
ಸಾಮಾಜಿಕ-ರಾಜಕೀಯ ಸಂಕಥನಗಳು ವರ್ತಮಾನದ ನೆಲೆಯಲ್ಲಿ ನಡೆಯಬೇಕಿವೆ
ನಾ ದಿವಾಕರ
ಭಾಗ 3
ಮುಂಗಾಣ್ಕೆಯ ತುರ್ತು
ಈ ದೃಷ್ಟಿಯಿಂದ ನೋಡಿದಾಗ ಪಿತೃಪ್ರಧಾನ-ಗಂಡಾಳ್ವಿಕೆಯ ಮೌಲ್ಯಗಳು ಎಲ್ಲ ರಾಜಕೀಯ ಪಕ್ಷಗಳಲ್ಲೂ, ಸಾಂಸ್ಕೃತಿಕ ಸಂಸ್ಥೆಗಳಲ್ಲೂ, ಪ್ರಗತಿಪರ ಎನ್ನಲಾಗುವ ಸಂಘಟನೆಗಳಲ್ಲೂ ಢಾಳಾಗಿ ಕಾಣುತ್ತಿರುವ ಹೊತ್ತಿನಲ್ಲಿ, ಮಹಿಳಾ ಪ್ರಾತಿನಿಧ್ಯ ಎನ್ನುವುದು ಇನ್ನೂ ಕನಸಾಗಿಯೇ ಉಳಿದಿರುವ ಸನ್ನಿವೇಶದಲ್ಲಿ, ತಮ್ಮ ಸೈದ್ಧಾಂತಿಕ ನೆಲೆಗಳಿಂದ ಭಿನ್ನವಾದ ಸಂಘಟನೆಗಳನ್ನು ತಾತ್ವಿಕವಾಗಿ ʼ ಹೊರಗಿಟ್ಟು ʼ ನೋಡುವ ಪ್ರವೃತ್ತಿಯು ಪ್ರಚಲಿತವಾಗಿರುವ ಸಂದರ್ಭದಲ್ಲಿ ʼ ಮನುವಾದ/ವಾದಿ ʼ ಎಂಬ ಹಣೆಪಟ್ಟಿಯನ್ನು ಕೇವಲ ಜಾತಿಯ ನೆಲೆಯಲ್ಲಿ ನಿರ್ವಚಿಸುವುದು ಎಷ್ಟು ಸರಿ. ಹಾಗಾಗಿಯೇ ಈ ಪದಬಳಕೆ ಒಂದು ಕ್ಲೀಷೆಯಾಗಿ, ಕೇವಲ ಬಿಜೆಪಿ-ಸಂಘಪರಿವಾರ ಅಥವಾ ಮೇಲ್ಜಾತಿಯ ಮನಸ್ಥಿತಿಗಳಿಗೆ ಅನ್ವಯಿಸಲ್ಪಡುತ್ತಿದೆ. ಇದು ನಾವು ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಗುರುತಿಸಬೇಕಾದ ನಮ್ಮ ಕೊರತೆ. ವಾಸ್ತವವಾಗಿ ಮನುಸ್ಮೃತಿಯ ಬೌದ್ಧಿಕ ಆಲೋಚನಾ ವಿಧಾನವು ಭಾರತೀಯ ಸಮಾಜದ ಎಲ್ಲ ಸ್ತರಗಳ, ಎಲ್ಲ ವಲಯಗಳ, ಎಲ್ಲ ಭೂಮಿಕೆಗಳ ನೆಲೆಯಲ್ಲೂ ಜನರ ನರನಾಡಿಗಳಲ್ಲಿ ಹರಿದಾಡುತ್ತಿದೆ.

ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ರಾಜಕೀಯ-ಸಾಮಾಜಿಕ ಸಂಕಥನಗಳನ್ನು ರೂಪಿಸುವಾಗ, ಆತ್ಮವಿಮರ್ಶೆ ಪ್ರಧಾನವಾಗಿ ಇರಬೇಕಾಗುತ್ತದೆ. ಇದರಿಂದ ಹೊರಬರುವ ವಿಧಾನಗಳನ್ನು ಚರ್ಚಿಸದೆ, ಮನುಸ್ಮೃತಿಯನ್ನು ಖಂಡಿಸುವ ಅಥವಾ ಸುಟ್ಟುಹಾಕುವ ಸಾಂಕೇತಿಕ ನಡವಳಿಕೆಗಳನ್ನು ಅನುಸರಿಸುವುದು ಆತ್ಮವಂಚನೆಯೂ ಆಗುತ್ತದೆ. ಮಿಲೆನಿಯಂ ಸಮೂಹಕ್ಕೆ, ಭವಿಷ್ಯದ ಭಾರತಕ್ಕೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಹೇಗೆ ಅಡಿಪಾಯವೋ ಹಾಗೆಯೇ, ಈ ಮನಸ್ಥಿತಿಯನ್ನು ಹೋಗಲಾಡಿಸುವ ಬೌದ್ಧಿಕ ಪ್ರಕ್ರಿಯೆಯೂ ತಳಪಾಯವಾಗಬೇಕಿದೆ. ಸ್ತ್ರೀವಾದಿ ನೆಲೆಯಲ್ಲಿ, ವರ್ಗ ಪ್ರಜ್ಞೆಯ ನೆಲೆಯಲ್ಲಿ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯ ಔದಾತ್ಯದ ಚೌಕಟ್ಟಿನಲ್ಲಿ ನಾವು ಈ ವಿಮರ್ಶಾತ್ಮಕ ಮಾರ್ಗವನ್ನು ಅನುರಿಸಬೇಕಿದೆ. ಮನುವಾದ ಅಥವಾ ಮನುಸ್ಮೃತಿಯನ್ನು ಬ್ರಾಹ್ಮಣ್ಯ/ಜಾತಿ ಚೌಕಟ್ಟುಗಳಿಂದಾಚೆಗೆ ಮರು ನಿರ್ವಚಿಸಬೇಕಿದೆ. ಆದರೆ ನಮ್ಮ ನಡುವಿನ ಸಂಕಥನಗಳಲ್ಲಿ, ವಿಚಾರ ಸಂಕಿರಣ-ಸಂವಾದಗಳಲ್ಲಿ ಇದು ಕಾಣಲಾಗುತ್ತಿಲ್ಲ. ಹಾಗಾಗಿಯೇ ಪ್ರಬಲ, ಸುದೀರ್ಘ, ಕ್ರಾಂತಿಕಾರಿ ಹೋರಾಟಗಳ ಹೊರತಾಗಿಯೂ, ಭಾರತದ ವಿಶಾಲ ಸಮಾಜದಲ್ಲಿ ಈ ಪ್ರಾಚೀನ ಮೌಲ್ಯಗಳು ಮತ್ತು ಆಚರಣೆಗಳು ಇಂದಿಗೂ ಕ್ರಿಯಾಶೀಲವಾಗಿ ಜಾರಿಯಲ್ಲಿವೆ.
ತಾತ್ವಿಕ ನಿರ್ವಚನೆಗಳ ಮಾದರಿ
ಸಾಂಸ್ಕೃತಿಕ ನೆಲೆಯಲ್ಲಿ ನೋಡಿದಾಗ, ಮತ್ತೊಂದೆಡೆ ಬುದ್ಧನ, ಬಸವಣ್ಣನ ಚಿಂತನೆಗಳಲ್ಲಿ “ಜಾತ್ಯತೀತತೆ-ಸಮಾಜವಾದ”ವನ್ನು ಗುರುತಿಸುವ ಅತಿರೇಕವನ್ನೂ ಕಾಣುತ್ತಿದ್ದೇವೆ. ಇಲ್ಲಿ ಜಾತ್ಯತೀತತೆಯನ್ನು Secularism ಎಂಬ ಪದಕ್ಕೆ ಸಂವಾದಿಯಾಗಿ ಬಳಸುವುದೇ ಆದರೆ, ಭಾರತವು ಅದರ ಮೂಲಧಾತು, ಪ್ರಭುತ್ವ ಅಥವಾ ಆಳ್ವಿಕೆಯನ್ನು ಮತ-ಧರ್ಮದಿಂದ ಪ್ರತ್ಯೇಕವಾಗಿಸುವ ತಾತ್ವಿಕತೆಯಿಂದ ದೂರ ಸರಿದಿದ್ದು, ಎಲ್ಲ ಮತ-ಧರ್ಮಗಳನ್ನು ಸಮಾನವಾಗಿ ಕಾಣುವ ಒಂದು ಆಡಳಿತನೀತಿಯಾಗಿ ಅನುಸರಿಸುತ್ತಿದೆ. ಬುದ್ಧನಲ್ಲಿ ನಾವು ಭಾರತೀಯ ಸೆಕ್ಯುಲರಿಸಂ ಕಾಣಲು ಸಾಧ್ಯವೋ ಅಥವಾ ಮೂಲ ಕಲ್ಪನೆಯ ನೆಲೆಯಲ್ಲಿ ಭಾವಿಸಬಹುದೋ ಎಂಬ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಇಂತಹ ಹೋಲಿಕೆ ಅಸಂಬದ್ಧ ಎನಿಸಿಕೊಳ್ಳುತ್ತದೆ.
ಭಾರತದಲ್ಲಿ ಸಮಾಜವಾದದ ಪರಿಕಲ್ಪನೆಯೂ ಸರ್ಕಾರಗಳ ಕಲ್ಯಾಣ ಆರ್ಥಿಕತೆಯ (Welfare Economics) ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಆದರೆ ಚಾರಿತ್ರಿಕ ನೆಲೆಯಲ್ಲಿ ನೋಡಿದಾಗ, ಈ ಎರಡೂ ಆಧುನಿಕ ಮೌಲ್ಯಗಳು 17-18ನೆ ಶತಮಾನದ ನಂತರದಲ್ಲಿ ಸಾಮಾನ್ಯೀಕರಿಸಲ್ಪಟ್ಟ ಉದಾತ್ತ ಚಿಂತನೆಗಳು ಎನ್ನುವುದನ್ನು ಗುರುತಿಸಬೇಕಾಗಿದೆ. ಮೂಲತಃ ಸಮಾಜವಾದ ಎಂದರೆ ಒಂದು ದೇಶ ಅಥವಾ ಸಮಾಜದ ಭೌಗೋಳಿಕ ವ್ಯಾಪ್ತಿಯ ಎಲ್ಲ ಪ್ರಾಕೃತಿಕ ಸಂಪತ್ತು, ಸಂಪನ್ಮೂಲ ಮತ್ತು ಆದಾಯದ ಸಮಾನ ವಿತರಣೆ. ಭಾರತದಲ್ಲಿ ಇದನ್ನು ಅನುಕರಿಸಲು ಇದ್ದ ಅಡ್ಡಿ ಆತಂಕಗಳ ಅರಿವು ಅಂಬೇಡ್ಕರ್ ಅವರಿಗೆ ಇತ್ತು. ಹಾಗಾಗಿಯೇ ಸಂವಿಧಾನ ರಚನೆಯ ಸಂದರ್ಭದಲ್ಲಿ ಅವರು ಪ್ರತಿಪಾದಿಸಿದ್ದ ಭೂ ರಾಷ್ಟ್ರೀಕರಣದ ಉದಾತ್ತ ಕಲ್ಪನೆಯನ್ನ ಅಧಿಕೃತ ಸಂವಿಧಾನದಲ್ಲಿ ಅಳವಡಿಸಲು ಸಾಧ್ಯವಾಗಲಿಲ್ಲ. ಸ್ವತಂತ್ರ ಭಾರತ ಅರೆ-ಸಮಾಜವಾದವನ್ನು ಅಳವಡಿಸಿಕೊಂಡು, ʼಪ್ರಭುತ್ವ ಸಮಾಜವಾದ ʼ (State socialism) ಎಂದು ಜಾರಿಗೊಳಿಸಿತ್ತು.

ಹಾಗಾಗಿ ಆಳ್ವಿಕೆಯಿಂದ ಧರ್ಮವನ್ನು ಪ್ರತ್ಯೇಕಿಸುವ Secularism ಮತ್ತು ಸಂಪತ್ತು-ಸಂಪನ್ಮೂಲಗಳ ಸಮಾನ ವಿತರಣೆಯ ʼ ಸಮಾಜವಾದ ʼವನ್ನು(Socialism), ಈ ಶತಮಾನಗಳ ಹಿಂದಿನ ಚಿಂತಕರ ಬೋಧನೆಗಳಲ್ಲಿ ಗುರುತಿಸುವುದು, ತಾತ್ವಿಕ ನೆಲೆಯಲ್ಲಿ ತಪ್ಪಾಗುತ್ತದೆ. ಏಕೆಂದರೆ ಈ ಮಹಾನ್ ದಾರ್ಶನಿಕರು ಅನುಸರಿಸಿದ, ಅಳವಡಿಸಿದ ಮೌಲ್ಯಗಳು ಆ ಕಾಲಘಟ್ಟದಲ್ಲೇ ಪ್ರಬಲವಾಗಿದ್ದ ಪಿತೃಪ್ರಧಾನತೆಯನ್ನಾಗಲಿ, ಊಳಿಗಮಾನ್ಯತೆಯನ್ನಾಗಲೀ ಭೇದಿಸಲು ಸಾಧ್ಯವಾಗಲಿಲ್ಲ. ಅವರ ಮೂಲ ಚಿಂತನೆಗಳಲ್ಲಿ ಈ ಆಶಯಗಳನ್ನು ಗುರುತಿಸಬಹುದೇ ಹೊರತು, ಮೂಲಸ್ಥಾಯಿಯಾಗಿ ಗುರುತಿಸಲಾಗುವುದಿಲ್ಲ. ಹೀಗೆ ಯೋಚಿಸಿದಾಗ, ನಮ್ಮ ಸಾಮಾಜಿಕ-ಸಾಂಸ್ಕೃತಿಕ ಸಂಕಥನಗಳು ಆತ್ಮವಿಮರ್ಶೆಯ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ಇಲ್ಲವಾದರೆ “ ವೇದೋಪನಿಷತ್ತುಗಳಲ್ಲೇ ಎಲ್ಲವೂ ಅಡಗಿದೆ ” ಎಂಬ ವೈದಿಕಶಾಹಿಯ ಆಲೋಚನೆಯ ಮತ್ತೊಂದು ರೂಪವಾಗಿ ಕಾಣತೊಡಗುತ್ತದೆ. ಭಾರತದ ಸಂದರ್ಭದಲ್ಲಿ ಈ ಎರಡೂ ಉದಾತ್ತ ಚಿಂತನಾಧಾರೆಗಳು ಭವಿಷ್ಯದ ಸಮಾಜಕ್ಕೂ ಬೆಳಕಾಗುತ್ತವೆ ಆದರೆ, ಬುದ್ಧನ ಬೋಧನೆಗಳನ್ನು, ಬಸವಣ್ಣನ ವಚನಗಳನ್ನು ಮರುಪಠಿಸುವುದರಿಂದ ಇದು ಸಾಧ್ಯವಾಗುವುದಿಲ್ಲ.
ನೂರಾರು-ಸಾವಿರಾರು ವರ್ಷಗಳ ಹಿಂದೆ ಈ ಮಹನೀಯರು ಸಾಧಿಸಲು ಸಾಧ್ಯವಾಗದ ಕೆಲವು ಉದಾತ್ತ ಮೌಲ್ಯಗಳನ್ನು, ಸಮಕಾಲೀನ ಯುಗದಲ್ಲಿ ಹೇಗೆ ಅಳವಡಿಸಬಹುದು ಎಂಬ ಆತ್ಮವಿಮರ್ಶಾತ್ಮಕ ಮಾದರಿ ನಮ್ಮದಾಗಬೇಕಿದೆ. ಈ ಆತ್ಮವಿಮರ್ಶೆಯ ಕೊರತೆಯೇ ಪಿತೃಪ್ರಧಾನತೆ ಮತ್ತು ಆಧ್ಯಾತ್ಮಿಕ-ಧಾರ್ಮಿಕ ಶ್ರೇಷ್ಠತೆಯ ಪರಿಕಲ್ಪನೆಗಳು ರೂಪಾಂತರಗೊಂಡು ನಮ್ಮ ಪ್ರಜಾಪ್ರಭುತ್ವದ ಸಂಕಥನಗಳಲ್ಲಿ ಸೇರಿಕೊಂಡಿವೆ. ಸಮಕಾಲೀನ ಭಾರತದ ಬೌದ್ಧಿಕ ವಲಯಗಳಲ್ಲಿ, ಶೈಕ್ಷಣಿಕ ಸಂಸ್ಥೆಗಳಲ್ಲಿ, ಸಂಘಟನೆಗಳ ಅಧ್ಯಯನ ಶಿಬಿರಗಳಲ್ಲಿ ಹಾಗೂ ಸಾರ್ವಜನಿಕರ ನಡುವೆ ನಡೆಯುತ್ತಿರುವ, ಪ್ರಗತಿಪರ-ಎಡಪಂಥೀಯ-ಸಮಾಜವಾದಿ ವಿಚಾರ ಸಂಕಿರಣ/ಸಂವಾದಗಳಲ್ಲಿ ಒಂದು ಸಮಾನ ಎಳೆಯನ್ನು ಕಾಣಬಹುದಾದರೆ, ಅದು ಬುದ್ಧನಿಂದ ಅಂಬೇಡ್ಕರ್‌ವರೆಗೆ ಹರಡಿರುವ ವಿಭಿನ್ನ ವ್ಯಾಖ್ಯಾನಗಳನ್ನು ಪುನರುಚ್ಛರಿಸುವ ಒಂದು ಮಾದರಿ. ಬುದ್ಧ-ಬಸವ-ಫುಲೆ-ವಿವೇಕಾನಂದ-ಗಾಂಧಿ-ಅಂಬೇಡ್ಕರ್-ಲೋಹಿಯಾ-ಮಾರ್ಕ್ಸ್ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಕುವೆಂಪು ಮುಂತಾದ ದಾರ್ಶನಿಕರು ಬಿಟ್ಟುಹೋಗಿರುವ ಸಾಗರವ್ಯಾಪ್ತಿಯ ಶಿಖರ ಪ್ರಾಯ ಚಿಂತನೆಗಳನ್ನು, ಆಲೋಚನೆಗಳನ್ನು ಮತ್ತೆಮತ್ತೆ ಯುವ ಸಮುದಾಯದ ಮುಂದಿಡುವುದು ಅತ್ಯಗತ್ಯ ಎನ್ನುವುದು ನಿರ್ವಿವಾದ ಸತ್ಯ. ( ಇಲ್ಲಿ ಗಮನಿಸಬೇಕಾದ ಒಂದು ಸೂಕ್ಷ್ಮ ಕೊರತೆ ಎಂದರೆ ವಿಶ್ವಮಾನವ ಸಂದೇಶವನ್ನು ಪ್ರಪ್ರಥಮವಾಗಿ ಜಗತ್ತಿಗೆ ಸಾರಿದ ರವೀಂದ್ರನಾಥ ಠಾಗೋರ್ ಈ ಸಂಕಥನಗಳಲ್ಲಿ ಪ್ರಾಧಾನ್ಯತೆ ಪಡೆಯುವುದಿಲ್ಲ).

ಭವಿಷ್ಯದ ಸವಾಲುಗಳ ನಡುವೆ
ಆದರೆ ಈ ಮರು ಓದು ಮತ್ತು ನಿರಂತರ ಅಧ್ಯಯನದ ಹೊರತಾಗಿಯೂ ವರ್ತಮಾನದ ಭಾರತಕ್ಕೆ ಬೇಕಿರುವುದು, ದೇಶದ ಶೇಕಡಾ 34ರಷ್ಟು ಜನಸಂಖ್ಯೆಯನ್ನು ಹೊಂದಿರುವ ಯುವ ಸಮೂಹಕ್ಕೆ ಬೇಕಿರುವುದು ಭವಿಷ್ಯದ ಹಾದಿಯ ಸ್ಪಷ್ಟತೆ ಮತ್ತು ಅದಕ್ಕೆ ಪೂರಕವಾದ ಸೈದ್ದಾಂತಿಕ ಅಡಿಪಾಯ. ವರ್ತಮಾನ ಮತ್ತು ಭವಿಷ್ಯ ಎರಡೂ ದೃಷ್ಟಿಯಿಂದ ನೋಡಿದಾಗಲೂ, ನವ ಉದಾರವಾದ, ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ, ನವ ವಸಾಹತೀಕರಣ, ಡಿಜಿಟಲ್ ತಂತ್ರಜ್ಞಾನದ ಪರಿಣಾಮ ಹಾಗೂ ಇದರ ಒಡೆತನವನ್ನು ಹೊಂದಿರುವ ಕಾರ್ಪೋರೇಟ್ ಉದ್ದಿಮೆಗಳ ಸಾಮ್ರಾಜ್ಯ ವಿಸ್ತರಣೆ ಈ ವಿದ್ಯಮಾನಗಳನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ವರ್ತಮಾನದ ಚೌಕಟ್ಟಿನಲ್ಲಿ ಭವಿಷ್ಯದ ಮುಂಗಾಣ್ಕೆಯಿಂದ ಪರಾಮರ್ಶಿಸುವುದು ಇವತ್ತಿನ ತುರ್ತು ಎನಿಸುತ್ತದೆ. ಸ್ವಾತಂತ್ರ್ಯಪೂರ್ವ ಭಾರತದ ಅಥವಾ 19-20ನೆ ಶತಮಾನದ ಎಲ್ಲ ದಾರ್ಶನಿಕರೂ ಬೋಧಿಸುವ ʼ ಒಳಗೊಳ್ಳುವಿಕೆ ʼಯ (Inclusiveness) ಔದಾತ್ಯವನ್ನು ಇಂದು ನಮ್ಮ ಚಿಂತನಾ ಮಾದರಿಯ ಪ್ರಧಾನ ತತ್ವದಂತೆ ಅಳವಡಿಸಿಕೊಳ್ಳುವ ಅನಿವಾರ್ಯತೆ ನಮ್ಮ ಮುಂದಿದೆ.
ಈ ಒಳಗೊಳ್ಳುವಿಕೆಯ ಚಿಂತನೆಯನ್ನು ಛೇದಿಸಿ ನೋಡಿದಾಗ ನಮಗೆ ಕಾಣಬೇಕಿರುವುದು ಬೌದ್ಧಿಕ/ಸೈದ್ಧಾಂತಿಕ ಆಲೋಚನಾ ವಿಧಾನಗಳು. ಆಯಾ ಕಾಲಘಟ್ಟದಲ್ಲಿ, ಯುಗದಲ್ಲಿ ರೂಪಿಸಲ್ಪಟ್ಟ ಈ ಸಿದ್ಧಾಂತಗಳನ್ನು ಒಡೆದುಕಟ್ಟುವ ನಿಟ್ಟಿನಲ್ಲಿ, ವರ್ತಮಾನದ ಸಮಾಜ ಎಲ್ಲವನ್ನೂ ಮರು ವಿಮರ್ಶೆಗೊಳಪಡಿಸಿ, ಸಮಕಾಲೀನ ಯುಗದ ಅವಶ್ಯಕತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುವ ಮಾದರಿಗಳನ್ನು ಕಂಡುಕೊಳ್ಳಬೇಕಿದೆ. ಗ್ರಾಂಥಿಕ ನೆಲೆಯಲ್ಲಿ ಗುರುತಿಸಬಹುದಾದ ತಾತ್ವಿಕ ಭಿನ್ನತೆಗಳು, ಇಂದಿನ ಸಾಂಸ್ಥಿಕ ನೆಲೆಗಳಲ್ಲಿ ಯಥಾವತ್ತಾಗಿ ನಿರೂಪಿಸಲ್ಪಟ್ಟಾಗ, ಸೈದ್ದಾಂತಿಕ ಭೇದಗಳು ಬೃಹತ್ ಗೋಡೆಗಳಂತೆ ಎದ್ದು ನಿಲ್ಲುತ್ತವೆ. ಈ ಚಿಂತನೆಗಳನ್ನು ಸಮಕಾಲೀನಗೊಳಿಸಲು ಪ್ರಯತ್ನಿಸಿದಾಗ, ನಮಗೆ ಈ ಗೋಡೆಗಳನ್ನು ಕೆಡವಿ ಮುನ್ನಡೆಯುವ ಅಥವಾ ದಾಟಿ ನೋಡುವ ಬೌದ್ಧಿಕ ವ್ಯವಧಾನ ಮೂಡುತ್ತದೆ. ʼಒಳಗೊಳ್ಳುವಿಕೆʼಯ (Inclusiveness) ಔದಾತ್ಯವನ್ನು ಕೇವಲ ಸಾಮಾಜಿಕ/ಸಾಮುದಾಯಿಕ ನೆಲೆಯಲ್ಲಿ ನೋಡದೆ, ಆಲೋಚನಾ ವಿಧಾನಗಳಿಗೂ ವಿಸ್ತರಿಸಿದಾಗ, ಈ ಎಲ್ಲ ಚಿಂತನೆಗಳನ್ನು ʼಒಳಗೊಳ್ಳುವʼ ಒಂದು ಹಾದಿ ತಂತಾನೇ ತೆರೆದುಕೊಳ್ಳುತ್ತದೆ.

ಹೀಗೆ ಒಡೆದುಕಟ್ಟುವ ಹಾದಿಯಲ್ಲಿ ನಮಗೆ ಅನೇಕ ಸಾಮಾಜಿಕ ನಡವಳಿಕೆಗಳು, ಸಾಂಸ್ಕೃತಿಕ ಆಚರಣೆಗಳು, ಧಾರ್ಮಿಕ ಕಟ್ಟಳೆಗಳು ಹಾಗೂ ರಾಜಕೀಯ ನಿರ್ಬಂಧಗಳು ಮುಖಾಮುಖಿಯಾಗುತ್ತವೆ. ಹಾಗೆಯೇ ವಿವಿಧ ಸಂಘಟನೆ/ಪಕ್ಷ/ಗುಂಪುಗಳ ಅಥವಾ ವ್ಯಕ್ತಿಗಳ ಸಾಂಘಿಕ ಅಸ್ಮಿತೆ-ಸಾಂಸ್ಥಿಕ ಅಸ್ತಿತ್ವದ ಪ್ರಶ್ನೆಗಳೂ ಎದುರಾಗುತ್ತವೆ. ತಮ್ಮ ಮೂಲ ಸೈದ್ದಾಂತಿಕ ತಳಹದಿಯನ್ನು ಸಡಿಲಗೊಳಿಸದೆಯೇ, ಕರ್ಮಠತೆ ಅಥವಾ ಸೈದ್ಧಾಂತಿಕ ಉದ್ಧಟತನ ಮತ್ತು ಮಡಿವಂತಿಕೆಯನ್ನು (Dogmatism) ಬದಿಗಿಟ್ಟು ಮುನ್ನಡೆಯುವ ದೂರಗಾಮಿ ದೃಷ್ಟಿಕೋನ ನಮ್ಮಲ್ಲಿ ಇರಬೇಕಾಗುತ್ತದೆ. ಸಮಾಜದ ಆಳಕ್ಕೆ ಇಳಿದಿರುವ ಈ ತಾತ್ವಿಕ ಚಿಂತನೆಗಳು ಭವಿಷ್ಯದ ಸಮಾಜಕ್ಕೆ ಉಜ್ವಲ ಹಾದಿ ತೋರುವ ದೀವಿಗೆಯಾಗಬೇಕೇ ಹೊರತು, ನಿರ್ಬಂಧಕ ತಡೆಗೋಡೆಗಳಾಗಕೂಡದು. ಈ ದೃಷ್ಟಿಯಿಂದ ನೋಡಿದಾಗಲೇ ನಮಗೆ ʼ ಒಳಗೊಳ್ಳುವಿಕೆ ʼ ಎಂಬ ಪದದ ವೈಶಾಲ್ಯ ಅರ್ಥವಾಗಲು ಸಾಧ್ಯ..
ಈ ದೂರಗಾಮಿ ದೃಷ್ಟಿಕೋನದಿಂದ ವರ್ತಮಾನದ ಭಾರತೀಯ ಸಮಾಜವನ್ನು ಕಾಡುತ್ತಿರುವ ಜಟಿಲ ಸಿಕ್ಕುಗಳನ್ನು, ಸಮಸ್ಯೆಗಳನ್ನು ಮತ್ತು ಒಳಬಿರುಕುಗಳನ್ನು ಮರುವಿಮರ್ಶೆ ಮಾಡಲು ಸಾಧ್ಯವಾದೀತು. ಶತಮಾನಗಳಿಂದ ಭಾರತದಲ್ಲಿ ಜನಮಾನಸದ ನಡುವೆ ಬಿತ್ತಲಾಗುತ್ತಿರುವ ಸಮಾಜ ಸುಧಾರಕ ಅಥವಾ ಕ್ರಾಂತಿಕಾರಿ ಚಿಂತನೆಗಳ ಹೊರತಾಗಿಯೂ ನಮಗೆ ಅಸ್ಪೃಶ್ಯತೆ, ಜಾತಿ ತಾರತಮ್ಯ-ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ, ಮಹಿಳಾ ದೌರ್ಜನ್ಯ, ಸ್ತ್ರೀ ದ್ವೇಷ, ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಲಕ್ಷಣಗಳನ್ನು ಹೋಗಲಾಡಿಸಲಾಗಿಲ್ಲ. ಈ ಅಪಸವ್ಯಗಳ ಬೇರುಗಳು ಇನ್ನೂ ಗಟ್ಟಿಯಾಗಿ ಉಳಿದಿವೆ. ಇದಕ್ಕೆ ಕಾರಣವನ್ನು ದಾರ್ಶನಿಕರ ಚಿಂತನೆಗಳ ನಡುವಿನ ಭಿನ್ನತೆಗಳಲ್ಲಿ ಗುರುತಿಸುವುದರ ಬದಲು, ಈ ಚಿಂತನೆಗಳನ್ನು ವರ್ತಮಾನಕ್ಕೆ ಅಳವಡಿಸಿಕೊಳ್ಳುವಲ್ಲಿ ನಮ್ಮ ವೈಫಲ್ಯದಲ್ಲಿ ಗುರುತಿಸಬೇಕಿದೆ. ಈ ಆತ್ಮವಿಮರ್ಶಕ ಹಾದಿ ನಮ್ಮಲ್ಲಿ ತತ್ವ ಸಿದ್ದಾಂತಗಳ ಗೋಡೆಗಳಿಂದಾಚೆಗೆ ನೋಡುವ ಬೌದ್ಧಿಕ ಕ್ಷಮತೆ, ಭೌತಿಕ ನಮ್ಯತೆ (Flexibility) ಉಂಟುಮಾಡುತ್ತದೆ.

ಅಂತಿಮವಾಗಿ
ನಮ್ಮ ಬೌದ್ಧಿಕ ಸಂವಹನ ಮತ್ತು ಸಂವಾದಗಳಲ್ಲಿ ಕಾಣಬಹುದಾದ ಕೊರತೆ ಎಂದರೆ, ನಮ್ಮ ಚಿಂತನೆಗಳು ಚರಿತ್ರೆ ಅಥವಾ ಚಾರಿತ್ರಿಕ ವ್ಯಕ್ತಿಗಳಲ್ಲೇ ಹುದುಗಿವೆ. ವರ್ತಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಇದು ದಾರ್ಶನಿಕರನ್ನು ವ್ಯಕ್ತಿಗತವಾಗಿಯೂ ಆಕ್ರಮಿಸಿದ್ದು ʼVs ʼ ಅಂದರೆ ಪರಸ್ಪರ ಮುಖಾಮುಖಿಯಾಗಿಸುವ ಮೂಲಕ ನಮ್ಮ ಇಂದಿನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೇವೆ. ಈ ಚಿಂತನಾಧಾರೆಗಳನ್ನು ವ್ಯಕ್ತಿಗತ ಮೂರ್ತೀಕರಣದಿಂದ (Idolisation) ಪ್ರತಿಮೀಕರಣದಿಂದ (Iconisation) ವೈಭವೀಕರಿಸಲಾಗುತ್ತಿದೆ ಅಥವಾ Romanticise ಮಾಡಲಾಗುತ್ತಿದೆ. ಈ ಮಾರ್ಗದಿಂದ ನಾವು ಹೊರಬರಲೇಬೇಕಿದೆ. ಅಂತಿಮ ಸತ್ಯ ಎನ್ನುವುದು ಯಾವುದೂ ಇಲ್ಲ ಎಂಬ ಸಾರ್ವತ್ರಿಕ ಸತ್ಯವನ್ನು ಮನಗಂಡು, ನಮ್ಮ ನಡುವೆ ಏರ್ಪಟ್ಟಿರುವ ತಾತ್ವಿಕ-ಸೈದ್ಧಾಂತಿಕ ಬಿರುಕುಗಳನ್ನು, ತಡೆಗೋಡೆಗಳನ್ನು ನಿವಾರಿಸುವ ತುರ್ತು ಎದುರಾಗಿದೆ. ಇದರಿಂದ ನಾವು ಕಳೆದುಕೊಳ್ಳುವುದೇನಾದರೂ ಇದ್ದರೆ ನಮ್ಮ ವೈಯುಕ್ತಿಕ ಪ್ರತಿಷ್ಠೆ ಅಥವಾ ವ್ಯಕ್ತಿಗತ ಅಹಂ ಅಷ್ಟೇ ಅಲ್ಲವೇ ? ನಮ್ಮ ಕಣ್ಣೆದುರಿನಲ್ಲೇ ಬೌದ್ಧಿಕ ಅಂಧಕೂಪದಲ್ಲಿ ಮುಳುಗುತ್ತಿರುವ ಮಿಲೆನಿಯಂ ಸಮೂಹದ ಏಳಿಗೆಯ ದೃಷ್ಟಿಯಿಂದ ಹಿರಿಯ ತಲೆಮಾರು ಈ ʼ ತ್ಯಾಗ ʼಕ್ಕೆ ಸಜ್ಜಾಗಬೇಕಿದೆ.
ಇಂದಿಗೂ ಶತಮಾನಗಳ ಹಿಂದಿನ ಜೀವನ ಮೌಲ್ಯಗಳು ಮತ್ತು ಆಚರಣೆಗಳಿಗೆ ಆತುಕೊಂಡಿರುವ ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಈ ಹಾದಿಯೊಂದೇ ಪರ್ಯಾಯವಾಗಿ ಕಾಣುತ್ತದೆ. ರಾಜಕೀಯ ಎಡ-ಬಲದಷ್ಟೇ ಪ್ರಧಾನವಾಗಿ ನಮ್ಮ ಶೋಷಿತ ಜಾತಿಗಳೊಳಗಿನ ಎಡ-ಬಲವೂ ನಮ್ಮನ್ನು ಕಾಡುತ್ತಿರುವುದು ವಿಪರ್ಯಾಸವಾದರೂ ವಾಸ್ತವ. ಮೊದಲನೆಯದನ್ನು ಎದುರಿಸುವುದು ಸುಲಭ ಆದರೆ ಎರಡನೆಯದನ್ನು ನಿವಾರಿಸಲು ನಾವು ಅಂಬೇಡ್ಕರ್ ಅವರ ಚಿಂತನೆಗಳನ್ನು ಒಳಗಿಳಿಸಿಕೊಳ್ಳಬೇಕಾಗುತ್ತದೆ, ಇತರ ಎಲ್ಲ ದಾರ್ಶನಿಕರ ಚಿಂತನಾಧಾರೆಗಳನ್ನು ನಮ್ಮದಾಗಿಸಿಕೊಳ್ಳಬೇಕಾಗುತ್ತದೆ. ಈ ಎರಡೂ ದಾರಿಗಳಲ್ಲಿ ನಾವು ಎಡವಿದ್ದೇವೆ, ಎಡವುತ್ತಲೇ ಇದ್ದೇವೆ. ಯುವ ತಲೆಮಾರನ್ನು ಭವಿಷ್ಯದ ಮಾನವೀಯ ಸಮಾಜ ನಿರ್ಮಾಣಕ್ಕೆ ಕಾಲಾಳುಗಳಾಗಿ ಸಿದ್ಧಪಡಿಸಬೇಕಾದ ಜವಾಬ್ದಾರಿ ಇರುವ ಈಗಿನ ಹಿರಿ ತಲೆಮಾರಿನ ಬೌದ್ಧಿಕ ವಾಹಿನಿಗಳು, ಸಾಂಸ್ಥಿಕ ನೆಲೆಗಳು ಹಾಗೂ ಸಾಂಘಿಕ ಚೌಕಟ್ಟುಗಳು ಈ ನಿಟ್ಟಿನಲ್ಲಿ ಯೋಚಿಸುವುದು ಅತ್ಯವಶ್ಯ. ಆಗ ಮಾತ್ರ ನಮ್ಮ ಸಾರ್ವಜನಿಕ ಸಂಕಥನಗಳ ಮಾದರಿ ಬದಲಾಗಲು ಸಾಧ್ಯ. ನಮ್ಮ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಸಂವಹನ ವಿಧಾನಗಳು ಅರ್ಥಪೂರ್ಣವಾಗಬೇಕಾದರೆ, ನಾವು ನಿಂತ ನೆಲದ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು, ಮುಕ್ತ ಸಂವಾದಕ್ಕೆ ತೆರೆದುಕೊಳ್ಳಬೇಕಿದೆ. ಇದು ಕಿವಿಮಾತಲ್ಲ. ಭವಿಷ್ಯದ ಅನಿವಾರ್ಯ ಹಾದಿಯ ಒಂದು ದಿಕ್ಸೂಚಿ ಎಂದು ಭಾವಿಸಿದರೆ ಸಾರ್ಥಕವಾದೀತು.
-೦-೦-೦-೦-೦-








