
ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮರ್ಮು ಅವರಿಂದ ಇಂದು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಭಾರತೀಯ ಚಿತ್ರರಂಗದ ಅಮೂಲ್ಯ ರತ್ನ, ಕರ್ನಾಟಕದ, ಕನ್ನಡ ಚಿತ್ರರಂಗದ ಧ್ರುವತಾರೆ ಶ್ರೀ ಅನಂತ್ ನಾಗ್ ಅವರಿಗೆ ಹಾರ್ದಿಕ ಅಭಿನಂದನೆಗಳು.
ಅನಂತನಾಗ್ ಭಾರತ ಚಿತ್ರರಂಗ ಕಂಡ ಸುಪ್ತ ಭಾಷಾ ನಟ, ಅಲ್ಲದೇ ಕನ್ನಡ ಚಿತ್ರರಂಗದ ಪ್ರಸಿದ್ಧ ಹಿರಿಯ ನಟರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಸಹಜ ನಟನೆಯಿಂದಲೇ ಭಾರತ ಚಿತ್ರರಂಗದಲ್ಲಿ ಅಪರೂಪದ ಅದ್ಭುತ ನಟ ಎಂಬ ಹೆಸರನ್ನು ಪಡೆದಿರುವ ಇವರು ದೇಶಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಜೆ.ಎಚ್. ಪಟೇಲ್ ರ ಸರ್ಕಾರದಲ್ಲಿ ಮಂತ್ರಿಯಾಗಿಯು ಕೂಡ ಕಾರ್ಯನಿರ್ವಹಿಸಿದ್ದಾರೆ.

ಸೆಪ್ಟೆಂಬರ್ 4, 1948 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶಿರಾಲಿಯಲ್ಲಿ ಸದಾನಂದ ನಾಗರಕಟ್ಟೆ ಮತ್ತು ಆನಂದಿ ದಂಪತಿಯ ಮಗನಾಗಿ ಜನಿಸಿದರು. ಇವರ ಪೂರ್ಣ ಹೆಸರು ಅನಂತ ನಾಗರಕಟ್ಟೆ. ತಮ್ಮ ಆರಂಭಿಕ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಆನಂದ ಆಶ್ರಮದಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಚಿತ್ತಾಪುರ ಮಠದಲ್ಲಿ ಪಡೆದ ಇವರು ಉನ್ನತ ಶಿಕ್ಷಣವನ್ನು ಪಡೆಯಲು ಮುಂಬೈಗೆ ತೆರಳಿದರು.ಆದರೆ ವಿಧಿಯ ಆಟ ಬಲ್ಲವರಾರು ಅಲ್ಲವೇ? ಅದೃಷ್ಟ ಯಾರಿಗೆ ಯಾವ ಸಮಯದಲ್ಲಿ ಬರುತ್ತದೆಯೋ ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಅನಿರೀಕ್ಷಿತವಾಗಿ ದೊರೆತ ರಂಗಭೂಮಿ ಪ್ರವೇಶದಿಂದ ಕನ್ನಡ, ಕೊಂಕಣಿ ಮತ್ತು ಮರಾಠಿ ಭಾಷೆಯ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ಎಂಟು ವರ್ಷಗಳ ಕಾಲ ರಂಗಭೂಮಿಯನ್ನು ಆಳಿದರು. ಇವರು ಶ್ಯಾಂ ಬೆನಗಲ್ ನಿರ್ದೇಶನದ ಅಂಕೂರ್ ಚಿತ್ರದಲ್ಲಿ ನಟಿಸುವುದರ ಮೂಲಕ ಚಿತ್ರ ಬಾಲಿವುಡ್ ರಂಗವನ್ನು ಪ್ರವೇಶಿಸಿದರು. ಅನಂತರ ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳಸೂತ್ರ್, ಕೊಂಡೋರಾ ಮತ್ತು ರಾತ್ ಸೇರಿ ಅನೇಕ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರ ರಂಗದಲ್ಲಿ ಕೆಲವು ನಟ, ನಟಿಯರನ್ನು ಪಂಚ ಭಾಷಾ ತಾರೆ ಎಂದು ಕರೆಯುವ ಪದ್ಧತಿ ಇದೆ. ಆದರೆ ಇದುವರೆಗೂ ಏಳು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಇವರನ್ನು ಸಪ್ತ ಭಾಷಾ ನಟ ಎಂದು ಕರೆಯುತ್ತಾರೆ. ಅಮೋಲ್ ಪಾಲೇಕರ್ ನಿರ್ದೇಶನದ ಮರಾಠಿ ಚಿತ್ರ ಅನಾಹತ್, ಮಲೆಯಾಳಂ ಚಿತ್ರ ಸ್ವಾತಿ ತಿರುನಾಳ್, ತೆಲುಗಿನ ಅನುಗ್ರಹಂ, ಇಂಗ್ಲೀಷ್ ಭಾಷೆಯ ಸ್ಟಂಬಲ್ ಚಿತ್ರ ಈ ರೀತಿ ಎಷ್ಟೋ ಅವಿಸ್ಮರಣೀಯ ಚಿತ್ರಗಳಲ್ಲಿ ನಟಿಸಿದ್ದಾರೆ. 1973 ರಲ್ಲಿ ತೆರೆ ಕಂಡ ಸಂಕಲ್ಪ ಎಂಬ ಚಿತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ನಿಚ್ಚಳವಾಗಿ ಪ್ರವೇಶಿಸಿದರು. ಈ ಚಿತ್ರವು ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಅನುಸರಿಸಿಕೊಂಡು ಬರುತ್ತಿದ್ದ ಸಿದ್ಧಸೂತ್ರಗಳಿಗೆ ತಡೆಯೊಡ್ಡಿ ಹೊಸ ಅಲೆಯನ್ನು ಸೃಷ್ಟಿಸಿತ್ತು.

ಎರಡು ವರ್ಷಗಳ ನಂತರ 1975 ರಲ್ಲಿ ತೆರೆ ಕಂಡ ಜಿ.ವಿ.ಅಯ್ಯರ್ ನಿರ್ದೇಶನದ ಹಂಸಗೀತೆ ಚಿತ್ರದ ಮೂಲಕ ಇವರ ಜನಪ್ರಿಯತೆ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಇನ್ನೂ ಎತ್ತರದ ಮಟ್ಟಕ್ಕೆ ಬೆಳೆಯಿತು. 1977 ರಲ್ಲಿ ತೆರೆ ಕಂಡ ದೊರೈ ಭಗವಾನ್ ನಿರ್ದೇಶನದ ಬಯಲು ದಾರಿ ಚಿತ್ರದಲ್ಲಿ ನಟಿಸಿದ ನಂತರ ವಂತೂ ಇವರು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ನೆಲೆಸಿದ್ದಾರೆ. ಆದರೆ ಇವರ ಕ್ರೇಜ್ ಹೇಗಿದೆಯೆಂದರೆ ಇವರು ಬಿಟ್ಟು ಇನ್ಯಾರು ಮಾಡಲು ಸಾಧ್ಯವಿಲ್ಲದಿರುವ ಪಾತ್ರಗಳಿಗೆ ಇವರೇ ಬೇಕು ಎಂದು ಬಯಸುವವರು, ಹುಡುಕಿಕೊಂಡು ಬರುವ ಬೇರೆ ಬೇರೆ ಭಾಷೆಗಳ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರು, ನಿರ್ದೇಶಕರು ದೇಶದ ಎಲ್ಲ ಕಡೆಯಲ್ಲೂ ಇದ್ದಾರೆ. ಈ ಚಿತ್ರಗಳೆಲ್ಲ ಯಾರೋ ಒಬ್ಬ ನಟರು ಬಂದು ನಟಿಸಿ ಹೋದರು ಎಂಬಂತಹ ಪಾತ್ರಗಳಲ್ಲದೆ ರಾಷ್ಟ್ರ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವನ್ನು ಕಂಡು ಗಮನ ಸೆಳೆದ ಚಿತ್ರಗಳಾಗಿವೆ. ಇವರು ನಿರ್ವಹಿಸಿದ ಕೆಲವು ಚಿತ್ರಗಳಲ್ಲಿನ ಪಾತ್ರಗಳು ಬೇರೆಯವರಿಗೆ ಸಾಧ್ಯ ಎಂದು ಊಹಿಸಲು ಕಷ್ಟವಾಗುತ್ತದೆ. ಇವರು ನಟಿಸಿದ ಹಂಸಗೀತೆ, ಕನ್ನೇಶ್ವರ ರಾಮ,ಬರ, ಅವಸ್ಥೆ, ಉದ್ಭವ, ಮಿಂಚಿನ ಓಟ, ಗಣೇಶನ ಮದುವೆ, ಗಣೇಶನ ಗಲಾಟೆ, ಉಂಡು ಹೋದ ಕೊಂಡು ಹೋದ, ಗಣೇಶ ಸುಬ್ರಹ್ಮಣ್ಯ, ಬೆಂಕಿಯ ಬಲೆ, ಚಂದನದ ಗೊಂಬೆ, ಆಕ್ಸಿಡೆಂಟ್, ಬೆಳದಿಂಗಳ ಬಾಲೆ, ಮತದಾನ, ಯಾರಿಗೂ ಹೇಳ್ಬೇಡಿ, ಅನುರೂಪ, ರಾಮಾಪುರದ ರಾವಣ, ವಿಜಯಾನಂದ, ಹೊಸ ನೀರು, ವಿಶ್ವ( ಘಾಯಲ್ ಹಿಂದಿ ಚಿತ್ರದ ರಿಮೇಕ್), ಅರ್ಜುನ್, ಜನ್ಮ ಜನ್ಮದ ಅನುಬಂಧ, ವಿಷ್ಣು ಸೇನಾ ( ಠಾಗೂರ್ ತೆಲುಗು ಚಿತ್ರದ ರಿಮೇಕ್), ಆಯುಷ್ಮಾನ್ ಭವ, 2020 ರಲ್ಲಿ ತೆರೆ ಕಂಡ ನಿತೀನ್ ಅಭಿನಯದ ಭೀಮ ತೆಲುಗು ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕೂಡ ನಟಿಸಿದ್ದಾರೆ. ಇಂತಹ ಚಿತ್ರಗಳಲ್ಲಿ ಕೇವಲ ಅನಂತನಾಗ್,ಕಮಲ್ ಹಾಸನ್ ರಂತಹ ಕೆಲವೇ ನಟರಿಗೆ ಮಾತ್ರ ಸಾಧ್ಯವಿದೆ. ಎಷ್ಟು ವಿಭಿನ್ನವಾಗಿ ಬೇಕಿದ್ದರೂ ಬಳಸಿಕೊಳ್ಳಲು ಇವರ ನಟನೆಯ ನಾ ನಿನ್ನ ಬಿಡಲಾರೆ ಚಿತ್ರಕ್ಕಿಂತಲೂ ಉತ್ತಮ ಉದಾಹರಣೆ ಬೇಕಾಗಿಲ್ಲ. ಈ ಚಿತ್ರದಲ್ಲಿ ಇವರ ಪಾತ್ರವನ್ನು ವರ್ಣಿಸಲು ಸಾಧ್ಯವೇ? ಬಯಲು ದಾರಿ ಈ ಚಿತ್ರವು ಕೂಡ ಎವರ್ ಗ್ರೀನ್ ಬ್ಲಾಕ್ ಫಾಸ್ಟರ್ ಈ ಚಿತ್ರದ ಯಶಸ್ಸನ್ನು ವರ್ಣಿಸಲು ಸಾಧ್ಯವಿಲ್ಲ.

ಈ ಚಿತ್ರದ ನಂತರ ಇವರ ಜನಪ್ರಿಯತೆ ಯಾವ ಮಟ್ಟದಲ್ಲಿತ್ತೆಂದರೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಜೋಡಿ ದೊರೈ ಭಗವಾನ್ ಇವರ ನಾಯಕತ್ವದಲ್ಲಿ ಒಂದರ ನಂತರ ಒಂದು ಸುಂದರ ಚಿತ್ರಗಳನ್ನು ನಿರ್ಮಿಸಿದರು. ಅದರಲ್ಲೂ ಚಿತ್ರ ರಂಗದ ಟಾಪ್ ಜೋಡಿಯೆಂದರೆ ಅನಂತ ನಾಗ್ ಮತ್ತು ಲಕ್ಷ್ಮಿ ಜೋಡಿ ಎಂದರೆ ತಪ್ಪಾಗಲಾರದು. ಈ ಜೋಡಿ ಚಿತ್ರಪ್ರೇಮಿಗಳಿಗೆ ಮಾಡಿದ ಮೋಡಿ ಸಾಮಾನ್ಯವೇನು ಅಲ್ಲ. ಬೆಂಕಿಯ ಬಲೆ, ಚಂದನದ ಗೊಂಬೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು,ನಾ ನಿನ್ನ ಬಿಡಲಾರೆ ಅದರಲ್ಲೂ ಈ ಜೋಡಿಯು ನಿಜ ಜೀವನದಲ್ಲಿ ಕೂಡ ಸತಿಪತಿ ಎಂಬ ಭಾವನೆ ಬರುವಷ್ಟು ಸುಂದರ ದಂಪತಿಯ ಸಾಮಾನ್ಯ ಜನರ ಜೀವನವನ್ನು ಈ ಪಾತ್ರದಲ್ಲಿ ಮಾಡಿ ತೋರಿಸಿದ್ದು ಈ ಚಿತ್ರಗಳು ಇಂದಿಗೂ ಅವಿಸ್ಮರಣೀಯವಾಗಿವೆ. ಇವರು ಸ್ಪುರದ್ರೂಪಿ ನಟರಾದರೂ ಎಂದಿಗೂ ಕೂಡ ಸಹ ನಟರೊಂದಿಗೆ ನಟಿಸಲು ನಿರಾಕರಿಸಲಿಲ್ಲ. ಚಾಲೆಂಜ್ ಗೋಪಾಲಕೃಷ್ಣ, ಗೋಲ್ ಮಾಲ್ ರಾಧಾಕೃಷ್ಣ, ಸುಖ ಸಂಸಾರಕ್ಕೆ 12 ಸೂತ್ರಗಳು, ಹೆಂಡ್ತಿಗೇಳ್ಬೇಡಿ, ನಾನೇನು ಮಾಡಲಿಲ್ಲ, ಎರಡನೇ ಮದುವೆ, ಮತ್ತೊಂದು ಮದುವೆನಾ? ಮಿ.ಗರಗಸ,ಗಣೇಶ ಸುಬ್ರಹ್ಮಣ್ಯ, ಗಾಯತ್ರಿ ಮದುವೆ ಸೇರಿ ಅನೇಕ ಹಾಸ್ಯ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಇವರ ವಿಜ್ರಂಭಣೆ ಚಿತ್ರ ರಂಗದಲ್ಲಿ ಇನ್ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಇವರು ಎಷ್ಟು ದೊಡ್ಡ ನಟರಾದರೂ ಇತರೆ ನಾಯಕರು ಪ್ರಧಾನವಾಗಿದ್ದ
ಡಾ.ರಾಜಕುಮಾರ್ ಅಭಿನಯದ ಕಾಮನ ಬಿಲ್ಲು, ಡಾ.ವಿಷ್ಣುವರ್ಧನ್ ಜೊತೆ ನಿಷ್ಕರ್ಷ,ಜೀವನದಿ, ವಿಷ್ಣು ಸೇನಾ, ಮತ್ತೆ ಹಾಡಿತು ಕೋಗಿಲೆ, ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ರಣಧೀರ, ಶಾಂತಿ ಕ್ರಾಂತಿ (ಈ ಚಿತ್ರದಲ್ಲಿ ಮುಖ್ಯ ಖಳನಾಯಕನ ಪಾತ್ರ ವಹಿಸಿದ್ದಾರೆ). ಮುಂಗಾರು ಮಳೆ, ಗಾಳಿಪಟ, ಗೂಗ್ಲಿ, ಅರಮನೆ,ಶ್ರೀ ಸೇರಿ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರೂ ಪ್ರತಿಯೊಂದು ಚಿತ್ರಗಳ ಚೌಕಟ್ಟಿನಲ್ಲಿ ಎದ್ದು ಕಾಣುತ್ತಾರೆ. ಭಾರತದ ಕಿರುತೆರೆಯ ಪ್ರಸಿದ್ಧ ಧಾರಾವಾಹಿಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಇವರ ಸಹೋದರ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಇವರು ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರವಾದರೂ ಅದರಲ್ಲಿ ಚಿಕ್ಕ ಸ್ಥಳವಿದ್ದರೂ ಆ ವ್ಯಾಪ್ತಿಯನ್ನು ವಿಸ್ತರಿಸುವ ಇವರು ಪ್ರೇಕ್ಷಕನ ಅನುಭವಕ್ಕೆ ತರಬಲ್ಲ ಅಸಾಮಾನ್ಯ ನಟರು. ಎಲ್ಲಿ ಹೇಗೆ ಇದ್ದರೂ ಯಾವುದೇ ಪಾತ್ರವಿದ್ದರೂ ಅಥವಾ ಕಠಿಣ ಪಾತ್ರವಾಗಿದ್ದರೂ ಯಾವುದೇ ಕಟ್ಟು ಪಾಡುಗಳಿಲ್ಲದೆ ಲೀಲಾಜಾಲವಾಗಿ ಸಹಜವಾಗಿ, ಸರಳವಾಗಿ ನಟಿಸುವ ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ ಎನ್ನುವುದು ಅಷ್ಟೇ ಸತ್ಯವಾಗಿದೆ. ಇವರ ಪತ್ನಿಯ ಹೆಸರು ಗಾಯತ್ರಿ, ಇವರು ಕೂಡ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ. 1987 ರಲ್ಲಿ ಇವರನ್ನು ವಿವಾಹವಾಗಿರುವ ಇವರಿಗೆ ಅದಿತಿ ಅನಂತನಾಗ್ ಎಂಬ ಮಗಳಿದ್ದಾಳೆ. ಇವರ ಸಹೋದರ ಕರಾಟೆ ಕಿಂಗ್ ಎಂದು ಪ್ರಸಿದ್ಧಿ ಪಡೆದಿದ್ದ ನಟ ಶಂಕರನಾಗ್ ಕುರಿತು ತಿಳಿಯದ ಕನ್ನಡಿಗರೇ ಇಲ್ಲ. ಕನ್ನಡ ಚಿತ್ರಗಳಲ್ಲಿನ ಪೋಲೀಸ್ ಪಾತ್ರಗಳಿಗೆ ಒಂದು ಗತ್ತು,ಪವರ್,ಖದರ್ ತಂದು ಕೊಟ್ಟ ಕೀರ್ತಿಯೂ ಇವರದ್ದಾಗಿದೆ.
ನವೀನ ಹೆಚ್ ಎ
ಅಂಕಣಕಾರ ಲೇಖಕರು
ಹನುಮನಹಳ್ಳಿ
ಕೆ ಆರ್ ನಗರ













