
“ಎಐಸಿಸಿಯು ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬಿ ಸಂಘಟನೆಗೆ ಹೊಸ ಸ್ವರೂಪ ನೀಡಲು ಮುಂದಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ದೆಹಲಿಯಲ್ಲಿ ನಡೆಯುತ್ತಿರುವ ಜಿಲ್ಲಾ ಅಧ್ಯಕ್ಷರುಗಳ ಸಭೆ ವೇಳೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.”

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಿದ್ದಾರೆ. ಪಕ್ಷವು ಸರ್ಕಾರಕ್ಕಿಂತ ದೊಡ್ಡದು, ಹೀಗಾಗಿ ಹೈಕಮಾಂಡ್ ನಾಯಕರು ಜಿಲ್ಲಾ ಅಧ್ಯಕ್ಷರಿಗೆ ವಿಶೇಷ ಕಾರ್ಯಕ್ರಮ ನೀಡಿದ್ದಾರೆ” ಎಂದರು.”ಈ ಸಭೆ ವೇಳೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುವ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯ ಪಡೆಯಲಾಯಿತೇ?,

ನಿಮ್ಮನ್ನು ವಿಶ್ವಾಸಕ್ಕೆ ಪಡೆದರೆ ಎಂದು ಕೇಳಿದ್ದಾರೆ. ಜಿಲ್ಲಾ ಅಧ್ಯಕ್ಷರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ” ಎಂದು ಹೇಳಿದರು.”ಸದಸ್ಯತ್ವ ಅಭಿಯಾನ ಹೇಗೆ ಮಾಡಬೇಕು, ಮತದಾರರ ಪಟ್ಟಿ ಪರಿಶೀಲನೆ, ಬಿಎಲ್ ಓಗಳ ನೇಮಕ, ಸಾಮಾಜಿಕ ಜಾಲತಾಣಗಳ ಪರಿಣಾಮ ಬಳಕೆ, ಪಕ್ಷಕ್ಕೆ ದೇಣಿಗೆ ಸಂಗ್ರಹ ಸೇರಿದಂತೆ ಅನೇಕ ಮಾರ್ಗದರ್ಶನ ನೀಡಿದರು. ಮುಂದೆ ಗುಜರಾತಿನಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಶಕ್ತಿ ತುಂಬುವ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.”ಜಿಲ್ಲಾ ಉಸ್ತುವಾರಿ ಸಚಿವರು, ತಮ್ಮ ಉಸ್ತುವಾರಿ ಜಿಲ್ಲೆಗೆ ಭೇಟಿ ನೀಡಿದಾಗ ಅಲ್ಲಿನ ಕಾಂಗ್ರೆಸ್ ಕಚೇರಿಗೆ ಹೋಗಿ ಕಾರ್ಯಕರ್ತರನ್ನು ಭೇಟಿ ಮಾಡಬೇಕು. ಜಿಲ್ಲಾ ಪ್ರವಾಸ ಮಾಡುವಾಗ ಜಿಲ್ಲಾ ಅಧ್ಯಕ್ಷರನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕು ಎಂದು ಸೂಚನೆ ನೀಡಿದರು. ಜಿಲ್ಲಾ ಅಧ್ಯಕ್ಷರುಗಳು ಕೂಡ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದು, ನೀವು ಯಾರ ಮೇಲೂ ಅವಲಂಬಿತರಾಗಬೇಡಿ ನಾವು ನಿಮಗೆ ರಕ್ಷಣೆ ನೀಡುವುದಾಗಿ ಧೈರ್ಯ ತುಂಬಿದರು. ಪಕ್ಷ ಸಂಘಟನೆಗೆ ಹೊಸ ಸ್ವರೂಪ ನೀಡಲು ಮಲ್ಲಿಕಾರ್ಜುನ ಖರ್ಗೆ ಅವರು ಕೈಗೊಂಡಿರುವ ಹೊಸ ಕ್ರಮಗಳನ್ನು ನಾನು ಸ್ವಾಗತಿಸುತ್ತೇನೆ” ಎಂದರು.

*ಕುಮಾರಸ್ವಾಮಿಗೆ ಹಾಲು ಒಕ್ಕೂಟ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ:*ಹಾಲಿನ ದರ ಏರಿಕೆ ಹೆಚ್ಚಳ ವಿರೋಧಿಸಿ, ಇದು ಈಸ್ಟ್ ಇಂಡಿಯಾ ಸರ್ಕಾರ ಎಂಬ ಕುಮಾರಸ್ವಾಮಿ ಟೀಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರು ಏನಾದರೂ ಟೀಕೆ ಮಾಡಲಿ. ರೈತರು ಬದುಕಬೇಕಲ್ಲವೇ? ಅವರಿಗೆ ಕಾಳಜಿ ಇದ್ದರೆ, ಹಸುಗಳ ಮೇವಿನ ಬೆಲೆ ಕಡಿಮೆ ಮಾಡಿಸಲಿ. ಜಿಎಸ್ ಟಿ, ಇಂಧನ ತೈಲ ಬೆಲೆ ಕಡಿಮೆ ಮಾಡಿಸಲಿ” ಎಂದು ತಿರುಗೇಟು ನೀಡಿದರು.ದರ ಹೆಚ್ಚಳದ ಹಣ ರೈತರಿಗೆ ಹೋಗುವುದಿಲ್ಲ, ಸರ್ಕಾರಕ್ಕೆ ಹೋಗಲಿದೆ ಎಂಬ ಕುಮಾರಸ್ವಾಮಿ ಟೀಕಿ ಬಗ್ಗೆ ಕೇಳಿದಾಗ, “ಸರ್ಕಾರಕ್ಕೆ ಹೇಗೆ ಹೋಗುತ್ತದೆ. ಹಾಗಿದ್ದರೆ ಕುಮಾರಸ್ವಾಮಿ ಅವರಿಗೆ ಹಾಲು ಒಕ್ಕೂಟದ ವ್ಯವಸ್ಥೆ ಬಗ್ಗೆ ಗೊತ್ತೇ ಇಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರು ತಮ್ಮ ಸಹೋದರನ ಬಳಿ ಮಾಹಿತಿ ಪಡೆಯಲಿ” ಎಂದು ಹರಿಹಾಯ್ದರು.

ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಅವರು ಪತ್ರ ಬರೆದಿರುವ ಬಗ್ಗೆ ಕೇಳಿದಾಗ, “ನಾವು ಈ ಪತ್ರ ನೋಡುತ್ತೇವೆ, ಪರಿಶೀಲನೆ ಮಾಡಿ, ಚರ್ಚಿಸುತ್ತೇವೆ. ಆನಂತರ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.ನನ್ನ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ರಾಜೇಂದ್ರ ಅವರ ದೂರಿನ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಗೊತ್ತಿಲ್ಲ” ಎಂದರು.ಬಿಜೆಪಿಯಲ್ಲಿನ ಬೆಳವಣಿಗೆ ಬಗ್ಗೆ ಕೇಳಿದಾಗ, “ಅವರ ಪಕ್ಷದವರು ಯಾರು ಏನಾದರೂ ಮಾಡಿಕೊಳ್ಳಲಿ. ಅದರ ಬಗ್ಗೆ ಮಾತನಾಡಿ ನಾನು ಏಕೆ ಅವರ ಪಕ್ಷದ ವಕ್ತಾರನಾಗಲಿ” ಎಂದು ತಿಳಿಸಿದರು.