ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಅಮಿತ್ ಶಾ ತೀರ್ಮಾನ ಪ್ರಕಟಿಸಿದ ನಂತರ ಸಂಪುಟ ಸರ್ಜರಿ ಕುರಿತು ತೀರ್ಮಾನ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರಚನೆಯೋ ಎಂಬ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಸಂಪುಟ ತೀರ್ಮಾನ ಬಗ್ಗೆ ಹೈಕಮಾಂಡ್ ತೀರ್ಮಾನ ಪ್ರಕಟಿಸಿದ ನಂತರ ವಿವರ ನೀಡುವುದಾಗಿ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಗೆ ಹೋದ ನಂತರ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಇದೇ ವೇಳೆ ಡಿಸಿಎಂ ಹುದ್ದೆ ನೇಮಕ ವಿವಾದ ಮಾಧ್ಯಮಗಳಲ್ಲೇ ಕೇಳಿ ಬರುತ್ತಿದೆ ಎಂದು ಅವರು ಹೇಳಿದರು.
ಬಜೆಟ್‌ನಲ್ಲಿ ಘೋಷಿಸಲಾದ ಶೇಕಡಾ 80 ಕ್ಕೂ ಹೆಚ್ಚು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸರ್ಕಾರ ಆದೇಶಗಳನ್ನು (ಜಿಒ) ಹೊರಡಿಸಿದ್ದು, ಉಳಿದ ಯೋಜನೆಗಳ ಕುರಿತು ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ವ್ಯವಹಾರ ಮತ್ತು ಅಭಿವೃದ್ಧಿ ಕಾರ್ಯಗಳು ಶ್ರದ್ಧೆಯಿಂದ ಪ್ರಾರಂಭವಾಗಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಜನರ ಮನೆ ಬಾಗಿಲಿಗೆ ಸೇವೆಗಳನ್ನು ತಲುಪಿಸುವತ್ತ ಗಮನ ಹರಿಸಲಾಗುತ್ತಿದೆ.
ಸರ್ಕಾರ ಆದೇಶ ಹೊರಡಿಸಿದ ಬಳಿಕ, ಸಂಬಂಧಿಸಿದ ಇಲಾಖೆಗಳು ಅನುಷ್ಠಾನಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಯೋಜನೆಗಳು ವಿಳಂಬವಾದರೆ ಸರಕಾರ ಇಲಾಖೆಗಳನ್ನು ಪ್ರಶ್ನಿಸಬಹುದಾಗಿದೆ. ಯೋಜನೆಗಳಿಗೆ ಆದ್ಯತೆ ನೀಡುವ ಸರ್ಕಾರದ ಉದ್ದೇಶದ ಬಗ್ಗೆ ತಿಳಿಸಲು ಮುಂದಿನ ವಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿಯನ್ನು ವಿವಾದಗಳತ್ತ ತಿರುಗಿಸುವುದು ಪ್ರತಿಪಕ್ಷಗಳ ಆಟವಾಗಿದೆ. ಜನರಿಗೆ ಅಭಿವೃದ್ಧಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಸೂಚಿಯನ್ನು ಮುಂದುವರಿಸಲು ನಿರ್ಧರಿಸಿದ್ದೇನೆ. “ನನ್ನ ರಾಜಕೀಯ ಜೀವನದಲ್ಲಿ ಇಂತಹ ತಂತ್ರಗಳನ್ನು ನಾನು ಸಾಕಷ್ಟು ನೋಡಿದ್ದೇನೆಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧ ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ವಾಗಿದೆ. ಪ್ರತಿಪಕ್ಷಗಳು ಬಹಳಷ್ಟು ಅನುತ್ಪಾದಕ ವಿಚಾರಗಳನ್ನು ಎತ್ತಲು ಪ್ರಯತ್ನಿಸುತ್ತಿವೆ. “ಜನರ ಸಮಸ್ಯೆಗಳು ಅಥವಾ ಅಭಿವೃದ್ಧಿಯ ಬಗ್ಗೆ ತಲೆಕೆಡಿಸಿಕೊಳ್ಳುವಲ್ಲಿ ಪ್ರತಿಪಕ್ಷಗಳು ವಿಫಲವಾಗಿವೆ. ಆದರೆ, ನನ್ನ ಕರ್ತವ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಒಂದು ವರ್ಷದಲ್ಲಿ, ಸಮಗ್ರ ಬೆಳವಣಿಗೆಯೊಂದಿಗೆ ನವ ಕರ್ನಾಟಕಕ್ಕೆ ನಾವು ಬಲವಾದ ಅಡಿಪಾಯವನ್ನು ಹಾಕುತ್ತಿದ್ದೇವೆ. ನಾವು ಅಭಿವೃದ್ಧಿ ಕಾರ್ಯಗಳ ಮಾಡುತ್ತೇವೆ. ಈ ಅಭಿವೃದ್ಧಿಗಳ ರಿಪೋರ್ಟ್ ಕಾರ್ಡ್ ಗಳೊಂದಿಗೆ ಮತ ಕೇಳಲು ಜನರ ಬಳಿಹೋಗುತ್ತೇನೆಂದು ಹೇಳಿದ್ದಾರೆ.