ಮಧ್ಯ ಏಷಿಯಾದ ಗುಡ್ಡಗಾಡು ದೇಶ ಅಫ್ಘಾನಿಸ್ತಾನ ಈಗ ಮತ್ತೆ ವಿಶ್ವ ರಾಷ್ಟ್ರಗಳ ಗಮನ ಸೆಳೆಯುತ್ತಿದೆ. ದೇಶದಲ್ಲಿ ನಡೆಯುತ್ತಿರುವ ಅಂತರ್‌ಯುದ್ಧದಲ್ಲಿ ಅಶ್ರಫ್ ಘನಿ ನೇತೃತ್ವದ ಅಫ್ಘನ್ ಸರ್ಕಾರದ ಭದ್ರತಾ ಪಡೆಗಳು ಸೋಲೊಪ್ಪಿಕೊಂಡು ಸರ್ಕಾರವನ್ನು ತಾಲಿಬಾನಿಗೆ ಹಸ್ತಾಂತರಿಸಿದೆ. ಅಶ್ರಫ್ ಘನಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಸದ್ಯ, ತಜಕಿಸ್ತಾನದ ಆಶ್ರಯದಲ್ಲಿ ಅಫ್ಘನ್ ಅಧ್ಯಕ್ಷರಿದ್ದಾರೆ ಎನ್ನುವುದು ಸುದ್ದಿ.
ಅಫ್ಘನ್ ನೆಲದ ಮೇಲೆ ನಡೆಯುತ್ತಿರುವ ದೀರ್ಘಕಾಲೀನ ಯುದ್ಧಗಳಿಗೆ ವಿಶ್ವದ ದಿಗ್ಗಜ ರಾಷ್ಟ್ರಗಳಾದ ಅಮೆರಿಕಾ ಮತ್ತು ರಷ್ಯಾದ ಕಾಣಿಕೆ ಬಹುಪಾಲು ಇದೆ. ಎರಡನೇ ಜಾಗತಿಕ ಯುದ್ಧಗಳ ಬಳಿಕ ಅಮೆರಿಕಾ ಮತ್ತು ರಷ್ಯಾ ನಡುವಿನ ಶೀತಲ ಸಮರದ ಪರಿಣಾಮಗಳನ್ನು ಇದೀಗ ಅಫ್ಘನ್ ಅನುಭವಿಸುತ್ತಿದೆ.
ಪ್ರಸ್ತುತ ಯುದ್ಧಗ್ರಸ್ತವಾಗಿರುವ ಅಫ್ಘನ್ ದೇಶದ ಕುರಿತಾದ ಉಲ್ಲೇಖ ಮಹಾಭಾರತದಲ್ಲೇ ಬರುತ್ತದೆ. ಗಾಂಧಾರಿಯ ಹುಟ್ಟೂರಾದ ಕಂದಹಾರ್ (ಅಫ್ಘನ್ ಪ್ರದೇಶ) ಆಗಿನ ಕಾಲದಲ್ಲೇ ಸುಗಂಧ ದ್ರವ್ಯಗಳಿಗೆ ಪ್ರಖ್ಯಾತ ಹೊಂದಿದ್ದ ನಾಡು. ಮೌರ್ಯರು, ಕಾನಿಷ್ಕರು, ಅರಬರು, ಮಂಗೋಲಿಯನ್ನರು, ಮೊಘಲರು ಆ ಬಳಿಕ ಬ್ರಿಟೀಷರು ಆಳಿದ ಇತಿಹಾಸವಿರುವ ಅಫ್ಘನಿಸ್ತಾನದಲ್ಲಿ ಒಂದು ಕಾಲದಲ್ಲಿ ಬೌದ್ಧ ಧರ್ಮ ವ್ಯಾಪಕವಾಗಿತ್ತು.
ಈ ಇತಿಹಾಸ ಸಂಪನ್ನ ಅಫ್ಘಾನಿಸ್ತಾನ ಇಂದು ಮದ್ದುಗುಂಡುಗಳ ಸದ್ದಿನಿಂದ ನಲುಗುತ್ತಿದೆ. ಅಲ್ಲಿನ ಮಕ್ಕಳು, ಅಮಾಯಕ ನಾಗರಿಕರು ಬಂಡುಕೋರರ ಅಥವಾ ಭದ್ರತಾ ಸಿಬ್ಬಂದಿಗಳ ಗುಂಡುಗಳಿಗೆ, ವೈಮಾನಿಕ ಬಾಂಬ್ ದಾಳಿಗಳಿಗೆ ಅನಾಯಾಸವಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ನೇರ ಹೊಣೆ ತಾಲಿಬಾನ್ ಎಂದು ಕಂಡರೂ, ಕೇವಲ ತಾಲಿಬಾನ್ ಮಾತ್ರವಲ್ಲ. ಅಫ್ಘನ್ ಯುದ್ಧ ಚರಿತೆಗೆ ದೀರ್ಘ ಇತಿಹಾಸವಿದೆ.
ಅಫ್ಘನ್ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ!
ಜಗತ್ತಿನ ಬಲಶಾಲಿ ಉಗ್ರ ಸಂಘಟನೆಯಾಗಿ ಗುರುತಿಸಿಕೊಂಡಿರುವ ತಾಲಿಬಾನ್ ಆರಂಭದಲ್ಲಿ ಈ ಸ್ವರೂಪದಲ್ಲಿರಲಿಲ್ಲ. ಅದರ ಹುಟ್ಟಿಗೆ ಹಲವಾರು ರಾಜಕೀಯ ಸ್ಥಿತ್ಯಂತರಗಳು, ಅಮೆರಿಕಾ- ರಷ್ಯಾ ಕೋಲ್ಡ್ ವಾರ್, ಇಸ್ಲಾಮಿಕ್ ನೇಷನ್ ಕಲ್ಪನೆ, ಪಾಕಿಸ್ತಾನದ ಉತ್ತೇಜನ ಹೀಗೆ ಹಲವು ಕಾರಣಗಳಿವೆ.
ಎರಡನೇ ಜಾಗತಿಕ ಯುದ್ಧ ಬಳಿಕ ಕಮ್ಯುನಿಸ್ಟ್ ಹಾಗೂ ಬಂಡವಾಳಶಾಹಿ ಎರಡೇ ರೀತಿಯ ವಿಚಾರಧಾರೆಗಳ ಸರ್ಕಾರಗಳು ಬಹುಪಾಲು ದೇಶಗಳನ್ನು ಆಳುತ್ತಿದ್ದವು. ಯುಎಸ್‌ಎಸ್‌ಆರ್ (ರಷ್ಯಾ) ಮತ್ತು ಅಮೆರಿಕಾ ನಡುವಿನ ಕೋಲ್ಡ್ ವಾರ್‌ಗಳು ನಡೆಯುತ್ತಿದ್ದರೆ, ಎರಡೂ ರಾಷ್ಟ್ರಗಳು ತಮ್ಮದೇ ಹಿಡಿತವನ್ನು ಕೆಲವು ದೇಶಗಳ ಮೇಲೆ ಇಟ್ಟಿದ್ದವು. ಎರಡು ದಿಗ್ಗಜ ರಾಷ್ಟ್ರಗಳು ತಮ್ಮ ಪ್ರತಿಷ್ಟೆ ಸಾಧಿಸಲು ಯಾವ ಮಟ್ಟಕ್ಕೂ ಇಳಿಯುತ್ತಿದ್ದವು.
ಕಮ್ಯುನಿಸ್ಟ್ ಸಿದ್ಧಾಂತದ PDPA (People Decratic Party Of Afghanisthan) ಆಡಳಿತವಿದ್ದ ಅಫ್ಘಾನಿಸ್ತಾನದಲ್ಲಿ ಸರ್ಕಾರದಲ್ಲೇ ಆಂತರಿಕ ಕಲಹಗಳು ನಡೆಯತೊಡಗಿದವು. ಕಮ್ಯುನಿಸ್ಟ್ ಪಕ್ಷದಲ್ಲೇ ಎರಡು ಬಣಗಳಾಗಿ, ಅದರ ಆಂತರಿಕ ಭಿನ್ನಮತದಲ್ಲಿ 1979 ರಲ್ಲಿ ಕಮ್ಯುನಿಸ್ಟ್ ಸರ್ಕಾರದ ಅಧ್ಯಕ್ಷ ನೂರ್ ಮಹಮ್ಮದ್ ತಾರಕಿ ಅವರು ಕೊಲ್ಲಲ್ಪಡುತ್ತಾರೆ. ಇನ್ನೊಂದು ಬಣದ ಕಮ್ಯುನಿಸ್ಟ್ ನೇತಾರ ಹಪೀಝುಲ್ಲಾ ಅಮೀನ್ ಅವರೇ ತಮ್ಮ ಅಧ್ಯಕ್ಷನನ್ನು ಬಂಧಿಸಿ ಕೊಲ್ಲಿಸಿರುತ್ತಾರೆ. ಬಳಿಕ ತಾವೇ ಗದ್ದುಗೆ ಏರಿರುತ್ತಾರೆ. ಕಮ್ಯುನಿಸ್ಟರ ನಡುವೆ ಜಗಳಗಳು ನಡೆಯುತ್ತಿದ್ದಂತೆಯೇ, ಕಮ್ಯುನಿಸ್ಟರ ವಿರುದ್ಧ ಇಸ್ಲಾಮಿಸ್ಟರೂ ಕೂಡಾ ಜಗಳ ಶುರು ಹಚ್ಚುತ್ತಾರೆ.
ಅದೇ ಸಂಧರ್ಭದಲ್ಲಿ ನಡೆದ (1979) ಇರಾನ್ ಕ್ರಾಂತಿಯು ಅಫ್ಘನ್ ಮುಸ್ಲಿಂ ಬಂಡುಕೋರರಿಗೆ ಅಗಾಧ ಉತ್ತೇಜನ ನೀಡುತ್ತದೆ. ಇನ್ನೇನು ಮುಸ್ಲಿಮ್ ಬಂಡಾಯಗಾರರು ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲಿದ್ದಾರೆ ಎನ್ನುವಾಗ ಕಮ್ಯುನಿಸ್ಟ್ ರಾಷ್ಟ್ರವಾದ ಸೋವಿಯತ್ ತನ್ನ ಸೇನೆಯನ್ನು ಅಫ್ಘನ್
ಸರ್ಕಾರದ ನೆರವಿಗೆ ರವಾನಿಸುತ್ತದೆ. ಅಫ್ಘಾನಿಸ್ತಾನದ ಪ್ರಸ್ತುತ ಸಮಸ್ಯೆಯ ಅಂದರೆ ತಾಲಿಬಾನಿನ ಮೂಲ ಇಲ್ಲಿಂದ ಆರಂಭವಾಗುತ್ತದೆ ಎನ್ನಲಾಗಿದೆ.
ಇರಾನ್ ಕ್ರಾಂತಿಯಿಂದ ಭಯಬಿದ್ದಿದ್ದ ಹಫೀಝುಲ್ಲಾ ಕೊನೆ ಕಾಲಕ್ಕಾಗುವಾಗ ಇಸ್ಲಾಮಿಸ್ಟರ ಬೆಂಬಲ ಪಡೆಯಲು ಕಮ್ಯುನಿಸಂ ಸಿದ್ದಾಂತದೊಂದಿಗೆ ರಾಜಿ ಮಾಡಿಕೊಳ್ಳಲು ಶುರುವಿಡುತ್ತಾರೆ. ಇದು ಕರ್ಮಠ ಕಮ್ಯುನಿಸ್ಟರಾದ ಸೋವಿಯತ್ ಯುನಿಯನ್ ಕೆಂಗಣ್ಣಿಗೆ ಕಾರಣವಾಗುತ್ತದೆ. ಅಫ್ಘನ್ ಸರ್ಕಾರಕ್ಕೆ ನೆರವಿಗೆ ಬಂದಿದ್ದ ಸೋವಿಯತ್ ಸೇನೆಯೆ ಅಧ್ಯಕ್ಷನನ್ನು ಕೊಲ್ಲುತ್ತದೆ ಎಂದು ಹೇಳುತ್ತದೆ ಇತಿಹಾಸ. ಬಳಿಕ ಕಮ್ಯುನಿಸ್ಟ್ ನೇತಾರನೇ ಆದ ಬಬ್ರಾಕ್ ಕರ್ಮಲ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಆ ಮೂಲಕ ಅಫ್ಘನ್‌ನಲ್ಲಿ ತನ್ನ ಪ್ರಭಾವವನ್ನು ಬಲವಾಗಿ ಬೀರುತ್ತದೆ ಸೋವಿಯತ್ ಒಕ್ಕೂಟ.
ಮುಜಾಹಿದೀನ್ ಹೋರಾಟ
ಜಾಗತಿಕ ಎರಡು ಪ್ರಮುಖ ಧರ್ಮಗಳಾದ ಇಸ್ಲಾಂ ಮತ್ತು ಕ್ರಿಷ್ಚಿಯಾನಿಟಿಯ ನಡುವೆ ಸಾವಿರಾರು ವರ್ಷಗಳ ಕ್ರುಸೇಡ್-ಜಿಹಾದ್ ಪವಿತ್ರ ಯುದ್ಧಗಳು ನಡೆಯುತ್ತಿತ್ತು. ಏನೇ ಕಮ್ಯುನಿಸ್ಟ್ ರಾಷ್ಟ್ರವಾದರೂ ಅಫ್ಘನಿಸ್ತಾನದ ಮೇಲೆ ರಷ್ಯಾ ಸೈನಿಕರು ಬಂದಿಳಿಯುವುದು ಕ್ರುಸೇಡ್‌ನ ಭಾಗವೆಂದೇ ಅಫ್ಘನಿನ ಒಂದು ವಿಭಾಗ ಮುಸ್ಲಿಮ್ ಬಂಡುಕೋರರು ಕಂಡು ಕೊಂಡರು. ಹಾಗಾಗಿ, ರಷಿಯನ್ನರ ವಿರುದ್ಧ ಮುಜಾಹಿದ್ ಸಂಘಟನೆಯಡಿಯಲ್ಲಿ ಜಿಹಾದ್ ಪ್ರಾರಂಭವಾಯಿತು.
ಆದರೆ, ಈ ಕುರಿತು ಬೇರೆ ಬೇರೆ ವಿಶ್ಲೇಷಣೆಗಳಿವೆ. ಒಂದು ವಾದದ ಪ್ರಕಾರ, ಅಫ್ಘನ್‌ನಲ್ಲಿ ಸೋವಿಯತ್ ಒಕ್ಕೂಟದ ಪ್ರಭಾವವನ್ನು ತಗ್ಗಿಸಲು ಆಂತರಿಕ ಬಂಡುಕೋರರಿಗೆ ಅಮೇರಿಕಾ ಸ್ವತಃ ಉತ್ತೇಜನ ನೀಡಿ, ಅಫ್ಘನ್‌ನಲ್ಲಿ ಅರಾಜಕತೆಗೆ ಉಂಟಾಗುವಂತೆ ನೋಡಿಕೊಂಡಿತು. ಆ ಮೂಲಕ ವಿಯಟ್ನಾಮ್ ಸೋಲಿನ ಹಗೆಯನ್ನು ಸೋವಿಯತ್ ಒಕ್ಕೂಟದ ವಿರುದ್ಧ ತೀರಿಸಿಕೊಂಡಿತು ಎನ್ನುವುದು.
ಅದೇನೇ ಇದ್ದರೂ, ಮುಜಾಹಿದ್ ಸಂಘಟನೆಗೆ ಸೌದಿ ಅರೇಬಿಯಾ ಬೆಂಬಲ ನೀಡುತ್ತಿತ್ತು. ಹೇಳಿ ಕೇಳಿ ಸೌದಿ ಮೊದಲೇ ಅಮೆರಿಕಾ ಬಣದಲ್ಲಿದ್ದ ರಾಷ್ಟ್ರ. ಅಮೆರಿಕಾದ ಗುಪ್ತಚರ ಇಲಾಖೆ ಸಿಐಎ ಈ ಮಿಶನ್‌ಗೆ ಆಪರೇಷನ್ ಸೈಕ್ಲೋನ್ ಹೆಸರಿಟ್ಟು, ಆರಂಭದಲ್ಲೇ 50 ಮಿಲಿಯ ಡಾಲರ್ ಖರ್ಚು ಮಾಡಿತ್ತು ಎಂದು ಸಿಐಎ ನಿರ್ದೇಶಕ ರಾಬರ್ಟ್ ಗೇಟ್ಸ್ ಸ್ವತಃ ಇದನ್ನು ಒಪ್ಪಿಕೊಂಡಿದ್ದರು.
ಸಿಐಎ ಜೊತೆಗೆ ಬ್ರಿಟಿಷ್ ಇಂಟಲಿಜೆನ್ಸ್ ಎಂಐ6 ಹಾಗೂ ಸೌದಿ ಕೂಡಾ ಸೇರಿಕೊಂಡಿತ್ತು.
ಅದುವರೆಗೂ ಅಲ್ಪ ಪ್ರಮಾಣದ ಬಂಡಾಯಗಾರರಾಗಿದ್ದ ಮುಜಾಹಿದೀನ್ ಸಂಘಟನೆ ಮೇಲೆ ಹೇಳಿರುವ ರಾಷ್ಟ್ರಗಳ ಬೆಂಬಲದೊಂದಿಗೆ ಸೋವಿಯತ್ ಸೈನ್ಯವನ್ನೇ ಬಗ್ಗು ಬಡಿಯುವ ಮಟ್ಟಕ್ಕೆ ಬೆಳೆಯಿತು.
ಕಮ್ಯುನಿಸ್ಟ್ ಸರ್ಕಾರದ ಪತನ.!
ಸ್ವಾತಂತ್ರ್ಯ ಹೋರಾಟಗಾರರು ಎಂದು ತಮ್ಮನ್ನು ತಾವೇ ಕರೆದುಕೊಂಡ ಮುಜಾಹಿದನ್ನರು ಪಾಕಿಸ್ತಾನ ಹಾಗೂ ಅಮೆರಿಕಾ ಸಾಕಷ್ಟು ನೆರವು ನೀಡಿತು. ಅಮೆರಿಕಾದ ಬಣದಲ್ಲಿರುವ ಪ್ರಬಲ ಮುಸ್ಲಿಂ ರಾಷ್ಟ್ರ ಸೌದಿ ಅರೆಬಿಯಾ ಕೂಡಾ ಪರೋಕ್ಷವಾಗಿ ಈ ಸಂಘಟನೆಗಳಿಗೆ ಬೆಂಬಲ ನೀಡಿತ್ತು. ಮಿಲಿಟರಿ ಪರಿಕರಗಳನ್ನು, ಧನಸಹಾಯವನ್ನು ಯಥೇಚ್ಛವಾಗಿ ಅಮೆರಿಕಾ ನೀಡಿ ಬೆಂಬಲ ನೀಡಿತು. ಗುಡ್ಡಗಾಡು ಅಫ್ಘನಿನಲ್ಲಿ ನೇರಾ ನೇರಾ ಯುದ್ಧ ಮಾಡಿ ಗೆಲ್ಲುವುದು ಯಾವುದೇ ವಿದೇಶಿ ಶಕ್ತಿಗಳಿಗೆ ಸಾಧ್ಯವಿರಲಿಲ್ಲ. ಬಂಡುಕೋರರ ಗೆರಿಲ್ಲಾ ಮಾದರಿಯ ಯುದ್ಧ ಕಲೆಗಳಿಗೆ ಅವರ ಗುಡ್ಡಗಾಡು ಪ್ರದೇಶ ಪ್ರತಿಕೂಲವಾಗಿತ್ತು. ಜಿನೆವಾ ಒಪ್ಪಂದ ಬಳಿಕ ಸೋವಿಯತ್ ದೇಶದ ಸೈನ್ಯ ಮುಜಾಹಿದಿನ್ ಹುಟ್ಟಡಗಿಸಲಾಗದೆ 1989 ರಲ್ಲಿ ಮರಳಿ ತಮ್ಮ ನಾಡಿಗೆ ಹೋಯಿತು.
ಆ ವೇಳೆ ಡಾ. ಮಹಮ್ಮದ್ ನಜೀಬುಲ್ಲಾಹ್ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದರು. ಸಾಕಷ್ಟು ಪ್ರಗತಿಯನ್ನು ತರಲು ಅವರು ಶ್ರಮಿಸುತ್ತಾರೆ. ಅಷ್ಟರ ವೇಳೆಗೆ ಕಮ್ಯುನಿಸ್ಟ್ ಪ್ರಭಾವದಿಂದ ಅಫ್ಘನ್ ಹೊರಬಂದಿರುತ್ತದೆ. ಇಸ್ಲಾಮಿಕ್ ರಿಪಬ್ಲಿಕ್ ಆಗಿ ಅಫ್ಘನ್ ಅನ್ನು ಘೋಷಿಸಿದಾಗ್ಯೂ, ಸೋವಿಯತ್ ಒಕ್ಕೂಟ ಇನ್ನೂ ನಜೀಬುಲ್ಲಾರಿಗೆ ಸಹಾಯ ಮಾಡುತ್ತಿದೆ ಎಂದು ಮುಜಾಹಿದೀನ್ ಸರ್ಕಾರದ ವಿರುದ್ಧ ತಮ್ಮ ಪ್ರತಿರೋಧವನ್ನು ದಾಖಲಿಸುತ್ತಲೇ ಇರುತ್ತದೆ.
1991 ರಲ್ಲಿ ಮುಜಾಹಿದೀನ್ ಕೊನೆಗೂ ಆಂತರಿಕ ದಂಗೆಯಲ್ಲಿ ಗೆಲುವು ಸಾಧಿಸುತ್ತದೆ. ಆದರೆ, ಮುಜಾಹಿದ್ ಒಳಗೆ ಒಗ್ಗಟ್ಟು ಇರಲಿಲ್ಲ. ಇಸ್ಲಾಮಿಕ್ ದೇಶದ ಪರಿಕಲ್ಪನೆಯಲ್ಲಿ ರೂಪುಗೊಂಡಿದ್ದರೂ ಅಫ್ಘನ್ ಬುಡಕಟ್ಟುಗಳ ನಡುವಿನ ವೈಮನಸ್ಸು ಆ ಸಂಘಟನೆಯಲ್ಲೂ ಇದ್ದವು. ಕೊನೆಗೂ 1992ರಲ್ಲಿ ಬುರ್ಹಾನುದ್ದೀನ್ ರಬ್ಬಾನಿ ಅಫ್ಘನ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುತ್ತಾರೆ.