ಡ್ರಗ್ಸ್ ವಿಚಾರದಲ್ಲಿ ಕೇಳಿಬಂದ ಸೆಲೆಬ್ರಿಟಿಗಳ ಪೈಕಿ ನಟಿ ಹಾಗೂ ನಿರೂಪಕಿ ಅನುಶ್ರೀ ಕೂಡ ಒಬ್ಬರು. ಈಗಾಗಲೇ ಅವರು ನಾನವಳಲ್ಲ, ನನ್ನ ಪಾತ್ರ ಏನೂ ಇಲ್ಲಾ ಅಂದಿದ್ದಾರೆ. ಹೀಗಿದ್ದರೂ ಮತ್ತೆ ಪದೇಪದೇ ಅನುಶ್ರೀ ಹೆಸರು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಪೊಲೀಸರು ಸಲ್ಲಿಸಿದ್ದಾರೆ ಎನ್ನಲಾದ ದೋಷಾರೋಪ ಪಟ್ಟಿ.
“ನಾನೊಬ್ಬಳೆ ಬಂದಿದ್ದೇನೆ, ನಾನೇ ಲಾಯರ್. ನಾನು ಜಾಸ್ತಿ ಪಾರ್ಟಿಗೆ ಹೋಗುವುದಿಲ್ಲ. ನಾನು ಯಾರು ಜೊತೆನೂ ಹೆಚ್ಚು ಮಾತಾಡೋಲ್ಲ. ಡ್ರಗ್ಸ್ ನಮ್ಮ ನಾಡನ್ನ ಕಾಡುತ್ತಿರುವ ಭೂತ. ಆದಷ್ಟು ಬೇಗ ಈ ಡ್ರಗ್ಸ್ ಭೂತ ರಾಜ್ಯದಿಂದ ತೊಲಗಲಿ. ಎಲ್ಲರೂ ಸಹಕಾರ ನೀಡಿ. ಯಾವಾಗ ಡ್ರಗ್ಸ್ ತೊಲಗುತ್ತೋ ಅವಾಗಲೇ ಸಿಟಿ ಕ್ಲೀನ್ ಆಗಲಿದೆ ಎಂದು ಈ ಹಿಂದೆಯೇ ಅನುಶ್ರೀ ಸಿಸಿಬಿ ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ಇದಾದ ಬಳಿಕ ಈ ವಿಚಾರ ತಣ್ಣಗಾಗಿತ್ತು.
ಈಗ ಮತ್ತೊಮ್ಮೆ ಅನುಶ್ರೀಯ ಮೇಲೆ ಅಮಲಿನ ನಂಟಿನ ಆರೋಪ ಕೇಳಿ ಬಂದಿದೆ. ಕಳೆದ ವರ್ಷ ಇದೇ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಯ ಉಳಿ ಪೆಟ್ಟು ತಿಂದಿದ್ದ ಅನುಶ್ರೀಯ ಕೊರಳಿಗೆ ಮತ್ತೊಮ್ಮೆ ಡ್ರಗ್ಸ್ ಸೇವನೆಯ ಆರೋಪದ ಉರುಳು ಸುತ್ತಿಕೊಂಡಿದೆ. ಡ್ರಗ್ಸ್ ಪ್ರಕರಣ ಸಂಬಂಧ ಮಂಗಳೂರು ಸಿಸಿಬಿ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಅನುಶ್ರೀಯ ಹೆಸರು ಉಲ್ಲೇಖವಾಗಿದೆ. ಚಾರ್ಜ್ ಶೀಟ್‌ನಲ್ಲಿ ಅನುಶ್ರೀ ಡ್ರಗ್ಸ್ ಸೇವನೆ ಮತ್ತು ಮಾರಾಟ ಮಾಡಿರೋದು ಉಲ್ಲೇಖವಾಗಿದೆ. ಇದೀಗ ಅಮಲಿನ ನಂಟಿನ ಆರೋಪ ಆ್ಯಂಕರ್ ಅನುಶ್ರೀಯನ್ನ ಮತ್ತೊಮ್ಮೆ ಸಂಕಷ್ಟಕ್ಕೆ ತಳ್ಳುವಂತಾಗಿದೆ.
2020ರ ಸೆಫ್ಟೆಂಬರ್ 19 ರಂದು ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿ, ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕಿಶೋರ್ ಶೆಟ್ಟಿ ಹಾಗೂ ನೌಶಿಲ್ರನ್ನ ತಮ್ಮ ಖೆಡ್ಡಾಗೆ ಕೆಡವಿದ್ರು. ಕಾರ್ಯಾಚರಣೆಯ ವೇಳೆ ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಎಂಡಿಎಂಎ ಡ್ರಗ್ಸ್ ಹಾಗೂ ನಗದನ್ನ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ರು. ಅಮಲಿನ ದುನಿಯಾದ ಆಳಕ್ಕೆ ಇಳಿದು ಸತ್ಯವನ್ನ ಹೆಕ್ಕಿ ತೆಗೆಯಲು ಮುಂದಾದ ಪೊಲೀಸರು ಕಿಶೋರ್ ಶೆಟ್ಟಿಯನ್ನ ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆಯ ವೇಳೆ ಕಿಶೋರ್ ಶೆಟ್ಟಿ ತರುಣ್ ರಾಜ್ ಹೆಸರು ಬಾಯ್ಬಿಟ್ಟಿದ್ದ. ಯಾವಾಗ ತರುಣ್ ರಾಜ್ ಹೆಸರು ಕೇಸ್ನಲ್ಲಿ ತಳಕು ಹಾಕಿಕೊಳ್ಳುತ್ತೋ ಕೂಡಲೇ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಪೊಲೀಸರೇ ಶಾಕ್ ಆಗುವಂತಹ ವಿಷ್ಯಾ ಹೊರಬಿದ್ದಿದೆ. ವಿಚಾರಣೆಯ ವೇಳೆ ಆ್ಯಂಕರ್ ಅನುಶ್ರೀಯ ಹೆಸರು ಈ ಡ್ರಗ್ಸ್ ಕೇಸ್ನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.
ಅದಾಗಲೇ ಚಂದನವನದಲ್ಲೂ ಡ್ರಗ್ಸ್ ವಾಸನೆಯ ಸದ್ದು ಜೋರಾಗುತ್ತಿದ್ದ ಕಾರಣ ಈ ಪ್ರಕರಣಕ್ಕೆ ಮತ್ತಷ್ಟು ತೂಕ ಬಂದಿತ್ತು. ಹಿಂದಿಯ ಎಬಿಸಿಡಿ ಸಿನಿಮಾ ಸೇರಿದಂತೆ ಸೆಲೆಬ್ರೆಟಿ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದ ಕಿಶೋರ್ ಶೆಟ್ಟಿಯ ಹೆಸರಿನ ಜೊತೆಗೆ ಆ್ಯಂಕರ್ ಅನುಶ್ರೀಯ ಹೆಸರು ಕೂಡ ನೇತುಹಾಕಿಕೊಂಡಿದ್ದು ಕರಾವಳಿಯಾದ್ಯಂತ ಅಂದು ಕಂಪನ ಉಂಟು ಮಾಡಿತ್ತು.
2007-08ರಲ್ಲಿ ಬೆಂಗಳೂರಿನಲ್ಲಿ ಅನುಶ್ರೀ ಪರಿಚಯವಾಗಿತ್ತು. ಕುಣಿಯೋಣ ಬಾರಾದಲ್ಲಿ ನನ್ನ ಸ್ನೇಹಿತ ತರುಣ್ ಕೊರಿಯೋಗ್ರಫಿ ಮಾಡುತ್ತಿದ್ದ. ಆಗ ನನಗೆ ಅನುಶ್ರೀನ ಪರಿಚಯ ಮಾಡಿಕೊಟ್ಟಿದ್ದ. ನಾನು ತರುಣ್ ಇಬ್ಬರು ಕೊರಿಯೋಗ್ರಫಿ ಮಾಡುತ್ತಿದ್ದೆವು. ಈ ಪ್ರೋಗ್ರಾಂನಲ್ಲಿ ಅನುಶ್ರೀ ಗೆದ್ದಿದ್ದರು. ಇನ್ನು, ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಪ್ರ್ಯಾಕ್ಟಿಸ್ ಮಾಡುತ್ತಿದ್ರು. ಕೆಲವೊಂದು ದಿನಗಳ ಕಾಲ ನಾನು ಅವರ ಜೊತೆ ಹೋಗಿದ್ದೆ. ಈ ವೇಳೆ ಮೂವರೂ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಆರೋಪಿ ಕಿಶೋರ್ ಶೆಟ್ಟಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ ಇದನ್ನು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಉಲ್ಲೇಖಿಸಿದರು.
ಅಂದು ಡ್ರಗ್ಸ್ ಲೋಕ ನಮ್ಮ ನಾಡನ್ನ ಕಾಡುತ್ತಿರುವ ಭೂತ ಎಂದ್ದಿದ್ದ ಅನುಶ್ರೀ, ಇಂದು ತಮ್ಮ ಮೇಲೆ ಇಂತಹ ಗಂಭೀರ ಆರೋಪ ಬಂದಾಗ ಸೈಲೆಂಟಾಗಿದ್ದಾರೆ. ಹಿಂದಿನ ಡ್ರಗ್ಸ್ ಕೇಸ್ನಲ್ಲಿ ಹೊಸ ಘಾಟು ಬರುತ್ತಿದ್ದಂತೆಯೇ ಅನುಶ್ರೀ ಮೌನಕ್ಕೆ ಶರಣಾಗಿದ್ದಾರೆ. ಸದ್ಯಕ್ಕೆ ಆಕೆ ಯಾರ ಸಂಪರ್ಕಕಕ್ಕೂ ಸಿಗುತ್ತಿಲ್ಲ.
ಕಳೆದ ವರ್ಷ ಕೂಡ ಮುಗುಳ್ನಗೆ ಬೀರುತ್ತಲೇ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ, ಏನೂ ನಡೆದೇ ಇಲ್ಲ ಎನ್ನುವಂತೆ ವರ್ತಿಸಿದ್ರು. ಯಾವ ಡ್ರಗ್ಸ್ ಪಾರ್ಟಿ ಇಲ್ಲ, ಏನು ಇಲ್ಲ ಎಂದು ಅಂದು ಮಾಸ್ ಡೈಲಾಗ್ ಹೊಡೆದಿದ್ರು. ಈಗ ತಮ್ಮ ಮೇಲೆ ಇಷ್ಟು ದೊಡ್ಡ ಆರೋಪ ಕೇಳಿ ಬಂದ್ರೂ, ಯಾವುದೇ ಮಾತ್ನಾಡದೇ ಸೈಲೆಂಟ್ ಆಗಿದ್ದಾರೆ.
ಅನುಶ್ರೀ ಹಾಗೂ ಕಿಶೋರ್ ಶೆಟ್ಟಿಯ ನಡುವೆ 12 ವರ್ಷಗಳ ಪರಿಚಯ ಇದೆ. ಹೀಗೆಂದು ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ. ಈಕೆ ಡ್ರಗ್ಸ್ ಸೇವನೆ ಮಾಡಿದ್ದು ನಿಜನಾ? ಒಂದು ವೇಳೆ ಡ್ರಗ್ಸ್ ಸೇವಿಸಿದ್ರೂ ಅದು ವೈದ್ಯಕೀಯ ತನಿಖೆಯಲ್ಲಿ ಸಾಬೀತಾಗುತ್ತಾ? 12 ವರ್ಷಗಳ ಹಿಂದೆ ಸೇವಿಸಿದರೆ ಅದು ಸಾಬೀತಾಗಲು ಸಾಧ್ಯಾನಾ ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದೆ. ಇದೇ ಕಾರಣಕ್ಕೆ ಕೇಸ್ ಹಳ್ಳ ಹಿಡಿಯುವ ಸಾಧ್ಯತೆ ಇದ್ಯಾ ಅನ್ನೋ ಪ್ರಶ್ನೆ ಇದೀಗ ಎಲ್ಲೆಡೆ ಒಡಾಡುತ್ತಿದೆ.