ನುಹ್ ಗಲಭೆ ಘಟನೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಮಂಗಳವಾರ (ಆಗಸ್ಟ್ 22) ಬಂಧಿಸಿದ್ದಾರೆ.
ಬಂಧನವಾಗಿರುವ ಅಮೀರ್ ಎಂಬ ಆರೋಪಿ ಗಲಭೆ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿರುವ ತೌರು ಪ್ರದೇಶದಲ್ಲಿ ನುಹ್ ಗಲಭೆ ಸಂಬಂಧ ಅಮೀರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಮೀರ್ ಹಾಗೂ ಆತನ ಸಹಚರರು ಅಡಗಿದ್ದ ಸ್ಥಳದ ಮೇಲೆ ಮಂಗಳವಾರ ಬೆಳಗ್ಗೆ ದಾಳಿ ಮಾಡಿದ್ದರು. ಈ ವೇಳೆ ಅಮೀರ್ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಪೊಲೀಸರು ಅಮೀರ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಸದ್ಯ ಅಮೀರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆ ವೇಳೆ ಆರಂಭವಾದ ನುಹ್ ಗಲಭೆ ಕೋಮು ರೂಪ ಪಡೆದು ತೀವ್ರ ತಿಕ್ಕಾಟಕ್ಕೆ ತಿರುಗಿತ್ತು. ಇದು ಪಕ್ಕದ ಗುರುಗ್ರಾಮ ಜಿಲ್ಲೆಗೂ ವ್ಯಾಪಿಸಿತ್ತು. ಘಟನೆಯಲ್ಲಿ ಕನಿಷ್ಠ 6 ಮಂದಿ ಸಾವಿಗೀಡಾಗಿ, 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.



