• Home
  • About Us
  • ಕರ್ನಾಟಕ
Friday, December 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಂಧ ಆಳ್ವಿಕೆಯಲ್ಲಿ ಕತ್ತಲಲ್ಲುಳಿದ ಸಮಾಜ

ಪ್ರತಿಧ್ವನಿ by ಪ್ರತಿಧ್ವನಿ
May 20, 2024
in Top Story, ಜೀವನದ ಶೈಲಿ
0
Share on WhatsAppShare on FacebookShare on Telegram

ಏಳು ದಶಕಗಳ ಅಭಿವೃದ್ಧಿ ಪಥದಲ್ಲಿ ಅವಗಣನೆಗೊಳಗಾದ  ಸಮಾಜ- ಸಮುದಾಯಗಳೆಷ್ಟೋ ?

ADVERTISEMENT

—–ನಾ ದಿವಾಕರ—–

ಸ್ವತಂತ್ರ ಭಾರತದ (Independent India) 76 ವರ್ಷಗಳ ರಾಜಕೀಯ ಆಳ್ವಿಕೆಯ ಒಂದು ಸಮಾನ ಎಳೆಯ ಲಕ್ಷಣವನ್ನು ಗುರುತಿಸುವುದೇ ಆದರೆ ಅದು ಆಳುವ ವರ್ಗಗಳ ನಡೆ ಮತ್ತು ನುಡಿಯ ನಡುವಿನ ಅಪಾರ ಅಂತರದಲ್ಲಿ ಕಾಣಬಹುದು. ನೆಹರೂ(Nehru) ಯುಗದಿಂದ ಮೋದಿ(Modi) ಯುಗದವರೆಗೂ ಕಾಣಬಹುದಾದ ಈ ಪಕ್ಷಾತೀತ ಲಕ್ಷಣ ಒಂದು ಆಯಾಮದಿಂದ ಅವಲಕ್ಷಣವಾಗಿಯೂ ಕಾಣುತ್ತದೆ. ಏಕೆಂದರೆ ಸಾಮಾನ್ಯ ಜನತೆಯ ದೃಷ್ಟಿಯಿಂದ ಅಪೇಕ್ಷಿತ ಅಭಿವೃದ್ಧಿಗೂ, ಆಳ್ವಿಕೆಯ ಕೇಂದ್ರಗಳ ದೃಷ್ಟಿಯ ಪರಿಭಾವಿತ ಪ್ರಗತಿಗೂ, ನೆಲದ ವಾಸ್ತವಿಕತೆಯ ದೃಷ್ಟಿಯಿಂದ ಸಾಧಿಸಲ್ಪಟ್ಟ ಅಭಿವೃದ್ಧಿಗೂ ಇರುವ ಅಂತರವು ಈ ಏಳು ದಶಕಗಳ ಅಭಿವೃದ್ಧಿ ಮಾದರಿಗಳು ಮತ್ತು ಆಡಳಿತ ನೀತಿಗಳಿಗೆ ಕನ್ನಡಿ ಹಿಡಿದಂತಿರುತ್ತದೆ. ಇದನ್ನು ಆಯಾ ಕಾಲಘಟ್ಟದಲ್ಲಿ ಗುರುತಿಸಿ ಜನಸಾಮಾನ್ಯರ ಮುಂದಿಡಬೇಕಾದ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ತನ್ನದೇ ಆದ ಸಿಕ್ಕುಗಳಲ್ಲಿ ಸಿಲುಕಿ ಕವಲೊಡೆದಿರುವುದರಿಂದ, ನೆಲಮೂಲದ ವಾಸ್ತವಗಳು ಸದಾ ಕಾಲಕ್ಕೂ ಮರೆಯಾಗಿಯೇ ಇರುತ್ತವೆ.

 

ಹಾಗಾಗಿಯೇ ರಸ್ತೆ ಇಲ್ಲದ, ಬೀದಿ ದೀಪ ಇಲ್ಲದ, ಸರಿಯಾದ ಸೂರಿಲ್ಲದ, ಹೊರಜಗತ್ತಿನ ಸಂಪರ್ಕವೇ ಇಲ್ಲದ ಯಾವುದಾದರೂ ಭೂಪ್ರದೇಶ ನಮ್ಮೆದುರು ನಿಂತಾಗ “ಈಗಲೂ ಇಂತಹ ಊರು/ಗ್ರಾಮಗಳು ಇವೆಯೇ, ಛೆ ?” ಎಂಬ ಉದ್ಗಾರ ಹೊರಡುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಪ್ರತಿಯೊಂದು ಸರ್ಕಾರವೂ ನೀಡುವ ಬಹುಮುಖ್ಯವಾದ ಆಶ್ವಾಸನೆ ಎಂದರೆ “ ಎಲ್ಲರ ಮನೆಗೂ ದೀಪ, ಎಲ್ಲ ಗ್ರಾಮಗಳಿಗೂ ರಸ್ತೆ, ಎಲ್ಲರಿಗೂ ಸೂರು ಇತ್ಯಾದಿ,,,”. ಸ್ವಚ್ಛಭಾರತ ಅಭಿಯಾನದ ನಂತರ ಇದಕ್ಕೆ ಶೌಚಾಲಯವೂ ಸೇರಿದೆ. ಅಂಕಿಅಂಶಗಳ, ದತ್ತಾಂಶಗಳ ದಸ್ತಾವೇಜುಗಳಿಂದ ಹೊರಬಂದು, ವಾಸ್ತವ ಜಗತ್ತಿಗೆ ತೆರೆದುಕೊಂಡಾಗ ಸಾಮಾನ್ಯರ ಕಣ್ಣಿಗೆ ಕಾಣುವುದು ಬೇರೆಯದೇ ಚಿತ್ರಣ. ಅಂತಹ ಒಂದು ಚಿತ್ರಣವನ್ನು ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆ ಸಮಾಜದ ಮುಂದಿಟ್ಟಿದೆ. ಇಂಡಿಗನತ್ತ-ಮೆಂದಾರೆ ಎಂಬ ಕುಗ್ರಾಮಗಳ ರೂಪದಲ್ಲಿ.

 

ಕುಗ್ರಾಮಗಳ ವಸ್ತುಸ್ಥಿತಿ ದರ್ಶನ

 

C ನಗರಿಗೆ ಸಮೀಪದ, ಮಲೆ ಮಹದೇಶ್ವರ ಬೆಟ್ಟದ ಕಾಲಬುಡದಲ್ಲೇ ನಡುವೆ ಇರುವ ಎರಡು ಗ್ರಾಮಗಳು ಇಂಡಿಗನತ್ತ ಹಾಗೂ ಮೆಂದಾರೆ. ಈ ಗ್ರಾಮಗಳ ವಸ್ತುಸ್ಥಿತಿ ಮತ್ತು ಜನಜೀವನ ಹೇಗಿದೆ ಹಾಗೂ ಅಭಿವೃದ್ಧಿ ರಾಜಕಾರಣದ ಫಲಾನುಭವಿಗಳು ಈ ಗ್ರಾಮಗಳಲ್ಲಿ ಕಾಣುತ್ತಾರೆಯೇ ಎಂಬ ಶೋಧನೆ ನಡೆಸುವ ಮೂಲಕ ಆಂದೋಲನ ಪತ್ರಿಕೆಯ ಸಿಬ್ಬಂದಿ ಮಿತ್ರರು ಹೊರಜಗತ್ತಿಗೆ ವಿಸ್ಮಯ ಎನಿಸುವ ಸುಡು ವಾಸ್ತವಗಳನ್ನು ತೆರೆದಿಟ್ಟಿದ್ದಾರೆ. (ಆಂದೊಲನ ವಿಶೇಷ ವರದಿಗಳು- ಮೇ 13 ರಿಂದ 18ರವರೆಗೆ) ವಿಪರ್ಯಾಸ ಎಂದರೆ ಈ ಎರಡೂ ಕುಗ್ರಾಮಗಳು ಬೆಳಕಿಗೆ ಬಂದಿದ್ದು ಉಪಗ್ರಹದ ಚಿತ್ರಣಗಳಿಂದಲ್ಲ ಅಥವಾ ಬೆಟ್ಟದ ಮೇಲೆ ಹಾದು ಹೋಗುವ ರಾಜಕೀಯ ನಾಯಕರ ಮೊಬೈಲ್‌ ಛಾಯಾಗ್ರಹಣದಿಂದಲೂ ಅಲ್ಲ. ಭಕ್ತಿಭಾವದಿಂದ ಈ ಗ್ರಾಮಗಳನ್ನು ಹಾದುಕೊಂಡೇ ಮಹದೇಶ್ವರನಿಗೆ ನಮನ ಸಲ್ಲಿಸುವ ಸ್ಥಳೀಯ ಮಾಜಿ-ಹಾಲಿ-ಮೃತ-ಜೀವಂತ ಜನಪ್ರತಿನಿಧಿಗಳ ಸೆಲ್ಫಿಗಳಿಂದಲೂ ಅಲ್ಲ.

 

ಇಂಡಿಗನತ್ತ ಮತ್ತು ಮೆಂದಾರೆ ಎಂಬ ʼ ಕುಗ್ರಾಮಗಳು ʼ ನಮ್ಮ ನಡುವೆಯೇ ಇದೆ ಎಂದು ಜಗತ್ತಿನ ಗಮನ ಸೆಳೆಯಲು ಕ್ರೋಧಿತ ಜನರು ಒಂದು ಮತಗಟ್ಟೆ ಧ್ವಂಸ ಮಾಡಬೇಕಾಯಿತು, ಎರಡು ಸಮುದಾಯಗಳ ನಡುವೆ ಸಂಘರ್ಷ ಏರ್ಪಡಬೇಕಾಯಿತು, ಹತ್ತಾರು ಅಮಾಯಕರ ಬಂಧನವಾಗಬೇಕಾಯಿತು. ಇಂಡಿಗನತ್ತ ಗ್ರಾಮದ ಜನರ ಮತದಾನ ಬಹಿಷ್ಕಾರದ ಕೂಗು ಕೇವಲ ಆಳ್ವಿಕೆಯ-ಅಧಿಕಾರದ ಕೇಂದ್ರಗಳನ್ನು ಎಚ್ಚರಿಸಿದ್ದೇ ಅಲ್ಲದೆ, ಸುತ್ತಲಿನ ಹಿತವಲಯದ ಸಮಾಜವನ್ನೂ, ನಿದ್ರಾವಸ್ಥೆಯಲ್ಲಿದ್ದ ಆಡಳಿತವನ್ನೂ ಹಾಗೂ ಒಂದು ದೃಷ್ಟಿಯಿಂದ ಸದಾ ಜನಪರ ಕಾಳಜಿಯಿಂದ ಮಿಡಿಯುವ ಪ್ರಗತಿಪರ ಮನಸ್ಸುಗಳನ್ನೂ ಎಚ್ಚರಿಸಿದ್ದು ವಿಡಂಬನೆಯೇ ಸರಿ. ಭಾರತದ ಸಂವಿಧಾನವು ಮತದಾನದ ಹಕ್ಕು ನೀಡಿರುವಂತೆಯೇ ಮತ ಬಹಿಷ್ಕಾರದ ಹಕ್ಕನ್ನೂ ನೀಡಿರುವುದು ಎಷ್ಟು ಉಪಯುಕ್ತ ಅಲ್ಲವೇ ?

 

 800 ಜನಸಂಖ್ಯೆ ಇರುವ ಇಂಡಿಗನತ್ತ ಮತ್ತು ಕೇವಲ 200 ಜನರಿರುವ ಮೆಂದಾರೆ ನಗರದ ಒಂದು ಬಡಾವಣೆಗಿಂತಲೂ ಚಿಕ್ಕದು. ಮಹದೇಶ್ವರ ಮಲೆಯನ್ನೂ ಸೇರಿದಂತೆ 77 ಬೆಟ್ಟಗಳ ನಡುವೆ 8 ಕಿಲೋಮೀಟರ್‌ ದೂರದಲ್ಲಿರುವ ಇಂಡಿಗನತ್ತ ಅಲ್ಲಿಂದ ಎರಡು ಕಿಲೋಮೀಟರ್‌ ದೂರದಲ್ಲಿರುವ ಮೆಂದಾರೆ ಈ ಎರಡೂ ಗ್ರಾಮಗಳಿಗೆ ತಲುಪಲು ಒಂದು ಕಚ್ಚಾ ರಸ್ತೆಯೂ ಇಲ್ಲ. (ದೇವನೂರು ಅವರ ಡಾಂಬರು ಬಂತು ಕತೆ ನೆನಪಾಗುತ್ತದೆ.) ಇರುವ ಕಲ್ಲು ಮಣ್ಣುಗಳ ರಸ್ತೆಯನ್ನೇ ಮತ್ತೆ ಮತ್ತೆ ದುರಸ್ತಿ ಮಾಡುತ್ತಾ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುವ ಗುತ್ತಿಗೆದಾರ-ಜನಪ್ರತಿನಿಧಿಗಳ ಮೈತ್ರಿಕೂಟಕ್ಕೆ ಬಲಿಯಾಗಿರುವುದು ಈ ಗ್ರಾಮಗಳ ಸಂಪರ್ಕ ವ್ಯವಸ್ಥೆ.  ಇಂಡಿನಗತ್ತ ದಾಟಿ ಮೆಂದಾರೆ ತಲುಪಲು ನಟರಾಜ ಸರ್ವೀಸ್‌ (ನಡಿಗೆ) ಒಂದೇ ಖಾಯಂ. ವಾಹನ ಯೋಗ್ಯ ರಸ್ತೆಯೂ ಇಲ್ಲಿಗೆ ಲಭ್ಯವಾಗಿಲ್ಲ. ಬೆಟ್ಟದ ಚಾರಣವೇ ದಾರಿ.

 

ಇದಕ್ಕಿಂತಲೂ ಭೀಕರ ಪರಿಸ್ಥಿತಿ ಇರುವ 20ಕ್ಕೂ ಹೆಚ್ಚು ಗ್ರಾಮಗಳನ್ನು ಆಂದೋಲನ ವರದಿ ಉಲ್ಲೇಖಿಸಿದೆ. ಈ ಪ್ರತ್ಯಕ್ಷ ವರದಿಗಳಅನುಸಾರ ಕಳೆದ 15-20 ವರ್ಷಗಳಿಂದಲೂ ಈ ಗ್ರಾಮಗಳ ಜನತೆ ಕುಡಿಯುವ ನೀರು, ರಸ್ತೆ ಮತ್ತು ಮೂಲ ಸೌಕರ್ಯಗಳಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ಅಂದರೆ ಅಲ್ಲಿಯವರೆಗೂ ಈ ಜನರ ಆಗ್ರಹಗಳೂ ಆಳ್ವಿಕೆಯ ವಾರಸುದಾರರ ಕಿವಿಗೆ ಬಡಿದಿರಲಿಲ್ಲ ಎಂದಾಯಿತು. ನಿಸರ್ಗದ ಒಡಲು ಎಂದೇ ಪರಿಗಣಿಸಲ್ಪಡುವ ದಟ್ಟ ಅರಣ್ಯಗಳ ನಡುವೆ ಇರುವ ಕುಗ್ರಾಮಗಳು ನೀರಿಗಾಗಿ, ಸೂರಿಗಾಗಿ, ಸಂಪರ್ಕಕ್ಕಾಗಿ ಪರದಾಡುವುದು ನಾಗರಿಕತೆಯ ಚೋದ್ಯ ಎನಿಸುವುದಿಲ್ಲವೇ ? ಈ ಎಲ್ಲ ಗ್ರಾಮಗಳ ಒಟ್ಟು ಜನಸಂಖ್ಯೆ ಐದಾರು ಸಾವಿರ ಇರಬಹುದು. ಇಷ್ಟು ಅಲ್ಪಸಂಖ್ಯೆಯ ಜನಕ್ಕೆ ಅನ್ನ ನೀರು ರಸ್ತೆ ಒದಗಿಸಲಾರದಷ್ಟು ದಾರಿದ್ರ್ಯ ನಮ್ಮ ದೇಶಕ್ಕೆ ಬಡಿದಿದೆಯೇ ? ಮತೀಯ-ಜಾತಿ ರಾಜಕಾರಣದಲ್ಲಿರುವಂತೆ ಇಲ್ಲಿಯೂ ವಿಶಾಲ ಬಾಹ್ಯ ಸಮಾಜ ʼ ಅನ್ಯ ʼರನ್ನು ಗುರುತಿಸಿದೆಯೇ ?

 

ಶೋಷಿತರ ಅಳಲು ಕೇಳುವವರಾರು ?

 

ತೋಕೆರೆ ಗ್ರಾಮದ ನಿವಾಸಿ ವೀರಣ್ಣ ಅವರ ಈ ಮಾತುಗಳು ಎಂತಹ ಅಸೂಕ್ಷ್ಮ ಮನಸ್ಸಿಗೂ ಚಾಟಿ ಏಟಿನಂತೆ ಕೇಳಿಸುತ್ತದೆ : “ ಮುಂದೆಲ್ಲ ಮಳೆ ಬೆಳೆ ಚೆಂದಗಾಗದು. 80 ಕಾಲ್ನಡ, 100 ಕಾಲ್ನಡ ದೊಡ್ಡಿ ಹೊಸ್ಗೊಳ್‌ ಸಾಕಿದ್ದೋ. ಯಾವಾಗ್ಲೂ ಕೆರೆ ತುಂಬಿರ್ತಿತ್ತು. ಈಗ ಕೆರೇಲಿ ನೀರೂ ಇಲ್ಲ. ತುಟಿಗೆ ಸವರ್ಕಳಕೂ ತುಪ್ಪ ಇಲ್ಲ. ಯಾರಾದರೂ ಉಷಾರ್‌ ತಪ್ಪದ್ರ ಡೋಲೀಲಿ ಹೊತ್ಕ ಹೋಗ್ಬೇಕು. ದಾರಿ ಮಧ್ಯ ಸತ್ರ ಅಲ್ಲೇ ಹೆಣ ಬಿಸಾಕ್ಬುಟ್ಟು ವಾಪಸ್‌ ಬರ್ಬೇಕು ಅಂಗಾಗದ ನಮ್‌ ಸ್ಥಿತಿ ”.

ಮತ್ತೋರ್ವ ಕೊಕ್ಕಬೋರೆಯ ನಿವಾಸಿ ಬೊಮ್ಮಮ್ಮ ಅವರ ಮಾತು ಕೇಳಿ : “ ಊರಿಗ್‌ ಇರದೇ ಒಂದ್ಬೋರು. ಅದೂ ದಾರದಂಗೆ ನೀರು. ಮನಗೊಂದು ಹೆಂಗ್ಸು ನೀರು ಹಿಡಿಯಕೇ ದಿನ್ವೆಲ್ಲಾ ಕಾಯ್ಕ ಕೂತ್ಕಬೇಕು. ದಿನಾಲು ಸಿಕ್ಕ 5 ಬಿಂದ್ಗ ನೀರ್ಲೇ ಮನಲಿರೋರ್‌ ವ್ಯವಾರ. ಈ ಗೋಳು ಯಾವ್‌ ಕಾಲಕ್‌ ತೀರಿದೋ ”. (ಆಂದೋಲನ ವರದಿ 17 ಮೇ 2024)

 

ಈ ಮಾತುಗಳಲ್ಲಿ ಉತ್ಪ್ರೇಕ್ಷೆಯಿಲ್ಲ. ಆಕ್ರೋಶವೂ ಇಲ್ಲ. ಮನದಾಳದ ವೇದನೆಯ ನುಡಿಗಳಿವು. ಈ ಸೀಮೆಯ ಭಾಷೆ ಕಲಿತ ಸಮಾಜಕ್ಕೆ ಅರ್ಥವಾಗುವುದು ಕಷ್ಟವಾಗಬಹುದು. (ಟೈಪಿಸುವುದೇ ಕಷ್ಟವಾಯಿತು) ಆದರೆ ಈ ಜನರ ಬದುಕು ಅರ್ಥವಾಗುವಷ್ಟು ದಡ್ಡರೇನೂ ಅಲ್ಲ ಅಲ್ಲವೇ ? ದಕ್ಷಿಣ ಭಾರತದ ಪವಿತ್ರ ಯಾತ್ರಾಸ್ಥಳ ಹಾಗೂ ಸ್ಥಳೀಯ ಜನಪದ ಲೋಕದ ಕೇಂದ್ರ ಬಿಂದು ಆಗಿರುವ ಮಲೆ ಮಹದೇಶ್ವರನ ಕಾಲಬುಡದಲ್ಲೇ ಇರುವ ಈ ದುರಂತ ಸನ್ನಿವೇಶಕ್ಕೆ ಯಾರು ಹೊಣೆ. ಮಹದೇಶ್ವರನಂತೂ ಅಲ್ಲ !  ಪ್ರತಿವರ್ಷ ಲಕ್ಷಾಂತರ ಭಕ್ತಾದಿಗಳ ಹೆಜ್ಜೆ ಗುರುತುಗಳನ್ನು (Foot Fall) ದಾಖಲಿಸುವ ಈ ಕ್ಷೇತ್ರದ ಒಡಲಲ್ಲೇ ಅವಕಾಶವಂಚಿತ ಜನಸಮುದಾಯಗಳು ತಮ್ಮ ಜೀವನ-ಜೀವನೋಪಾಯಕ್ಕಾಗಿ ಪರದಾಡುತ್ತಿರುವುದು ಏನನ್ನು ಸೂಚಿಸುತ್ತದೆ ?

 

ಕಾಡು ಮೇಡುಗಳ ನಡುವೆ ನಿಸರ್ಗದ ಒಡಲಲ್ಲಿ ವಾಸಿಸುತ್ತಾ ತಮ್ಮ ಅಲ್ಪ ಜಮೀನಿನ ವ್ಯವಸಾಯ ಮಾಡುತ್ತಾ ಬದುಕುತ್ತಿರುವ ಈ ನೂರಾರು ಕುಟುಂಬಗಳಿಗೆ ಶಿಕ್ಷಣ, ಆರೋಗ್ಯ, ವಿದ್ಯುತ್‌ ದೀಪ, ಕುಡಿಯುವ ನೀರು, ಶಾಲೆ, ಆಸ್ಪತ್ರೆ ಎಲ್ಲವೂ ಸಹ ಹೊರಜಗತ್ತಿನ ಲಕ್ಷುರಿಗಳಂತೆಯೇ ಕಾಣುತ್ತವೆ.  “ ಈ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು 18 ಕೋಟಿ ರೂ ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧವಾಗಿದೆ. ಈ ಗ್ರಾಮಗಳ ಜನರು ವಾಹನದಲ್ಲಿ ಓಡಾಡುವಂತೆ ಮಾಡಲು 4-5 ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿದೆ. ಇತ್ಯಾದಿ, ಇತ್ಯಾದಿ,,,,” ಅಧಿಕಾರ ಕೇಂದ್ರಗಳ ಈ ಮಾತುಗಳು ಸಾಮಾನ್ಯ ಜನರಲ್ಲಿ ಕಿಂಚಿತ್ತು ಭರವಸೆಯನ್ನೂ ಹುಟ್ಟಿಸುವುದಿಲ್ಲ. ಏಕೆಂದರೆ ಈ ಯೋಜನೆಗಳ ಹಿಂದೆ ಗುತ್ತಿಗೆದಾರರು, ಅಧಿಕಾರಿಗಳು, ಜನಪ್ರತಿನಿಧಿಗಳು, ರಾಜಕಾರಣಿಗಳು ತಮ್ಮದೇ ಆದ ಲಾಬಿಗಳ ಮೂಲಕ ಸಾಲುಗಟ್ಟಿ ನಿಂತಿರುತ್ತಾರೆ.

 

ಅಧಿಕಾರಶಾಹಿಯ ಕಡತ ವಿಲೇವಾರಿಯಲ್ಲಿ ಆಗುವ ವಿಳಂಬ, ಕಡತಗಳ ಪ್ರತಿಯೊಂದು ಹೆಜ್ಜೆಗೂ ಅಡ್ಡಿಯಾಗುವ ನಿಯಮಗಳು, ಲಂಚಗುಳಿತನ, ರಾಜಕೀಯ ಮೇಲಾಟ ಇವೆಲ್ಲವೂ ಇಂತಹ ಗ್ರಾಮಗಳ ಪಾಲಿಗೆ ಯಮಕಂಟಕವಾಗಿಯೇ ಕಾಣುತ್ತವೆ. 263 ಜನರ 63 ಕುಟುಂಬಗಳಿರುವ ಮೆಂದಾರೆಯಲ್ಲಿ ಎಷ್ಟು ಮನೆಗಳಿವೆ, ಅವರಿಗೆ ಹೊರಗಡೆ ಎಷ್ಟು ಭೂಮಿಯ ಅವಶ್ಯಕತೆ ಇದೆ, ಪುನರ್ವಸತಿಗೆ ಎಷ್ಟು ಜಾಗಬೇಕು ಎಂಬ ವಿವರಗಳನ್ನು ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎನ್ನುತ್ತಾರೆ ಜಿಲ್ಲಾಧಿಕಾರಿಗಳು. (ಆಂದೋಲನ ವರದಿ 14 ಮೇ 2024). ಅಂದರೆ ಇಷ್ಟೂ ವರ್ಷಗಳಲ್ಲಿ ನಗರದ ಒಂದು ಅಪಾರ್ಟ್‌ಮೆಂಟ್‌ನಷ್ಟಿರುವ ಈ ಕುಗ್ರಾಮ ಜಿಲ್ಲಾಡಳಿತದ ಗಮನಕ್ಕೇ ಬಂದಿರಲಿಲ್ಲವೇ ? ಇದಕ್ಕೂ ಮತಗಟ್ಟೆ ಧ್ವಂಸವಾಗಬೇಕಾಗಿ ಬಂತೇ ? ಇದು ಗಹನವಾದ ಪ್ರಶ್ನೆ.

 

ಸಾಮಾಜಿಕ ಸುಡುವಾಸ್ತವಗಳು

 

ಬುಡಕಟ್ಟು ಜನಾಂಗಗಳಾದ ಸೋಲಿಗರು ಮತ್ತು ಬೇಡಗಂಪಣರು ವಾಸಿಸುವ ಈ ಕುಗ್ರಾಮಗಳು ಜನಾಂಗೀಯವಾಗಿಯೇ ವಿಭಜನೆಗೂ ಒಳಗಾಗಿರುವುದು ನಾಗರಿಕತೆಯ ದುರಂತ.  ತಳಮಟ್ಟದ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎರಡೂ ಜನಾಂಗದ ಜನರು ಅನ್ಯೋನ್ಯತೆಯಿಂದಲೇ ಬಾಳುತ್ತಿದ್ದರೂ ಇತ್ತೀಚೆಗೆ ನಡೆದ ಮತ ಬಹಿಷ್ಕಾರದ ಹಿನ್ನೆಲೆಯ ಸಂಘರ್ಷ ಎರಡೂ ಸಮುದಾಯಗಳ ನಡುವೆ ಒಂದು ಗೋಡೆ ಎಬ್ಬಿಸಿರಬಹುದು. ಮತದಾನ ಬಹಿಷ್ಕರಿಸಲು ಎರಡೂ ಗ್ರಾಮದ ಜನರು ಒಮ್ಮತದ ತೀರ್ಮಾನ ಕೈಗೊಂಡಿದ್ದರೂ, ಕೊನೆಯ ಗಳಿಗೆಯಲ್ಲಿ ಪೊಲೀಸರ ಮನವೊಲಿಕೆಗೆ ಮಣಿದು ಮತದಾನ ಮಾಡಲು ಮುಂದಾದ ಮೆಂದಾರೆ ಗ್ರಾಮದ ಜನರು ಇಂಡಿಗನತ್ತ ಗ್ರಾಮದ ಜನರಿಂದ ಹಲ್ಲೆಗೊಳಗಾಗಿರುವುದು ನಮ್ಮ ಜಾತಿ ಪೀಡಿತ ಸಮಾಜದ ಒಳಸೂಕ್ಷ್ಮಗಳಿಗೆ ಕನ್ನಡಿ ಹಿಡಿದಂತಿದೆ. ಈ ಸಂಘರ್ಷದ ಫಲ 40ಕ್ಕೂ ಹೆಚ್ಚು ಜನರ ಬಂಧನ, ಬಿಡುಗಡೆ, ಕೋರ್ಟ್‌ ವ್ಯಾಜ್ಯ, ವರ್ಷಗಟ್ಟಲೆ ಕೋರ್ಟ್‌ಗೆ ಅಲೆತ ಇತ್ಯಾದಿ.

 

ಈ ಇಡೀ ಪ್ರಕರಣದಲ್ಲಿ ನಾಗರಿಕ ಪ್ರಪಂಚಕ್ಕೆ ಕಾಣಿಸಬೇಕಿರುವುದು ನಮ್ಮ ಆಳ್ವಿಕೆಯ ಅಭಿವೃದ್ಧಿ ಮಾದರಿ ಮತ್ತು ಅದರಿಂದ ಉಂಟಾಗುವಂತಹ ಅಸಮಾನತೆಯ ನೆಲೆಗಳು. ಅಮೃತ ಕಾಲದತ್ತ ಧಾವಿಸುತ್ತಿರುವ ನವ ಭಾರತ ಇಂತಹ ಲಕ್ಷಾಂತರ ಕುಗ್ರಾಮಗಳ ತವರು ಎನ್ನುವುದು ಸುಡು ವಾಸ್ತವ. ಉತ್ತರ ಭಾರತದಲ್ಲಿ, ಅಂಧ್ರಪ್ರದೇಶ, ಒಡಿಷಾ, ಈಶಾನ್ಯ ರಾಜ್ಯಗಳಲ್ಲಿರುವ ಇಂತಹ ಅನೇಕಾನೇಕ ಶೋಷಿತರ ಪರ ಹೋರಾಡುವವರನ್ನು ಸರ್ಕಾರಗಳು ಸದಾ ಕೆಂಗಣ್ಣಿನಿಂದಲೇ, ಓರೆಗಣ್ಣಿನಿಂದಲೇ ನೋಡುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಇಂತಹ ಅವಕಾಶವಂಚಿತ ಶೋಷಿತರ ಶಾಂತಿಯುತ ಹೋರಾಟಗಳೂ ಸಹ “ ದೇಶಘಾತುಕರ ಪಿತೂರಿ ” ಎಂದೇ ವರ್ಗೀಕರಿಸಲ್ಪಡುತ್ತವೆ. ಈ ಬೌದ್ಧಿಕ ವಿಕೃತಿಯನ್ನು ಅನುಮೋದಿಸಿ ಸಮರ್ಥಿಸುವ ಮಾಧ್ಯಮ ವಲಯವೂ ನಮ್ಮಲ್ಲಿದೆ.

 

ಇಂಡಿಗನತ್ತ-ಮೆಂದಾರೆ ಕೇವಲ ದಟ್ಟಾರಣ್ಯದ ಸಸಿಗಳಷ್ಟೇ. ಇಲ್ಲಿ ಸಂವಿಧಾನದ ಫಲಾನುಭವಿ ನಾಗರಿಕ ಸಮಾಜವನ್ನು ಹಲವು ಪ್ರಶ್ನೆಗಳು ಕಾಡಬೇಕಿವೆ.  76 ವರ್ಷಗಳ ಪ್ರಜಾಪ್ರಭುತ್ವವಾದಿ, ಸಂವಿಧಾನಬದ್ಧ ಆಳ್ವಿಕೆಯ ಹೊರತಾಗಿಯೂ ಇಂಡಿಗನತ್ತಗಳು, ಮೆಂದಾರೆಗಳು ಏಕೆ ಇನ್ನೂ ಕಾಣುತ್ತಿವೆ ? ಈ ಕುಗ್ರಾಮಗಳ ಆಸುಪಾಸಿನಲ್ಲೇ ತಮ್ಮ ಐಷಾರಾಮಿ ಬದುಕು ಸವೆಸುವ ಜನಪ್ರತಿನಿಧಿಗಳಿಗೆ ಈ ದುರಂತದ ಬದುಕು ಏಕೆ ಗೋಚರಿಸಲಿಲ್ಲ ? ಪಕ್ಷಾಂತರಿಯೋ, ತತ್ವಾಂತರಿಯೋ, ಮತಾಂತರಿಯೋ ಅಥವಾ ಬಣಾಂತರಿಯೋ,  ಜನರಿಂದ ಚುನಾಯಿತರಾಗುವ ಅಥವಾ ತಿರಸ್ಕರಿಸಲ್ಪಡುವ ರಾಜಕೀಯ ನಾಯಕರಿಗೆ ಈ ಶೋಷಿತ ಜನರ ಬದುಕು ಏಕೆ ಗೋಚರಿಸುವುದಿಲ್ಲ ? ಬುದ್ಧ-ಬಸವ-ಫುಲೆ-ನಾರಾಯಣಗುರು-ಅಂಬೇಡ್ಕರ್‌ ಹೆಸರಿನಲ್ಲಿ ರಾಜಕಾರಣ ಮಾಡುವವರಿಗಾಗಲೀ, ಹಿಂದೂ-ಮುಸ್ಲಿಂ-ಕ್ರೈಸ್ತ, ರಾಮ-ಕೃಷ್ಣ-ಏಸು-ಅಲ್ಲಾಹುವಿನ ಹೆಸರಿನಲ್ಲಿ ರಾಜಕೀಯ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಪಕ್ಷಗಳಿಗಾಗಲೀ  ಈ ದುರಂತದ ಬದುಕು ಏಕೆ ಗೋಚರಿಸಲಿಲ್ಲ ?

 

ಸಾಮಾಜಿಕ ಜವಾಬ್ದಾರಿಯತ್ತ

 

ಈ ಪ್ರಶ್ನೆಗಳೇ ನಾಗರಿಕ ಸಮಾಜವನ್ನು ಪ್ರತಿನಿಧಿಸುವ ಎಲ್ಲ ಸೈದ್ಧಾಂತಿಕ-ತಾತ್ವಿಕ ಮನಸ್ಸುಗಳನ್ನೂ ಕಾಡಬೇಕಿದೆ. ಭಾರತ ಅನುಸರಿಸುತ್ತಿರುವ ನವ ಉದಾರವಾದಿ ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯ ದೃಷ್ಟಿಯಲ್ಲಿ ಈ ಶೋಷಣೆ, ಬಡತನ ಮತ್ತು ಅಸಮಾನತೆಗಳು ಸಹಜ ಪ್ರಕ್ರಿಯೆಗಳಾಗಿ ಕಾಣುತ್ತವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕೈಗೊಳ್ಳಲಾಗಿರುವ ಜನಕಲ್ಯಾಣ ಯೋಜನೆಗಳಿಂದ ಹೊರಬಂದು ನೋಡಿದರೆ ಭಾರತ ಅನುಸರಿಸಿಕೊಂಡು ಬಂದಿರುವುದು ಇದೇ ಬಂಡವಾಳಶಾಹಿಯ ಕ್ರೂರ ಹಾದಿಯನ್ನೇ . ಈ ಹಾದಿಯಲ್ಲಿ ಶೋಷಿತ ಜನರು ಬದುಕಲು ಸಾಧ್ಯವಾಗುವಂತಹ ಅನುಕೂಲಗಳನ್ನು ಪೂರೈಸಲಾಗುತ್ತದೆ ಆದರೆ ಸಾಮುದಾಯಿಕವಾಗಿ ಇದೇ ಜನರು ಮುಂದಕ್ಕೆ ಸಾಗಲು ಅಗತ್ಯವಾದ ದಾರಿಗಳಲ್ಲಿ ಕಂದಕಗಳನ್ನು ತೋಡಲಾಗುತ್ತದೆ. ಗೋಡೆಗಳನ್ನು ಕಟ್ಟಲಾಗುತ್ತದೆ. ಜಾತಿ, ಬುಡಕಟ್ಟು ಮತ್ತು ಸಾಮುದಾಯಿಕ ಅಸ್ಮಿತೆಗಳಿಂದಾಚೆ ನಿಂತು ನೋಡಿದಾಗ ಇಲ್ಲಿ ಶೋಷಿತ ವರ್ಗಗಳನ್ನೂ ಗುರುತಿಸಬಹುದು.

 

ನಾಗರಿಕ ಪ್ರಪಂಚವು ಗಮನಿಸಬೇಕಿರುವುದು ಈ ವರ್ಗಗಳ ವರ್ಗೀಕರಣಗಳನ್ನು ಹಾಗೂ ಭಾರತ ಅನುಸರಿಸುತ್ತಿರುವ ಮಾರುಕಟ್ಟೆ ಆರ್ಥಿಕತೆಯಲ್ಲಿ ಈ ವರ್ಗೀಕೃತ ಸಮುದಾಯಗಳು ಎದುರಿಸಬೇಕಾದ ಅಪಾಯಗಳನ್ನು. ಚುನಾಯಿತ-ಪರಾಜಿತ ಜನಪ್ರತಿನಿಧಿಗಳು ಸೂಕ್ಷ್ಮಗ್ರಾಹಿಗಳಾಗಿದ್ದಲ್ಲಿ, ಸೂಕ್ಷ್ಮಮತಿಗಳಾಗಿದ್ದಲ್ಲಿ, ಸಂವೇದನಾಶೀಲರಾಗಿದ್ದಲ್ಲಿ ಒಂದು ಸುಂದರ ಪ್ರಪಂಚವನ್ನು ಊಹಿಸಿಕೊಳ್ಳಲಾದರೂ ಸಾಧ್ಯವಾಗುತ್ತಿತ್ತು. ಇಂಡಿಗನತ್ತ-ಮೆಂದಾರೆ ಮತ್ತಿತರ ಗ್ರಾಮಗಳ ಕರಾಳ ದೃಶ್ಯಗಳನ್ನು ನೋಡಿದಾಗ ಸರ್ಕಾರ, ಅಧಿಕಾರಶಾಹಿ, ಆಳ್ವಿಕೆಯ ಕೇಂದ್ರಗಳು ಹಾಗೂ ಇವೆಲ್ಲವನ್ನೂ ಸಾಂವಿಧಾನಿಕವಾಗಿ ಪ್ರತಿನಿಧಿಸುವ ʼಜನಪ್ರತಿನಿಧಿಗಳುʼ ಎಲ್ಲವೂ ಸಹ ಕುರುಡಾಗಿರುವುದು ಸ್ಪಷ್ಟವಾಗುತ್ತದೆ.

 

ಇವರುಗಳ ಕಣ್ತೆರೆಸುವ ಸ್ತುತ್ಯಾರ್ಹ ಕೆಲಸವನ್ನು ಆಂದೋಲನ ಪತ್ರಿಕೆ ಮಾಡಿದೆ. ತೆರೆದಕಣ್ಣಿಂದ ನೋಡುತ್ತಾ ಈ ಶೋಷಿತ ಜನತೆಯ ಬದುಕಿಗೆ ಕಾಯಕಲ್ಪ ಒದಗಿಸಲು ಆಲೋಚನೆ ಮಾಡುವ ಜವಾಬ್ದಾರಿ ನಾಗರಿಕ ಪ್ರಪಂಚದ ಮೇಲಿದೆ.

Tags: #Constitution#Develeopment#Indepenedent India#NehruCulturalModiUndeveloped Village
Previous Post

ಸಾವಿನಲ್ಲಿ ರಾಜಕೀಯ ಮಾಡೋದು ಸರಿಯಲ್ಲ ! ಶಿವರಾಮೇಗೌಡ ವಿರುದ್ಧ ನಿಖಿಲ್ ಆಕ್ರೋಶ !

Next Post

Hair extensions trend: ಮದುವೆ ಸೀಸನ್(Marriage Season) ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ ಆರ್ಟಿಫಿಶಿಯಲ್(Artificial) ಹೇರ್ ಎಕ್ಸ್ಟೆಂಶನ್.!

Related Posts

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
0

ಕನ್ನಡ ರಂಗಭೂಮಿಗೆ ವಿಶೇಷ ಮೆರುಗು ತರುವ ಕಲೋಪಾಸಕರಲ್ಲಿ  ಎದ್ದು ಕಾಣುವ ಕಲಾವಿದ ನಾ ದಿವಾಕರ “ ಕಲೆ ಎನ್ನುವುದು ವೈಯುಕ್ತಿಕವಾದುದು ಎನ್ನುವುದರ ಜೊತೆಗೆ ಅದು ತನ್ನ ಕಲಾತ್ಮಕ...

Read moreDetails
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

December 18, 2025
Next Post
Hair extensions trend: ಮದುವೆ ಸೀಸನ್(Marriage Season) ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ ಆರ್ಟಿಫಿಶಿಯಲ್(Artificial)  ಹೇರ್ ಎಕ್ಸ್ಟೆಂಶನ್.!

Hair extensions trend: ಮದುವೆ ಸೀಸನ್(Marriage Season) ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ ಆರ್ಟಿಫಿಶಿಯಲ್(Artificial) ಹೇರ್ ಎಕ್ಸ್ಟೆಂಶನ್.!

Please login to join discussion

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌
Top Story

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

by ನಾ ದಿವಾಕರ
December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!
Top Story

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

by ಪ್ರತಿಧ್ವನಿ
December 19, 2025
Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

Winter Session 2025: ನನಗೆ ಜೈಲಿನಿಂದ ಯಾವ ಕರೆಗಳು ಬಂದಿಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
December 18, 2025
ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ
Top Story

ನನಗೆ ಬೆದರಿಕೆ ಹಾಕಲು ಬರಬೇಡಿ-ಡಿ.ಕೆ ಶಿವಕುಮಾರ್‌ಗೆ ವಿಜಯೇಂದ್ರ ಎಚ್ಚರಿಕೆ

by ಪ್ರತಿಧ್ವನಿ
December 18, 2025
ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!
Top Story

ಪೊಲೀಸ್ ಸಿಬ್ಬಂದಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ರಜೆ ನೀಡಿ: ಡಿಜಿಪಿಗೆ ಪತ್ರ!

by ಪ್ರತಿಧ್ವನಿ
December 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

ಅನನ್ಯ ಪ್ರತಿಭೆಯ ವಿಶಿಷ್ಟ ಕಲಾವಿದ-ಮೈಮ್‌

December 19, 2025
Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

Daily Horoscope: ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದ ರಾಶಿಗಳಿವು..!

December 19, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada