ಕಾಂಗ್ರೆಸ್ ಪಕ್ಷ ಈ ಹಿಂದೆ ಅನ್ನಭಾಗ್ಯ ಯೋಜನೆಯಲ್ಲಿ 10ಕೆಜಿ ಅಕ್ಕಿ ನೀಡುವ ಯೋಜನೆ ಘೋಷಣೆ ಮಾಡಿದ್ದರು. ಆ ಬಳಿಕ ಜನರು ಸೋಮಾರಿ ಆಗ್ತಾರೆ ಎಂದು ಕೆಲವರು ವಿರೋಧ ಕೂಡ ಮಾಡಿದ್ದರು. ಆದರೂ ಸಿದ್ದರಾಮಯ್ಯ ಸರ್ಕಾರ ಹಸಿವಿನಿಂದ ಜನ ಮಲಗಬಾರದು ಅನ್ನೋ ನಿಲುವಿಗೆ ಬದ್ಧರಾಗಿ 10 ಕೆಜಿ ಅಕ್ಕಿ ನೀಡುತ್ತಿದ್ದರು. ಆ ಬಳಿಕ ಅಕ್ಕಿಯನ್ನು 7 ಕೆಜಿಗೆ ಇರಿಸಲಾಗಿತ್ತು. ರಾಜ್ಯ ಬಿಜೆಪಿಸರ್ಕಾರದಲ್ಲಿ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇರಿಸಲಾಗಿತ್ತು. ಆ ಬಳಿಕ ಮತ್ತೆ ಚುನಾವಣಾ ಪ್ರಚಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಮತ್ತೆ 10 ಕೆಜಿ ಕೊಡುವ ಬಗ್ಗೆ ಭರವಸೆ ನೀಡಿತ್ತು. ಐದು ಗ್ಯಾರಂಟಿಗಳಲ್ಲಿ ಹತ್ತು ಕೆಜಿ ಅಕ್ಕಿಯನ್ನೂ ಸೇರಿಸಿತ್ತು. ಇದೀಗ ಮುಂದಿನ ತಿಂಗಳ ಪಡಿತರ ನೀಡುವಾಗ ಅಕ್ಕಿ ಕೊಡಬೇಕಿದೆ. ಆದರೆ ರಾಜ್ಯದಲ್ಲಿ ಅಕ್ಕಿ ಇಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ರಾಜ್ಯ ಸರ್ಕಾರ, ಕೇಂದ್ರದಿಂದ ಅಕ್ಕಿ ಪಡೆದುಕೊಳ್ಳಲು ವಿಫಲವಾಗಿದೆ. ಇದು ಕೇಂದ್ರ ಸರ್ಕಾರದ ದ್ವೇಷ ಪೂರಿತ ನಡೆ ಅನ್ನೋದು ಕಾಂಗ್ರೆಸ್ ಆರೋಪ.
ರಾಜ್ಯ ಸರ್ಕಾರಕ್ಕೆ ಮೋದಿ ಸರ್ಕಾರ ಅಕ್ಕಿ ಕೊಡ್ತಿಲ್ಲ ಯಾಕೆ..?
2013 ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗಲೇ ಸಿದ್ದರಾಮಯ್ಯ ಹತ್ತು ಕೆಜಿ ಅಕ್ಕಿ ಕೊಡುವ ಯೋಜನೆ ಜಾರಿ ಮಾಡಿದ್ದರು. ಆ ಬಳಿಕ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಕೂಡ ಅಕ್ಕಿ ವಿತರಣೆಯನ್ನು ಮುಂದುವರಿಸಿತ್ತು. ಆ ಬಳಿಕ ಅಕ್ಕಿ ಯೋಜನೆಯಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಭಾರೀ ಖ್ಯಾತಿಯೂ ಬಂದಿತ್ತು. ಅದನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ಈ ಬಾರಿ ಮತ್ತೆ 10 ಕೆಜಿ ಅಕ್ಕಿ ಕೊಡುವ ಯೋಜನೆ ಜಾರಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದಿದೆ ಎನ್ನುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಆರೋಪ. ಅಷ್ಟು ಮಾತ್ರವಲ್ಲದೆ FCI ( Food Corporation of India ) ಮೂಲಕ ಖರೀದಿಗೂ ಕೇಂದ್ರ ಸರ್ಕಾರ ಅಡ್ಡಿ ಮಾಡಿದೆ. ರಾಜ್ಯಗಳಿದೆ ದವಸ ಧಾನ್ಯ ವಿತರಣೆ ಮಾಡದಂತೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ ಎನ್ನುವುದು ಕಾಂಗ್ರೆಸ್ ಆರೋಪ. ಜೂನ್ 12 ರಂದು ರಾಜ್ಯ ಸರ್ಕಾರ 2.28 ಲಕ್ಷ ಮೆಟ್ರಿಕ್ ಟನ್ಗೆ ಮನವಿ ಮಾಡಿತ್ತು. FCI ಕೂಡ ಒಪ್ಪಿಕೊಂಡು ಪತ್ರ ಕಳುಹಿಸಿತ್ತು. ಆದರೆ ಒಂದು ದಿನದ ಬಳಿಕ ಕೇಂದ್ರ ಸರ್ಕಾರ ಒತ್ತಡ ಹೇರಿದೆ. ಹೀಗಾಗಿ ಕರ್ನಾಟಕಕ್ಕೆ ಬರಬೇಕಿದ್ದ ಅಕ್ಕಿ ಬರುತ್ತಿಲ್ಲ ಎನ್ನುವುದು ಸಿದ್ದರಾಮಯ್ಯ ಆರೋಪ.
ರಾಜ್ಯಗಳಿಗೆ ಕೇಂದ್ರ ಉಚಿತವಾಗಿ ಅಕ್ಕಿ ಕೊಡುತ್ತಾ..?
ಭಾರತದ ಬಹುತೇಕ ರಾಜ್ಯಗಳಲ್ಲಿ ಪಡಿತರ ವಿತರಣೆ ಮಾಡುವ ಯೋಜನೆಗಳಲ್ಲಿ ಇವೆ. ಅದರಲ್ಲಿ ಕೇಂದ್ರ ಸರ್ಕಾರದ ದಾಸ್ತಾನಿನ ಮೂಲಕ ಹಂಚಿಕೆ ಮಾಡುತ್ತದೆ. ಅದಕ್ಕೆ ತಗುಲುವ ವೆಚ್ಚವನ್ನು ರಾಜ್ಯಗಳಿಂದಲೇ ಸಂಗ್ರಹ ಮಾಡುತ್ತದೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ನೀಡಿರುವ ಮಾಹಿತಿಯಂತೆ ಕರ್ನಾಟಕಕ್ಕೆ ಬರುತ್ತಿದ್ದ ಅಕ್ಕಿಗೆ 34 ರೂಪಾಯಿ ನಿಗದಿ ಮಾಡಲಾಗಿತ್ತು. ಜೊತೆಗೆ ಸಾಗಾಣೆ ವೆಚ್ಚ ಪ್ರತಿ ಕೆಜಿಗೆ 2.60 ರೂಪಾಯಿ ನಿಗದಿ ಆಗಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ಅಕ್ಕಿಯನ್ನು ತಡೆಯಲಾಗಿದೆ. ಕರ್ನಾಟಕದ ಜನರ ಮೇಲೆ ಬಿಜೆಪಿ ಸರ್ಕಾರ ದ್ವೇಷ ಕಾರುತ್ತಿದೆ ಅನ್ನೋದು ಕಾಂಗ್ರೆಸ್ ಪಕ್ಷ ಹಾಗು ರಾಜ್ಯ ಸರ್ಕಾರದ ನೇರ ಆರೋಪ. ಆದರೆ ಅಕ್ಕಿಯನ್ನು ಕೇಂದ್ರ ಸರ್ಕಾರ ತಡೆಯಲು ಕೊಟ್ಟಿರುವ ಕಾರಣ, ಈಶಾನ್ಯ ರಾಜ್ಯಗಳಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಹಾಗು ನೈಸರ್ಗಿಕ ವಿಕೋಪಗಳನ್ನು ಮುಂದಿಟ್ಟು ಅಕ್ಕಿ ಮಾರಾಟ ಮಾಡದಂತೆ ಸೂಚನೆ ಕೊಟ್ಟಿದೆ. ಆದರೆ ಈ ನಿರ್ಧಾರ ಬಿಜೆಪಿ ಪಾಲಿಗೆ ಮುಳ್ಳಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕರ್ನಾಟಕದ ಜನರು ಈಗಾಗಲೇ ಬುದ್ಧಿವಂತಿಯಿಂದ ಮತ ಚಲಾವಣೆ ಮಾಡಿದ್ದು, ಮುಂಬರುವ ಲೋಕಸಭಾ ಚುನಾವಣೆಗೂ ಜನರು ಲೆಕ್ಕಾಚಾರ ಹಾಕಿಯೇ ಮತ ಚಲಾಯಿಸುವ ಸಾಧ್ಯತೆ ಹೆಚ್ಚಾಗಿದೆ.
ಬಿಟ್ಟಿ ಕೊಡಲ್ಲ, ಆದರೂ ಕೇಂದ್ರದ ದ್ವೇಷದ ಬಗ್ಗೆ ಜನಾಕ್ರೋಷ..!
ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವ ಪ್ರತಿ ಕೆಜಿ ಅಕ್ಕಿಗೆ ಸಾಗಾಟ ವೆಚ್ಚವೂ ಸೇರಿ 36.6 ರೂಪಾಯಿ ಆಗುತ್ತದೆ. ಆದರೂ ಕೇಂದ್ರ ಸರ್ಕಾರ ಈ ರೀತಿ ದ್ವೇಷ ರಾಜಕಾರಣ ಮಾಡಿದರೆ ಜನರ ದೃಷ್ಟಿಯಲ್ಲಿ ಕೆಟ್ಟವರಾಗುವ ಸಾಧ್ಯತೆ ಹೆಚ್ಚು. ರಾಜ್ಯ ಸರ್ಕಾರ ಅದೇ ಹಣಕ್ಕೆ ಬೇರೆ ಕಡೆ ಅಕ್ಕಿ ಖರೀದಿ ಮಾಡಬಹುದು. ಆದರೆ ಈಗ ತಾತ್ಕಾಲಿಕವಾಗಿ ವಿತರಣೆ ಮಾಡಲು ಕೊಂಚ ತಡವಾಗಬಹುದು ಅಷ್ಟೆ. ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ನರೇಂದ್ರ ಮೋದಿ ಅವರ ಆಶೀರ್ವಾದ ಕರ್ನಾಟಕಕ್ಕೆ ಬೇಕು ಎಂದಿದ್ದರು. ಒಂದು ವೇಳೆ ಬಿಜೆಪಿ ಗೆಲ್ಲಿಸದಿದ್ದರೆ ನರೇಂದ್ರ ಮೋದಿ ಅವರ ಆಶಿರ್ವಾದ ಸಿಗಲಾರದು ಎನ್ನುವ ಮೂಲಕ ಕೆಲವು ಯೋಜನೆಗಳನ್ನು ಸ್ಥಗಿತ ಮಾಡಲಾಗುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇದೀಗ ಬಡವರಿಗೆ ಕೊಡುವ ಅನ್ನಭಾಗ್ಯದ ಮೇಲೆ ತನ್ನ ಕ್ರೂರ ದೃಷ್ಟಿ ಬೀರಿದ್ದಾರೆ. ಇದನ್ನ ಕಾಂಗ್ರೆಸ್ ಸವಾಲಾಗಿ ಸ್ವೀಕರಿಸಿ, ಬೇರೆ ಕಡೆಯಿಂದ ಅಕ್ಕಿ ಖರೀದಿಸಿ, ಜನರಿಗೆ ವಿತರಣೆ ಮಾಡಿ, ಆ ಬಳಿಕ ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಅಸ್ತ್ರವಾಗಿ ಬಳಸಿಕೊಂಡರೆ ಭಾರತೀಯ ಜನತಾ ಪಾರ್ಟಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಕೃಷ್ಣಮಣಿ