ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಒಗ್ಗಟ್ಟಾಗಿದ್ದು, ಶಾಸಕ ಲಕ್ಷ್ಮಣ್ ಸವದಿ ಮತ್ತು ಮಾಜಿ ಸಂಸದ ರಮೇಶ್ ಕತ್ತಿ ಬಣಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

ಪ್ರತಿಷ್ಠೆಗೆ ಕಾರಣವಾಗಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಾಸಕ ರಾಜು ಕಾಗೆ ಆಯ್ಕೆಯಾಗಿದ್ದಾರೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಆಡಳಿತದ ಚುಕ್ಕಾಣಿಗಾಗಿ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮಣ್ ಸವದಿ ಮತ್ತು ರಮೇಶ್ ಕತ್ತಿ ಬಣಗಳ ನಡುವೆ ಹಣಾಹಣಿ ನಡೆದಿದ್ದು, ಅಂತಿಮವಾಗಿ ರಾಜಕೀಯ ಪಕ್ಷಗಳನ್ನು ಬದಿಗಿಟ್ಟು ಲಿಂಗಾಯತ ಸಮುದಾಯದ ನಾಯಕ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಾಡುವಲ್ಲಿ ಜಾರಕಿಹೊಳಿ ಸಹೋದರರು ಯಶಸ್ವಿಯಾಗಿದ್ದಾರೆ. ಸದ್ಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಣ್ಣಾ ಸಾಹೇಬ್ ಜೊಲ್ಲೆ ರಾಜಕೀಯ ಬೇಸರಗಳನ್ನು ಬದಿಗಿಟ್ಟು ತಮ್ಮ ಗೆಲುವಿಗೆ ಹೆಗಲು ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಎಲ್ಲಾ ಜಾರಕಿಹೊಳಿ ಸಹೋದರಿಗೆ ಧನ್ಯವಾದ ತಿಳಿಸಿದ್ದಾರೆ.












