ಎಲ್ಗರ್ ಪರಿಷತ್ ಪ್ರಕರಣ ಹಾಗೂ ಮಾವೋವಾದಿಗಳ ಜೊತೆಗೆ ಸಂಪರ್ಕ ಇಟ್ಟುಕೊಂಡ ಆರೋಪದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ, ಅಂಬೇಡ್ಕರ್ ವಾದಿ ಚಿಂತಕ ಆನಂದ್ ತೇಲ್ತುಂಬ್ಡೆ ಅವರು ತಮ್ಮ ತಾಯಿಯನ್ನು ಭೇಟಿಯಾಗಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಎಲ್ಗರ್ ಪರಿಷತ್ ಪ್ರಕರಣದ ವಿಚಾರಣಾಧೀನ ಖೈದಿಯಾಗಿರುವ ತೇಲ್ತುಂಬ್ಡೆ ಅವರನ್ನು ಸದ್ಯ ಮುಂಬೈಯ ತಲೋಜಾ ಜೈಲಿನಲ್ಲಿ ಇರಿಸಲಾಗಿದ್ದು, ಕಳೆದ ನವೆಂಬರ್‌ನಲ್ಲಿ ತನ್ನ ಸಹೋದರ ಮಿಲಿಂದ್ ತೇಲ್ತುಂಬೆ ಮೃತಪಟ್ಟ ಹಿನ್ನೆಲೆಯಲ್ಲಿ ತನ್ನ ಭೇಟಿಗೆ ಅವಕಾಶ ಕೋರಿ ಅರ್ಜಿ ಹಾಕಿದ್ದರು.
ತೇಲ್ತುಂಬೆ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಸ್ ಬಿ ಶುಕ್ರೆ ಹಾಗೂ ಜಿಎ ಸನಪ್ ಅವರಿರುವ ನ್ಯಾಯಪೀಠವು, ಮಾರ್ಚ್ 8 ರಿಂದ 10 ರ ನಡುವೆ ಎರಡು ದಿನಗಳ ಕಾಲ ತಾಯಿಯನ್ನು ಭೇಟಿಯಾಗಲು ಅನುಮತಿ ನೀಡಿದೆ.
ಆದರೆ, ತೇಲ್ತುಂಬ್ಡೆ ಅರ್ಜಿಗೆ ಆಕ್ಷೇಪ ಸಲ್ಲಿಸಿದ್ದ ಎನ್‌ಐಎ, ಮೃತಪಟ್ಟ ಮಿಲಿಂದ್ ತೇಲ್ತುಂಬ್ಡೆ ಒಬ್ಬ ಮಾವೋವಾದಿ ನಾಯಕ, ಅವರು ಹಲವಾರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ತೇಲ್ತುಂಬ್ಡೆ ಅರ್ಜಿಯನ್ನು ವಜಾಗೊಳಿಸಲು ಕೇಳಿತ್ತು.
ಆದರೆ, ಎನ್‌ಐಎ ಆಕ್ಷೇಪವನ್ನು ತಳ್ಳಿ ಹಾಕಿರುವ ನ್ಯಾಯಪೀಠವು, ʼಮನುಷ್ಯನೊಬ್ಬನ ಸಾವಾಗಿದೆ. ಸಾವು ಸಾವೇ, ಅವರ (ಮಿಲಿಂದ್ ತೇಲ್ತುಂಬ್ಡೆ) ವಿರುದ್ಧ ಆರೋಪಳಿರಬಹುದು, ಅವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರಬಹುದು, ಏನೇ ಆದರೂ, ಅವರು ಅರ್ಜಿದಾರರ (ಆನಂದ್ ತೇಲ್ತುಂಬ್ಡೆಯ) ಸಹೋದರರೇ ಆಗಿದ್ದಾರೆ ಎಂದು ಹೇಳಿದೆ.
ತೇಲ್ತುಂಬ್ಡೆ ಅವರು ಮಾರ್ಚ್ 8 ಮತ್ತು 10 ರ ನಡುವೆ ಹಗಲಿನಲ್ಲಿ ಪೊಲೀಸ್ ಬೆಂಗಾವಲು ಜೊತೆಯಲ್ಲಿ ತಮ್ಮ ತಾಯಿಯನ್ನು ಭೇಟಿ ಮಾಡಬಹುದು ಹಾಗೂ ಬೆಂಗಾವಲು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂದು ನ್ಯಾಯಾಲಯ ಹೇಳಿದೆ.
“ಅರ್ಜಿದಾರರಿಗೆ ಮಾರ್ಚ್ 8 ಮತ್ತು 9 ರಂದು ಚಂದ್ರಾಪುರದಲ್ಲಿ ಅವರ ತಾಯಿಯನ್ನು ಭೇಟಿ ಮಾಡಲು ಅವಕಾಶವಿದೆ. ಅವರ ತಾಯಿಯನ್ನು ಭೇಟಿ ಮಾಡುವ ಉದ್ದೇಶವನ್ನು ಸಾಧಿಸಲು, ಅವರನ್ನು ಪೊಲೀಸ್ ಬೆಂಗಾವಲುಗಳೊಂದಿಗೆ ಸೂಕ್ತ ಬಂದೋಬಸ್ತ್‌ನೊಂದಿಗೆ ಕರೆದೊಯ್ಯಬೇಕು. ಆದ್ದರಿಂದ ಮಾರ್ಚ್ 8 ಬೆಳಿಗ್ಗೆ ಅಥವಾ ಮಧ್ಯಾಹ್ನದ ವೇಳೆಗೆ ಚಂದ್ರಾಪುರಕ್ಕೆ ತಲುಪಬಹುದು. ನಂತರ, ಅರ್ಜಿದಾರರು ಸರಿಯಾದ ಸಮಯದಲ್ಲಿ ಮಾರ್ಚ್ 10 ರಂದು ಪೋಲೀಸ್ ಬೆಂಗಾವಲು ಜೊತೆಗೆ ಚಂದ್ರಾಪುರವನ್ನು ಬಿಡುತ್ತಾರೆ. ಹಾಗೂ, ಮಾರ್ಚ್ 10 ರಂದು ಹೊರಡುವ ಮೊದಲು ಸ್ವಲ್ಪ ಸಮಯ ಲಭ್ಯವಿದ್ದರೆ ಹಾಗೂ ಸಾಧ್ಯವಾದರೆ ಅರ್ಜಿದಾರರು ಮತ್ತೆ ತನ್ನ ತಾಯಿಯನ್ನು ಭೇಟಿಯಾಗಲು ಅನುಮತಿಸಬೇಕು” ಎಂದು ನ್ಯಾಯಪೀಠ ಆದೇಶಿಸಿದೆ.