ಬೆಳಗಾವಿ : ಅಥಣಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿಂದು ಬಿಜೆಪಿ ಬೃಹತ್ ಸಮಾವೇಶವನ್ನು ನಡೆಸುತ್ತಿದೆ. ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ಪಕ್ಷಕ್ಕೆ ದ್ರೋಹ ಎಸಗಿದ ಲಕ್ಷ್ಮಣ ಸವದಿಯನ್ನು ಸೋಲಿಸಲು ಎಲ್ಲರೂ ಒಂದಾಗಿ ಎಂದು ಅಥಣಿ ಜನತೆಗೆ ಕರೆ ನೀಡಿದ್ದಾರೆ.

ಇಡೀ ರಾಜ್ಯದ ಚುನಾವಣೆ ಒಂದೆಡೆಯಾದರೆ, ಅಥಣಿ ಚುನಾವಣೆಯೇ ಇನ್ನೊಂದೆಡೆ. ಡಬಲ್ ಇಂಜಿನ್ ಸರ್ಕಾರ ಬೇಕು ಎಂದರೆ ನೀವೆಲ್ಲ ಬಿಜೆಪಿಗೆ ಮತ ಹಾಕಬೇಕು. ಲಕ್ಷ್ಮಣ ಸವದಿಯನ್ನು ಕಳೆದ ಬಾರಿ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಸೋಲಿಸಿದ್ದರು. ಸೋತಿದ್ದ ಲಕ್ಷ್ಮಣ ಸವದಿ ಜೊತೆ ನಾನು ಫೋನ್ ಕಾಲ್ನಲ್ಲಿ ಮಾತನಾಡಿದ್ದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಲಕ್ಷ್ಮಣ ಸವದಿ ಚುನಾವಣೆಯಲ್ಲಿ ಸೋತಿದ್ದರೂ ಸಹ ಅವರನ್ನು ಎಂಎಲ್ಸಿ ಮಾಡಿ ಮಂತ್ರಿಗಿರಿ ನೀಡಿದ್ದೆವು. ಎಂಎಲ್ಸಿ ಅವಧಿ ಇನ್ನೂ ಬಾಕಿ ಇರುವಾಗಲೇ ಪಕ್ಷ ತೊರೆದು ಯಾಕೆ ಹೋದರು ಅನ್ನೋದನ್ನು ನೀವೆಲ್ಲ ಸೇರಿ ಪ್ರಶ್ನೆ ಮಾಡಬೇಕು ಎಂದಿದ್ದಾರೆ .