ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಮೂಲ ದರದ ಮೇಲಿನ ಬಡ್ಡಿದರವನ್ನು 10 ಅಂಶಗಳಷ್ಟು (ಶೇ.0.10) ಏರಿಕೆ ಮಾಡಿದೆ. ಈ ಏರಿಕೆಯೊಂದಿಗೆ SBI ಮೂಲ ಬಡ್ಡಿದರ ಶೇ.7.55ಕ್ಕೆ ಏರಿಕೆಯಾಗಿದ್ದು, ಇದುವರೆಗೆ ಶೇ.7.45ರಷ್ಟಿತ್ತು.
ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ SBI ಬಡ್ಡಿದರ ಏರಿಕೆ ಮಾಡಿದೆ. ಸಾಮಾನ್ಯವಾಗಿ ಬಡ್ಡಿದರ ಏರಿಕೆ ಮತ್ತು ಇಳಿಕೆಯನ್ನು ಮೊದಲಿಗೆ SBI ಮಾಡುತ್ತದೆ. ನಂತರ ಇತರ ಬ್ಯಾಂಕುಗಳು ಅದನ್ನು ಅನುಸರಿಸುತ್ತವೆ. ಎಸ್ ಬಿ ಐ ಈಗ ಮೂಲ ಬಡ್ಡಿದರ ಏರಿಕೆ ಮಾಡಿರುವುದರಿಂದ ಬಡ್ಡಿ ದರವು ಬರುವ ದಿನಗಳಲ್ಲಿ ಏರಿಕೆಯಾಗುವ ಮುನ್ಸೂಚನೆಯಾಗಿದೆ.
SBI ಸೇರಿದಂತೆ ಬಹುತೇಕ ಬ್ಯಾಂಕುಗಳು ಈಗ ಮೂಲ ದರ ಆಧರಿಸಿ ಬಡ್ಡಿ ವಿಧಿಸುತ್ತಿಲ್ಲ. ಈ ಹಿಂದೆ ಪಡೆದ ಸಾಲಗಳಿಗೆ ಮೂಲದರ ಆಧರಿಸಿ ಬಡ್ಡಿ ವಿಧಿಸಲಾಗುತ್ತದೆ. ಅಂತಹ ಸಾಲಗಳ ಪ್ರಮಾಣ ಈಗ ಶೇ.10ಕ್ಕಿಂತಲೂ ಕಡಮೆ ಇದೆ.
ಪ್ರಸ್ತುತ ಎಂಸಿಎಲ್ಆರ್ (ಮಾರ್ಜಿನ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್) ಅಂದರೆ ಸಾಲ ನಿಧಿಯ ವೆಚ್ಚವನ್ನಾಧರಿಸಿ ಬಡ್ಡಿದರ ವಿಧಿಸಲಾಗುತ್ತದೆ. ಅಂದರೆ ಬ್ಯಾಂಕುಗಳು ರಿಸರ್ವ್ ಬ್ಯಾಂಕಿಂದ ಪಡೆಯುವ ಸಾಲದ ಮೇಲಿನ ಬಡ್ಡಿ ಮತ್ತು ಸಿಬ್ಬಂದಿ, ಲಾಭಾಂಶ ಸೇರಿದಂತೆ ಇತರೆಲ್ಲ ಖರ್ಚುಗಳನ್ನು ಸೇರಿಸಿ ಸಾಲ ನಿಧಿಯ ವೆಚ್ಚವನ್ನು ಲೆಕ್ಕ ಹಾಕಲಾಗುತ್ತದೆ. ಈಗ ಆರ್ ಬಿ ಐ ರೆಪೋ ದರ ಅಂದರೆ, ಆರ್ ಬಿ ಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ ಶೇ.4ರಷ್ಟಿದೆ. ಆದರೆ, SBI ಎಂಸಿಎಲ್ಆರ್ ದರವು ಶೇ.6.65ರಿಂದ 7.30ರಷ್ಟಿದೆ. ಅಲ್ಪಾವಧಿ ಬಡ್ಡಿದರವು ಶೇ.6.65ರಷ್ಟಿದ್ದರೆ, ದೀರ್ಘಾವಧಿ ಸಾಲದ ಬಡ್ಡಿದರ ಶೇ.7.30ರಷ್ಟಿದೆ. ಆರ್ ಬಿ ಐ ನಿಂದ ಶೇ.4ಕ್ಕೆ ಸಾಲ ಪಡೆಯುವ ಬ್ಯಾಂಕು ಗ್ರಾಹಕರಿಗೆ ಶೇ.6.65 ರಷ್ಟು ಬಡ್ಡಿ ವಿಧಿಸಲು ಕಾರಣ ಸಾಲ ನಿಧಿಯ ವೆಚ್ಚವನ್ನು ಸೇರಿಸುವುದು. ಬ್ಯಾಂಕುಗಳು ಶೇ.4ಕ್ಕೆ ಸಾಲ ಪಡೆದರೂ ತಮ್ಮ ಸಿಬ್ಬಂದಿ, ನಿರ್ವಹಣೆ, ಲಾಭಾಂಶ ಎಲ್ಲವನ್ನು ಸೇರಿಸುವುದರಿಂದ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ಶೇ.2.65ರಿಂದ 3.30ರಷ್ಟು ಏರಿಕೆ ಮಾಡುತ್ತವೆ.
ಕೊವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬ್ಯಾಂಕುಗಳು ಬಡ್ಡಿದರ ಏರಿಕೆ ಮಾಡಿರಲಿಲ್ಲ. ಈಗ ಎಸ್ ಬಿ ಐ ಮೂಲದರದ ಮೇಲಿನ ಬಡ್ಡಿ ಏರಿಕೆ ಮಾಡಿದೆ. ಬರುವ ದಿನಗಳಲ್ಲಿ ಎಂಸಿಎಲ್ಆರ್ ದರವನ್ನು ಏರಿಕೆ ಮಾಡಲಿದೆ. ಅಂದರೆ, ಈಗಾಗಲೇ ಸಾಲ ಪಡೆದಿರುವವರು ಬರುವ ದಿನಗಳಲ್ಲಿ ತಮ್ಮ ಸಾಲದ ಮೇಲಿನ ಬಡ್ಡಿ ಹೆಚ್ಚು ಪಾವತಿಸಬೇಕಾಗುತ್ತದೆ. ಮಾಸಿಕ ಸಮಾನ ಕಂತುಗಳ (ಇಎಂಐ) ಮೊತ್ತವು ಹೆಚ್ಚಾಗುತ್ತದೆ.
ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಗೃಹೋಪಯೋಗಿ ಸಕರುಗಳ ಸಾಲ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿ ಕಳೆದ ಎರಡು ವರ್ಷಗಳಿಂದ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಅಂದರೆ, ಕೊವಿಡ್ ಕಾರಣದಿಂದಾಗಿ ಆರ್ಥಿಕತೆ ಕುಸಿದಿದ್ದರಿಂದ ಆರ್ ಬಿ ಐ ಸಹ ರೆಪೋ ದರವನ್ನು ಶೇ.4ಕ್ಕೆ ತಗ್ಗಿಸಿದ್ದು, ಕಳೆದ 20 ತಿಂಗಳಿಂದಲೂ ಆ ದರವನ್ನೇ ಕಾಯ್ದುಕೊಂಡಿದೆ.
ಒಂದು ಕಡೆ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಮತ್ತೊಂದು ಕಡೆ ಹಣದುಬ್ಬರ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡ್ಡಿದರ ಏರಿಕೆ ಅನಿವಾರ್ಯವಾಗುತ್ತದೆ. ಈಗಾಗಲೇ ವಿಧಿಸುತ್ತಿರುವ ಬಡ್ಡಿದರವು ಸರ್ವಕಾಲಿಕ ಕನಿಷ್ಠ ಮಟ್ಟದಲ್ಲಿದೆ. ಅತಿ ಕಡಮೆ ಬಡ್ಡಿದರವನ್ನು ದೀರ್ಘಕಾಲದವರೆಗೆ ಮುಂದುವರೆಸುವುದು ಬ್ಯಾಂಕುಗಳ ಆರ್ಥಿಕ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಈ ಕಾರಣದಿಂದಾಗಿ SBI ಮೂಲದರದ ಬಡ್ಡಿದರವನ್ನು ಏರಿಕೆ ಮಾಡುವ ಮೂಲಕ ಬಡ್ಡಿದರ ಏರಿಕೆಯ ಮುನ್ಸೂಚನೆ ನೀಡಿದೆ.
ಬಡ್ಡಿದರ ಕುಸಿದಷ್ಟೇ ತ್ವರಿತವಾಗಿ ಬಡ್ಡಿದರಗಳು ತಕ್ಷಣಕ್ಕೆ ಏರಿಕೆಯಾಗುವುದಿಲ್ಲ. ಆದರೆ, ಬರುವ ದಿನಗಳಲ್ಲಿ ನಿಧಾನಗತಿಯಲ್ಲಿ ಬಡ್ಡಿದರ ಏರಿಕೆ ಆಗಲಿವೆ. ಈಗಾಗಲೇ ಬಡ್ಡಿದರ ಕಡಮೆ ಇದೆ ಎಂಬ ಕಾರಣಕ್ಕೆ ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಮಾಡಿದವರು ಬರುವ ದಿನಗಳಲ್ಲಿ ಹೆಚ್ಚಿನ ಬಡ್ಡಿದರ ತೆರಲು ಸಿದ್ದರಾಗಬೇಕಿದೆ.
ಈ ಬೆಳವಣಿಗೆಯಲ್ಲಿ ಒಂದು ಸಮಾಧಾನಕರ ಸಂಗತಿ ಎಂದರೆ, ಬಡ್ಡಿದರಗಳು ಏರಿಕೆಯಾಗುತ್ತಿದ್ದಂತೆ ಗ್ರಾಹಕರು ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿಗಳ ಮೇಲಿನ ಬಡ್ಡಿದರವೂ ಏರಿಕೆಯಾಗಲಿದೆ. ಅಂದರೆ, ಠೇವಣಿಯ ಬಡ್ಡಿಯಿಂದಲೇ ಜೀವನ ನಡೆಸುವ ನಿವೃತ್ತರಿಗೆ ಇದರಿಂದ ಹೆಚ್ಚಿನ ಅನುಕೂಲ ಸಿಗಲಿದೆ.
SBI ಈಗಾಗಲೇ 2 ಕೋಟಿ ರೂಪಾಯಿ ಮೀರಿದ ಠೇವಣಿಗಳ ಮೇಲಿನ ಬಡ್ಡಿದರವನ್ನು 10 ಅಂಶಗಳಷ್ಟು ಏರಿಕೆ ಮಾಡಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಾದ HDFC, ಬಜಾಜ್ ಫೈನಾನ್ಸ್ ಕೂಡಾ ಠೇವಣಿಗಳ ಮೇಲಿನ ಬಡ್ಡಿದರವನ್ನು 30 ಅಂಶಗಳಷ್ಟು (ಶೇ.0.30) ಏರಿಕೆ ಮಾಡಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಡಿಸೆಂಬರ್ ತಿಂಗಳ ತನ್ನ ಹಣಕಾಸು ನೀತಿ ಪರಾಮರ್ಶೆ ವೇಳೆ ರೆಪೋ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಮಾಡಿದೆ. ಆದರೆ, ಫೆಬ್ರವರಿ ತಿಂಗಳ ಹಣಕಾಸು ನೀತಿ ಪರಾಮರ್ಶೆ ವೇಳೆ ರೆಪೋ ದರವನ್ನು 25ರಿಂದ 50 ಅಂಶಗಳಷ್ಠು (ಶೇ.0.25- 0.50) ಏರಿಕೆ ಮಾಡುವ ಸಾಧ್ಯತೆ ಇದೆ. ಆಗ ತನ್ನಿಂತಾನೆ ಎಲ್ಲ ಬ್ಯಾಂಕುಗಳು ಬಡ್ಡಿದರವನ್ನು ಏರಿಸುತ್ತವೆ.