ನವದೆಹಲಿ: ಭಾರತದಲ್ಲಿ ನಡೆಯುವ ಎಲ್ಲಾ ಚುನಾವಣೆಗಳು ಸಂಪೂರ್ಣವಾಗಿ ಅಕ್ರಮದಿಂದ ಮತ್ತು ವ್ಯವಸ್ಥಿತವಾಗಿ ಮತಗಳ ಕಳ್ಳತನ ನಡೆಯುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ವಿರೋಧಿ ಅಲೆ ತಾನಾಗಿಯೇ ಮಾಯವಾಗಲು ಸಾಧ್ಯವಿಲ್ಲ ಎಂದಿರುವ ಅವರು, ಈ ಅಕ್ರಮಗಳು ಸಂವಿಧಾನ ಮತ್ತು ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ದಾಳಿಯಾಗಿದೆ ಎಂದು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಗುಡುಗಿದ್ದಾರೆ.

ಆಡಳಿತ ವಿರೋಧಿ ಅಲೆ ಮಾಯವಾಗಲು ಹೇಗೆ ಸಾಧ್ಯ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಮುಂದಿನ 30 ವರ್ಷಗಳ ಕಾಲ ಆಡಳಿತದಲ್ಲಿರುತ್ತದೆ ಎಂದು ಹೇಳಿರುವ ವಿಡಿಯೋ ತುಣುಕನ್ನು ಪ್ರದರ್ಶಿಸಿದ ರಾಹುಲ್ ಗಾಂಧಿ, ಯಾವುದೇ ರಾಜಕೀಯ ನಾಯಕ ಇಂತಹ ಮಾತುಗಳನ್ನು ಆಡಲು ಸಾಧ್ಯವಿಲ್ಲ ಎಂದರು. ಬಾಂಗ್ಲಾದೇಶ ಯುದ್ಧ ಗೆದ್ದ ನಂತರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ತೀವ್ರ ಆಡಳಿತ ವಿರೋಧಿ ಅಲೆಯನ್ನು ಎದುರಿಸಿದ್ದರು ಎಂಬುದನ್ನು ಉದಾಹರಿಸಿದ ಅವರು, ಉತ್ತರ ಕೊರಿಯಾದಂತಹ ದೇಶಗಳನ್ನು ಹೊರತುಪಡಿಸಿ ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಆಡಳಿತ ವಿರೋಧಿ ಅಲೆ ಸಂಪೂರ್ಣವಾಗಿ ಕಣ್ಮರೆಯಾಗುವುದಿಲ್ಲ ಎಂದು ಪ್ರತಿಪಾದಿಸಿದರು. ಆದರೆ ಭಾರತದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತಿಲ್ಲದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ
ಕಳೆದ ಹತ್ತು ತಿಂಗಳ ಅವಧಿಯಲ್ಲಿ ಚುನಾವಣಾ ಆಯೋಗದ ನಿರ್ಧಾರಗಳ ವಿರುದ್ಧ ಇಬ್ಬರು ಚುನಾವಣಾ ಆಯುಕ್ತರು ಬರೋಬ್ಬರಿ 14 ಬಾರಿ ಭಿನ್ನಾಭಿಪ್ರಾಯ ದಾಖಲಿಸಿರುವ ವರದಿಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿದರು. ಜ್ಞಾನೇಶ್ ಕುಮಾರ್ ಅವರನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರೇ ಆಯ್ಕೆ ಮಾಡಿದ್ದು, ಇಂದು ಅವರ ಕಾರ್ಯವೈಖರಿಯನ್ನು ಸ್ವತಃ ಆಯೋಗದ ಇತರ ಆಯುಕ್ತರೇ ಪ್ರಶ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸಂವಿಧಾನ ಮತ್ತು ಕಾನೂನು ವ್ಯವಸ್ಥೆಗೆ ಧಕ್ಕೆ
ಮತಗಳನ್ನು ರಕ್ಷಿಸಬೇಕಾದ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು ತನ್ನ ಜವಾಬ್ದಾರಿಯಲ್ಲಿ ವಿಫಲವಾಗಿದೆ ಎಂದು ರಾಹುಲ್ ದೂರಿದರು. ಗಾಳಿಯಲ್ಲಿ ಗುಂಡು ಹಾರಿಸದೆ, ಸೂಕ್ತ ಸಾಕ್ಷ್ಯಾಧಾರಗಳ ಆಧಾರದ ಮೇಲೆಯೇ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳು ಶೇಕಡಾ ನೂರರಷ್ಟು ತಿರುಚಲ್ಪಟ್ಟಿವೆ ಎಂದು ಪ್ರತಿಪಾದಿಸುತ್ತಿರುವುದಾಗಿ ಹೇಳಿದರು. ಮತ ಕಳ್ಳತನವಾದರೆ ಕಾನೂನು ಮತ್ತು ಸಾಂವಿಧಾನಿಕ ವ್ಯವಸ್ಥೆಗಳೇ ನಾಶವಾಗುತ್ತವೆ ಎಂದ ಅವರು, ಕದ್ದ ಮತಗಳ ಆಧಾರದ ಮೇಲೆ ಸಂಸತ್ತಿನಲ್ಲಿ ಸಂಸದರು ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
#WATCH | Delhi: Reacting to Indian Express report on 2 ECs objecting to discrepancies in SIR process, LoP Lok Sabha, Rahul Gandhi says, "Please understand what these two gentlemen are saying. They are saying that the vote does not exist in India anymore. They are also saying the… pic.twitter.com/fKVmHZBu0t
— ANI (@ANI) September 24, 2026
ಪ್ರಮುಖರ ವಿರುದ್ಧ ಸಂಚಿನ ಆರೋಪ
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉದ್ಯಮಿ ಗೌತಮ್ ಅದಾನಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿದ ರಾಹುಲ್ ಗಾಂಧಿ, ಇವರೆಲ್ಲರೂ ಭಾರತದ ಪ್ರಜಾಪ್ರಭುತ್ವವನ್ನು ಹಾಳುಮಾಡಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು. ದೇಶದ ಮತಗಳನ್ನು ನಾಶಪಡಿಸುವವರು ದೇಶದ್ರೋಹಿಗಳು ಎಂದಿರುವ ಅವರು, ಚುನಾವಣೆಗಳ ಕಳ್ಳತನದ ವಿರುದ್ಧ ತನಿಖೆ ನಡೆಯಬೇಕು ಮತ್ತು ಕಾಂಗ್ರೆಸ್ ಈ ವಿಚಾರದಲ್ಲಿ ಮೌನವಾಗಿ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾವೇರಿ ನೀರು ವಿಚಾರದ ಬಗ್ಗೆ ರಾಜ್ಯ ಸರ್ಕಾರದಿಂದ ನ್ಯಾಯಾಲಯದಲ್ಲಿ ಮೇಲ್ಮನವಿ : ಸಿಎಂ ಡಿಕೆ ಶಿವಕುಮಾರ್






