ಮೈಸೂರಿಗೆ ಸಾಂಸ್ಕೃತಿಕ ನಗರಿ ಎಂದು ಹೆಸರು ಬಂದಿರುವುದಕ್ಕೆ ಮೂಲ ಚಾರಿತ್ರಿಕ ಕಾರಣಗಳು ಹಲವು ಇರಬಹುದು. ಒಡೆಯರ್ ಆಳ್ವಿಕೆಯ ಕಾಲದಿಂದಲೂ ಸಂಗೀತ, ಕಲೆ, ಸಾಹಿತ್ಯ, ನಾಟಕ ಹೀಗೆ ಸಾಂಸ್ಕೃತಿಕ ಅಭಿವ್ಯಕ್ತಿಯ ಕೇಂದ್ರ ಬಿಂದುವಾಗಿ ಮೈಸೂರು ನಗರ ಬೆಳೆದುಬಂದಿದ್ದು ಈ ಹೆಸರು ಸಾರ್ಥಕವಾಗಿಯೇ ಕಾಣುತ್ತದೆ. ಆದರೆ ಸಮಕಾಲೀನ ಸಂದರ್ಭದಲ್ಲಿ ನಿಂತು, ರಾಜಪರಂಪರೆಯ ಸಾಂಸ್ಕೃತಿಕ ಹೆಜ್ಜೆಗಳನ್ನು ಮರೆತು ನೋಡಿದಾಗಲೂ ಸಹ, ಆಧುನಿಕ ಭಾರತದಲ್ಲಿ ಮೈಸೂರು ಒಂದು ಸಾಂಸ್ಕೃತಿಕ ನಗರಿಯಾಗಿ ಕಾಣುವುದು ಇಲ್ಲಿ ಅಭಿವ್ಯಕ್ತಗೊಂಡಿರುವ ಸಾಹಿತ್ಯಕ ಮನಸುಗಳ ಮೂಲಕ, ಕಲಾಸಕ್ತ ಹೃದಯಗಳ ಮೂಲಕ, ಸಂಗೀತ ರಸಿಕರ ಮತ್ತು ಕಲಾವಿದರ ಮೂಲಕ. ಎಲ್ಲ ಪ್ರಕಾರಗಳ ಸಂಗೀತ ಸಾಹಿತ್ಯ ಮತ್ತು ಕಲೆಯ ಶ್ರೀಮಂತಿಕೆಯನ್ನು ಹೊತ್ತಿರುವ ಮೈಸೂರು ಹೊಸ ತಲೆಮಾರಿನ ಪ್ರತಿಭೆಗಳಿಗೆ ನೆಲೆಯಾಗುತ್ತಿರುವಂತೆಯೇ ನಿರಂತರವಾಗಿ ಹಿರಿಯ ತಲೆಮಾರಿನ ಕೊಂಡಿಗಳನ್ನು ಕಳೆದುಕೊಳ್ಳುತ್ತಲೂ ಇದೆ.
ಇಂತಹುದೇ ಒಂದು ಸಾಂಸ್ಕೃತಿಕ ಕೊಂಡಿ ಇಂದು ಮೈಸೂರಿನ ಸೂಕ್ಷ್ಮ ಮನಸುಗಳನ್ನು ಮೌನದಲ್ಲಿ ಮುಳುಗಿಸಿದೆ. ಮೈಸೂರಿನಲ್ಲಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿ ʼ ಹಾಡುಪಾಡು ರಾಮು ʼ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ, ಸಾಹಿತಿ, ಸಾಹಿತ್ಯ ಪ್ರೇರಕ ಹಾಗೂ ಸಮಾಜಮುಖಿ ಜೀವಿ ಟಿ.ಎಸ್. ರಾಮಸ್ವಾಮಿ ಮಂಗಳವಾರ ಮುಂಜಾನೆ 3.20ರ ಸಮಯದಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಖ್ಯಾತ ವಿಮರ್ಶಕ ಜಿ.ಎಚ್. ನಾಯಕ ಅವರನ್ನು ಕಳೆದುಕೊಂಡ ದುಃಖ ಇನ್ನೂ ಆರದಿರುವಾಗಲೇ ಮೈಸೂರಿನ ಮತ್ತೊಂದು ಸಾಂಸ್ಕೃತಿಕ ಪ್ರಣತಿ ಆರಿಹೋಗಿದೆ. ಸಾಮಾನ್ಯವಾಗಿ ಪತ್ರಿಕಾರಂಗವನ್ನು ತಮ್ಮ ಪ್ರಧಾನ ಪ್ರವೃತ್ತಿಯಾಗಿ ಅಥವಾ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವವರು ಸಾಹಿತ್ಯದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾ ಹೋಗುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಕೆಲವೇ ಮುತ್ಸದ್ದಿಗಳು ಪತ್ರಿಕೋದ್ಯಮದೊಂದಿಗೇ ಸಾಹಿತ್ಯವನ್ನೂ ರಚಿಸುತ್ತಾ, ಪೋಷಿಸುತ್ತಾ ಬೆಳೆದುಬಂದಿದ್ದಾರೆ. ಅಂತಹವರಲ್ಲಿ ʼಹಾಡುಪಾಡು ರಾಮುʼ ಒಬ್ಬರಾಗಿದ್ದರು.
ಸಾಹಿತಿಯೊಬ್ಬರ ಸಾಹಿತ್ಯ ಕೃಷಿ ಮತ್ತು ಅದರ ಫಲವತ್ತತೆಯನ್ನು ಪರಿಮಾಣಾತ್ಮಕವಾಗಿ ಅಳೆಯಲಾಗುವುದಿಲ್ಲ, ಎಷ್ಟು ಬರೆದಿದ್ದಾರೆ ಎನ್ನುವುದಕ್ಕಿಂತಲೂ ಎಂತಹ ಪ್ರಬುದ್ಧ, ಮನುಜಸೂಕ್ಷ್ಮ ಸಂವೇದನಾಶೀಲ ಸಾಹಿತ್ಯ ಬರೆದಿದ್ದಾರೆ ಎನ್ನುವುದು ಒಬ್ಬ ವ್ಯಕ್ತಿಯನ್ನು ಸಾಹಿತ್ಯವಲಯದಲ್ಲಿ ಶಾಶ್ವತವಾಗಿ ಪ್ರತಿಷ್ಠಾಪಿಸುತ್ತದೆ. ಅವಿವಾಹಿತರಾಗಿಯೇ ಕೂಡು ಕುಟುಂಬದಲ್ಲಿ ಬಾಳಿ ಬದುಕಿದ ಹಾಡುಪಾಡು ರಾಮು ಅಗ್ನಿಸೂಕ್ತ, ವಿಷ್ಣುಕ್ರಾಂತಿ ಮತ್ತು ಇತರ ಪದ್ಯಗಳು, ರಾಮು ಕವಿತೆಗಳು – ಈ ಮೂರು ಕವನ ಸಂಕಲನಗಳನ್ನು ರಚಿಸಿದ್ದಾರೆ. ಅದೇ ವೇಳೆ ನೂರಾರು ಕವಿಗಳಿಗೆ ಸ್ಪೂರ್ತಿಯೂ ಆಗಿದ್ದಾರೆ. ಈ ಅಕ್ಷರ ಗುಚ್ಚಗಳನ್ನೂ ಮೀರಿ ರಾಮಸ್ವಾಮಿ ಅವರು ಮೈಸೂರಿನ ಜನಮಾನಸದಲ್ಲಿ ಉಳಿದಿರುವುದು ಅವರ ಮೂಲ ಹೆಸರನ್ನೇ ಮರೆಮಾಚುವಷ್ಟು ಮಟ್ಟಿಗೆ ಬಳಕೆಗೆ ಬಂದಿರುವ ಆಂದೋಲನ ಪತ್ರಿಕೆಯ ಭಾನುವಾರದ ಪುರವಣಿ “ ಹಾಡುಪಾಡು ” ಮೂಲಕ. ಕೂಡುಕುಟುಂಬದಲ್ಲಿ ಇದ್ದುಕೊಂಡು ಏಕಾಂತತೆ-ಒಂಟಿತನಕ್ಕೆ ಅವಕಾಶವನ್ನೇ ನೀಡದಂತೆ ತಮ್ಮ ಸಾಮಾಜಿಕ-ಸಾಹಿತ್ಯಕ-ಪತ್ರಿಕೋದ್ಯಮದ ಕೃಷಿಯನ್ನು ಹಸನಾಗಿ ಪೋಷಿಸಿಕೊಂಡು ಬಂದಿದ್ದ ರಾಮು ಅವರಿಗೆ ಈ ನಾಲ್ಕು ಗೋಡೆಗಳಿಂದಾಚೆಗೂ ಒಂದು ದೊಡ್ಡ ಕುಟುಂಬ ಇತ್ತು. ಅದು ಮೈಸೂರಿನ ಪ್ರಜ್ಞಾವಂತ ಸಮಾಜ ಮತ್ತು ಸಾಂಸ್ಕೃತಿಕ ಮನಸುಗಳು.
ರಾಮು ಅವರನ್ನು ಪತ್ರಿಕೋದ್ಯಮಕ್ಕೆ ಅಥವಾ ಅವರಿಂದಲೇ ರೂಪುಗೊಂಡು ಓದುಗರನ್ನು ಅವರ ಅನುಪಸ್ಥಿತಿಯಲ್ಲೂ ಇಂದಿಗೂ ತಣಿಸುತ್ತಿರುವ ʼಹಾಡುಪಾಡುʼ ಎಂಬ ಪುರವಣಿಗೆ ಮಾತ್ರ ಸೀಮಿತಗೊಳಿಸುವುದು ಅಪಚಾರವಾಗುತ್ತದೆ. ಇದನ್ನೂ ಮೀರಿದ ಸಾಹಿತ್ಯ-ಸಾಂಸ್ಕೃತಿಕ ಪ್ರಜ್ಞೆ ಅವರಲ್ಲಿದ್ದುದನ್ನು ಅವರ ಸಮಕಾಲೀನರ ನಡುವಿನ ಮಾತುಕತೆಗಳಲ್ಲಿ ಗುರುತಿಸಬಹುದು. ವಾಣಿಜ್ಯೀಕರಣಕ್ಕೊಳಗಾಗಿ, ಕಾರ್ಪೋರೇಟ್ ಹಿತಾಸಕ್ತಿಗಳ ನಿಬಂಧನೆಗಳಿಗೊಳಪಟ್ಟು ತಮ್ಮ ಪಾರಂಪರಿಕ ನೈತಿಕ ಮೊನಚನ್ನು ಕಳೆದುಕೊಳ್ಳುತ್ತಿರುವ ಪತ್ರಿಕೋದ್ಯಮದಲ್ಲಿ ʼ ಪ್ರಾಮಾಣಿಕತೆ ʼ ಎಂಬ ಮ್ಯೂಸಿಯಂ ಪೀಸ್ಗೆ ಸಾಕ್ಷಿಯಾಗಿದ್ದವರು ಟಿ.ಎಸ್. ರಾಮಸ್ವಾಮಿ. ಪತ್ರಿಕೆಗಳೆಂದರೆ ಕೇವಲ ಸುದ್ದಿಪ್ರಸರಣದ ಅಕ್ಷರ ಸಾಧನಗಳಲ್ಲ, ಅದನ್ನೂ ಮೀರಿದ ನೈತಿಕ ಕರ್ತವ್ಯ ಅವುಗಳಿಗೆ ಇರುತ್ತದೆ ಎಂಬ ಉದಾತ್ತ ನಿಲುಮೆಯನ್ನೇ ಸಾಕ್ಷಾತ್ಕರಿಸಿಕೊಂಡಿದ್ದ ಹಾಡುಪಾಡು ರಾಮು ಆಂದೋಲನ ಪತ್ರಿಕೆಯ ತಮ್ಮ ದಶಕಗಳ ಒಡನಾಟದಲ್ಲಿ ಇದನ್ನು ನಿರೂಪಿಸಿದ್ದಂತೂ ಸತ್ಯ.
1970ರ ದಶಕದಲ್ಲಿ ಇಡೀ ಭಾರತೀಯ ಸಮಾಜವನ್ನೇ ಜಾಗೃತಗೊಳಿಸುವಂತಹ ಜನಾಂದೋಲನಗಳು ಎಲ್ಲೆಡೆ ವ್ಯಾಪಿಸುತ್ತಿದ್ದಾಗ, ಸಾಹಿತ್ಯ, ಕಲೆ, ಸಂಗೀತ, ಜಾನಪದ, ನಾಟಕ, ಹವ್ಯಾಸಿ ರಂಗಭೂಮಿ ಮತ್ತು ಪತ್ರಿಕೋದ್ಯಮ ಹೀಗೆ ಎಲ್ಲ ಸಾಂಸ್ಕೃತಿಕ ನೆಲೆಗಳಲ್ಲೂ ಪರಿವರ್ತನೆಯ ಕೂಗು ಉಲ್ಬಣಿಸುತ್ತಿದ್ದಾಗ, ಮೈಸೂರು ಸಹ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ನವ್ಯ-ದಲಿತ-ಬಂಡಾಯ ಸಾಹಿತ್ಯದ ಬೇರುಗಳು ಮೈಸೂರಿನಲ್ಲೂ ವ್ಯಾಪಿಸುತ್ತಿದ್ದ ಕಾಲ. ಎಡಪಂಥೀಯ ವಿಚಾರಧಾರೆ, ಸಮಾಜವಾದಿ ಧೋರಣೆ ಮತ್ತು ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಮಾನತೆಯನ್ನು ಒದಗಿಸಬೇಕೆಂಬ ನಿಶ್ಚಲ ಧ್ಯೇಯ ಈ ಕಾಲಘಟ್ಟದ ಘೋಷವಾಕ್ಯಗಳಾಗಿ ಎಲ್ಲ ಸಾಂಸ್ಕೃತಿಕ ವಲಯಗಳಲ್ಲೂ ಪಸರಿಸಿತ್ತು ಇದೇ ವಾತಾವರಣದಲ್ಲೇ ತಮ್ಮ ಸಾಮಾಜಿಕ ಪಯಣವನ್ನು ಆರಂಭಿಸಿದ ಟಿ.ಎಸ್.ರಾಮಸ್ವಾಮಿ 1970ರ ದಶಕದ ಸಮಾಜಮುಖಿ-ಪ್ರಗತಿಪರ ಧ್ವನಿಗಳಲ್ಲಿ ಒಂದಾಗಿದ್ದರು. ಒಡನಾಡಿಯೂ, ಸಹಪಾಠಿಯೂ ಆಗಿದ್ದ ದೇವನೂರು ಮಹದೇವ ಅವರನ್ನೊಳಗೊಂಡಂತೆ, ಕೆಲವು ತಿಂಗಳುಗಳ ಹಿಂದೆ ನಿಧನರಾದ ಪ. ಮಲ್ಲೇಶ್, ಜಿ..ಎಚ್. ನಾಯಕ್, ನಮ್ಮೊಡನಿಲ್ಲದ ಕುಕ್ಕರಹಳ್ಳಿ ಬಸವರಾಜ್, ಪ್ರೊ. ರಾಮದಾಸ್ ಇನ್ನೂ ಹಲವಾರು ಬುದ್ಧಿಜೀವಿಗಳೊಡನೆ ಹಾಡುಪಾಡು ರಾಮು ತಮ್ಮ ಸಾಮಾಜಿಕ ಬದುಕಿನ ಪಯಣಕ್ಕೆ ಪ್ರವೇಶಿಸಿದ್ದರು.
ಆ ಕಾಲಘಟ್ಟದಲ್ಲಿ ಡಾ. ವಿ. ಲಕ್ಷ್ಮೀನಾರಾಯಣ್, ರತಿರಾವ್, ದಿವಂಗತ ರಾಮಲಿಂಗಂ ಇನ್ನೂ ಮುಂತಾದವರ ಮೂಲಕ ಎಡಪಂಥೀಯ ಸೈದ್ಧಾಂತಿಕ ನೆಲೆಗಳು ಗಟ್ಟಿಯಾಗುವ ದೃಷ್ಟಿಯಿಂದ ಕುಕ್ಕರಹಳ್ಳಿಯಲ್ಲೇ ಸ್ಥಾಪಿಸಲಾಗಿದ್ದ ಮಾರ್ಕ್ಸ್ವಾದಿ ಗ್ರಂಥಾಲಯದ ಸಂಸ್ಥಾಪಕರಲ್ಲಿ ಶ್ರೀಯುತ ಟಿ.ಎಸ್. ರಾಮಸ್ವಾಮಿ ಒಬ್ಬರಾಗಿದ್ದರು. ಆ ಕಾಲಘಟ್ಟದ ಎಲ್ಲ ಸಾಮಾಜಿಕ ತಲ್ಲಣಗಳನ್ನು ತಮ್ಮದೆಂದೇ ಭಾವಿಸಿ, ಎಲ್ಲ ಜನಪರ-ಪ್ರಗತಿಪರ-ಸಮಾಜುಮುಖಿ ಹೋರಾಟಗಳ ಒಂದು ಭಾಗವಾಗಿಯೇ ಬೆಳೆದ ರಾಮಸ್ವಾಮಿ ಕೆಲ ವರ್ಷಗಳ ನಂತರ ಪತ್ರಿಕೋದ್ಯಮಕ್ಕೆ ಹೊರಳಿದರೂ, ಅವರ ಸಾಮಾಜಿಕ ಕರ್ತವ್ಯವನ್ನು ಮರೆತು ಕಚೇರಿಯೊಳಗೆ ಬಂಧಿತರಾಗಲಿಲ್ಲ. ಹಾಡುಪಾಡು ರಾಮು ಅವರಿಂದ ಮಾರ್ಗದರ್ಶನ ಪಡೆದ ಪತ್ರಕರ್ತರ ಸಂಖ್ಯೆ ಬಹುಶಃ ಎಣಿಸಲಸಾಧ್ಯ. ಯುವ ಪತ್ರಕರ್ತರಿಗೆ ಉತ್ತೇಜನ ನೀಡುವುದೇ ಅಲ್ಲದೆ, ಮಾರ್ಗದರ್ಶಕರೂ ಆಗಿ ತಾವು ಸಂಪಾದಿಸುತ್ತಿದ್ದ ಹಾಡುಪಾಡು ಪುಟಗಳಲ್ಲಿ ಯುವ ಕವಿಗಳಿಗೆ, ಕತೆಗಾರರಿಗೆ, ಚಿತ್ರಕಾರರಿಗೆ ಅವಕಾಶ ಕೊಡುವ ಮೂಲಕ ಹೊಸ ತಲೆಮಾರಿನ ಒಂದು ಬೌದ್ಧಿಕ ಕಣಜವನ್ನು ರೂಪಿಸಿದ್ದರು.
ಯುವ ಕವಿಗಳ ಕಾವ್ಯಗಳನ್ನು ತಿದ್ದಿತೀಡಿ ಅವರಲ್ಲಿರಬಹುದಾಗಿದ್ದ ಕವಿ ಮನಸ್ಸನ್ನು ಮತ್ತಷ್ಟು ಉದ್ಧೀಪನಗೊಳಿಸಿ, ಸಾಹಿತ್ಯ ಕ್ಷೇತ್ರದ ನೊಗ ಹೊರಲು ಸಿದ್ಧಪಡಿಸುತ್ತಿದ್ದ ಹಾಡುಪಾಡು ರಾಮು ಅವರ ಸಾಹಿತ್ಯಕ-ಪತ್ರಿಕೋದ್ಯಮದ ಬೇಸಾಯವು ಮನೆಯೊಳಗಿದ್ದಾಗಲೂ ಅಷ್ಟೇ ಆಸಕ್ತಿಯಿಂದ ನಡೆಯುತ್ತಿತ್ತು ಎಂದು ಅವರ ದೀರ್ಘಕಾಲದ ಒಡನಾಡಿಗಳು ಹೇಳುವುದಿದೆ. ಸದಾ ಯಾವುದಾದರೂ ಗಂಭೀರ ಸಾಹಿತ್ಯ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದುದೇ ಅಲ್ಲದೆ, ಸುತ್ತಲಿನ ಸಮಾಜದ ಎಲ್ಲ ವ್ಯತ್ಯಯಗಳ ಬಗ್ಗೆ ತಮ್ಮ ಆತಂಕ, ತಲ್ಲಣ, ಆಸಕ್ತಿ ಹಾಗೂ ಸದಾಶಯಗಳನ್ನು ಮನೆಗೆ ಬಂದ ಗೆಳೆಯರೊಡನೆ ಚರ್ಚೆ ಮಾಡುತ್ತಿದ್ದುದು ಅವರ ಪ್ರವೃತ್ತಿಯೇ ಆಗಿತ್ತು. ಅವರೊಡಗಿನ ಸಾಹಿತ್ಯ ಚರ್ಚೆಗಳು ರನ್ನ ಪಂಪರಿಂದ ಇತ್ತೀಚಿನ ಕವಿಗಳವರೆಗೂ ವಿಸ್ತರಿಸುತ್ತಿದ್ದುದನ್ನು ರಹಮತ್ ತರೀಕೆರೆ ತಮ್ಮ ಲೇಖನವೊಂದರಲ್ಲಿ ನೆನೆಯುತ್ತಾರೆ. ರಾಮಸ್ವಾಮಿ ಅವರು ಓದಿರುವಷ್ಟು ಪ್ರಮಾಣದಲ್ಲಿ ಬರೆದಿದ್ದರೆ ಬಹುಶಃ ಬಹುದೊಡ್ಡ ಸಾಹಿತಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳಬಹುದಿತ್ತೇನೋ. ಆದರೂ ಕುಮಾರವ್ಯಾಸ ಮತ್ತು ಪಂಪನನ್ನು ಕುರಿತ ಅವರ ಲೇಖನಗಳು ಯಾವುದೇ ಸಾಹಿತ್ಯ ವಿದ್ಯಾರ್ಥಿಗೆ ತೀಕ್ಷ್ಣ ಒಳನೋಟಗಳನ್ನು ನೀಡುವಂತಿರುವುದು ರಾಮು ಅವರ ಸಾಹಿತ್ಯಕ ಪ್ರಭಾವಳಿಯ ದ್ಯೋತಕ.
ರಹಮತ್ ತರೀಕೆರೆ ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳುತ್ತಾರೆ : “ ರಾಮು, ಕನ್ನಡ ಸಾಹಿತ್ಯದ ಬಹಳ ಜನರಿಗೆ ಗೊತ್ತಿಲ್ಲದ ಒಬ್ಬ ಗುಪ್ತಸಾಧಕರು. ಅವರಷ್ಟು ಪ್ರಮಾಣದಲ್ಲಿ ಸಾಹಿತ್ಯ ಓದಿಕೊಂಡಿರುವವರು, ಆ ಬಗ್ಗೆ ಸೂಕ್ಷ್ಮಚಿಂತನೆ ಮಾಡಿರುವವರು ಬಹಳಿಲ್ಲ. ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಎಷ್ಟೊ ಪ್ರೊಫೆಸರುಗಳಿಗೆ ಅವರ ಪಾಂಡಿತ್ಯದ ಕಿಂಚಿತ್ ಪ್ರಮಾಣವಿದ್ದರೂ, ಅವು ಜ್ಞಾನದಿಂದ ಬೆಳಗುತ್ತಿದ್ದವು.” (ಅವಧಿ- 13 ಜೂನ್ 2023).
ಈ ಮಾತುಗಳು ಹಿರಿಯರಿಗೆ ರಹಮತ್ ಸಲ್ಲಿಸಿರುವ ಗೌರವಪೂರ್ವಕ ಗುರುದಕ್ಷಿಣೆಯೋ ಅಥವಾ ಉತ್ಪ್ರೇಕ್ಷಿತ ಹೊಗಳಿಕೆಯೋ ಅಲ್ಲ, ಹಾಡುಪಾಡು ರಾಮು, ಟಿ,ಎಸ್.ರಾಮಸ್ವಾಮಿ ಈ ಮಾತುಗಳನ್ನು ತಮ್ಮ ಬದುಕಿನುದ್ದಕ್ಕೂ ವಿಭಿನ್ನ ಆಯಾಮದಲ್ಲಿ ಸಾಕ್ಷಾತ್ಕರಿಸಿದವರು. ಸಾಹಿತ್ಯಕ ಪ್ರಜ್ಞೆ ಮತ್ತು ಸಾಮಾಜಿಕ ಸೂಕ್ಷ್ಮತೆಯನ್ನು ಹೊಂದಿರುವವರಲ್ಲಿ ಇರಲೇಬೇಕಾದ ಸಂವೇದನಾಶೀಲತೆಗೆ ಹಾಡುಪಾಡು ರಾಮು ಸಾಕ್ಷಿಪ್ರಜ್ಞೆಯಾಗಿದ್ದರು ಎಂದರೆ ಅತಿಶಯೋಕ್ತಿಯೇನಲ್ಲ. ದಿವಂಗತ ಪ ಮಲ್ಲೇಶ್ ಸದಾ ಒಂದು ಮಾತು ಹೇಳುತ್ತಿದ್ದರು ” ನಮ್ಮಲ್ಲಿ ಇರುವುದನ್ನು ಸಮಾಜಕ್ಕೆ ಕೊಡುವುದು ದೊಡ್ಡದಲ್ಲ ರೀ, ಸಮಾಜದ ಒಳಿತಿಗೆ ಏನು ಬೇಕೋ ಅದನ್ನು ನಾವು ಕೊಡಬೇಕು “ ಎಂಬ ಅವರ ಮಾತುಗಳಿಗೆ ಬಹುಶಃ ಹಾಡುಪಾಡು ರಾಮು ಜೀವಂತ ಸಾಕ್ಷಿಯಾಗಿದ್ದರು. ಆಗಿದ್ದರು ಎನ್ನುವುದು ಅಪರಾಧವಾದೀತೇನೋ, ಸದಾ ಕಾಲವೂ ಸಾಕ್ಷಿಪ್ರಜ್ಞೆಯಾಗಿಯೇ ಉಳಿಯಲಿದ್ದಾರೆ. ಅವರ ನೆನಪು ಚಿರಸ್ಥಾಯಿ.