ರಾಜ್ಯಸಭೆ ಕಲಾಪದಲ್ಲಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದ ಮಾತುಗಳು ಜನರ ಆಕ್ರೋಶಕ್ಕೆ ಕಾರಣ ಆಗಿವೆ. ಅದರಲ್ಲು ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಬಗ್ಗೆ ಆಡಿದ ಮಾತುಗಳು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದೆ. ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ. ಅಮಿತ್ ಷಾ ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದನಾಯಕ ರಾಹುಲ್ ಗಾಂಧಿ ಸೇರಿದಂತೆ ಸಾಕಷ್ಟು ಜನರು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ಅಮಿತ್ ಷಾ, ಈಗ ಒಂದು ಪ್ಯಾಶನ್ ಆಗ್ಬಿಟ್ಟಿದೆ. ಮಾತು ಎತ್ತಿದ್ರೆ ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್ ಎನ್ನಲಾಗುತ್ತದೆ. ಅಂಬೇಡ್ಕರ್ ಅನ್ನೋ ಬದಲು ಭಗವಂತನ ನಾಮಸ್ಮರಣೆ ಮಾಡಿದ್ರೆ ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಅನ್ನೋ 11 ಸೆಕೆಂಡ್ಗಳ ವಿಡಿಯೋ ವೈರಲ್ ಆಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ಗೆ ಅವಮಾನ ಮಾಡಿದ್ರು ಅನ್ನೋದು ಕಾಂಗ್ರೆಸ್ನ ನೇರ ಆರೋಪ. ಇದೇ ವಿಚಾರದಲ್ಲಿ ಬುಧವಾರ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ಸಂಸತ್ನಲ್ಲೂ ಪ್ರತಿಭಟನೆ ನಡೆಸಿದ್ರು.
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗು ಸಂಸದೆ ಪ್ರಿಯಾಂಕಾ ಗಾಂಧಿ, ಸಂವಿಧಾನದ ಪುಸ್ತಕ ಹಿಡಿದು ಕೇಂದ್ರ ಸರ್ಕಾರವನ್ನ ಪದೇ ಪದೇ ಕೆಣಕುವ ವಿಚಾರವಾಗಿ ಕೌಂಟರ್ ಕೊಡಲು ಮುಂದಾಗಿದ್ದ ಅಮಿತ್ ಷಾ ಹೇಳಿದ ಮಾತು, ಸಂವಿಧಾನ ಕರ್ತೃ ಅಂಬೇಡ್ಕರ್ಗೆ ಮಾಡಿದ ಅವಮಾನ ಅನ್ನೋದು ಕಾಂಗ್ರೆಸ್ ಆರೋಪ. ಅಮಿತ್ ಷಾ ಮತ್ತು ಬಿಜೆಪಿಯವ್ರು ಒಂದೇ, ಅವರ ಮನಸ್ಸಲ್ಲಿ ಮನುಸ್ಮೃತಿಯಷ್ಟೇ ಇದೆ. ಅಮಿತ್ ಷಾ ಸ್ಥಾನಕ್ಕೆ ರಾಜೀನಾಮೆ ಕೊಡ್ಬೇಕು. ಅಮಿತ್ ಷಾ ದೇಶದ ಕ್ಷಮೆ ಯಾಚಿಸಬೇಕು ಎಂದು ಖರ್ಗೆ ಆಗ್ರಹ ಮಾಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಆಗ್ರಹಕ್ಕೆ ತಿರುಗೇಟು ನೀಡಿರುವ ಅಮಿತ್ ಷಾ, ಖರ್ಗೆ ಅವರು ನನ್ನ ರಾಜೀನಾಮೆ ಕೇಳ್ತಿದ್ದಾರೆ. ಖರ್ಗೆಯವ್ರಿಗೆ ಖುಷಿ ಆಗೋದಾದ್ರೆ ನಾನು ರಾಜೀನಾಮೆ ನೀಡಲು ರೆಡಿ. ನಾನು ರಾಜೀನಾಮೆ ನೀಡಲು ಸಿದ್ಧವಾಗಿದ್ದೀನಿ. ನನ್ನ ರಾಜೀನಾಮೆಯೇ ಪರಿಹಾರ ಅಲ್ಲ, ಆದ್ರೆ ಖರ್ಗೆ 15 ವರ್ಷ ಇಲ್ಲೇ ಇರಬೇಕಾಗುತ್ತೆ. ಪ್ರತಿಪಕ್ಷ ಸ್ಥಾನದಲ್ಲೇ ಕೂರಬೇಕಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿ, ಇದು ಸಂವಿಧಾನ ವಿರೋಧಿ ಹೇಳಿಕೆ, ಆರಂಭದಿಂದ್ಲೂ ಅಪಪ್ರಚಾರ ಮಾಡ್ತಿದ್ದಾರೆ. ಸಂವಿಧಾನವನ್ನೇ ಬದಲಿಸ್ತೀವಿ ಅಂತಾರೆ. ಅಂಬೇಡ್ಕರ್ & ಅವ್ರ ಚಿಂತನೆಗಳ ವಿರೋಧಿಗಳು. ಬಿಜೆಪಿ ಅಜೆಂಡಾ ಇಡೀ ದೇಶಕ್ಕೆ ಗೊತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದಾರೆ.. ಅಮಿತ್ ಷಾ ಮಾತನ್ನ ಕಾಂಗ್ರೆಸ್ನವ್ರು ತಿರುಚಿದ್ದಾರೆ.. ಅಂಬೇಡ್ಕರ್ ಬಗ್ಗೆ ಅಮಿತ್ ಷಾ ಒಳ್ಳೆಯ ಮಾತುಗಳನ್ನ ಆಡಿದ್ದಾರೆ ಅಂತ ತಮ್ಮ ಎಕ್ಸ್ ಖಾತೆಯಲ್ಲಿ ಅಮಿತ್ ಷಾ ಭಾಷಣದ ಸಂಪೂರ್ಣ ವಿಡಿಯೋ ಹಂಚಿಕೊಂಡಿದ್ದಾರೆ.. ಜೊತೆಗೆ ಅಂಬೇಡ್ಕರ್ಗೆ ಸಂಬಂಧಿಸಿ 5 ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಮಾಡಿದ್ದೇವೆ. ಅಂಬೇಡ್ಕರ್ ಓಡಾಡಿದ್ದ 26 ನಗರ ಪ್ರದೇಶಗಳ ಅಭಿವೃದ್ಧಿ ಮಾಡಿದ್ದೇವೆ. ಅಂಬೇಡ್ಕರ್ ವಾಸವಿದ್ದ ಲಂಡನ್ ಮನೆಯನ್ನೂ ಅಭಿವೃದ್ಧಿ ಮಾಡಲಾಗಿದೆ. ಬಿಜೆಪಿ ಸರ್ಕಾರ ಕೂಡ ಅಂಬೇಡ್ಕರ್ರನ್ನು ಸ್ಮರಿಸಿಕೊಳ್ಳುತ್ತೆ, ನಾವೆಲ್ಲರೂ ಸಂಸತ್ನಲ್ಲಿ ಇರೋದಕ್ಕೆ ಅಂಬೇಡ್ಕರ್ ಕಾರಣ, ಕಳೆದ 10 ವರ್ಷಗಳಿಂದಲೂ ಅಂಬೇಡ್ಕರ್ ಆದರ್ಶಗಳ ಪಾಲನೆ ಮಾಡುತ್ತಿದ್ದೇನೆ. ಬಡತನ ನಿರ್ಮೂಲನೆ, ಪರಿಶಿಷ್ಟರ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಸುಳ್ಳು ಹೇಳೋ ಕಾಂಗ್ರೆಸ್ನವರ ಕಣ್ಣಿಗೆ ಅಂಬೇಡ್ಕರ್ ಕಾಣ್ತಿಲ್ಲ. ಅಂಬೇಡ್ಕರ್ ಅವರನ್ನು 1 ಕುಟುಂಬ ಬಳಸಿಕೊಳ್ತಿರೋದು ವಿಪರ್ಯಾಸ ಎಂದು ಕುಟುಕಿದ್ದಾರೆ.
ಅಮಿತ್ಷಾ ಅವ್ರ ಭಾಷಣದ ತುಣುಕನ್ನ ಜಾಲತಾಣದಲ್ಲಿ ವೈರಲ್ ಮಾಡಲಾಗ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಅಮಿತ್ ಷಾ ವಿರುದ್ಧ ಪ್ರತಿಭಟನೆಗಳು ನಡೆದಿವೆ.. ದೆಹಲಿಯಲ್ಲಿ ಜೈ ಭೀಮ್ ಸಂಘಟನೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಉತ್ತರಪ್ರದೇಶದಲ್ಲಿ ವಿಧಾನಸಭೆ ಚಲೋ ನಡೆಸಲಾಗಿದೆ.. ರಾಜಸ್ಥಾನದಲ್ಲಿ ಪ್ರತಿಭಟನೆಗಿಳಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಪ್ರಯೋಗಿಸಲಾಗಿದೆ.. ಎಎಪಿ ಕಾರ್ಯಕರ್ತರೂ ಕೂಡ ಪ್ರತಿಭಟನೆ ಮಾಡಿದ್ದಾರೆ.. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲೂ ಅಮಿತ್ ಷಾ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.