
ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM) ಮೇಲೆ ಭಾರತದಲ್ಲಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಆದರೂ ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳು ಸೇಫ್ ಅಂತಾ ಕೇಂದ್ರ ಸರ್ಕಾರ ವಾದಿಸುತ್ತಲೇ ಬಂದಿತ್ತು. ಪ್ರತಿ ಚುನಾವಣೆಯಲ್ಲಿ ಸೋತಾಗಲೂ ಕಾಂಗ್ರೆಸ್ ಸೇರಿದಂತೆ ಸಾಕಷ್ಟು ವಿರೋಧ ಪಕ್ಷಗಳು ವೋಟಿಂಗ್ ಮೆಷಿನ್ ಮ್ಯಾನ್ಯುಪ್ಲೇಟ್ ಮಾಡಲಾಗಿದೆ ಎನ್ನುವ ಆರೋಪವನ್ನು ಸದಾ ಕಾಲ ಮಾಡುತ್ತಲೇ ಬಂದಿದ್ದಾರೆ. ಇತ್ತೀಚಿಗೆ ಮಹಾರಾಷ್ಟ್ರ ಚುನಾವಣೆ ಸೋತಾಗಲೂ ಕಾಂಗ್ರೆಸ್, ಎನ್ಸಿಪಿ, ಶಿವಸೇನಾ (ಉದ್ಧವ್ ಠಾಕ್ರೆ ಬಣ) ಆರೋಪ ಮಾಡಿತ್ತು. ವಿರೋಧ ಪಕ್ಷಗಳ ಆರೋಪಕ್ಕೆ ಅಮೆರಿಕ ಸಾಥ್ ನೀಡಿದೆ.

ಎಲೆಕ್ಟ್ರಾನಿಕ ಮತಯಂತ್ರಗಳು ಹ್ಯಾಕರ್ಗಳಿಗೆ ಗುರಿಯಾಗಬಹುದು ಎಂದು ಆತಂಕ ವ್ಯಕ್ತವಾಗಿದೆ. ಅಮೆರಿಕ ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕಿ ತುಳಸಿ ಗಬ್ಬಾರ್ಡ್, ಈ ಬಗ್ಗೆ ಅಮೆರಿಕ ಅಧ್ಯಕ್ಷರ ಎದುರಲ್ಲೇ ಮಾತನಾಡಿದ್ದು, ಬ್ಯಾಲೆಟ್ ಪೇಪರ್ ಮತದಾನಕ್ಕೆ ಒತ್ತಾಯ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕ್ಯಾಬಿನೆಟ್ ಸಭೆಯಲ್ಲೇ ಈ ಬಗ್ಗೆ ಪ್ರಸ್ತಾಪಿಸಿರುವ ತುಳಸಿ ಗಬ್ಬಾರ್ಡ್, ಇವಿಎಂ ಮೆಷಿನ್ ಹ್ಯಾಕರ್ಗಳಿಗೆ ಸುಲಭ ತುತ್ತಾಗುತ್ತದೆ ಎನ್ನುವುದಕ್ಕೆ ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಆದರೆ ಭಾರತದಲ್ಲಿ ವಿದ್ಯುನ್ಮಾನ ಮತ ಯಂತ್ರಗಳು ಸುರಕ್ಷಿತ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಜಾರ್ಖಂಡ್ ಪ್ರವಾಸದಲ್ಲಿ ಇದ್ದ ಜ್ಞಾನೇಶ್ ಕುಮಾರ್, ಭಾರತದಲ್ಲಿ ಬಳಕೆಯಲ್ಲಿರುವ ವಿದ್ಯುನ್ಮಾನ ಮತಯಂತ್ರಗಳಿಗೆ ಇಂಟರ್ನೆಟ್, ಬ್ಲೂಟೂತ್, ಇನ್ಫ್ರಾರೆಡ್ ಸಂಪರ್ಕ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಮತಯಂತ್ರಗಳನ್ನು ತಿರುಚುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಅಮೆರಿಕ ಗುಪ್ತಚರ ವಿಭಾಗದ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಇವಿಎಂಗಳು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಮತಪತ್ರಗಳು ಉತ್ತಮ ಎಂದಿದ್ದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಭಾರತಕ್ಕಿಂತಲೂ ಅಮೆರಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದಿದ್ದು, ಅಮೆರಿಕ ಗುಪ್ತಚರ ಇಲಾಖೆ ಮುಖ್ಯಸ್ಥರೇ ಇವಿಎಂಗಳನ್ನು ಹ್ಯಾಕ್ ಮಾಡಬಹುದು ಅನ್ನೋದಕ್ಕೆ ಸಾಕ್ಷ್ಯಗಳು ಇವೆ ಎಂದಿದ್ದಾರೆ. ಹೀಗಿರುವಾಗ ಭಾರತದಲ್ಲಿ ವಿರೋಧ ಪಕ್ಷಗಳ ಮಾತಿಗೆ ಬಲ ಬಂದಿರುವುದು ಸುಳ್ಳಲ್ಲ. ಈಗ ತುಳಸಿ ಹಬ್ಬಾರ್ಡ್ ಹೇಳಿಕೆ ಬಳಿಕ ವಿರೋಧ ಪಕ್ಷಗಳು ಸುಮ್ಮನೆ ಕೂರುವ ಸಾಧ್ಯತೆ ಕಡಿಮೆ. ಅಮೆರಿಕ ಗುಪ್ತಚರ ಇಲಾಖೆಯೇ ಹ್ಯಾಕ್ ಮಾಡುವ ಬಗ್ಗೆ ಹೇಳಿರುವುದರಿಂದ ಮತ್ತೊಮ್ಮೆ ಪರಿಶೀಲನೆ ಮಾಡುವುದು ಸೂಕ್ತ ಎಂದು ಕಾನೂನು ಹೋರಾಟ ಮಾಡುವ ಸಿದ್ಧತೆಯಲ್ಲಿದೆ.