ರಾಮನಗರ: ತಾಲೂಕು ರಚನೆಗೆ ಸಾಕಷ್ಟು ಶ್ರಮ ವಹಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ತಿಳಿಸಿದರು.
ರಾಮನಗರ ಜಿಲ್ಲೆಯ ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ನಡೆದ ನೂತನ ತಾಲೂಕು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2019 ರಲ್ಲಿ ಕುಮಾರಸ್ವಾಮಿ ಸಿಎಂ ಆದಾಗ ತಾತ್ವಿಕ ಅನುಮೋದನೆ ಕೊಟ್ಟಿದ್ದರು. ಅಂತಿಮ ಅಧಿಸೂಚನೆ ಕೊಟ್ಟಿದ್ದು 2022 ರಲ್ಲಿ ನಮ್ಮ ಸರ್ಕಾರ ಎಂದರು.
ಹುದ್ದೆಗಳ ನೇಮಕಾತಿಯನ್ನು ಕೂಡ ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿವಿ ಹಾಗೂ ಮೆಡಿಕಲ್ ಕಾಲೇಜು ಕಾಮಗಾರಿ ಶೀಘ್ರವೇ ಆರಂಭ ಮಾಡುತ್ತೇವೆ. ಸಿಎಂ ಅವರಿಂದ ಶಂಕು ಸ್ಥಾಪನೆ ನೆರವೇರಿಸುತ್ತೇವೆ. ರಾಮನಗರ ಇಂಜನಿಯರಿಂಗ್ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ. 1850 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಯೋಜನೆ ತಂದಿದ್ದು ಎಂದು ತಿರುಗೇಟು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ್ ನಾರಾಯಣ್, ನಾವು ಸುಮ್ಮನೆ ಬೋರ್ಡ್’ಗಳನ್ನು ಹಾಕಿಕೊಳ್ಳಲ್ಲ ಎಂದು ಹೇಳಿದರು.
ಅನಿತಾ ಕುಮಾರಸ್ವಾಮಿ ಅಸಮಧಾನ

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ನಾನು ಬರುವುದಿಕ್ಕಿಂತ ಮುಂಚೆ ಕಾರ್ಯಕ್ರಮ ಉದ್ಘಾಟನೆ ಮಾಡಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ರಾಮನಗರ ತಾಲೂಕು ರಚನೆಗೆ ನಾನು ಶ್ರಮವಹಿಸಿದ್ದು, ಫಾಲೋಅಪ್ ಮಾಡಿದ್ದು ನಾನು ಎಂದು ವೇದಿಕೆ ಮೇಲೆ ದಾಖಲೆಗಳನ್ನು ಜನರಿಗೆ ತೋರಿಸಿದರು.
ಕುಮಾರಸ್ವಾಮಿ ಶಾಸಕರಾದ ಮೇಲೆ ಅಭಿವೃದ್ಧಿ ಆಗಿದ್ದು, ಜನರಿಗೆ ತಿಳಿದಿದೆ. ರಾಮನಗರಕ್ಕೆ 450 ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಕೊಟ್ಟಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಆದರೆ ಬಿಜೆಪಿ ಸರ್ಕಾರ ಬರುವ ಮೊದಲೇ ಆಗಿತ್ತು. ಕುಮಾರಸ್ವಾಮಿ ಅವರು ಬಂದಿದ್ರೆ ಯಾರು ಮಾತನಾಡಲು ಅಗುತ್ತಿರಲಿಲ್ಲ. ನನಗೆ ಸುಳ್ಳು ಹೇಳಲು ಬರಲ್ಲ. ನನಗೆ ಗೊತ್ತಿರುವುದು ಅಭಿವೃದ್ಧಿ ಎಂದು ಹೇಳಿದರು.