• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಪರಿಸರ ಪ್ರಜ್ಞೆಯ ಕೊರತೆಯ ನಡುವೆಯೇ ಮತ್ತೊಂದು ದಿನ

ನಾ ದಿವಾಕರ by ನಾ ದಿವಾಕರ
June 5, 2022
in ಅಭಿಮತ, ವಿಶೇಷ
0
ಪರಿಸರ ಪ್ರಜ್ಞೆಯ ಕೊರತೆಯ ನಡುವೆಯೇ ಮತ್ತೊಂದು ದಿನ
Share on WhatsAppShare on FacebookShare on Telegram

ಮಾನವ ಸಮಾಜಕ್ಕೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳಿಗೂ ಒಂದು ದಿನಾಚರಣೆ ಇರುವುದು ಆಧುನಿಕ ಜಗತ್ತಿನ ವೈಶಿಷ್ಟ್ಯ. ಮನುಜ ಸಂಬಂಧಗಳು, ಸಾಮಾಜಿಕ ವಿದ್ಯಮಾನಗಳು, ಚಾರಿತ್ರಿಕ ದಿನಗಳು ವಾರ್ಷಿಕ ದಿನಾಚರಣೆಗಳ ರೂಪದಲ್ಲಿ  ಸಾರ್ವಜನಿಕ ಜನಸಾಮಾನ್ಯರ ನಡುವೆ ಇತಿಹಾಸದ ಪ್ರಜ್ಞೆಯನ್ನು ಜಾಗೃತಗೊಳಿಸಿ, ವರ್ತಮಾನದ ಅರಿವನ್ನು ವಿಸ್ತರಿಸಲು ನೆರವಾಗುತ್ತವೆ. ಮೂಲತಃ ಪಾಶ್ಚಿಮಾತ್ಯ ರಾಷ್ಟ್ರಗಳಿಂದಲೇ ಮೂಡಿಬಂದ ಈ ಆಚರಣೆಗಳು ಆಧುನಿಕ ಯುಗದಲ್ಲಿ, ಜಾಗತೀಕರಣಗೊಂಡ ಅರ್ಥವ್ಯವಸ್ಥೆಯಲ್ಲಿ ಮಾರುಕಟ್ಟೆ ಸಂಬಂಧಿತವಾಗಿಯೇ ಉಳಿದುಬಿಡುತ್ತವೆ. ಒಂದು ವಿಶಿಷ್ಟ, ನಿರ್ದಿಷ್ಟ ದಿನವನ್ನು ಏತಕ್ಕಾಗಿ ಆಚರಿಸಲಾಗುತ್ತದೆ , ಈ ಆಚರಣೆಯ ಮೂಲಕ ಏನನ್ನು ಸಾಧಿಸಲು ಹೊರಟಿದ್ದೇವೆ ಎಂಬ ಸಾಮಾನ್ಯ ಅರಿವೂ ಇಲ್ಲದೆ ಯಾಂತ್ರಿಕವಾಗಿ ಆಚರಿಸಲಾಗುವ ಹಲವು ದಿನಗಳನ್ನು ಕಾಣುತ್ತಲೇ ಬಂದಿದ್ದೇವೆ. ನಾಗರಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಮತ್ತು ಮಾನವ ಸಮಾಜದ ಉನ್ನತಿಗಾಗಿ ಸಾಮಾನ್ಯ ಜನರ ನಡುವೆ ಜಾಗೃತ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ದಿನಾಚರಣೆಗಳು ಸಾಗಬೇಕಾಗುತ್ತವೆ. ಇಂತಹ ಆಚರಣೆಗಳಲ್ಲೊಂದು ಇಂದು ಆಚರಿಸಲಾಗುತ್ತಿರುವ ವಿಶ್ವ ಪರಿಸರ ದಿನ.

ADVERTISEMENT

ಭಾರತದ ಸಂದರ್ಭದಲ್ಲಿ ನೋಡಿದಾಗ ಸಾಮಾನ್ಯ ಪರಿಸರ ಪ್ರಜ್ಞೆಯೇ ಇಲ್ಲದಂತಹ ಒಂದು ಬೃಹತ್‌ ಜನಸಮೂಹ ನಮ್ಮ ನಡುವೆ ಇದೆ. ಪರಿಸರ ಎಂದ ಕೂಡಲೇ ಸಾಮಾನ್ಯ ಗ್ರಹಿಕೆಯು ಕಾಡು ಮೇಡು, ಬೆಟ್ಟ ಗುಡ್ಡ, ಜಲಮೂಲಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳತ್ತ ಹೊರಳುತ್ತದೆ. ಜೀವ ವೈವಿಧ್ಯತೆಯನ್ನು ಕಾಪಾಡಲು ಬೇಕಾದ ಹಸಿರು ವಲಯ ಇದರಲ್ಲಿ ಪ್ರಧಾನವಾಗಿ ಬಿಂಬಿತವಾಗುತ್ತದೆ. ಭಾರತದ ಅರಣ್ಯ ಇಲಾಖೆ ತನ್ನ 2021ರ ವರದಿಯನ್ನು ಬಿಡುಗಡೆ ಮಾಡಿದ್ದು 2019 ರಿಂದ 21ರ ಅವಧಿಯಲ್ಲಿ ಭಾರತದ ಒಟ್ಟು ಅರಣ್ಯ ಪ್ರದೇಶದಲ್ಲಿ 1540 ಚದರ ಕಿಲೋಮೀಟರ್‌ ಹೆಚ್ಚಳ ಕಂಡುಬಂದಿದೆ. 2021ರ ಭಾರತೀಯ ಅರಣ್ಯ ವರದಿಯ ಅನುಸಾರ ದೇಶದ ಒಟ್ಟು ಅರಣ್ಯ ಪ್ರದೇಶದ ವ್ಯಾಪ್ತಿ 7,13,789 ಚದರ ಕಿಲೋಮೀಟರ್‌ ಇದ್ದು, ಓಟ್ಟು ಭೌಗೋಳಿಕ ಪ್ರದೇಶದ ಶೇ 21.71ರಷ್ಟಿದೆ. 2019ರಲ್ಲಿ ಇದು ಶೇ 21.67ರಷ್ಟಿತ್ತು.

ಈ ವರದಿಯ ಅನುಸಾರ ಭಾರತದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಅರಣ್ಯಪ್ರದೇಶದ ವ್ಯಾಪ್ತಿ ಹೆಚ್ಚಾಗಿರುವುದು ಕಂಡುಬರುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಈ ದತ್ತಾಂಶಗಳಲ್ಲಿ ಕೆಲವು ತಾಂತ್ರಿಕ ತಕರಾರುಗಳನ್ನೂ ಗುರುತಿಸಲು ಸಾಧ್ಯ. ಹೆಚ್ಚಳವಾಗಿರುವ ಅರಣ್ಯ ಪ್ರದೇಶದ ವ್ಯಾಪ್ತಿಗೆ ಮೂಲಕ ಕಾರಣ, ರಿಮೋಟ್‌ ಸೆನ್ಸಿಂಗ್‌ ಮೂಲಕ ಮಾಡಲಾಗುವ ಈ ಸಮೀಕ್ಷೆಯಲ್ಲಿ ಮುಕ್ತ ಅರಣ್ಯಗಳನ್ನೂ ಒಳಗೊಳ್ಳಲಾಗಿದೆ. ಮುಕ್ತ ಅರಣ್ಯಗಳೆಂದರೆ ವಾಣಿಜ್ಯ ಪ್ಲಾಂಟೇಷನ್‌ಗಳನ್ನೂ ಸೇರಿಸಿಕೊಳ್ಳಲಾಗುತ್ತದೆ. ದಟ್ಟಾರಣ್ಯ ಪ್ರದೇಶಗಳನ್ನಷ್ಟೇ ಪರಿಗಣಿಸಿದಾಗ 2019-21ರ ಅವಧಿಯಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿರುವುದು ಕಂಡುಬರುತ್ತದೆ. ಈ ವರದಿಯೊಂದಿಗೇ ಬಿಡುಗಡೆಯಾಗಿರುವ ಮಾಂಗಬೇ-ಇಂಡಿಯಾ ಸಮೀಕ್ಷೆಯ ಅನುಸಾರ 2009-19ರ ಒಂದು ದಶಕದ ಅವಧಿಯಲ್ಲಿ ಭಾರತದ ಈಶಾನ್ಯ ಪ್ರದೇಶದಲ್ಲಿ 3199 ಚದರ ಕಿಲೋಮೀಟರ್‌ ಅರಣ್ಯಪ್ರದೇಶ ಮರೆಯಾಗಿದೆ. ಇದು ಅತಂಕಕಾರಿ ವಿಚಾರವಾಗಿದೆ. ಏಕೆಂದರೆ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ಸಿಕ್ಕಿಂ ಮತ್ತು ತ್ರಿಪುರಾ ಈ ರಾಜ್ಯಗಳನ್ನೊಳಗೊಳ್ಳುವ ಈಶಾನ್ಯ ಭಾರತ, ಜಗತ್ತಿನ 17 ಅತಿದೊಡ್ಡ ಜೀವವೈವಿಧ್ಯ ಉಷ್ಣ ಪ್ರದೇಶವಾಗಿದೆ. ಭಾರತದ ಒಟ್ಟು ಶೇ 7.98 ಭೌಗೋಳಿಕ ಪ್ರದೇಶವನ್ನು ಹೊಂದಿರುವ ಈಶಾನ್ಯ ಭಾರತ ಒಟ್ಟು ಶೇ 25ರಷ್ಟು ಅರಣ್ಯಪ್ರದೇಶವನ್ನು ಹೊಂದಿದೆ.

ಈ ಪ್ರದೇಶದಲ್ಲೇ ಅರಣ್ಯ ವಲಯ ಕ್ಷೀಣಿಸುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದ್ದು ಇದಕ್ಕೆ ಮೂಲ ಕಾರಣ ಅಭಿವೃದ್ಧಿ ಯೋಜನೆಗಳೇ ಆಗಿವೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಅರಣ್ಯ ಮತ್ತು ಜಲಸಂಪನ್ಮೂಲಗಳನ್ನೂ ಸೇರಿದಂತೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳನ್ನೂ ಮಾರುಕಟ್ಟೆಯ ಉತ್ಪಾದನೆಯ ಮೂಲಗಳೆಂದೇ ಪರಿಗಣಿಸುವುದರಿಂದ, ನಿಸರ್ಗ ಶೋಷಣೆ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ 29 ಸಾವಿರ ಚದರ ಕಿಲೋಮೀಟರ್‌ ಅರಣ್ಯ ಪ್ರದೇಶಗಳು ಅಭಿವೃದ್ಧಿ ಯೋಜನೆಗಳಿಗೆ ಬಲಿಯಾಗಿವೆ. ಇದರ ಪೈಕಿ 23 ಸಾವಿರ ಚದರ ಕಿಲೋಮೀಟರ್‌ ಕೈಗಾರಿಕಾ ಯೋಜನೆಗಳಿಗೇ ಬಲಿಯಾಗಿದೆ. ಮಧ್ಯಪ್ರದೇಶವೊಂದರಲ್ಲೇ ಈ ಅವಧಿಯಲ್ಲಿ 14 ಸಾವಿರ ಚದರ ಕಿಲೋಮೀಟರ್‌ ಅರಣ್ಯ ಪ್ರದೇಶವನ್ನು ಗಣಿಗಾರಿಕೆ, ರಕ್ಷಣಾ ಯೋಜನೆಗಳು ಮತ್ತು ಜಲವಿದ್ಯುತ್‌ ಉತ್ಪಾದನೆಗಾಗಿ ನೀಡಲಾಗಿದೆ. ಸ್ವತಂತ್ರ ಅಧ್ಯಯನಗಳ ಪ್ರಕಾರ ಪಶ್ಚಿಮ ಘಟ್ಟಗಳ ನಾಲ್ಕೂ ವಲಯಗಳಲ್ಲಿ ಅರಣ್ಯ ಸಂಪತ್ತು ಕ್ಷೀಣಿಸುತ್ತಿದ್ದು ಉತ್ತರದಲ್ಲಿ ಶೇ 2.84, ಕೇಂದ್ರದಲ್ಲಿ ಶೇ 4.38 ಮತ್ತು ದಕ್ಷಿಣದಲ್ಲಿ ಶೇ 5.77ರಷ್ಟು ಅರಣ್ಯ ವಲಯ ಅಭಿವೃದ್ಧಿ ಯೋಜನೆಗಳ ಪಾಲಾಗಿದೆ. ಕೇಂದ್ರ ಸರ್ಕಾರದ ಬದಲಾದ ನೀತಿಗಳ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ 25 ಸಾವಿರ ಹೆಕ್ಟೇರ್‌ ಅಂದರೆ 250 ಚದರ ಕಿಲೋಮೀಟರ್‌ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗಳಿಗಾಗಿ ಒದಗಿಸಲಾಗುತ್ತದೆ. ಇವುಗಳಲ್ಲಿ ಮುಖ್ಯವಾಗಿ ಗಣಿಗಾರಿಕೆ, ರಕ್ಷಣಾ ಯೋಜನೆಗಳು, ಅಣೆಕಟ್ಟುಗಳು, ವಿದ್ಯುತ್‌ ಉತ್ಪಾದನೆ, ಕೈಗಾರಿಕೆ ಮತ್ತು ರಸ್ತೆ ಅಭಿವೃದ್ಧಿಯನ್ನು ಗುರುತಿಸಬಹುದು.

2019ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕೇಂದ್ರ ಪರಿಸರ ಸಚಿವಾಲಯವು ಛತ್ತಿಸ್‌ಘಡದ ದಟ್ಟ ಹಸದೇವ್‌ ಅರಂಡ್‌ ಅರಣ್ಯ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಿ ಪರಿಸರ ನಿರಪೇಕ್ಷಣೆಯನ್ನು ನೀಡಿತ್ತು. ಈ ಪ್ರದೇಶದ 1 ಲಕ್ಷ 70 ಸಾವಿರ ಹೆಕ್ಟೇರ್‌ ದಟ್ಟಾರಣ್ಯವನ್ನು ಕಲ್ಲಿದ್ದಲು ಗಣಿಗಾರಿಕೆಗಾಗಿ ನೀಡಲಾಗಿತ್ತು. 30 ಕಲ್ಲಿದ್ದಲು ನಿಕ್ಷೇಪಗಳಿರುವ ಈ ಪ್ರದೇಶದಲ್ಲಿ ರಾಜಸ್ಥಾನ ವಿದ್ಯುತ್‌ ಉತ್ಪಾದನ್‌ ನಿಗಮ್‌ ನಿಗಮವು ವಿದ್ಯುತ್‌ ಉತ್ಪಾದನೆ ಮಾಡಲಿದ್ದು, ಇದರ ನಿರ್ವಹಣೆಯನ್ನು ಅದಾನಿ ಒಡೆತನದ ರಾಜಸ್ಥಾನ ಕೊಲೀರೀಸ್‌ ಲಿಮಿಟೆಡ್‌ಗೆ ನೀಡಲಾಗಿದೆ. ಈಗಾಗಲೇ 841 ಹೆಕ್ಟೇರ್‌ ದಟ್ಟಾರಣ್ಯ ಪ್ರದೇಶವನ್ನು ಈ ಕಂಪನಿಗೆ ಗುತ್ತಿಗೆಯ ಆಧಾರದಲ್ಲಿ ನೀಡಲಾಗಿದೆ. ಕಳೆದ ಅಕ್ಟೋಬರ್‌ ಮಾಹೆಯಲ್ಲಿ ಛತ್ತೀಸ್ಘಡದ ಹಲವು ಸಂಘಟನೆಗಳು ಈ ಯೋಜನೆಗಳನ್ನು ವಿರೋಧಿ, ಅರಣ್ಯ ಒತ್ತುವರಿಯನ್ನು ತಡೆಗಟ್ಟುವ ಆಗ್ರಹದೊಂದಿಗೆ 300 ಕಿಲೋಮೀಟರ್‌ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದವು. ರಾಯ್‌ಪುರ ವಲಯದ 350ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಅಕ್ರಮ ಭೂ ಒತ್ತುವರಿಯ ವಿರುದ್ಧ ಈ ಹೋರಾಟದಲ್ಲಿ ಭಾಗವಹಿಸಿದ್ದವು. ಆದಾಗ್ಯೂ ಈ ವರ್ಷದ ಮಾರ್ಚ್‌ ಮಾಹೆಯಲ್ಲಿ ರಾಜ್ಯ ಸರ್ಕಾರವು ಪಾರ್ಸಾ ಕಲ್ಲಿದ್ದಲು ನಿಕ್ಷೇಪದ ಕಾರ್ಯಾಚರಣೆಗಾಗಿ 1136 ಹೆಕ್ಟೇರ್‌ ಭೂಮಿಯನ್ನು ಗಣಿಗಾರಿಕೆಗೆ ಬಳಸಿಕೊಳ್ಳಲು ನಿರಪೇಕ್ಷಣ ಪತ್ರವನ್ನು ನೀಡಿದೆ.

ಆಳುವ ವರ್ಗಗಳ ಈ ದ್ವಂದ್ವ ನೀತಿಗಳ ನಡುವೆಯೇ ಭಾರತ ಇಂದು ಹೆಚ್ಚಿನ ಉಷ್ಣಾಂಶದ ಅಪಾಯವನ್ನು ಎದುರಿಸುತ್ತಿದೆ. 2030ರ ವೇಳೆಗೆ ದೇಶದ ಒಟ್ಟು ಭೂ ಪ್ರದೇಶದ ಶೇ 30ರಷ್ಟನ್ನು ಅರಣ್ಯವಲಯವನ್ನಾಗಿ ಮಾಡುವ ಸರ್ಕಾರದ ಧ್ಯೇಯ ಸಾಕಾರಗೊಳ್ಳುವುದು ಬಹುಶಃ ಅಂಕಿಅಂಶಗಳಲ್ಲಿ ಮಾತ್ರವೇ ಸಾಧ್ಯ ಎನಿಸುತ್ತದೆ. ಅಥವಾ ಕಾಫಿ, ಚಹಾ, ತೆಂಗು ಮುಂತಾದ ಅರಣ್ಯೇತರ ಉತ್ಪನ್ನಗಳ ಪ್ಲಾಂಟೇಷನ್‌ಗಳನ್ನು ಒಳಗೊಳ್ಳುವ ಮೂಲಕ ಒಟ್ಟಾರೆ ಅರಣ್ಯ ಪ್ರದೇಶದ ಹೆಚ್ಚಳವನ್ನು ಬಿಂಬಿಸಬಹುದು. ಆದರೆ ಅರಣ್ಯವನ್ನೇ ನಂಬಿ ಬದುಕುವ ಸಾವಿರಾರು ಜೀವ ಪ್ರಬೇಧಗಳು ಮತ್ತು ಅರಣ್ಯ ಬದುಕನ್ನೇ ಆಶ್ರಯಿಸುವ ಲಕ್ಷಾಂತರ ಆದಿವಾಸಿ ಕುಟುಂಬಗಳ ಜೀವನೋಪಾಯಕ್ಕೆ ಅಂಕಿಅಂಶಗಳು ನೆರವಾಗುವುದಿಲ್ಲ. ದಿನದಿಂದ ದಿನಕ್ಕೆ ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳುತ್ತಿರುವ ಆದಿವಾಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಈ ಆತಂಕಗಳ ನಡುವೆಯೇ ನಾವು ಮತ್ತೊಂದು ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ಪರಿಸರ ಮಾಲಿನ್ಯ ಎಂದರೆ ಕೇವಲ ಕಾರ್ಖಾನೆಯಿಂದ ಹೊರಸೂಸಲಾಗುವ ಇಂಗಾಲ ಅಥವಾ ಕೈಗಾರಿಕಾ ತ್ಯಾಜ್ಯಗಳು ಮಾತ್ರವೇ ಅಲ್ಲ. ಅಥವಾ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಸಮೀಕರಣಕ್ಕೊಳಗಾಗಿರುವ ಶಬ್ದಮಾಲಿನ್ಯದ ಮಾದರಿಗಳೂ ಅಲ್ಲ. ನಾವು ಬದುಕುತ್ತಿರುವ ಸಮಾಜದಲ್ಲಿ ನಿತ್ಯ ಕಾಣುತ್ತಿರುವ ಪರಿಸರ ಮಾಲಿನ್ಯ ಮತ್ತು ಜಲಮಾಲಿನ್ಯದ ಕಾರಣಗಳನ್ನು ಶೋಧಿಸುವುದರಲಿ, ಗುರುತಿಸಲೂ ಆಧುನಿಕ ನಾಗರಿಕತೆ ವಿಫಲವಾಗುತ್ತಿದೆ. ಬೃಹತ್‌ ಬೆಟ್ಟಗಳು, ಬೃಹದಾಕಾರದ ಬಂಡೆಗಳು ನಗರ ಸಂಸ್ಕೃತಿಯ ಗ್ರಾನೈಟ್‌ ಸಂಸ್ಕೃತಿಯ ಬಲಿಪಶುಗಳಾಗುತ್ತಿವೆ. ಕರಗುತ್ತಿರುವ ಈ ಬೆಟ್ಟಗಳು ಭವಿಷ್ಯದಲ್ಲಿ ಭೌಗೋಳಿಕ ಅಸಮತೋಲನ ಉಂಟುಮಾಡುವ ಅಪಾಯ ಒಂದೆಡೆಯಾದರೆ, ವರ್ತಮಾನದಲ್ಲೇ ಕಲ್ಲಿದ್ದಲು ಗಣಿಗಳ ಕುಸಿತ, ಕಲ್ಲುಗಣಿಗಳ ಸ್ಫೋಟ ಮತ್ತು ಬಂಡೆಗಳ ಕುಸಿತದಿಂದ ಸಾವಿರಾರು ಶ್ರಮಜೀವಿಗಳ ಜೀವ ಹರಣವಾಗುತ್ತಿದೆ.

ಜಲಸಂಪನ್ಮೂಲಗಳನ್ನು ರಕ್ಷಿಸುವ ಯಾವುದೇ ವೈಜ್ಞಾನಿಕ ಆಡಳಿತ ನೀತಿಯನ್ನು ಜಾರಿಗೊಳಿಸದ ಸರ್ಕಾರಗಳು ನದಿಗಳು ತುಂಬಿ ಹರಿದಾಗ ಬಾಗಿನ ಅರ್ಪಿಸಲು ತೋರುವಷ್ಟು ಆಸ್ಥೆ ಆ ನದಿ ನೀರಿನ ರಕ್ಷಣೆಯ ಬಗ್ಗೆ ತೋರುವುದಿಲ್ಲ. ಪೂಜನೀಯವಾಗಿ ಕಾಣಲಾಗುವ ಜಲಮೂಲಗಳನ್ನು, ನದಿಗಳನ್ನು ಮಾರುಕಟ್ಟೆ ಬಳಕೆಯ ವಸ್ತುಗಳಂತೆ ಪೋಲು ಮಾಡುತ್ತಿರುವುದನ್ನು ಮತ್ತು ನಗರಗಳ ಐಷಾರಮಿ ಬದುಕಿನ ಕಚ್ಚಾವಸ್ತುಗಳಂತೆ ಬಳಸುತ್ತಿರುವುದನ್ನು ಸದ್ದು ಮಾಡದೆ ಗಮನಿಸುತ್ತಲೇ ಇದ್ದೇವೆ. ಮೈಸೂರಿನ ಪ್ರತಿಷ್ಠಿತ ಚಾಮುಂಡಿ ಬೆಟ್ಟವೂ ಈ ಆಧುನಿಕತೆ, ಧಾರ್ಮಿಕತೆ ಮತ್ತು ಪ್ರವಾಸೋದ್ಯಮದ ವಾಣಿಜ್ಯ ಹಿತಾಸಕ್ತಿಗಳಿಗೆ ಬಲಿಯಾಗುತ್ತಿದ್ದು, ರೋಪ್‌ವೇ ನಿರ್ಮಿಸುವ ಮೂಲಕ ಅಲ್ಲಿನ ಜೈವವೈವಿಧ್ಯತೆಗೆ ಸಂಚಕಾರ ತರಲು ಎಲ್ಲ ಸಿದ್ಧತೆಗಳೂ ನಡೆದಿವೆ. ಕಲ್ಲಿದ್ದಲು ಗಣಿಗಾರಿಕೆಯಾಗಲೀ, ಅಣು ವಿದ್ಯುತ್‌ ಉತ್ಪಾದನೆಯಾಗಲೀ ಅಥವಾ ಬೃಹತ್‌ ಅಣೆಕಟ್ಟುಗಳೇ ಆಗಲಿ, ಅರಣ್ಯ ಸಂಪತ್ತಿನ ಸಮಾಧಿಯ ಮೇಲೆ ನಿರ್ಮಿತವಾಗುವ ಈ ಮಾರುಕಟ್ಟೆ ಸಾಮ್ರಾಜ್ಯಗಳನ್ನು ವಿರೋಧಿಸುವುದೂ ಸಹ “ ದೇಶದ್ರೋಹ ” ಅಥವಾ “ ಅಭಿವೃದ್ಧಿ ವಿರೋಧ ” ಎಂಬ ಹಣೆಪಟ್ಟಿಯನ್ನು ಹೊತ್ತು ಹೋರಾಟ ನಡೆಸಬೇಕಿದೆ.

ನಗರೀಕರಣ ಹೆಚ್ಚಾದಂತೆಲ್ಲಾ ಜನದಟ್ಟಣೆ ಮತ್ತು ವಾಹನದಟ್ಟಣೆಯೂ ಹೆಚ್ಚಾಗುತ್ತಿದ್ದು, ಆಧುನಿಕ ನಾಗರಿಕತೆಯಲ್ಲಿ ಈ ದಟ್ಟಣೆಯಿಂದುಂಟಾಗುವ ಪರಿಸರ ಮಾಲಿನ್ಯದ ಪರಿಜ್ಞಾನವೇ ಇಲ್ಲದಂತಾಗುತ್ತಿದೆ. ವಾಹನಗಳು ಉಗುಳುವ ಹೊಗೆ, ದಿನಕ್ಕೆ 20 ಗಂಟೆಗಳ ಕಾಲವಾದರೂ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯ, ನಗರೀಕೃತ ಜೀವನದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಮತ್ತೊಬ್ಬರ ಹೊಣೆಯನ್ನಾಗಿ ಮಾಡಿರುವ ಆಧುನಿಕ ಮಾನವ ಸಮಾಜದ ಬೇಜವಾಬ್ದಾರಿ ನಡವಳಿಕೆ ಇವೆಲ್ಲವೂ ನಮ್ಮ ಸುತ್ತಲಿನ ಪರಿಸರವನ್ನೇ ಗೊಬ್ಬರದ ಗುಂಡಿಗಳನ್ನಾಗಿ ಮಾಡುತ್ತಿದೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹಣೆ, ಶೇಖರಣೆ, ಸಂಸ್ಕರಣೆ ಮತ್ತು ವಿಲೇವಾರಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಕೋಟ್ಯಂತರ ರೂಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೂ ರಸ್ತೆಬದಿಯ ಕಸದ ರಾಶಿ ಇಲ್ಲದ ಬಡಾವಣೆಗಳನ್ನು ಎಲ್ಲೆಂದರಲ್ಲಿ ಕಾಣಬಹುದಾಗಿದೆ. ಗಂಗಾನದಿಯ ಮಾಲಿನ್ಯದ ಬಗ್ಗೆ ಸದಾ ಪರಿತಪಿಸುತ್ತಾ ಭಾವುಕವಾಗುವ ಮಧ್ಯಮ ವರ್ಗದ ಮನಸುಗಳು ತಮ್ಮ ರಸ್ತೆಯಲ್ಲೇ ಇಕ್ಕೆಲಗಳಲ್ಲಿರುವ ಕಸದ ರಾಶಿಯನ್ನು ಕಂಡೂ ಕಾಣದಂತೆ ಇರುತ್ತವೆ. ಈ ಕಸದ ರಾಶಿಯೇ ಬೀಡಾಡಿ ದನಗಳಿಗೆ ಭೂರಿಭೋಜನದ ಕೇಂದ್ರಗಳೂ ಆಗಿರುತ್ತವೆ.

ಅಂದರೆ, ಸಾರ್ವಜನಿಕ ಪರಿಕಲ್ಪನೆಯಲ್ಲಿ “ ಪರಿಸರ ” ಒಂದು ಅಮೂರ್ತ ಪ್ರಜ್ಞೆಯಾಗಿ ಮಾತ್ರ ಕಂಡುಬರುತ್ತಿದೆ. ಅಥವಾ ಅತೀತತೆಯ ನೆಲೆಯಲ್ಲಿ, ಭಾವನಾತ್ಮಕತೆಯ ನೆಲೆಯಲ್ಲಿ ಮಾತ್ರವೇ ಕಂಡುಬರುತ್ತಿದೆ. ಹಾಗಾಗಿಯೇ ನದಿ ಸ್ವಚ್ಚತೆಯ ಬಗ್ಗೆ ಉಪನ್ಯಾಸಗಳನ್ನು ನೀಡುವವರೂ ಸಹ, ನದಿ ತೀರಗಳಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳನ್ನಾಗಲೀ, ಅದರಿಂದ ಉಂಟಾಗುವ ಮಾಲಿನ್ಯವನ್ನಾಗಲೀ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಮೈಸೂರಿನ ಸುತ್ತಲಿನ ಕಾವೇರಿ, ಕಪಿಲೆ, ಕಬಿನಿ ನದಿಯ ತೀರಗಳಲ್ಲಿ ನಡೆಯುವ ಚಟುವಟಿಕೆಗಳನ್ನು ನಿರ್ಬಂಧಿಸುವುದು ಪರಿಸರ ಪ್ರಜ್ಞೆಯ ಒಂದು ಭಾಗವಾದಾಗ ಮಾತ್ರವೇ ನಮ್ಮ ಜಲಮಾಲಿನ್ಯ ಕುರಿತ ಪ್ರಲಾಪಗಳಿಗೆ ಅರ್ಥ ಮೂಡಲು ಸಾಧ್ಯ. ಇಲ್ಲಿ ಧಾರ್ಮಿಕ ನಂಬಿಕೆಗಳ ಪ್ರಶ್ನೆ ಎದುರಾಗುವುದಾದರೂ, ನದಿ ನೀರನ್ನು ಮಲಿನಗೊಳಿಸದೆಯೇ ಈ ವಿಧಿವಿಧಾನಗಳನ್ನು ಆಚರಿಸಬಹುದಾದ ಮಾರ್ಗಗಳನ್ನೂ ಕಂಡುಕೊಳ್ಳಬೇಕಿದೆ. ಜನಸಾಮಾನ್ಯರ ಶ್ರದ್ಧಾಭಕ್ತಿಗಳಿಗೆ ಭಂಗ ಉಂಟುಮಾಡದೆಯೇ ಈ ನದಿಗಳ ಮತ್ತು ಬೆಟ್ಟಗುಡ್ಡಗಳ ನೈಸರ್ಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಶಾಲ ಮನೋಭಾವವನ್ನು ಆಧುನಿಕ ಸಮಾಜ ರೂಢಿಸಿಕೊಳ್ಳಬೇಕಿದೆ.

ಇದಕ್ಕೆ ಅಡ್ಡಿಯಾಗಬಹುದಾದ ಮಾರುಕಟ್ಟೆ, ವಾಣಿಜ್ಯ ಮತ್ತು ಪ್ರವಾಸೋದ್ಯಮದ ಹಿತಾಸಕ್ತಿಗಳಿಗೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳೂ ಬಂಡವಾಳದ ಮೂಲಗಳಾಗಿಯೇ ಕಾಣುವುದರಿಂದ, ಆಡಳಿತ ನೀತಿಯನ್ನು ರೂಪಿಸುವ ಸರ್ಕಾರಗಳು ತಮ್ಮ ನಿಸರ್ಗ ಪ್ರಜ್ಞೆ ಮತ್ತು ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಸೂಕ್ಷ್ಮಗೊಳಿಸಬೇಕಿದೆ. ಬಂಡವಾಳಶಾಹಿ ಅಭಿವೃದ್ಧಿಯ ಮಾದರಿಗಳು ನಿಸರ್ಗವನ್ನು ಶೋಷಣೆಗೊಳಪಡಿಸುವುದೇ ಅಲ್ಲದೆ ಪರಿಸರ ಅಸಮತೋಲನವನ್ನು ಹೇಗೆ ಸೃಷ್ಟಿಸುತ್ತದೆ ಎನ್ನಲು ಕೇದಾರನಾಥದಲ್ಲಿ ನಡೆಯುತ್ತಿರುವ ಭೂಕುಸಿತಗಳು, ಎರಡು ವರ್ಷದ ಹಿಂದೆ ಕರ್ನಾಟಕದ ಕೊಡಗಿನಲ್ಲಿ ಸಂಭವಿಸಿದ ಅನಾಹುತಗಳು ಕೇವಲ ನಿದರ್ಶನಗಳಷ್ಟೇ. ಆಧುನಿಕ ನಗರೀಕರಣ ಪ್ರಕ್ರಿಯೆಗೆ ಬಲಿಯಾಗುತ್ತಿರುವ ನದಿ ತೀರಗಳು ಮರಳು ಗಣಿಗಾರಿಕೆಯಿಂದ ಒಡಲು ಬರಿದುಮಾಡಿಕೊಳ್ಳುತ್ತಿರುವಂತೆಯೇ, ನಿಸರ್ಗ ಸಮತೋಲನ ಕಾಪಾಡುವ ಬೆಟ್ಟಗುಡ್ಡಗಳು ನಿರ್ಮಾಣ ಕಾಮಗಾರಿಗಳಿಗೆ ಜಲ್ಲಿ, ಕಲ್ಲು, ಎಮ್‌ಸ್ಯಾಂಡ್‌ ಪೂರೈಸುವ ಸಲುವಾಗಿ ಬರಿದಾಗುತ್ತಿವೆ.

ಮೈಸೂರಿನಲ್ಲೇ ಇರುವ ತ್ಯಾಜ್ಯ ವಿಲೇವಾರಿ ಘಟಕವನ್ನು “ ಸೂಯೆಜ್‌ ಫಾರ್ಮ್‌ ” ಎಂದು ಮುದ್ದಾಗಿ ಕರೆಯಲಾಗುತ್ತದೆ. ವಾಸ್ತವದಲ್ಲಿ ಅದು “ ಸೆವೇಜ್‌ ಫಾರ್ಮ್‌ ” ಅಂದರೆ ಇಡೀ ನಗರದ ತ್ಯಾಜ್ಯವನ್ನು ಸಂಗ್ರಹಿಸುವ ಬೃಹತ್‌ ಕಸದ ಬೆಟ್ಟಗಳನ್ನು ಹೊಂದಿರುವ ಒಂದು ತಾಣ. ಈ ತಾಣದ ಸುತ್ತಲಿನ ಜನತೆ ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳು ಮೈಸೂರು ಮಹಾನಗರ ಪಾಲಿಕೆಯನ್ನಾಗಲೀ, ಅದೇ ವಲಯದಲ್ಲಿ ವಾಸಿಸುವ ಜನಪ್ರತಿನಿಧಿಗಳಿಗಾಗಲೀ ಸಮಸ್ಯೆ ಎನಿಸುತ್ತಲೇ ಇಲ್ಲ. ಆದರೂ ಅಲ್ಲಿನ ನಿವಾಸಿಗಳು ತಮ್ಮ ಜೀವನ ನಿರ್ವಹಣೆಗಾಗಿ ಆರೋಗ್ಯ ಕಾಪಾಡಿಕೊಂಡು, ಹಲವು ಅನಾರೋಗ್ಯಗಳೊಂದಿಗೇ ಬದುಕುತ್ತಿದ್ದಾರೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಅನಾರೋಗ್ಯವನ್ನು ತಪ್ಪಿಸುವ ಯಾವುದೇ ಯೋಜನೆ ಇರುವುದಿಲ್ಲ ಬದಲಾಗಿ ತಲೆದೋರುವ ಅನಾರೋಗ್ಯಗಳ ನಿವಾರಣೆಗೆ “ ಕಲ್ಯಾಣ ಯೋಜನೆಗಳನ್ನು ” ರೂಪಿಸಲಾಗುತ್ತದೆ. ಯಶಸ್ವಿನಿ, ಜನೌಷಧಿ, ಆಯುಷ್ಮಾನ್‌ ಇತ್ಯಾದಿ. ಇದು ಬಂಡವಾಳ ವ್ಯವಸ್ಥೆಯ ದ್ವಂದ್ವಗಳಲ್ಲಿ ಅತ್ಯಂತ ಪ್ರಧಾನವಾದುದು.

ಈ ಕಾಳಜಿ, ಕಳಕಳಿ ಮತ್ತು ದ್ವಂದ್ವಗಳ ನಡುವೆಯೇ ನಾವು ಮತ್ತೊಂದು ಪರಿಸರ ದಿನವನ್ನು ಆಚರಿಸುತ್ತಿದ್ದೇವೆ. ಕಸ ಆಯಲು ಬರುವವರು ಕೈಗವುಸುಗಳಿಲ್ಲದ, ಮುಖಗವುಸುಗಳಿಲ್ಲದೆ, ಸೂಕ್ತ ವೇತನ ಸೌಲಭ್ಯಗಳೂ ಇಲ್ಲದೆ ತಮ್ಮ ಜೀವವನ್ನೇ ಪಣಕಟ್ಟಿಟ್ಟು ಮನೆಮನೆಗೆ ಬರುತ್ತಿರುತ್ತಾರೆ. ಆದರೂ ರಸ್ತೆಯ ಇಕ್ಕೆಲಗಳಲ್ಲಿ ತಾಜ್ಯದ ರಾಶಿ ರಾರಾಜಿಸುತ್ತಿರುತ್ತದೆ. ಮತಯಾಚನೆಗೆ ಬರುವ ಜನಪ್ರತಿನಿಧಿಗಳು ಮೂಗಿನೊಂದಿಗೆ ಒಳಗಣ್ಣನ್ನೂ ಮುಚ್ಚಿಕೊಂಡು ಹಾದು ಹೋಗಿಬಿಡುತ್ತಾರೆ. ಬೀಡಾಡಿ ದನಗಳು ಈ ಕಸದ ರಾಶಿಗಳಲ್ಲಿ ಬಾಯಾಡಿಸಿ ಮತ್ತಷ್ಟು ಹರಡಿಬಿಡುತ್ತವೆ. ಸುತ್ತ ವಾಸಿಸುವ ನಾಗರಿಕರು, ಗಂಗೆಯ ಪಾವಿತ್ರ್ಯತೆ, ಹಿಮಾಲಯದ ಭವ್ಯತೆಯ ಭ್ರಮೆಯಲ್ಲಿ ತೇಲಾಡುತ್ತಾ ಸ್ವಚ್ಚ ಭಾರತದ ಫಲಾನುಭವಿಗಳಾಗಿ ತಮ್ಮ ಬದುಕು ಸವೆಸುತ್ತಾ ಸಾಗುತ್ತಾರೆ. ಪರಿಸರ ಮಾಲಿನ್ಯ ಬಾಧಿಸಬೇಕಿರುವುದು ಈ ಜನತೆಯನ್ನು, ಜಾಗೃತಿ ಮೂಡಿಸಬೇಕಿರುವುದು ಈ ಜನತೆಯ ನಡುವೆ, ಸಾರ್ವಜನಿಕ ವೇದಿಕೆ ಅಥವಾ ವಿಚಾರ ಸಂಕಿರಣಗಳಲ್ಲಿ ಅಲ್ಲ.

ಈ ಸುಡುವಾಸ್ತವವನ್ನು ಅರ್ಥಮಾಡಿಕೊಂಡರೆ ಪರಿಸರ ದಿನಾಚರಣೆಯೂ ಸಾರ್ಥಕವಾದೀತು.

Tags: BJPCongress PartyCovid 19ಕೋವಿಡ್-19ನರೇಂದ್ರ ಮೋದಿಪರಿಸರ ಪ್ರಜ್ಞೆಬಿಜೆಪಿ
Previous Post

ಈ ಹಿಂದಿನ ಪಠ್ಯದಲ್ಲಿಯೇ ಸತ್ಯಾಂಶವಿತ್ತು, ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು ಸರಿಯಲ್ಲ : ಬಸವರಾಜ ಹೊರಟ್ಟಿ

Next Post

ವಿದ್ಯಾದಾನದ ಮೂಲಕ ಭವಿಷ್ಯದ ಭಾರತ ನಿರ್ಮಿಸುತ್ತಿರುವ ಶಿಕ್ಷಕರಿಗೆ ಧನ್ಯವಾದ : ಸಚಿವ ವಿ.ಸೋಮಣ್ಣ

Related Posts

Top Story

ಡೀಪ್ಟೆಕ್ ದಶಕಕ್ಕೆ ಮುನ್ನುಡಿ ಬರೆದ ಬೆಂಗಳೂರು ಟೆಕ್ ಮೇಳ, ಡೀಪ್ಟೆಕ್ ನವೋದ್ಯಮಗಳಿಗೆ ₹ 400 ಕೋಟಿ ನೆರವು: ಸಚಿವ ಪ್ರಿಯಾಂಕ್ ಖರ್ಗೆ

by ಪ್ರತಿಧ್ವನಿ
November 20, 2025
0

ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿರುವ ಭವಿಷ್ಯ ರೂಪಿಸುವವರು, ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆದಾರರಿಗೆ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ ಬೆಂಗಳೂರು, ನವೆಂಬರ್ 20: ಇಲ್ಲಿ...

Read moreDetails

“ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಮೂರು ವರ್ಷಗಳಲ್ಲಿ ರೂ 88 ಲಕ್ಷ ಕೋಟಿಗೆ ಏರಿಕೆ”

November 20, 2025

ಟೆಕ್ ಮೇಳದಲ್ಲಿ ಭವಿಷ್ಯದ ಇಂಧನ ಕ್ಷೇತ್ರ ಕುರಿತು ಸಂವಾದ ನಡೆಸಿದ ಸಚಿವ ಪ್ರಿಯಾಂಕ ಖರ್ಗೆ..!!

November 20, 2025

ವಿದ್ಯಾರ್ಥಿಗಳೊಂದಿಗೆ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮ: ಸಚಿವ ಎನ್‌ ಎಸ್‌ ಭೋಸರಾಜು

November 20, 2025

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 20, 2025
Next Post
ವಿದ್ಯಾದಾನದ ಮೂಲಕ ಭವಿಷ್ಯದ ಭಾರತ ನಿರ್ಮಿಸುತ್ತಿರುವ ಶಿಕ್ಷಕರಿಗೆ ಧನ್ಯವಾದ : ಸಚಿವ ವಿ.ಸೋಮಣ್ಣ

ವಿದ್ಯಾದಾನದ ಮೂಲಕ ಭವಿಷ್ಯದ ಭಾರತ ನಿರ್ಮಿಸುತ್ತಿರುವ ಶಿಕ್ಷಕರಿಗೆ ಧನ್ಯವಾದ : ಸಚಿವ ವಿ.ಸೋಮಣ್ಣ

Please login to join discussion

Recent News

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು
Top Story

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

by ಪ್ರತಿಧ್ವನಿ
November 21, 2025
ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ
Top Story

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

by ಪ್ರತಿಧ್ವನಿ
November 21, 2025
ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**
Top Story

ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada