನೆ, 'ಬಿ' ಖಾತೆಯಿಂದ 'ಎ' ಖಾತೆ ನೀಡುವ ಯೋಜನೆ ಕುರಿತು ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹಲ್ ಲಾಲ್ ಖಟ್ಟರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು....

Read moreDetails

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

October 30, 2025

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

October 30, 2025

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

October 30, 2025

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

October 30, 2025
Next Post
ಬೆಂಗಳೂರಿಗೆ ಮತ್ತೊಂದು ಏರ್ಪೋರ್ಟ್ ಗೆ ಅನುಮತಿ ನೀಡಿ ..! ರಾಜ್ಯಸಭೆಯಲ್ಲಿ ಹೆಚ್.ಡಿ ದೇವೇಗೌಡರ ಆಗ್ರಹ !  

ಬೆಂಗಳೂರಿಗೆ ಮತ್ತೊಂದು ಏರ್ಪೋರ್ಟ್ ಗೆ ಅನುಮತಿ ನೀಡಿ ..! ರಾಜ್ಯಸಭೆಯಲ್ಲಿ ಹೆಚ್.ಡಿ ದೇವೇಗೌಡರ ಆಗ್ರಹ !  

Recent News

Top Story

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 30, 2025
Top Story

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

by ಪ್ರತಿಧ್ವನಿ
October 30, 2025
Top Story

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

by ಪ್ರತಿಧ್ವನಿ
October 30, 2025
Top Story

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

by ಪ್ರತಿಧ್ವನಿ
October 30, 2025
Top Story

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

by ಪ್ರತಿಧ್ವನಿ
October 30, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

October 30, 2025

ಕನ್ನಡ ಚಿತ್ರರಂಗದ ಹದಿನಾಲ್ಕು ಜನಪ್ರಿಯ ನಾಯಕರು ಈ ಚಿತ್ರದ ಹಾಡೊಂದರಲ್ಲಿ ಅಭಿನಯಿಸಿರುವುದು ವಿಶೇಷ .

October 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada