ಹುಬ್ಬಳ್ಳಿಯಲ್ಲಿ (Hubli) ನಡೆದ ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆಯಾಗಿದೆ. ಪೊಲೀಸರ ಕರ್ತವ್ಯ ಲೋಪ ಆರೋಪದ ಬೆನ್ನಲ್ಲೇ ಕೇಸ್‌ನ್ನು ಸಿಐಡಿ (CID) ತನಿಖೆಗೆ ವಹಿಸಲು ಸರ್ಕಾರ ತೀರ್ಮಾನಿಸಿದೆ. ಇಂದು ಅಂಜಲಿ ಮನೆಗೆ ಗೃಹಸಚಿವ (Home minister) ಪರಂ ಭೇಟಿ ನೀಡಿದಾಗ ಅಂಜಲಿ (anjali) ಸಹೋದರಿ ಅವರ ಕಾಲಿಗೆ ಬಿದ್ದು ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ.
ಅಂಜಲಿ ಕೊಲೆ ಪ್ರಕರಣವನ್ನ ಸಿಐಡಿ ತನಿಖೆಗೆ ಹಸ್ತಾಂತರ ಮಾಡುತ್ತೇವೆ ಅಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಹುಬ್ಬಳ್ಳಿಯ ವೀರಾಪುರ ಕಾಲೋನಿಯಲ್ಲಿರುವ ಮೃತ ಅಂಜಲಿ ನಿವಾಸಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ (Dr G parameshwar) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ತಮ್ಮ ಮಗಳನ್ನು ಕೊಲೆಗೈದ ಆರೋಪಿಗೆ ಗಲ್ಲು ಶಿಕ್ಷೆ ಕೊಡಿಸುವಂತೆ ಪೋಷಕರು ಮನವಿ ಮಾಡಿದರು. ಮಾತ್ರವಲ್ಲದೆ ಗೃಹ ಸಚಿವರ ಮುಂದೆ ಗಳಗಳನೆ ಅತ್ತ ಅಂಜಲಿ ಸಹೋದರಿ ಯಶೋಧ, ನ್ಯಾಯಕ್ಕಾಗಿ ಪರಮೇಶ್ವರ್ ಕಾಲಿಗೆ ಬಿದ್ದು ಕಣ್ಣೀರಿಟ್ಟರು. ಆರೋಪಿಗೆ ಗಲ್ಲು ಅಥವಾ ಎನ್‌ಕೌಂಟರ್ (Encounter) ಮಾಡುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಪರಂ, ಅಂಜಲಿ ಹತ್ಯೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗುತ್ತದೆ. ಅಂಜಲಿ ಹತ್ಯೆಯ ನೈಜ ಕಾರಣ ಹೊರಬರಬೇಕು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ ಎಂದರು.