ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಸಿಎಂ ಜಗ್ಗನ್ ಮೋಹನ್ ರೆಡ್ಡಿ ಅವರಿಗೆ ನೀಡಿದ ಜಾಮೀನು ರದ್ದುಗೊಳಿಸುವಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಕನುಮುರಿ ರಘುರಾಮ ಕೃಷ್ಣಂರಾಜು ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ ಬೆನ್ನಲೆ, ಆಂಧ್ರದ ಸಿಐಡಿ ಪೊಲೀಸರು ಮೇ 14 ರ ರಾತ್ರಿ ಬಂಧಿಸಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಕನುಮುರಿ ರಘುರಾಮ ಕೃಷ್ಣಂರಾಜು (59) ಅವರು ತಮ್ಮ ಸ್ವಂತ ಪಕ್ಷದ ವಿರುದ್ಧವೇ ಬಂಡಾಯ ಎದ್ದಿದ್ದರು. ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕೆಲವು ಸಮುದಾಯಗಳ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡುತ್ತಿದ್ದರು. ಜೊತೆಗೆ ಸರ್ಕಾರದ ಘನತೆಗೆ ದಕ್ಕೆ ಬರುವ ಹೇಳಿಕೆ ನೀಡುತ್ತಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ನಾಯಕ ಕನುಮುರಿ ರಘುರಾಮ ಕೃಷ್ಣಂರಾಜು ಅವರ ವಿರುದ್ಧ ವಿರುದ್ಧ ಸೆಕ್ಷನ್ 124 ಎ (ದೇಶದ್ರೋಹ), 153 ಎ (ದ್ವೇಷವನ್ನು ಉತ್ತೇಜಿಸುವುದು), ಹಾಗು 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಉತ್ತೇಜನ)ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಆಸ್ತಿಗಳಿಕೆ ಸಂಬಂಧ ಆಂಧ್ರ ಸಿಎಂ ಜಗ್ಗನ್ ಮೋಹನ್ ರೆಡ್ಡಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಕನುಮುರಿ ರಘುರಾಮ ಕೃಷ್ಣಂರಾಜು ಅವರು ಜಾಮೀನು ರದ್ದುಗೊಳಿಸುವಂತೆ ಏಪ್ರಿಲ್ 27 ರಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.