ಕೋವಿಡ್ ಎರಡನೇ ಅಲೆತ ಭೀಕರತೆ ಕ್ರಮೇಣ ಇಳಿಮುಖವಾಗಿ, ನಿಯಂತ್ರಣಕ್ಕೆ ಬಂತು ಎಂಬ ನಿರಾಳತೆಯ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರಾತುರಿಯಲ್ಲಿ ಲಾಕ್ಡೌನ್ ತೆರವು ಮಾಡಿ ಎಲ್ಲವೂ ಮುಗಿದುಹೋಯಿತು. ಇನ್ನೇನು ಆತಂಕವೇ ಇಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವಾಗ ಮತ್ತೊಂದು ಆಘಾತಕಾರಿ ಸೋಂಕು ಇದೀಗ ದೇಶದಲ್ಲಿ ಕಾಣಿಸಿಕೊಂಡಿದೆ.
ನಿಫಾ ಮತ್ತು ಕೋವಿಡ್ ಸೋಂಕಿಗೆ ದೇಶದಲ್ಲೇ ಮೊದಲ ಸಾಕ್ಷಿಯಾಗಿದ್ದ, ಆ ಮೂಲಕ ಭಯಾನಕ ಸೋಂಕು ಪತ್ತೆ ಮತ್ತು ನಿರ್ವಹಣೆಯ ವಿಷಯದಲ್ಲೂ ದಾಖಲೆ ಬರೆದಿದ್ದ ದೇವರ ಸ್ವಂತ ನಾಡು ಕೇರಳದಲ್ಲಿ ಮತ್ತೊಂದು ಅಪಾಯಕಾರಿ ವೈರಾಣು ಸೋಂಕು ಕಾಣಿಸಿಕೊಂಡಿದ್ದು ಸಹಜವಾಗೇ ದೇಶಾದ್ಯಂತ ಆತಂಕ ಮೂಡಿಸಿದೆ.
ಗುರುವಾಗ ಮೊಟ್ಟಮೊದಲ ಝೀಕಾ ವೈರಸ್ ಪ್ರಕರಣ ಕಂಡುಬಂದಿದ್ದ ಕೇರಳದಲ್ಲಿ ಈ ಎರಡು ದಿನಗಳಲ್ಲಿ 14 ಹೊಸ ಝೀಕಾ ಪ್ರಕರಣಗಳು ಪತ್ತೆಯಾಗಿವೆ. ತಿರುವನಂತಪುರಂನ ಸಮೀಪದ ಗರ್ಭಿಣಿ ಮಹಿಳೆಯಲ್ಲಿ ಗುರುವಾರ ಮೊದಲ ಝೀಕಾ ವೈರಸ್ ಪತ್ತೆಯಾಗಿತ್ತು. ಬಳಿಕ 13 ಶಂಕಿತ ಪ್ರಕರಣಗಳ ಮಾದರಿಯನ್ನು ಪರೀಕ್ಷೆಗಾಗಿ ಪುಣೆಯ ಎನ್ ಐವಿಗೆ ಕಳಿಸಲಾಗಿತ್ತು. ಇದೀಗ ಆ 13 ಪ್ರಕರಣಗಳಲ್ಲೂ ಝೀಕಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇರಳದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.
ಆರೋಗ್ಯ ಇಲಾಖೆ ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದೆ ಮತ್ತು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀನಾ ಜಾರ್ಜ್ ಹೇಳಿದ್ದಾರೆ. ಅದೇ ಹೊತ್ತಿಗೆ ಕೇಂದ್ರ ಸರ್ಕಾರ ಶುಕ್ರವಾರ ತಜ್ಞರ ವಿಶೇಷ ತಂಡವನ್ನು ಕಳಿಸಿದ್ದು, ಝೀಕಾ ಪ್ರಕರಣಗಳ ನಿರ್ವಹಣೆಯ ಪರಿಸ್ಥಿತಿಯನ್ನು ಅವಲೋಕಿಸಿ, ಅಗತ್ಯ ಕೇಂದ್ರದ ನೆರವು ನೀಡಲು ಈ ತಂಡ ಶಿಫಾರಸು ಮಾಡಲಿದೆ ಎನ್ನಲಾಗಿದೆ.
ಕೇರಳದಲ್ಲಿ ಝೀಕಾ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿಗೂ ಮುಂಜಾಗ್ರತೆ ವಹಿಸುವಂತೆ ಮತ್ತು ಅಂತರ ರಾಜ್ಯ ಪ್ರಯಾಣಿಕರ ಮೇಲೆ ನಿಗಾ ಇರಿಸುವಂತೆ ಸೂಚಿಸಲಾಗಿದೆ. ಕೇರಳದ ಗಡಿಗೆ ಹೊಂದಿಕೊಂಡಿರುವ ರಾಜ್ಯದ ದಕ್ಷಿಣಕನ್ನಡ, ಮಡಿಕೇರಿ, ಚಾಮರಾಜನಗರ, ಮೈಸೂರು ಜಿಲ್ಲಾಡಳಿತಗಳಿಗೂ ಈ ಬಗ್ಗೆ ಎಚ್ಚರಿಕೆ ರವಾನಿಸಲಾಗಿದೆ ಎಂದೂ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
2015ರಲ್ಲಿ ದಕ್ಷಿಣ ಅಮೆರಿಕಾದ ಬ್ರಿಜಿಲ್ ಮತ್ತಿತರ ದೇಶಗಳಲ್ಲಿ ಭೀಕರ ಸಾಂಕ್ರಾಮಿಕವಾಗಿ ಹರಡಿ ಹಲವರನ್ನು ಬಲಿತೆಗೆದುಕೊಂಡಿದ್ದ ಸೊಳ್ಳೆಗಳಿಂದ ಹರಡುವ ಈ ವೈರಾಣು ರೋಗ, ಮುಖ್ಯವಾಗಿ ಗರ್ಭಿಣಿ ಮಹಿಳೆಯರು ಮತ್ತು ಹಸುಗೂಸುಗಳಿಗೆ ಪ್ರಾಣಾಂತಿಕ ಎಂಬುದು ಆತಂಕಕಾರಿ ಸಂಗತಿ. ಈಡಿಸ್ ಈಜಿಪ್ಟಿ ಎಂಬ ಹಗಲು ಹೊತ್ತಿನಲ್ಲಿ ಮನುಷ್ಯರಿಗೆ ಕಚ್ಚುವ ಸೊಳ್ಳೆಗಳಿಂದ ಈ ವೈರಾಣು ರೋಗ ಹರಡುತ್ತದೆ. ಬಹುತೇಕ ಡೆಂಗೆ ರೀತಿಯ ರೋಗ ಲಕ್ಷಣಗಳನ್ನೇ ಹೊಂದಿರುವ ಈ ಝೀಕಾ ಜ್ವರ ಅಥವಾ ಝಿಕಾ ವೈರಾಣು ಜ್ವರ ಪೀಡಿತರದ ಪೈಕಿ ಮರಣ ಪ್ರಮಾಣ ಶೇ.8.3 ಇದೆ. ಆದರೆ, ಸೋಂಕು ಹರಡುವಿಕೆಯ ತೀವ್ರತೆ ಕರೋನಾದಷ್ಟು ವ್ಯಾಪಕವಾಗಿಲ್ಲದೇ ಇರುವುದರಿಂದ ಸೋಂಕು ವ್ಯಾಪಕವಾಗಿ ಹರಡುವುದು ವಿರಳ. ಆದರೆ, 2015ರಲ್ಲಿ ಬ್ರಿಜಿಲ್ ನಲ್ಲಿ ಮಾತ್ರ ಅಲ್ಲಿನ ಸರ್ಕಾರದ ನಿಯಂತ್ರಣ ಕ್ರಮಗಳಿಗೆ ಜಗ್ಗದೆ, ಭಾರೀ ಪ್ರಮಾಣದಲ್ಲಿ ಸೋಂಕು ವ್ಯಾಪಿಸಿತ್ತು.
ಈ ಝೀಕಾ ಸೋಂಕು ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲೂ ಕೇರಳದಲ್ಲಿ ಎರಡು- ಮೂರು ದಿನಗಳಿಂದ ಆತಂಕಕಾರಿ ಪ್ರಮಾಣದಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿರುವುದು ಎಲ್ಲರಿಗೂ ಆತಂಕ ಮೂಡಿಸಿದೆ.
ದೇಶದಲ್ಲಿ ಈಗಾಗಲೇ ಎರಡು ಅಲೆಯ ಮೂಲಕ ಅಪಾರ ಸಾವುನೋವಿಗೆ ಕಾರಣವಾಗಿರುವ ಕರೋನಾ ವೈರಾಣು ದಾಳಿಯ ಹಿನ್ನೆಲೆಯಲ್ಲಿ ಎಲ್ಲರಲ್ಲೂ ಹೊಸ ವೈರಸ್ ಆತಂಕ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಕರೋನಾ ಮತ್ತು ಝೀಕಾ ವೈರಾಣು ಸಾಂಕ್ರಾಮಿಕದ ಕುರಿತು ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
ಕರೋನಾ ಮತ್ತು ಝೀಕಾ ವೈರಸ್ ಸೋಂಕು ನಡುವೆ ವ್ಯತ್ಯಾಸವೇನು?
ಮುಖ್ಯವಾಗಿ ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡಿ ಜಗತ್ತಿನಾದ್ಯಂತ ಕೋಟ್ಯಂತರ ಮಂದಿಯ(ಅಧಿಕೃತವಾಗಿ 40 ಲಕ್ಷಕ್ಕೂ ಅಧಿಕ) ಬಲಿ ತೆಗೆದುಕೊಂಡಿದ್ದು, ಅದರ ಸೋಂಕಿನ ತೀವ್ರತೆಯ ದೃಷ್ಟಿಯಿಂದ ಮನುಕುಲ ಈವರೆಗೆ ಕಂಡಿರುವ ಅತ್ಯಂತ ಅಪಾಯಕಾರಿ ವೈರಸ್ ದಾಳಿ ಇದು. ಹಾಗಾಗಿ ಅದನ್ನು ಜಾಗತಿಕ ಮಹಾಮಾರಿ(ಜಾಗತಿಕವಾಗಿ ಹರಡಿರುವ ಪಾಂಡೆಮಿಕ್) ಎಂದು ಘೋಷಿಸಲಾಗಿದೆ. ಆದರೆ, ಝೀಕಾ ಜೀವ ಹಾನಿಯ ದೃಷ್ಟಿಯಲ್ಲಿ ಅಷ್ಟೊಂದು ಅಪಾಯಕಾರಿಯಲ್ಲ. 2015ರಲ್ಲಿ ಬ್ರಿಜಿಲ್ ನಲ್ಲಿ ಇದು ಸಾಂಕ್ರಾಮಿಕವಾಗಿ ವ್ಯಾಪಕವಾಗಿ ಹರಡಿತ್ತು ಮತ್ತು ಆ ಬಳಿಕ ಬ್ರಿಜಿಲ್ ನೆರೆಹೊರೆಯ ದೇಶಗಳಲ್ಲಿ ಮತ್ತು ಆ ದೇಶದೊಂದಿಗೆ ಸಂಪರ್ಕ ಹೊಂದಿದ ರಾಷ್ಟ್ರಗಳಲ್ಲಿ ಕೆಲವು ಪ್ರಕರಣಗಳು ಕಾಣಿಸಿಕೊಂಡಿದ್ದವು. ಹಾಗಾಗಿ ಅದನ್ನು ಸಾಂಕ್ರಾಮಿಕ(ಒಂದು ಪ್ರದೇಶಕ್ಕೆ ಸೀಮಿತವಾದ ಎಪಿಡೆಮಿಕ್) ಎಂದು ಕರೆಯಲಾಗಿದೆ.
ಹರಡುವಿಕೆಯಲ್ಲಿ ಕರೊನಾ ಮತ್ತು ಝೀಕಾ ನಡುವೆ ವ್ಯತ್ಯಾಸಗಳೇನು?
ಕರೋನಾ ವೈರಸ್ ಮುಖ್ಯವಾಗಿ ಸೋಂಕಿತರ ಮೂಗು, ಬಾಯಿಯಿಂದ ಹೊರಬರುವ ದ್ರವ ಕಣಗಳ ಮೂಲಕ ಹರಡುತ್ತದೆ. ಆದರೆ, ಝೀಕಾ ವೈರಸ್ ಈಡಿಸ್ ಈಜಿಪ್ಟಿ ಎಂಬ ಹಗಲು ಹೊತ್ತಿನಲ್ಲಿ ಸಕ್ರಿಯವಾಗಿರುವ ಸೊಳ್ಳೆಗಳ ಕಡಿತದ ಮೂಲಕ ಮುಖ್ಯವಾಗಿ ಹರಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಸೋಂಕು ತಗುಲಿದರೆ, ಹೊಟ್ಟೆಯಲ್ಲಿರುವ ಮಗುವಿಗೂ ಸೋಂಕು ಹರಡಬಹುದು. ಹಾಗೂ ಲೈಂಗಿಕವಾಗಿಯೂ ಹರಡಬಹುದು. ಅದು ಬಿಟ್ಟರೆ, ರಕ್ತ ಪಡೆಯುವುದರ ಮೂಲಕ ಕೂಡ ಹರಡುವ ಸಾಧ್ಯತೆ ಇದೆ.
ಝೀಕಾ ಇತಿಹಾಸವೇನು?
2015ರಲ್ಲಿ ಬ್ರಿಜಿಲ್ ನಲ್ಲಿ ವ್ಯಾಪಕ ಸೋಂಕು ಕಾಣಿಸಿಕೊಂಡ ಬಳಿಕ, ಝೀಕಾ ಸಾಂಕ್ರಾಮಿಕವನ್ನು ಸಾಂಕ್ರಾಮಿಕ ಎಂದು ಘೋಷಿಸಿದ್ದರೂ, ವಾಸ್ತವವಾಗಿ ಈ ವೈರಸ್ ಮನುಷ್ಯರ ಗಮನಕ್ಕೆ ಬಂದಿದ್ದು 1947ರಲ್ಲಿಯೇ. ಉಗಾಂಡಾದ ಝಿಕಾ ಕಾಡಿನಲ್ಲಿ ಹೆಚ್ಚು ವೈರಸ್ ಪತ್ತೆಯಾದ ಕಾರಣ, ಈ ವೈರಸ್ ಗೆ ಝಿಕಾ ಎಂದೇ ನಾಮಕರಣ ಮಾಡಲಾಯಿತು. ಆಫ್ರಿಕಾದ ಉಗಾಂಡಾ ಮತ್ತಿತರ ರಾಷ್ಟ್ರಗಳಲ್ಲಿ 1952ರಲ್ಲಿ ಮೊಟ್ಟಮೊದಲಿಗೆ ಮನುಷ್ಯರಲ್ಲಿ ಈ ವೈರಸ್ ಕಾಣಿಸಿಕೊಂಡಿತು. ಬಳಿಕ ದಟ್ಟ ಅರಣ್ಯಗಳಿರುವ ಆಫ್ರಿಕಾ, ದಕ್ಷಿಣ ಏಷ್ಯಾ, ಫೆಸಿಫಿಕ್ ದ್ವೀಪಗಳಲ್ಲಿ ಆಗಾಗ ಈ ವೈರಸ್ ಕಾಣಿಸಿಕೊಳ್ಳುತ್ತಲೇ ಇತ್ತು. ಆದರೆ, 2007ಕ್ಕೆ ಮುನ್ನ ಜಗತ್ತಿನಾದ್ಯಂತ ಕೇವಲ 14 ಝೀಕಾ ಸೋಂಕು ಪ್ರಕರಣಗಳು ಮಾತ್ರ ಅಧಿಕೃತವಾಗಿ ವರದಿಯಾಗಿದ್ದವು.
ಝೀಕಾ ಸೋಂಕು ಲಕ್ಷಣಗಳೇನು?
ಸೋಂಕಿತ ಬಹುತೇಕರಲ್ಲಿ ಸೋಂಕಿನ ಯಾವುದೇ ಲಕ್ಷಣಗಳೂ ಕಾಣಿಸಿಕೊಳ್ಳುವುದಿಲ್ಲ ಅಥವಾ ತೀರಾ ಸೂಕ್ಷ್ಮ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದಾಗ್ಯೂ ಸಾಮಾನ್ಯವಾಗಿ ನಿಗಾ ಇಡಬೇಕಾದ ರೋಗ ಲಕ್ಷಣಗಳೆಂದರೆ, ಜ್ವರ, ಚರ್ಮದ ದದ್ದು ರೀತಿ ಆಗಬಹುದು, ಮೈಕೈ ನೋವು, ತಲೆನೋವು, ಸಂಧಿನೋವು, ಕಣ್ಣುಗಳು ಕೆಂಪಾಗುವುದು, ಸ್ನಾಯು ನೋವು. ಈ ಲಕ್ಷಣಗಳು ಕೆಲವು ದಿನಗಳಿಂದ, ಕೆಲವು ವಾರಗಳವರೆಗೆ ಇರಬಹುದು. ಆದರೆ, ಆಸ್ಪತ್ರೆಗೆ ಹೋಗುವಷ್ಟು ಗಂಭೀರ ಪರಿಸ್ಥಿತಿ ಕಾಣಿಸಿಕೊಳ್ಳುವುದೇ ಇಲ್ಲ. ಹಾಗೆ ಝಿಕಾ ವೈರಸ್ ದಾಳಿಯಿಂದ ಸಾವು ಸಂಭವಿಸುವ ಪ್ರಮಾಣ ಕೂಡ ಕಡಿಮೆ.
ಆದಾಗ್ಯೂ ಝೀಕಾ ಏಕೆ ಕೆಲವರಿಗೆ ಅಪಾಯಕಾರಿ?
ಗರ್ಭಿಣಿ ಮಹಿಳೆಯರು ಸೋಂಕಿಗೆ ಒಳಗಾದರೆ ಹುಟ್ಟುವ ಮಗು ಮೈಕ್ರೋಸೆಫಲಿ ಎಂಬ ಮೆದುಳು ನೂನ್ಯತೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಮತ್ತು ಆ ಮಗುವಿನ ಜೀವನಪೂರ್ತಿ ಬೇರೆ ಬೇರೆ ಮೆದುಳು ಸಮಸ್ಯೆಗಳಿಗೆ ಒಳಗಾಗಬಹುದು. ಹಾಗೇ ಗರ್ಭಪಾತ, ಅವಧಿಪೂರ್ವ ಪ್ರಸವ ಮತ್ತಿತರ ಸಮಸ್ಯೆಗಳಿಗೂ ಸೋಂಕು ಕಾರಣವಾಗಬಹುದು. ಹಾಗೇ ‘ಗಿಲಿಯನ್ ಬೇರ್ ಸಿಂಡ್ರೋಮ್’ ಎಂಬ ನರಸಂಬಂಧಿ ನ್ಯೂನತೆ ಕೂಡ ಕಾಣಿಸಿಕೊಳ್ಳಬಹುದು. ಹಾಗಾಗಿ ಇದು ಅಪಾಯಕಾರಿ.
ಝೀಕಾ ಸೋಂಕಿನಿಂದ ಪಾರಾಗಲು ಏನು ಮಾಡಬೇಕು?
ಝೀಕಾ ಸೋಂಕು ತಡೆಗೆ ಯಾವುದೇ ಲಸಿಕೆ ಇಲ್ಲ. ಸೋಂಕು ಬಂದ ಬಳಿಕ ಚಿಕಿತ್ಸೆಗೂ ಯಾವುದೇ ನಿರ್ದಿಷ್ಟ ಔಷಧಿ ಇಲ್ಲ. ಹಾಗಾಗಿ ರೋಗದಿಂದ ಬಚಾವಾಗುವ ಏಕೈಕ ಮಾರ್ಗ ಸೊಳ್ಳೆಗಳ ಕಡಿತದಿಂದ ಪಾರಾಗುವುದು. ಅದಕ್ಕಾಗಿ ಸೊಳ್ಳೆಗಳು ಮನೆಯಲ್ಲಿ, ಮನೆಯ ಸುತ್ತಮುತ್ತ ಇರದಂತೆ ನಿಗಾ ವಹಿಸಬೇಕು. ಸಾಧ್ಯವಾದಷ್ಟು ಸೊಳ್ಳೆಪರದೆ ಬಳಸಬೇಕು. ಸೊಳ್ಳೆ ಕಡಿತಕ್ಕೆ ಅವಕಾಶವಾಗದಂತೆ ಮೈತುಂಬಾ ಬಟ್ಟೆ ಧರಿಸಬೇಕು. ಸೊಳ್ಳೆಗಳನ್ನು ಓಡಿಸುವ ಮತ್ತು ಕೊಲ್ಲುವ ವಿವಿಧ ರಾಸಾಯನಿಕ ರಹಿತ ಸೊಳ್ಳೆನಾಶಕಗಳನ್ನು ಬಳಸಬಹುದು. ಲೈಂಗಿಕವಾಗಿ ಹರಡುವುದನ್ನು ತಡೆಯಲು ಕಾಂಡೋಮ್ ಬಳಸುವುದು ಸುರಕ್ಷಿತ.
ಝೀಕಾ ಸೋಂಕು ಪತ್ತೆ ಹೇಗೆ?
ವ್ಯಕ್ತಿಯ ಇತ್ತೀಚಿನ ಪ್ರಯಾಣ ವಿವರ, ರೋಗ ಲಕ್ಷ್ಣ ಮತ್ತು ರಕ್ತ ಅಥವಾ ಮೂತ್ರ ಪರೀಕ್ಷೆಯನ್ನು ಆಧರಿಸಿ ಸೋಂಕು ಪತ್ತೆ ಮಾಡಲಾಗುವುದು. ಸಮಸ್ಯೆ ಎಂದರೆ; ಬ್ಯಾಕ್ಟೀರಿಯಾದಿಂದ ಹರಡುವ ಇತರೆ ಅಪಾಯಕಾರಿ ಸೋಂಕುಗಳಾದ ಡೆಂಗೆ ಮತ್ತು ಚಿಕೂನ್ ಗುನ್ಯಾ ರೀತಿಯಲ್ಲೇ ಝೀಕಾ ಲಕ್ಷಣಗಳು ಇರುವುದರಿಂದ ಆರಂಭಿಕ ಹಂತದಲ್ಲೇ ನಿರ್ದಿಷ್ಟವಾಗಿ ರೋಗ ಪತ್ತೆ ಮಾಡಿ ಸಕಾಲಿಕ ಚಿಕಿತ್ಸೆ ನೀಡುವುದು ಸವಾಲಿನ ಕೆಲಸ.
ಝೀಕಾ ಸೋಂಕಿಗೆ ಒಳಗಾದರೆ ಏನು ಮಾಡಬೇಕು?
ಈ ಸೋಂಕಿಗೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಲಸಿಕೆ ಇಲ್ಲ. ಹಾಗಾಗಿ, ಡೆಂಗೆ ಮತ್ತು ಚಿಕೂನ್ ಗುನ್ಯಾದಲ್ಲಿ ನೀಡುವಂತೆಯೇ, ಜ್ವರ ಮತ್ತು ಮೈಕೈ ನೋವು ತೀವ್ರತೆ ಕುಗ್ಗಿಸುವುದು ಮುಂತಾದ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತದೆ. ಹಾಗಾಗಿ, ಸೋಂಕಿತರು ಸಾಕಷ್ಟು ವಿಶ್ರಾಂತಿ ಪಡೆಯುವುದು, ಹೆಚ್ಚು ದ್ರವ ಸೇವನೆಯ ಮೂಲಕ ನಿರ್ಜಲೀಕರಣ ತಡೆಯುವುದು ಮುಖ್ಯ.