ಬೆಂಗಳೂರು: ನಗರದಲ್ಲಿ ಇತ್ತೀಚಿಗೆ ನಡೆದಿದ್ದ CMS ವಾಹನ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ದೊಡ್ಡ ಹಣ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಪೇಮೆಂಟ್ ಸರ್ವೀಸ್ ಕಂಪನಿಯೇ ನಡೆಸಿದ ಮಹಾ ವಂಚನೆ ಇದಾಗಿದ್ದು, ಎಟಿಎಂಗಳಿಗೆ ಹಣ ತುಂಬಲು ನೀಡಿದ್ದ ಒಂದು ಕೋಟಿಗೂ ಹೆಚ್ಚು ಹಣವನ್ನು ಸಿಬ್ಬಂದಿಯೇ ದೋಚಿ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

HITACHI Payment Service Pvt Ltd ಕಂಪನಿಯ ಸಿಬ್ಬಂದಿಯೇ ಹಣ ದರೋಡೆ ಮಾಡಿಕೊಂಡು ಎಸ್ಕೇಪ್ ಆಗಿರುವುದು ಬೆಳಕಿಗೆ ಬಂದಿದೆ. ಎರಡು ಪ್ರತ್ಯೇಕ ತಂಡಗಳು ಹಣ ದೋಚಿವೆ. ಒಂದು ತಂಡ ಸುಮಾರು 50 ಲಕ್ಷ ರೂಪಾಯಿ, ಮತ್ತೊಂದು ತಂಡ ಸುಮಾರು 80 ಲಕ್ಷ ರೂಪಾಯಿ ದರೋಡೆ ಮಾಡಿಕೊಂಡು ಪರಾರಿಯಾಗಿದೆ ಎನ್ನಲಾಗಿದೆ.

SBI ಮತ್ತು AXIS ಬ್ಯಾಂಕ್ ಎಟಿಎಂಗಳಿಗೆ ಹಣ ಡೆಪಾಸಿಟ್ ಮಾಡುವ ಜವಾಬ್ದಾರಿ HITACHI ಕಂಪನಿಗೆ ಇದೆ. ಕೋರಮಂಗಲದ ಆ್ಯಕ್ಸಿಸ್ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಎಟಿಎಂಗಳಿಗೆ ಹಾಕುವಂತೆ ಕಂಪನಿ ಅಧಿಕಾರಿ ಮಿಥುನ್ ಸೂಚನೆ ನೀಡಿದ್ದರು. ಪ್ರವೀಣ್, ಧನಶೇಖರ್, ರಾಮಕ್ಕ, ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಮತ್ತು ವರುಣ್ ಎಂಬ ಸಿಬ್ಬಂದಿಯನ್ನು ಎರಡು ತಂಡಗಳಾಗಿ ವಿಭಜಿಸಲಾಗಿತ್ತು. ಒಂದು ತಂಡಕ್ಕೆ 80 ಲಕ್ಷ 49 ಸಾವಿರ 800 ರೂಪಾಯಿ, ಮತ್ತೊಂದು ತಂಡಕ್ಕೆ 57 ಲಕ್ಷ 96 ಸಾವಿರ 400 ರೂಪಾಯಿ ಹಣ ನೀಡಲಾಗಿತ್ತು. ಆದರೆ ಎರಡೂ ತಂಡಗಳು ಎಟಿಎಂಗಳಿಗೆ ಹಣ ಹಾಕದೇ ಎಸ್ಕೇಪ್ ಆಗಿವೆ.

ಜನವರಿ 19ರಂದು ಹಣ ಡೆಪಾಸಿಟ್ ಮಾಡುವಂತೆ ಸೂಚನೆ ನೀಡಲಾಗಿತ್ತು. ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಗೆ ಮಿಥುನ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.














