ಬೆಂಗಳೂರು : ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಕೇಂದ್ರ ಸಚಿವ ಅಮಿತ್ ಶಾ ಶನಿವಾರ ಕರಾವಳಿಗೆ ಆಗಮಿಸುತ್ತಿದ್ದು, ಬಿಜೆಪಿಯಲ್ಲಿ ಸಚಲನ ಮೂಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಮಂಗಳೂರಿಗೆ ಅವರು ಭೇಟಿ ನೀಡಲಿದ್ದಾರೆ.
ಅಡಿಕೆ ವಹಿವಾಟು ನಡೆಸುವ ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಫೆ.11ರಂದು ಬರುವ ಅಮಿತ್ ಶಾ, ಅಲ್ಲಿಂದ ನೇರವಾಗಿ ಸಂಜೆ 5.20ಕ್ಕೆ ಮಂಗಳೂರಿಗೆ ಬರಲಿದ್ದಾರೆ.

ನಗರದ ಹೊರವಲಯದ ಕೆಂಜಾರಿನಲ್ಲಿ ನಡೆಯುವ ವಿಶೇಷ ಸಭೆಯಲ್ಲಿ ಕೆಲಕಾಲ ಮಾತನಾಡಿ, ಅವರು ನಂತರ ಶ್ರೀದೇವಿ ಕಾಲೇಜಿನಲ್ಲಿ ನಡೆಯುವ ‘ಮಂಗಳೂರು, ಶಿವಮೊಗ್ಗ ವಿಭಾಗಗಳ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ 118 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.
ಪೊಲೀಸ್ ಬಿಗಿ ಬಂದೋಬಸ್ತ್: ಅಮಿತ್ ಶಾ ಭೇಟಿ ಹಿನ್ನೆಲೆ ಮಂಗಳೂರು ಹಾಗೂ ಪುತ್ತೂರಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪುತ್ತೂರಿನಲ್ಲಿ 11 ಕೆಎಸ್’ಆರ್’ಪಿ ಸೇರಿದಂತೆ 1,000 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೇ ವಿವಿಧ ಜಿಲ್ಲೆಗಳ ಎಸ್ಪಿ, ಡಿವೈಎಸ್’ಪಿಗಳು ಮತ್ತು ಇನ್’ಸ್ಪೆಕ್ಟರ್’ಗಳನ್ನು ನಿಯೋಜನೆ ಮಾಡಲಾಗಿದೆ. ಮಂಗಳೂರಿನಲ್ಲೂ ಅಮಿತ್ ಶಾ ಅವರು ಬರುವ ಸ್ಥಳದ ಒಂದೆರಡು ಕಿ.ಮೀ. ವ್ಯಾಪ್ತಿಯಲ್ಲಿ ಬ್ಯಾರಿಕೇಡ್’ಗಳನ್ನು ಹಾಕಲಾಗಿದ್ದು, ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.