ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಯಶ್‌ನ ರೀತಿ ಕಾಣುವ ವ್ಯಕ್ತಿ ಜೂನಿಯರ್ ಯಶ್ ಎಂದೇ ಹೆಸರು ಪಡೆದಿದ್ದ ಆನಂದ್ ರಾಂಪೂರ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆಯಲ್ಲಿ ಬುಧವಾರ (ಆಗಸ್ಟ್ 30) ವರದಿಯಾಗಿದೆ.
ಸಾಲದ ಸುಳಿಗೆ ಸಿಲುಕಿ ಸಾಲಗಾರರ ಕಿರುಕುಳ ತಾಳಲಾರದೇ ಆನಂದ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಜೂನಿಯರ್ ಯಶ್ ಎಂದೇ ಹೆಸರಾದ ಬಾಗಲಕೋಟೆಯ ನವನಗರದ 47 ನೇ ಸೆಕ್ಟರ್ನ ನಿವಾಸಿಯಾಗಿರುವ ಆನಂದ ರಾಂಪೂರ್ (28) ಎಲ್ಲೇ ಓಡಾಡಿದರು ಕೂಡ ಫ್ಯಾನ್ಸ್ ಸೆಲ್ಫಿ ಕ್ಲಿಕಿಸಲು ಮುಗಿ ಬೀಳುತ್ತಾರೆ.
ಆನಂದ್ ಸ್ಟೇಜ್ ಶೋ ಮುಖಾಂತರ ನಟ ಯಶ್ ಅವರಂತೆ ಮಿಮಿಕ್ರಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು.ಆದರೆ, ಕಳೆದ ಮೂರ್ನಾಲ್ಕು ತಿಂಗಳಿಂದ ಯಾವುದೇ ಕಾರ್ಯಕ್ರಮಗಳು ನಡೆಯದೆ ಇದ್ದ ಹಿನ್ನೆಲೆ ಆರ್ಥಿಕ ಸಮಸ್ಯೆ ಎದುರಾಗಿದೆ.
ಸುಮಾರು 5 ಲಕ್ಷದವರೆಗೆ ಸಾಲವಿತ್ತು. ಸುಮಾರು ಏಳೆಂಟು ಜನ ಸಾಲದ ಹಣ ಮರುಪಾವತಿ ಮಾಡಲು , ಬಡ್ಡಿ ನೀಡುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರಂತೆ.ಮನೆಯ ಬಳಿ ಬಂದು ಮರ್ಯಾದೆ ತೆಗೆಯುವ ಜೊತೆಗೆ ಕೈಗೆ ಸಿಕ್ಕರೆ ಹೊಡೆಯುವ ಧಮಕಿ ಹಾಕುತ್ತಿದ್ದರೆನ್ನಲಾಗಿದೆ.
ಹೀಗಾಗಿ, ಸಾಲಗಾರರ ಕಿರುಕುಳ ಸಹಿಸಲು ಆಗದೇ ಮೊಬೈಲ್ ಮಾರಿ ಬಡ್ಡಿಹಣ ಕೊಟ್ಟರು ಕೂಡ ಹೆಚ್ಚಿನ ಬಡ್ಡಿ ಲೆಕ್ಕ ಹೇಳುತ್ತಿದ್ದರಂತೆ. ಇದರ ನಡುವೆ ಆನಂದ್ ಅವರ ಕಾರು, ಬೈಕ್ ಕೂಡ ಸಾಲಗಾರರು ಒಯ್ದಿದಿದ್ದಾರೆ.ಸಾಲ ಕೊಡುವಾಗ ಒಂದು ರೀತಿಯ ಬಡ್ಡಿ, ವಾಪಸ್ಸು ಕೊಡುವಾಗ ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಆನಂದ್ ಆರೋಪಿಸಿದ್ದಾರೆ.
ಸಾಲಗಾರರ ಬೆದರಿಕೆಗೆ ಕಂಗಾಲಾದ ಆನಂದ್ ಮಲ್ಲಾಪೂರ ಸೇತುವೆ ಮೇಲಿಂದ ಆಲಮಟ್ಟಿ ಹಿನ್ನೀರಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಅದೃಷ್ಟವಶಾತ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸ್ನೇಹಿತನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದು ಹೀಗಾಗಿ ಸ್ನೇಹಿತರು ಕೂಡಲೇ ಸ್ಥಳಕ್ಕೆ ಆಗಮಿಸಿ ಆನಂದ್ ಅವರ ರಕ್ಷಣೆ ಮಾಡಿದ್ದಾರೆ.