ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಅಭಿನಯದ ʼಅನಿಮಲ್ʼ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಓಪನಿಂಗ್ ಕಂಡಿದ್ದು, ಮೊದಲ ದಿನವೇ ಒಟ್ಟಾರೆ 116 ಕೋಟಿ ರೂ.ಗಳನ್ನು ದೋಚಿದೆ.
ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼ ಚಿತ್ರದ ವಿರುದ್ಧ ಕಟು ವಿಮರ್ಶೆ ಬಂದಿದ್ದರೂ ಭಾರತದಲ್ಲಿ ಮೊದಲ ದಿನದಂದೇ 61 ಕೋಟಿ ರೂ.ಗಳನ್ನು ಗಳಿಸಿದೆ.
ಸಂದೀಪ್ ರೆಡ್ಡಿ ವಂಗಾ ಅವರ ಹಿಂದಿನ ಎರಡು ಚಿತ್ರಗಳಾದ ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ಚಿತ್ರಗಳಂತೆ ಈ ಚಿತ್ರದಲ್ಲೂ ಅತಿ ಸ್ತ್ರೀದ್ವೇಷವನ್ನು ವಿಜೃಂಭಿಸಲಾಗಿದೆ ಎಂಬ ಟೀಕೆಗಳು ಬಂದಿವೆ.
ಕಳೆದ ಕೆಲವು ವರ್ಷಗಳಿಂದ ಭಾರೀ ಹಿನ್ನಡೆಯನ್ನು ಎದುರಿಸುತ್ತಿರುವ ಬಾಲಿವುಡ್‌ಗೆ ಅನಿಮಲ್ ಚಿತ್ರದ ಓಪನಿಂಗ್ ಮತ್ತೊಂದು ಚೇತೋಹಾರಿಯಾಗಿದೆ. ಈ ವರ್ಷ, ಮೊದಲ ದಿನವೇ ದೊಡ್ಡ ಕಲೆಕ್ಷನ್ ಮಾಡಿದ ಚಿತ್ರಗಳಲ್ಲಿ ಶಾರೂಖ್ ಖಾನ್ ಅವರ ಜವಾನ್ ಹಾಗೂ ಪಠಾಣ್ ಸಿನೆಮಾಗಳು ಮೊದಲೆರಡು ಸ್ಥಾನಗಳನ್ನು ಪಡೆದಿತ್ತು. ಅಟ್ಲೀ ನಿರ್ದೇಶನದ ಜವಾನ್ ಚಿತ್ರ 75 ಕೋಟಿ. ರೂಗಳನ್ನು ಗಳಿಸಿದ್ದರೆ, ಪಠಾಣ್ 57 ಕೋಟಿ ರೂ.ಗಳನ್ನು ಗಳಿಸಿತ್ತು. ಅನಿಮಲ್ ಚಿತ್ರ 61 ಕೋಟಿ ರೂ.ಗಳನ್ನು ಗಳಿಸಿ ಪಠಾಣ್ ದಾಖಲೆಯನ್ನು ಹಿಂದಿಕ್ಕಿದೆ.
ರಣಬೀರ್ ಕಪೂರ್ ವೃತ್ತಿ ಜೀವನದಲ್ಲಿ ಸಂಜಯ್ ದತ್ ಅವರ ಜೀವನಾಧರಿತ ಚಿತ್ರ ʼಸಂಜುʼ ಮೊದಲ ದಿನವೇ 34.75 ಕೋಟಿ ರೂ.ಗಳನ್ನು ಗಳಿಸಿದ್ದ ಚಿತ್ರವೆಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಇದೀಗ ಆನಿಮಲ್ ಚಿತ್ರದಿಂದ ತನ್ನ ಕೆರಿಯರ್ ನ ಭರ್ಜರಿ ಓಪನಿಂಗ್ ಚಿತ್ರವನ್ನು ರಣಬೀರ್ ಕಪೂರ್ ದಾಖಲಿಸಿದ್ದಾರೆ.
ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ಜೊತೆಗೆ ಅನಿಮಲ್ ಬಿಡುಗಡೆಯಾಗಿದ್ದು, ಇದು ಭಾರತದಲ್ಲಿ ಕೇವಲ 5.5 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ ತಂದೆಯ ಪಾತ್ರದಲ್ಲಿ ಹಿರಿಯ ನಟ ಅನಿಲ್ ಕಪೂರ್ ನಟಿಸಿದ್ದಾರೆ.