ಹಿಂದುಳಿದ ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸಿದ್ಧವಿದ್ದರೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಸಮಾಧಾನ ಹೊರಹಾಕಿದರು.
ಸೋಮವಾರ ವಿಧಾನಪರಿಷತ್ನಲ್ಲಿ ಜೆಡಿಎಸ್ನ ತಿಪ್ಪೇಸ್ವಾಮಿ ಅವರು ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆಯನ್ನು ಯಾವಾಗ ಸ್ಥಾಪನೆ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ.ಶರಣಪ್ರಕಾಶ್ ಪಾಟೀಲ್, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು, ಸಂಸದರು, ಕಲ್ಯಾಣ ಕರ್ನಾಟಕ ಭಾಗದ ಶಾಸಕರು, ಕೇಂದ್ರದ ಆರೋಗ್ಯ ಸಚಿವರನ್ನು ಎರಡು ಬಾರಿ ಭೇಟಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾದಿಸಿದರು.
ಏಮ್ಸ್ ಆಸ್ಪತ್ರೆ ಸ್ಥಾಪನೆ ಮಾಡಿದರೆ ಭೂಮಿ, ವಿದ್ಯುತ್, ನೀರು ಸೇರಿದಂತೆ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಹೇಳಿದ್ದೆವು. ಆದರೂ ಕೇಂದ್ರ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ದೇಶದ ಎಲ್ಲ ರಾಜ್ಯಗಳಲ್ಲೂ ಏಮ್ಸ್ ಸ್ಥಾಪನೆ ಮಾಡಲು ಅವಕಾಶ ನೀಡಲಾಗಿದೆ ಆದರೆ ಕರ್ನಾಟಕ ಮತ್ತು ಕೇರಳಕ್ಕೆ ಅವಕಾಶ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಸಚಿವರು ಆಕ್ಷೇಪಿಸಿದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗವಾದ ಈ ಜಿಲ್ಲೆಯಲ್ಲಿ ಸ್ಥಾಪನೆಯಾದರೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಏಕೆ ಪುರಸ್ಕರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿಗಳು ಅನೇಕ ಬಾರಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ. ಇನ್ನು ಎಷ್ಟು ಬಾರಿ ಪ್ರಯತ್ನಿಸಬೇಕು, ನಮಗೇನು ಉಚಿತವಾಗಿ ಕೊಡುವುದಿಲ್ಲ. ಬೇರೆ ರಾಜ್ಯಗಳಿಗೆ ಕೊಟ್ಟಂತೆ ನಮಗೂ ಕೊಡಬೇಕು ಎಂಬುದಷ್ಟೇ ನಮ್ಮ ಮನವಿ. ನಿಮ್ಮ ಸಂಸದರ ಮೂಲಕ ಒತ್ತಡ ಹಾಕಿ ಶರಣಪ್ರಕಾಶ್ ಪಾಟೀಲ್ ಬಿಜೆಪಿಯಾ ಸಿ.ಟಿ.ರವಿಗೆ ಪಾಟೀಲ್ ತಿರುಗೇಟು ನೀಡಿದರು.
ನೀಟ್ ಪರೀಕ್ಷೆ ಕೇಂದ್ರದ ವಿಫಲತೆ:
ಕಾಂಗ್ರೆಸ್ನ ಐವಾನ್ ಡಿಸೋಜ ಅವರು ನೀಟ್ ಪರೀಕ್ಷೆ ಕುರಿತಂತೆ ಪ್ರಸ್ತಾಪಿಸಿದ ವಿಷಯಕ್ಕೆ ಸುದೀರ್ಘ ಉತ್ತರ ನೀಡಿದ ಸಚಿವ ಶರಣಪ್ರಕಾಶ್ ಪಾಟೀಲ್, ನೀಟ್ ಪರೀಕ್ಷೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು. ಪ್ರತಿ ವರ್ಷ ಈ ಪರೀಕ್ಷೆಯನ್ನು ಅತ್ಯಂತ ಬಿಗಿಭದ್ರತೆ ಮತ್ತು ಯಶಸ್ವಿಯಾಗಿ ನಡೆಸುತಿತ್ತು. ಈ ಬಾರಿ ಕೇಂದ್ರ ಸರ್ಕಾರ ಮಾಡಿದ ತಪ್ಪಿನಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ ಎಂದು ಪಾಟೀಲ್ ಆರೋಪಿಸಿದರು.
ಪ್ರಾರಂಭದಲ್ಲಿ ಕೇಂದ್ರ ಸರ್ಕಾರ ಏನೇನೂ ನಡೆದಿಲ್ಲ ಎಂದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿತು. ನಂತರ ಸಿಬಿಐ ತನಿಖೆಗೆ ಆದೇಶಿಸಿ ಕೆಲವರನ್ನು ಬಂಧಿಸಿತು. ನ್ಯಾಯಾಲಯದ ಮುಂದೆ ಪ್ರಮಾದಗಳು ಜರುಗಿದೆ ಎಂಬ ತಪ್ಪನ್ನು ಒಪ್ಪಿಕೊಂಡಿತು. ಅನೇಕ ರಾಜ್ಯಗಳಲ್ಲಿ ಅಕ್ರಮ ನಡೆದಿರುವುದಕ್ಕೆ ಎಫ್ಐಆರ್ಆಗಿದೆ ಎಂದು ಪಾಟೀಲ್ ಹೇಳಿದರು.
ನೀಟ್ ಪರೀಕ್ಷೆ ಕುರಿತಂತೆ ನಮ್ಮ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂದು ಸದನದ ಸದಸ್ಯರು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ಜಾರಿ ಮಾಡಿದೆ. ಸಂಸತ್ನ ಉಭಯ ಸದನಗಳಲ್ಲೂ ಈ ಕಾಯ್ದೆಯನ್ನು ಬಹುಮತದಿಂದ ಅಂಗಿಕರಿಸಿತ್ತು. ಸುಪ್ರೀಂಕೋರ್ಟ್ ಕೂಡ ಇದನ್ನು ಎತ್ತಿ ಹಿಡಿದಿದೆ. ಬದಲಾವಣೆಯಾಗಬೇಕೆಂದರೆ ಸಂಸತ್ನ ಉಭಯ ಸದನಗಳಲ್ಲೇ ಬದಲಾಗಬೇಕು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.