ಧಾರ್ಮಿಕ ಮೂಲಭೂತವಾದಿ ಗುಂಪುಗಳು ನಡೆಸುವ ಅನೈತಿಕ ಪೊಲೀಸ್‌ಗಿರಿ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ವಿವಾದಾತ್ಮಕ ಸಮರ್ಥನೆಯನ್ನು ಹಿಂಪಡೆಯಬೇಕೆಂದು ಆಲ್ ಇಂಡಿಯಾ ಲಾಯರ್ಸ್ ಅಸೋಷಿಯೇಶನ್ ಫಾರ್ ಜಸ್ಟೀಸ್ (All India Lawyers’ Association for Justice – AILAJ) ನೋಟಿಸ್ ಕಳುಹಿಸಿದೆ.
ಮುಖ್ಯಮಂತ್ರಿಗೆ ಕಳಿಸಿರುವ 10 ಪುಟಗಳ ನೋಟಿಸ್‌ನಲ್ಲಿ, ಕರ್ನಾಟಕದಲ್ಲಿ ಕೋಮುಭಾವನೆ ಬೆಳೆಯುತ್ತಿರುವುದನ್ನು ಉಲ್ಲೇಖಿಸಿರುವ AILAJ, ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವವರಿಗೆ ಸಿಎಂ ಹೇಳಿಕೆ ಅನುಮೋದನೆ ನೀಡಿದಂತಾಗುತ್ತದೆ ಎಂದು ಹೇಳಿದೆ.
ಮಂಗಳೂರಿನಲ್ಲಿ ಬಜರಂಗದಳದ ಕಾರ್ಯಕರ್ತರು ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ನಡೆಸಿರುವ ಗೂಂಡಾಗಿರಿಗೆ ಸಂಬಂಧಪಟ್ಟಂತೆ ಬೊಮ್ಮಾಯಿ ಅವರನ್ನು ಪ್ರಶ್ನಿಸಿದಾಗ, ಭಾವನಾತ್ಮಕ ವಿಷಯದಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಸಮಜಾಯಿಷಿ ನೀಡಿದ್ದರು.
ಸಮಾಜ ಅಂದ ಮೇಲೆ ಎಲ್ಲರಿಗೂ ಜವಾಬ್ದಾರಿಯಿರುತ್ತದೆ. ಭಾವನಾತ್ಮಕ ವಿಷಯಗಳಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ. ಕಾನೂನು ಸುವ್ಯವಸ್ಥೆ ಮಾತ್ರವಲ್ಲದೆ, ಸಮುದಾಯದೊಳಗಿನ ಸಾಮರಸ್ಯವನ್ನು ಕಾಪಾಡುವುದು ಕೂಡಾ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. . ನಮ್ಮ ಯುವಕರು ಕೂಡ ಸಮಾಜದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಇದು ಸಾಮಾಜಿಕ ಸಮಸ್ಯೆ ಮತ್ತು ನಮಗೆ ನೈತಿಕತೆ ಬೇಕು. ಸಮಾಜದಲ್ಲಿ ನೈತಿಕತೆ ಇಲ್ಲದಿದ್ದಾಗ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆಗಳು ಬರುತ್ತವೆ ಎಂದು ಹೇಳಿದ್ದರು.
ಬಜರಂಗದಳ ಕಾರ್ಯಕರ್ತರು ಮಾಡಿದ್ದನ್ನು ಅವರ ಭಾವನೆಗಳಿಗೆ ಧಕ್ಕೆ ಆದಾಗ ನೀಡಿದ ಪ್ರತಿಕ್ರಿಯೆ, ಅದು ಸಹಜವೆಂಬಂತೆ ಬಿಂಬಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಭಾರತದಾದ್ಯಂತದ ವಕೀಲರನ್ನು, ಕಾನೂನು ತಜ್ಞರನ್ನು ಹೊಂದಿರುವ AILAJ ಸಂಸ್ಥೆ ಕೂಡಾ ಸಿಎಂ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅದರಲ್ಲೂ ರಾಜ್ಯದಲ್ಲಿ ಕೋಮು ಭಾವನೆಗಳು ಸೂಕ್ಷ್ಮಗೊಳ್ಳುತ್ತಿರುವ ಈ ಸಂಧರ್ಭದಲ್ಲಿ ಸಿಎಂ ಅವರ ಈ ಹೇಳಿಕೆಯು ಅಪಾಯಕಾರಿ. ಕ್ರಿಯೆಗೆ ಪ್ರತಿಕ್ರಿಯೆಯನ್ನು ಸರಿದೂಗಿಸಲು ನಾಡಿನ ನಾಗರಿಕರು ತಮ್ಮ ಮೂಲಭೂತ ಹಕ್ಕುಗಳನ್ನೇ ಕಳೆದುಕೊಳ್ಳಬೇಕಾದೀತು ಎಂದು ಅದು ಆತಂಕ ವ್ಯಕ್ತಪಡಿಸಿದೆ.
ಇತ್ತೀಚೆಗೆ ಬೆಳಗಾಂನಲ್ಲಿ ಹಿಂದೂ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಕೊಲೆಯಾದ ಅರ್ಬಾಝ್ ಅಫ್ತಾಬ್ ಪ್ರಕರಣವನ್ನೂ AILAJ ಉಲ್ಲೇಖಿಸಿದೆ.
ಧಾರ್ಮಿಕ ಕಾರಣಗಳಿಗಾಗಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಯುತ್ತಿರುವಾಗ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡುವುದು ಕಾನೂನು ಬಾಹಿರ ಕೃತ್ಯಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಮಾತ್ರವಲ್ಲ, ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವಂತಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ಧಾರ್ಮಿಕ ಉಗ್ರಗಾಮಿ ಗುಂಪುಗಳಿಂದ ಹಿಂಸೆ ನಿರಂತರವಾಗಿ ಹೆಚ್ಚುತ್ತಿದೆ. ಈ ಸಂಘಟನೆಗಳು ಸಾಮಾಜಿಕ ಪ್ರತ್ಯೇಕತೆಯನ್ನು ಪರಿಣಾಮಕಾರಿಯಾಗಿ ಹೇರುತ್ತಿವೆ, ಇದು ಭ್ರಾತೃತ್ವ ಮತ್ತು ಜಾತ್ಯತೀತತೆಯ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು AILAJ ಹೇಳಿದೆ.