ಜಲಸಂಪನ್ಮೂಲ ಇಲಾಖೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಮಾಡಿರುವ ಆರೋಪಗಳ ಕುರಿತಂತೆ ಜಲಸಂಪನ್ಮೂಲ ಇಲಾಖೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಡೆಯಿಂದ ಸ್ಪಷ್ಟೀಕರಣ ಬಂದಿದೆ.
ವಿಶ್ವನಾಥ್ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ‘ಎಚ್.ವಿಶ್ವನಾಥ್ ಅವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಈ ಬಗ್ಗೆ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು ಇನ್ನಷ್ಟು ಸ್ಪಷ್ಟನೆ ನೀಡಲಿದ್ದಾರೆ’ ಎಂದು ಹೇಳಿದ್ದರು.
DCM ಅಶ್ವತ್ಥ ನಾರಾಯಣ ಕೂಡ, ವಿಶ್ವನಾಥ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್‌ನಲ್ಲಿ ಭ್ರಷ್ಟಾಚಾರ, ಅಕ್ರಮವಾಗಿರುವ ದಾಖಲೆಗಳಿದ್ದರೆ ಪಕ್ಷದ ರಾಜ್ಯಾಧ್ಯಕ್ಷರ ಮುಂದಿಡಲಿ ಇಲ್ಲವೇ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲಿ ಎಂದು ಹೇಳಿದ್ದಾರೆ.

ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡಬಾರದು ಎಂದು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಚ್ಚರಿಕೆ ನೀಡಿದ್ದರೂ ಕೆಲವರಿಗೆ ಬಾಯಿ ಚಪಲ. ಅವರು ಮಾತನಾಡುವುದನ್ನು ತಡೆಯಲಾಗದು. ವಿಶ್ವನಾಥ್ ಅವರು ಗುರುವಾರ ನೀಡಿದ ಹೇಳಿಕೆ ಬಗ್ಗೆ ಶಿಸ್ತು ಕ್ರಮಕ್ಕಾಗಿ ಪಕ್ಷದ ಕೇಂದ್ರ ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಜಲಸಂಪನ್ಮೂಲ ಇಲಾಖೆ ಕೂಡಾ ವಿಶ್ವನಾಥ್ ಆರೋಪಗಳನ್ನು ತಳ್ಳಿ ಹಾಕಿದ್ದು, ಎ ಹೆಚ್ ವಿಶ್ವನಾಥ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ₹4,026.60 ಕೋಟಿ ಮೊತ್ತದ 7 ಪ್ಯಾಕೇಜ್‌ಗಳಿಗೆ ಟೆಂಡರ್‌ಗಳನ್ನು ಕೆಟಿಪಿಪಿ ನಿಯಮ ಅನುಸಾರವೇ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು ₹21,473.67 ಕೋಟಿ. ಸಮಗ್ರ ಪರಿಷ್ಕೃತ ಯೋಜನಾ ವರದಿಗೆ 2020 ರ ಡಿಸೆಂಬರ್ 16 ರಂದು ಆರ್ಥಿಕ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ₹16,125.4 ಕೋಟಿ ಕೇಂದ್ರ ಸರ್ಕಾರ ಪಾಲು ನೀಡುತ್ತದೆ. ಅದಕ್ಕೆ ಕೇಂದ್ರ ಜಲಶಕ್ತಿ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯೂ ಒಪ್ಪಿಗೆ ನೀಡಿದೆ. ಹಾಗೂ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ಜಲಶಕ್ತಿ ಇಲಾಖೆಯು ಕಳೆದ ಮಾರ್ಚ್ 25 ರಂದು ಹೂಡಿಕೆ ತೀರುವಳಿ ಮಂಡಳಿಗೆ ಸಲ್ಲಿಸಿತ್ತು. ಯೋಜನೆಯನ್ನು 2023–24 ರಲ್ಲಿ ಪೂರ್ಣಗೊಳಿಸಬೇಕು.ಇದಕ್ಕೆ ತಗಲುವ ಒಟ್ಟು ವೆಚ್ಚವನ್ನು ನಿಗಧಿತ ಅವಧಿಯಲ್ಲಿ ಭರಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.

ಈ ಯೋಜನೆಯನ್ನು 2023–24 ರೊಳಗೆ ಪೂರ್ಣಗೊಳಿಸಲು ಮುಖ್ಯಮಂತ್ರಿಯವರು ತೀರ್ಮಾನಿಸಿದ್ದಾರೆ. ಈ ಎಲ್ಲ ಕಾಮಗಾರಿಗಳನ್ನು 2023–24 ನೇ ಸಾಲಿನಲ್ಲಿ ಪೂರ್ಣಗೊಳಿಸುವ ಅವಶ್ಯಕತೆ ಇರುವ ಕಾರಣ, ಡ್ರಿಪ್ ಕಾಮಗಾರಿಗಳ ಅಂದಾಜು ಪಟ್ಟಿ ಮತ್ತು ಡಿಟಿಪಿಗೆ ತಜ್ಞರನ್ನು ಒಳಗೊಂಡ ಡ್ರಿಪ್ ಸಮಿತಿಯ 5 ಸಭೆಗಳಲ್ಲಿ ಚರ್ಚಿಸಿ, ನಿಗಮದ ಅಂದಾಜು ಪರಿಶೀಲನಾ ಸಮಿತಿಯಿಂದ ತೀರುವಳಿ ಪಡೆದು ಕೆಟಿಪಿಪಿ ನಿಯಮಾನುಸಾರ ₹4,026.60 ಕೋಟಿ ಮೊತ್ತದ 7 ಪ್ಯಾಕೇಜ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷದ ಯೋಜನೆ ಕಾಮಗಾರಿಗೆ ಟೆಂಡರ್ ಕರೆಯಲು ಸಾಧ್ಯವಾಗಿರಲಿಲ್ಲ. ಈಗ ಟೆಂಡರ್ ಕರೆಯಲಾಗಿದೆ. ಇದಕ್ಕೆ ಸಂಪುಟದ ಒಪ್ಪಿಗೆಯೂ ಸಿಕ್ಕಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ನೀರಾವರಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ ತರಾತುರಿಯಲ್ಲಿ ಟೆಂಡರ್ ಕರೆದು ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಭಾರೀ ಅಕ್ರಮ ನಡೆದಿದೆ. ಭದ್ರಾ ಮೇಲ್ದಂಡೆ ಮತ್ತು ಕಾವೇರಿ ನೀರಾವರಿ ನಿಗಮದಲ್ಲಿ ಅಕ್ರಮ ನಡೆದಿದೆ. ಸುಮಾರು ₹20 ಸಾವಿರ ಕೋಟಿ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ. ಗುತ್ತಿಗೆದಾರರಿಂದ ಹಣ ಪಡೆಯಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದರು.




